News Karnataka Kannada
Saturday, May 04 2024
ಮಡಿಕೇರಿ

ಮಡಿಕೇರಿ: ತುಳು ಭಾಷೆಯ ಬೆಳವಣಿಗೆಗೆ ಕೈಜೋಡಿಸಿ ಎಂದ ಪಿ.ಎಂ.ರವಿ

Pm Ravi urges people to join hands for the development of Tulu language
Photo Credit : By Author

ಮಡಿಕೇರಿ: ಸುಮಾರು ಎರಡೂವರೆ ಸಾವಿರ ವರ್ಷಗಳ ಇತಿಹಾಸವಿರುವ, ಪಂಚದ್ರಾವಿಡ ಭಾಷೆಯಲ್ಲಿ ಅತ್ಯಂತ ಪ್ರಾಚೀನವಾದ ತುಳು ಭಾಷೆಯ ಬೆಳವಣಿಗೆಗೆ ಲಿಪಿ ಕಲಿಕೆಯ ಮೂಲಕ ಎಲ್ಲರೂ ಕೈಜೋಡಿಸಬೇಕೆಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಪಿ.ಎಂ.ರವಿ ಕರೆ ನೀಡಿದ್ದಾರೆ.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ವತಿಯಿಂದ ತುಳುಭಾಷೆಯ ಲಿಪಿಯನ್ನು ಕೊಡಗು ಜಿಲ್ಲೆಯಲ್ಲಿ ಪರಿಚಯಿಸುವ ಮತ್ತು ಕಲಿಸುವ ನಿಟ್ಟಿನಲ್ಲಿ ನಗರದ ಪತ್ರಿಕಾ ಭವನದಲ್ಲಿ ಆಯೋಜಿಸಿದ್ದ ಬಲೆ ತುಳು ಲಿಪಿ ಕಲ್ಪುಗ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿ, ಕೊಡಗಿನಲ್ಲಿ ತುಳು ಭಾಷಿಕರ ಸಂಖ್ಯೆ ಹೆಚ್ಚು ಇದೆ, ಇತರ ಭಾಷೆಗಳೊಂದಿಗೆ ತುಳು ಭಾಷೆ ಕೂಡ ಸ್ಥಾನ ಪಡೆದುಕೊಂಡಿರುವುದು ಹೆಮ್ಮೆಯ ವಿಚಾರವೆಂದು ಹರ್ಷ ವ್ಯಕ್ತಪಡಿಸಿದರು.

ತುಳುವಿಗೆ 2,500 ವರ್ಷಗಳು ಮತ್ತು ತುಳು ಲಿಪಿಗೆ 1200 ವರ್ಷಗಳ ಇತಿಹಾಸವಿದೆ. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಸುಮಾರು 42 ಶಾಲೆಗಳಲ್ಲಿ ತುಳು ಲಿಪಿಯನ್ನು ಮೂರನೇ ಐಚ್ಛಿಕ ಭಾಷೆಯನ್ನಾಗಿ ಕಲಿಸಲಾಗುತ್ತಿದೆ. ಕರಾವಳಿ ಮಾತ್ರವಲ್ಲದೆ ಇತರ ಭಾಗದಲ್ಲೂ ಹೆಚ್ಚಿನ ಸಂಖ್ಯೆಯ ಮಂದಿ ತುಳು ಲಿಪಿಯನ್ನು ಕಲಿಯುತ್ತಿದ್ದು, ಕೊಡಗು ಜಿಲ್ಲೆಯಲ್ಲೂ ಕಲಿಯುವ ಆಸಕ್ತಿ ಹೆಚ್ಚಾಗಬೇಕು ಎಂದರು.

50ಕ್ಕೂ ಹೆಚ್ಚು ತುಳು ಶಾಸನ ದೊರಕ್ಕಿದ್ದು, ತುಳು ಲಿಪಿಯ ಪ್ರಾಚೀನತೆಯನ್ನು ತೋರಿಸಿದೆ. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ನಿರಂತರವಾಗಿ ತುಳು ಲಿಪಿ ಕಲಿಕೆಗೆ ವಿಶೇಷ  ಆಸಕ್ತಿ ವಹಿಸುತ್ತಿದೆ. ಭಾಷೆಯನ್ನು ಉಳಿಸುವುದರಿಂದ ತುಳು ಸಂಸ್ಕೃತಿ, ಆಚಾರ, ವಿಚಾರಗಳ ಬೆಳವಣಿಗೆಯಾಗಲಿದೆ ಎಂದು ರವಿ ಅಭಿಪ್ರಾಯಪಟ್ಟರು.  ಜಿಲ್ಲೆಯಲ್ಲಿ ತುಳು ಲಿಪಿ ಕಲಿತಿರುವ ಶಿಕ್ಷಕರಿದ್ದು, ಅವರ ಮೂಲಕ ಅನ್‌ಲೈನ್ ನಲ್ಲೂ ಲಿಪಿ ಕಲಿಕೆಗೆ ಕ್ರಮ ಕೈಗೊಳ್ಳಲಾಗುವುದು ಎಂದರು.

ತುಳುವೆರ ಜನಪದ ಕೂಟದ ಜಿಲ್ಲಾಧ್ಯಕ್ಷ ಬಿ.ಬಿ.ಐತ್ತಪ್ಪ ರೈ ಮಾತನಾಡಿ ಕೂಟದ ಮೂಲಕ ತುಳು ಭಾಷಿಕರನ್ನು ಸಂಘಟಿಸುವ ಕಾರ್ಯವಾಗುತ್ತಿದೆ. ಇದರ ಜೊತೆಯಲ್ಲಿ ಭಾಷೆಯ ಬೆಳವಣಿಗೆಗೂ ಅಗತ್ಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಾಗಿದೆ ಎಂದರು. ತುಳು ಲಿಪಿಯನ್ನು ಎಲ್ಲಾ ತುಳು ಭಾಷಿಕರು ಅಭ್ಯಾಸ ಮಾಡಬೇಕೆಂದು ಕರೆ ನೀಡಿದ ಅವರು,  ತುಳು ಭಾಷೆ, ಸಂಸ್ಕೃತಿಯ ಬೆಳವಣಿಗೆಗಾಗಿ ನಡೆಸುವ ಎಲ್ಲಾ ಕಾರ್ಯಕ್ರಮಗಳಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

ಜಿ.ಪಂ ಮಾಜಿ ಅಧ್ಯಕ್ಷ ಬಿ.ಶಿವಪ್ಪ ಮಾತನಾಡಿ ತುಳು ಲಿಪಿಯನ್ನು ಪ್ರತಿಯೊಬ್ಬರು ಕರಗತ ಮಾಡಿಕೊಳ್ಳುವ ಮೂಲಕ ಭಾಷೆಗೆ ಪ್ರಾತಿನಿಧ್ಯ ನೀಡಬೇಕೆಂದು ತಿಳಿಸಿದರು.

ನಗರಸಭಾ ಸದಸ್ಯೆ ಚಿತ್ರಾವತಿ ಪೂವಪ್ಪ, ಮೊಗೇರ ಸಮಾಜದ ಜಿಲ್ಲಾಧ್ಯಕ್ಷ ಗೌತಮ್ ಶಿವಪ್ಪ, ತುಳುವೆರ ಜನಪದ ಕೂಟದ ಜಿಲ್ಲಾ ಕಾರ್ಯದರ್ಶಿ ಬಿ.ಎಸ್.ಆನಂದ, ಉಪಾಧ್ಯಕ್ಷೆ ವಿಜಯಲಕ್ಷ್ಮಿ ರವಿಶೆಟ್ಟಿ, ಮಡಿಕೇರಿ ತಾಲ್ಲೂಕು ಅಧ್ಯಕ್ಷ ಎಂ.ಡಿ.ಸುರೇಶ್, ನಿರ್ದೇಶಕರುಗಳಾದ ಲೀಲಾಶೇಷಮ್ಮ, ಅಶೋಕ್ ಆಚಾರ್ಯ, ಜಗದೀಶ್ ಆಚಾರ್ಯ, ಸದಸ್ಯರುಗಳಾದ ಸಾವಿತ್ರಿ, ಶೋಭಾ ಮುತ್ತಪ್ಪ, ಕವಿತಾ ಪ್ರಸಾದ್, ಶಶಿಕಲಾ ಲೋಕೇಶ್ ರೈ, ಸುನಿತಾ ನಾರಾಯಣ, ವಿಕ್ರಂ, ನಾಗರಾಜ್, ಸುರೇಶ್ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.

ಶ್ರೇಯ ಹಾಗೂ ಕೃತಿಕಾ ಪ್ರಾರ್ಥಿಸಿ, ತುಳು ಲಿಪಿ ಶಿಕ್ಷಕಿ ಶಶಿಕಲಾ ಪೂಜಾರಿ ವಂದಿಸಿದರು. ಅತಿಥಿಗಳು ಕಾರ್ಯಕ್ರಮವನ್ನು ಉದ್ಘಾಟಿಸಿ ತುಳು ಲಿಪಿಯ ಕರಪತ್ರವನ್ನು  ಬಿಡುಗಡೆಗೊಳಿಸಿದರು. ಇದೇ ಸಂದರ್ಭ ತುಳು ಲಿಪಿ ಶಿಕ್ಷಕಿಯರನ್ನು ಅಭಿನಂದಿಸಲಾಯಿತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು