ಹಾಸನ: ಹಾಸನ ಜಿಲ್ಲೆಯ ದಾಸರಕೊಪ್ಪಲಿ ಗ್ರಾಮದಲ್ಲಿ ಬುದ್ಧಿವಾದ ಹೇಳಿದ್ದಕ್ಕೆ ಪೊಲೀಸ್ ಕಾನ್ಸ್ ಟೇಬಲ್ ಗೆ ದುಷ್ಕರ್ಮಿಗಳು ಚಾಕುವಿನಿಂದ ಇರಿದ ಘಟನೆ ನಡೆದಿದೆ.
ಸಕಲೇಶಪುರ ನಗರದ ಪೊಲೀಸ್ ಠಾಣೆಯಲ್ಲಿ ಕಾನ್ಸ್ ಟೇಬಲ್ ಆಗಿ ಕೆಲಸ ಮಾಡುತ್ತಿದ್ದ ಲೋಹಿತ್, ಸಂಬಂಧಿಕರೊಬ್ಬರು ಸಾವನ್ನಪ್ಪಿದ ಹಿನ್ನೆಲೆಯಲ್ಲಿ ದಾಸರಕೊಪ್ಪಲಿ ಗ್ರಾಮಕ್ಕೆ ತೆರಳಿದ್ದರು. ಈ ವೇಳೆ ಯುವಕರು ಗಲಾಟೆ ಮಾಡುತಿದ್ದು, ಯುವಕರಿಗೆ ಬುದ್ಧಿ ಹೇಳಿದ್ದಾರೆ.
ಯುವಕರ ಗುಂಪು ಬಳಿಕ ಬಂದು ಕಾನ್ಸ್ ಟೇಬಲ್ ಲೋಹಿತ್ ಗೆ ಚಾಕುವಿನಿಂದ ಇರಿದು ಹೋಗಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಕಾನ್ಸ್ ಟೇಬಲ್ ರನ್ನು ಹಾಸನ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಕರಣ ಸಂಬಂಧ ಹಾಸನ ನಗರ ಠಾಣೆ ಪೊಲೀಸರು ಪ್ರಕಾಶ್ ಹಾಗೂ ಪುನೀತ್ ಎಂಬುವವರನ್ನು ಬಂಧಿಸಿದ್ದು, ಇನ್ನಿಬ್ಬರಿಗಾಗಿ ಹುಡುಕಾಟ ನಡೆಸಿದ್ದಾರೆ.