News Karnataka Kannada
Sunday, May 05 2024
ಮಡಿಕೇರಿ

ಕೊಡಗು ಜಿಲ್ಲೆಯಲ್ಲಿ ಮತದಾನ ಮಹತ್ವ ಸಾರುತ್ತಿರುವ ಜನಸಾಮಾನ್ಯರ ಪೋಸ್ಟರ್ ಗಳು

Posters of common people proclaiming the importance of voting in Kodagu district
Photo Credit : News Kannada

ಕೊಡಗು: ಜಿಲ್ಲೆಯಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮತದಾನ ಪ್ರಮಾಣ ಹೆಚ್ಚಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಹಾಗೂ ಕೊಡಗು ಜಿಲ್ಲಾ ಮತದಾರರ ಶಿಕ್ಷಣ ಮತ್ತು ಸಹಭಾಗಿತ್ವ ಸಮಿತಿ (ಸ್ವೀಪ್) ವೈವಿಧ್ಯಮಯ ಕಾಯ೯ಕ್ರಮಗಳನ್ನು ರೂಪಿಸುತ್ತಾ ಬಂದಿದೆ. ಸ್ವೀಪ್ ಸಮಿತಿ ವತಿಯಿಂದ ರೂಪಿಸಲಾದ ಜನಸಾಮಾನ್ಯರನ್ನು ಒಳಗೊಂಡ ಸಂದೇಶವುಳ್ಳ ಆಕಷ೯ಕ ಪೋಸ್ಟರ್ ಗಳು ಜಿಲ್ಲೆಯಾದ್ಯಂತ ಜನರ ಗಮನ ಸೆಳೆಯುತ್ತಿದೆ.

ಮತದಾನ ಮಾಡುವೆ ಎಂಬ ಸಂದೇಶದ ಮೂಲಕ ಪ್ರತೀ ಮತದಾರರಲ್ಲೂ ಮತದಾನದ ಜಾಗ್ರತಿ ಉಂಟು ಮಾಡುವ ಉದ್ದೇಶದಿಂದ ಸ್ವೀಪ್ ಸಮಿತಿಯು 50 ಕ್ಕೂ ಅಧಿಕ ಪೋಸ್ಟರ್ ಗಳನ್ನು ರೂಪಿಸಿದೆ. ಸಾಮಾಜಿಕ ಜಾಲತಾಣಗಳ ಮೂಲಕ ಜನರನ್ನು ತಲುಪುತ್ತಿದ್ದರೆ ಜಿಲ್ಲೆಯಾದ್ಯಂತಲಿರುವ 60 ಕ್ಕೂ ಅಧಿಕ ಹೋಡಿ೯ಂಗ್ ಗಳಲ್ಲಿ ಕೂಡ ಈ ಸಂದೇಶದ ಪೋಸ್ಟರ್ ಗಳು ಅಳವಡಿಸಲ್ಪಟ್ಟಿದೆ.

ಕೊಡಗು ಜಿಲ್ಲಾ ಚುನಾವಣಾ ರಾಯಭಾರಿಗಳಾದ ಶಿಕ್ಷಕ ಗಾಯಕ ಬಸವರಾಜ ಬಡಿಗೇರ್, ವಿಶೇಷಚೇತನ ಮಹಿಳೆ ಎಸ್.ಕೆ. ಈಶ್ವರಿ, ಈಜು ಪರಿಣಿತ ಕೆ.ರವಿಮುತ್ತಪ್ಪ ಅವರನ್ನು ಮುಖ್ಯವಾಗಿರಿಸಿಕೊಂಡು ರಾಯಭಾರಿಗಳು ಜನರಲ್ಲಿ ತಪ್ಪದೇ ಮತದಾನ ಮಾಡಿ ಎಂಬ ಸಂದೇಶ ಸಾರುವ ಪೋಸ್ಟರ್ ಗಳನ್ನು ರೂಪಿಸಲಾಗಿದೆ. ಯಾವುದೇ ಆಮಿಷಕ್ಕೆ ಬಲಿಯಾಗದೇ ನಿಭೀ೯ತಿಯಿಂದ ಮತದಾನ ಮಾಡಿ ಎಂಬ ಸಂದೇಶವನ್ನೂ ರಾಯಭಾರಿಗಳು ಸಾರಿದ್ದಾರೆ. ಈ ಬಾರಿ ಸಾಮಾನ್ಯರನ್ನೇ ಚುನಾವಣಾ ಮತದಾನ ಜಾಗ್ರತಿ ಸಂದೇಶಕ್ಕಾಗಿ ರಾಯಭಾರಿಗಳನ್ನಾಗಿ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ್, ಮತ್ತು ಸ್ವೀಪ್ ಸಮಿತಿ ಅಧ್ಯಕ್ಷ ಡಾ.ಎಸ್.ಆಕಾಶ್ ಆಯ್ಕೆ ಮಾಡಿರುವುದು ವಿಶೇಷ.

ಚುನಾವಣಾ ರಾಯಭಾರಿಗಳೊಂದಿಗೆ ಸಮಾಜದ ವಿವಿಧ ಸ್ತರಗಳ ಜನರನ್ನು ಗುರುತಿಸಿ ಅವರ ಮೂಲಕ ಮತದಾನ ಮಾಡಿ ಎಂಬ ಸಂದೇಶ ಸಾರಲಾಗಿದೆ.

ಪೌರಕಾರ್ಮಿಕರು, ಶುಶೂಷಕರು, ವೈದ್ಯರು, ಆಟೊ ಚಾಲಕರು, ಹಾಕಿ ಕ್ರೀಡಾಪಟುಗಳು, ತರಕಾರಿ ವ್ಯಾಪಾರಸ್ಥರು, 100 ವಷ೯ದವರು, ಆಶಾ ಕಾಯ೯ಕತೆ೯ಯರು, ಜೀಪ್ ಚಾಲಕರು, ಕಾಫಿ ತೋಟ ಕಾಮಿ೯ಕರ ಗುಂಪನ್ನೂ ಬಳಸಿಕೊಂಡು ಮತ ಹಾಕುವಂತೆ ಪ್ರೇರೇಪಣೆ ನೀಡುವ ಪೋಸ್ಟರ್ ಗಳು ರೂಪುಗೊಂಡಿವೆ.

ಮಡಿಕೇರಿ ನಗರದ 35ಕ್ಕೂ ಅಧಿಕ ಪೌರಕಾರ್ಮಿಕರು ‘ಶುಭ್ರ ನಗರಕ್ಕೆ ನಮ್ಮ ಕಾಯಕದ ಆದ್ಯತೆ, ಮತದಾನಕ್ಕೆ ಖಂಡಿತಾ ..ನಮ್ಮ ಆದ್ಯತೆ’ ಎಂಬ ಘೋಷವಾಕ್ಯದೊಡನೆ ಮತದಾನವನ್ನು ಮಾಡಿ ಎಂಬ ಸಂದೇಶ ಸಾರುತ್ತಿದ್ದಾರೆ.

‘ನಾವು ಪೌರಕಾರ್ಮಿಕರು ತಪ್ಪದೇ ಮತ ಚಲಾಯಿಸುತ್ತೇವೆ. ಪ್ರತಿ ಚುನಾವಣೆಯಲ್ಲಿ ಮತದಾನ ನಿಮ್ಮ ಹೊಣೆ – ಮರೆಯದಿರಿ ಮತದಾನದ ದಿನವ’ ಎಂಬ ಘೋಷವಾಕ್ಯವನ್ನು ಪೌರ ಕಾರ್ಮಿಕರು ಚಿತ್ರವಿರುವ ಪೋಸ್ಟರ್ ಗಳು ಸಾರುತ್ತಿದೆ.

ಪ್ರಯಾಣಿಕರನ್ನು ನಿಗದಿತ ಗುರಿ ಮುಟ್ಟಿಸುವ ಹೊಣೆ ನಮ್ಮದು …ಪ್ರಜಾಪ್ರಭುತ್ವದಲ್ಲಿ ನಾಗರಿಕನ ಹಕ್ಕಾಗಿರುವ ಮತದಾನ ಮಾಡುವ ಹೊಣೆ. ನಿಮ್ಮದು ಎಂದು ಆಟೊ ಚಾಲಕರು ಪೋಸ್ಟರ್ ಸಂದೇಶದಲ್ಲಿ ಹೇಳುತ್ತಾರೆ. ನಾವು ಆಟೊ ಚಾಲಕರು ತಪ್ಪದೆ ಮತ ಚಲಾಯಿಸುತ್ತೇವೆ ಎಂದು ವಾಗ್ದಾನ ಮಾಡುತ್ತಾರೆ.

ಮಡಿಕೇರಿ ಜಾನಪದ ಪರಿಷತ್ ಸಹಯೋಗದಲ್ಲಿ ಯಶಸ್ವಿಯಾಗಿ ನಡೆದ ವಿದ್ಯಾಥಿ೯ಗಳು ಮತ್ತು ಜಿಲ್ಲೆಯ ಕಲಾವಿದರು ರಚಿಸಿದ ಮತದಾನ ಮಹತ್ವದ ಚಿತ್ರಕಲೆಯನ್ನೇ ಬಳಸಿಕೊಂಡು ವಿದ್ಯಾಥಿ೯ಗಳು ರಂಗು ತುಂಬಿದ ಚಿತ್ತಾರಗಳು ಹೆಸರಲ್ಲಿ ಪೋಸ್ಟರ್ ರಚಿತವಾಗಿದ್ದು, ಮತದಾನ ಮಾಡಿ ಎಂದು ಚಿತ್ರಕಲಾವಿದರು ಕರೆ ನೀಡುತ್ತಾರೆ.

ತರಕಾರಿ ವ್ಯಾಪಾರಸ್ಥರು ಕೂಡ ಮತದಾನ ಮಾಡಿ ಎಂಬ ಸಂದೇಶ ಸಾರುತ್ತಿದ್ದು ದೇಹದ ಆರೋಗ್ಯ ಕಾಪಾಡಲು ತರಕಾರಿ ಸಾಕು..ಪ್ರಜಾಪ್ರಭುತ್ವದ ಸಂರಕ್ಷಣೆಗೆ ಮತದಾನ ಬೇಕೇ ಬೇಕು, ವಿಧ ವಿಧ ತರಕಾರಿ, ಸೊಪ್ಪು ಅಡುಗೆಗೆ ಬೇಕು. ಒಂದೇ ಒಂದು ಮತ ಪ್ರಜಾಪ್ರಭುತ್ವದ ಸಂರಕ್ಷಣೆಗೆ ಸಾಕು ತಪ್ಪದೇ ಮತದಾನ ಮಾಡಿ ಎಂದು ಕರೆ ನೀಡಿದ್ದಾರೆ.

ಮಡಿಕೇರಿ ನಗರ ಚೇಂಬರ್ ಆಫ್ ಕಾಮಸ್೯ ಸಹಯೋಗದಲ್ಲಿ ಆಯೋಜಿತ ಬೈಕ್ ಜಾಥಾದ ಚಿತ್ರದ ಮೂಲಕ ಬೈಕ್ ಸವಾರರು ನಾವೆಲ್ಲಾ.. ಮತಹಾಕೋಣ.. ಬನ್ನಿ ನೀವೆಲ್ಲಾ… ಎಂಬ ಸಂದೇಶದ ಪೋಸ್ಟರ್, ಕೊಡಗಿನ ಕಾಫಿ ಸ್ವಾದಿಷ್ಟವಾಗಲು ನಾವೂ ಕಾರಣ..ಮತದಾನ ಮಾಡಿ ಸಮಾಜ ಸುಂದರವಾಗಲು ಆಗಿ ನೀವೂ ಕಾರಣ..ಕಾಫಿ ನಾಡು ಕೊಡಗಿನ ಎಲ್ಲರೂ ತಪ್ಪದೇ ಮತಹಾಕೋಣ..ಪ್ರಜಾಪ್ರಭುತ್ವದ ಹಬ್ಬವನ್ನು ಸಂಭ್ರಮಿಸೋಣ…ಕಾಫಿ ತೋಟದ ಶ್ರಮಜೀವಿಗಳು ನಾವು.. ಮತದಾನದ ಹಕ್ಕು ಚಲಾಯಿಸುತ್ತೇವೆ… ನೀವೂ ಮರೆಯದೇ.. ಮತಹಾಕುತ್ತೀರಲ್ಲ..ಎಂಬ ಕಾಫಿ ತೋಟ ಕಾಮಿ೯ಕರ ಪೋಸ್ಟರ್ ಕೂಡ ಗಮನಾಹ೯ವಾಗಿದೆ.

ದೇಶವೇ ಮೆಚ್ಚಿಕೊಂಡಿರುವ ಕೊಡಗಿನ ಪ್ರಮುಖ ಕ್ರೀಡೆ, ಹಾಕಿ, ಕ್ರೀಡಾಹಬ್ಬದ ಸಂಭ್ರಮದಂತೆ ಚುನಾವಣಾ ಹಬ್ಬದಂದು ಮತಹಾಕಿ..ಎಂದು ಹಾಕಿ ಕ್ರೀಡಾಕಲಿಗಳು ಸಂದೇಶ ಸಾರುವ ಪೋಸ್ಟರ್, ಸಣ್ಣ ಪುಟ್ಟ ಆಯ್ಕೆಗಳಿಗೆ ಹತ್ತು ಬಾರಿ ಯೋಚಿಸುತ್ತೇವೆ .. ಮತದಾನದಂಥ ಮಹತ್ವದ ಅವಕಾಶಕ್ಕೆ ಯಾಕೆ ಆಲೋಚನೆ.. ನಿಲ೯ಕ್ಷ್ಯ ಬಿಡಿ..ಮೇ 10 ರಂದು ಬುಧವಾರ ಮತದಾನ ಮಾಡಿಬಿಡಿ.ಎಂದು ಕರೆ ನೀಡುವ ಪೋಸ್ಟರ್, ನೋಟಿಗಾಗಿ ಮತ ಮಾರಾಟ ಬೇಡವೇ ಬೇಡ… ಹೆಂಡಕ್ಕಾಗಿ ಮತದ ಹಕ್ಕಿನ ನೀಡಿಕೆ ಖಂಡಿತಾ ಬೇಡ..ಯಾವುದೇ ಆಮಿಷಗಳಿಗೆ ಒಳಗಾಗದೇ ಮತಹಾಕಿ.. ಎಂಬ ಕರೆ ನೀಡುವ ಪೋಸ್ಟರ್ ಗಳು ಮತದಾರರಲ್ಲಿ ಜಾಗ್ರತಿ ಮಾಡುವಂತಿದೆ.

ಮಡಿಕೇರಿ ಜಿಲ್ಲಾಸ್ಪತ್ರೆಯ ವೈದ್ಯಕೀಯ ವಿದ್ಯಾಥಿ೯ಗಳು, ದಾದಿಯರು ‘ನಿಮ್ಮ ಮತ ನಿಮ್ಮ ಧ್ವನಿ’ – ನಿಮ್ಮ ಆರೋಗ್ಯ ಸಂರಕ್ಷಣೆಯ ಹೊಣೆ ನಮ್ಮದು.. ಪ್ರಜಾಪ್ರಭುತ್ವದ ಆರೋಗ್ಯ ಸಂರಕ್ಷಣೆಯ ಹೊಣೆ ನಮ್ಮೆಲ್ಲರದು ಎಂಬ ಪರಿಣಾಮಕಾರಿ ಸಂದೇಶವನ್ನು ಚಿತ್ರದ ಮೂಲಕ ಸಾರಿದ್ದಾರೆ.

ನನಗೆ 101 ವರ್ಷ, ಚುನಾವಣೆಯಲ್ಲಿ ನಾನೂ ಮತ ಹಾಕುತ್ತೇನೆ. 80 ವರ್ಷ ತುಂಬಿದ ಹಿರಿಯರಿಗೆ ಮನೆಯಲ್ಲೇ ಮತದಾನ ಮಾಡುವ ಅವಕಾಶವನ್ನು ನಾನು ಬಳಸಿಕೊಳ್ಳುವೆ. ಇಳಿ ವಯಸ್ಸಿನಲ್ಲಿ ಮತ ಹಾಕಲು ನಾನು ಸಿದ್ಧನಿರುವೆ’ ಎಂದು ಮಡಿಕೇರಿ ನಿವಾಸಿ ಅಪ್ಪನೆರವಂಡ ಎಸ್.ಅಪ್ಪಣ್ಣ ಅವರ ಸಂದೇಶದ ಪೋಸ್ಟರ್ ಮತದಾರರನ್ನು ಮತ ಹಾಕುವಂತೆ ಪ್ರೇರೇಪಿಸುತ್ತದೆ. ಅಂತೆಯೇ ತಿತಿಮತಿ ಬಳಿಯ ಕಾರೆಕಂಡಿ ಆದಿವಾಸಿ ಹಾಡಿಯ ಚೋಮಿ, ಮುತ್ತಮ್ಮ, ಸೀತೆ ಅವರುಗಳಿಗೆ 100 ವಷ೯ ದಾಟಿದ್ದು. ಇವರ ಚಿತ್ರವನ್ನು ಬಳಸಿ.. ವರುಷ 100.. ಮತದಾನಕ್ಕೆ ಸಂಭ್ರಮದ ತಯಾರಿ ಜೋರು.. ಎಂಬ ಮನಸೆಳೆಯುವ ಸಂದೇಶದ ಪೋಸ್ಟರ್ ಆಕಷ೯ಕವಾಗಿದೆ.

ಜಿಲ್ಲೆಯ ಯಾವೆಲ್ಲಾ ಮತಗಟ್ಟೆಗಳಲ್ಲಿ ಕಳೆದ ಚುನಾವಣೆಗಳಲ್ಲಿ ಮತದಾನ ಪ್ರಮಾಣ ಇಳಿಮುಖವಾಗಿದೆ ಎಂಬುದನ್ನು ಗುರುತಿಸಲಾಗಿದೆ. ಈ ಚುನಾವಣೆಯಲ್ಲಿ ಕಡಮೆ ಮತದಾನವಾಗಿರುವ ಮತಗಟ್ಟೆಗಳೂ ಸೇರಿದಂತೆ ಎಲ್ಲಾ ಮತಗಟ್ಟೆಗಳಲ್ಲಿಯೂ ಹೆಚ್ಚಿನ ಮತದಾನ ಆಗುವಂತೆ ಗಮನ ಹರಿಸಲಾಗುತ್ತಿದೆ. ಶೇ. 80 ರಷ್ಟು ಮತದಾನದ ಗುರಿಯನ್ನು ಕೊಡಗು ಜಿಲ್ಲೆಯಲ್ಲಿ ಇಟ್ಟುಕೊಂಡಿದ್ದೇವೆ. ಇದೀಗ ಸ್ವೀಪ್ ಸಮಿತಿಯು ಮತದಾನದ ಮಹತ್ವ ಸಾರುವ ಅಭಿಯಾನವನ್ನು ವೈವಿಧ್ಯಮಯ ರೀತಿಯಲ್ಲಿ ಆಯೋಜಿಸುತ್ತಿದೆ. ಇದರಿಂದಾಗಿ ಮೇ 10 ರಂದು ಜಿಲ್ಲೆಯಲ್ಲಿ ಮತದಾನದ ಶೇಕಡಾವಾರು ಪ್ರಮಾಣ ಹೆಚ್ಚಾಗುವ ನಿರೀಕ್ಷೆಯಿದೆ ಎಂದು ಜಿಲ್ಲಾಧಿಕಾರಿ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ್ ಭರವಸೆ ವ್ಯಕ್ತಪಡಿಸುತ್ತಾರೆ. ಮತದಾನಕ್ಕಿಂತ ಇನ್ನೊಂದಿಲ್ಲ.. ನಾವು ಖಂಡಿತಾ ಮತಚಲಾಯಿಸುತ್ತೇವೆ ಎಂಬ ಚುನಾವಣಾ ಆಯೋಗದ ಮುಖ್ಯ ಸಂದೇಶವನ್ನೇ ನಾವು ಎಲ್ಲಾ ಅಭಿಯಾನದಲ್ಲಿಯೂ ಪರಿಣಾಮಕಾರಿಯಾಗಿ ಬಳಸಿದ್ದೇವೆ ಎಂದು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ್ ಹೇಳಿದರು.

ಕೊಡಗು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ್ ಅವರ ಪರಿಕಲ್ಪನೆಯಂತೆ ಜನ ಸಾಮಾನ್ಯರನ್ನು ಒಳಗೊಂಡು ಆಕಷ೯ಕ ಪೋಸ್ಟರ್ ಗಳು ಮೂಡಿಬಂದಿದೆ. ಸ್ವೀಪ್ ಸಮಿತಿಯು ಮುಂದಿನ ದಿನಗಳಲ್ಲಿಯೂ ಜಿಲ್ಲೆಯ ಹಲವೆಡೆನಾನಾ ಕಾಯ೯ಕ್ರಮಗಳನ್ನು ಆಯೋಜಿಸುತ್ತಿದೆ ಎಂದು ಸ್ವೀಪ್ ಸಮಿತಿ ಅಧ್ಯಕ್ಷ ಡಾ.ಎಸ್. ಆಕಾಶ್ ಹೇಳಿದ್ದಾರೆ.

ಮತದಾನದ ಮಹತ್ವ ಸಾರುವ ನಿಟ್ಟಿನಲ್ಲಿ ಮೇ 9 ರವರೆಗೂ ನಾನಾ ಕಾಯ೯ಕ್ರಮಗಳು, ಸಂದೇಶದ ಮೂಲಕ ಜಾಗ್ರತಿಯ ಉದ್ದೇಶವನ್ನು ಕೊಡಗು ಜಿಲ್ಲಾ ಮತದಾರರ ಶಿಕ್ಷಣ ಮತ್ತು ಸಹಭಾಗಿತ್ವ ಸಮಿತಿ (ಸ್ವೀಪ್) ಹೊಂದಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು