News Karnataka Kannada
Sunday, April 28 2024
ಹಾಸನ

ಬೇಲೂರು: ಯಾರಾಗ್ತಾರೆ ಬೇಲೂರು ಕ್ಷೇತ್ರದ ಶಾಸಕರು

Who will be the MLAs of Belur constituency?
Photo Credit : News Kannada

ಬೇಲೂರು: ಚನ್ನಕೇಶವ ದೇಗುಲ, ಶಿಲ್ಪಕಲೆಗಳಿಂದ ವಿಶ್ವ ಪ್ರಸಿದ್ಧಿ ಕ್ಷೇತ್ರ. ಮಲೆನಾಡು-ಬಯಲು ಸೀಮೆ ಎರಡನ್ನೂ ಹೊಂದಿರು ವುದು ವಿಶೇಷ. ಯಗಚಿ ಜಲಾಶಯ ಕ್ಷೇತ್ರಕ್ಕೊಂದು ಮುಕುಟ. ಪರಿಶಿಷ್ಟ ಸಮುದಾಯದ ಮತದಾರರು ಹೆಚ್ಚಿರುವ ಇಲ್ಲಿ ೧೯೫೨ರಲ್ಲಿ ಒಮ್ಮೆ ಸಾಮಾನ್ಯ ಕ್ಷೇತ್ರದಡಿ ಬೋರಣ್ಣಗೌಡರು ಶಾಸಕರಾಗಿದ್ದರು. ನಂತರ ಈ ಕ್ಷೇತ್ರ ಮೀಸಲು ಕ್ಷೇತ್ರವಾಗಿ ಬದಲಾಯಿತು. ೨೦೦೮ ರಲ್ಲಿ ಸಾಮಾನ್ಯ ಕ್ಷೇತ್ರವಾಗಿ ಪರಿವರ್ತನೆಗೊಂಡಿತು.

ರಾಜಕೀಯ ಇತಿಹಾಸ: ಸ್ವಾತಂತ್ರ್ಯ ನಂತರದಲ್ಲಿ ಸಕಲೇಶಪುರ- ಬೇಲೂರು-ಆಲೂರು ಪ್ರದೇಶಗಳನ್ನೊಳಗೊಂಡಂತೆ ವಿಧಾನಸಭಾ ಕ್ಷೇತ್ರವಾಗಿ, ಇಬ್ಬರು ಶಾಸಕರನ್ನು ಪಡೆದಿದ್ದ ಹೆಗ್ಗಳಿಕೆ ಹೊಂದಿದೆ. ಬದಲಾದ ಬೆಳವಣಿಗೆಯಲ್ಲಿ ಏಕ ಸದಸ್ಯತ್ವದ ಶಾಸನ ಸಭಾ ಕ್ಷೇತ್ರವಾಯಿತು. ಅಂತೆಯೇ ಎಸ್.ಎಚ್. ಪುಟ್ಟರಂಗನಾಥ್ ಅವರು ಕಾಂಗ್ರೆಸ್, ಸ್ವತಂತ್ರ ಪಕ್ಷ, ಭಾರತೀಯ ಜನತಾಪಕ್ಷ ಈ ಮೂರು ಪಕ್ಷಗಳಿಂದ ಆಯ್ಕೆ ಆಗಿರುವುದು ಕ್ಷೇತ್ರದ ವಿಶೇಷವೆ. ಅದೇ ರೀತಿ ಸ್ವತಂತ್ರ ಪಕ್ಷ ಹೊರತುಪಡಿಸಿ ೮ ಬಾರಿ ಕಾಂಗ್ರೆಸ್, ೬ ಬಾರಿ ಜೆಡಿಎಸ್, ೧ಬಾರಿ ಬಿಜೆಪಿ ಪಕ್ಷ ಕ್ಷೇತ್ರದಲ್ಲಿ ಗೆದ್ದಿದೆ. ೪ ಬಾರಿ ಶಾಸಕರಾದ ಬಿ.ಎಚ್.ಲಕ್ಷ್ಮಣಯ್ಯ, ೩ ಬಾರಿ ಶಾಸಕರಾದ ಎಸ್.ಎಚ್. ಪುಟ್ಟರಂಗನಾಥ್ ಹಾಗೂ ಎಚ್.ಕೆ.ಕುಮಾರಸ್ವಾಮಿ ಹ್ಯಾಟ್ರಿಕ್ ಪಟ್ಟಿಯಲ್ಲಿದ್ದಾರೆ.

ಇದುವರೆಗೆ ೧೫ ವಿಧಾನಸಭಾ ಚುನಾವಣೆ, ೮ ಶಾಸಕರನ್ನು ಕಂಡಿರುವ ಬೇಲೂರು ವಿಧಾನಸಭಾ ಕ್ಷೇತ್ರ ವಿಧಾನಸಭೆ ಅಸ್ತಿತ್ವಕ್ಕೆ ಬಂದ ೧೯೫೨ರ ಆರಂಭದಲ್ಲಿ ಬೇಲೂರು- ಸಕಲೇಶಪುರ ತಾಲೂಕು ಹಾಗೂ ಹಾಸನ ತಾಲೂಕು ಸಾಲಗಾಮೆ ಹೋಬಳಿ ಸೇರಿಕೊಂಡಂತೆ ಮೀಸಲು ಮತ್ತು ಸಾಮಾನ್ಯ ಮೀಸಲಿನಡಿ ದ್ವಿಸದಸ್ಯ ಕ್ಷೇತ್ರವಾಗಿ ಮಾರ್ಪಟ್ಟು ಸಾಮಾನ್ಯ ವಿಧಾನಸಭಾ ಕ್ಷೇತ್ರದ ಪ್ರಥಮ ಶಾಸಕರಾಗಿ ಕಾಂಗ್ರೆಸ್ಸಿನ ಬೋರಣ್ಣಗೌಡರು, ಮೀಸಲು ಕ್ಷೇತ್ರದ ಅಭ್ಯರ್ಥಿಯಾಗಿ ಕಾಂಗ್ರೆಸ್ಸಿನ ಸಿದ್ದಯ್ಯ ಶಾಸಕರಾದರು.

೧೯೫೭ರಲ್ಲಿ ಈ ಇಬ್ಬರೂ ಯಥಾವತ್ತು ಮೀಸಲಿನಡಿ ಮರು ಆಯ್ಕೆಯಾದರು. ಇದೇ ವೇಳೆ ಶಾಸಕ ಅವಧಿ ಇರುವಾಗಲೇ ಶಾಸಕ ಸಿದ್ದಯ್ಯ ಅವರು ಮೃತಪಟ್ಟರು. ಈ ಸ್ಥಾನಕ್ಕೆ ನಡೆದ ಮರು ಚುನಾವಣೆಯಲ್ಲಿ ಸಿದ್ದಯ್ಯ ಅವರ ಸಂಬಂಧಿ ಬಿ.ಎಚ್.ಲಕ್ಷ್ಮಣಯ್ಯ ಅವಿರೋಧ ಆಯ್ಕೆಯಾದರು. ನಂತರ ೧೯೬೨ರಲ್ಲಿ ಕ್ಷೇತ್ರ ವಿಭಜನೆಗೊಂಡು ಸಕಲೇಶಪುರ ಸಾಮಾನ್ಯ ಕ್ಷೇತ್ರವಾಗಿ ಬೇಲೂರು ಮೀಸಲು ಕ್ಷೇತ್ರವಾಗಿ ಪ್ರತ್ಯೇಕಗೊಂಡಿತು. ಮತ್ತೊಮ್ಮೆ ಮೀಸಲು ಕ್ಷೇತ್ರದಿಂದ ಬಿ.ಎಚ್.ಲಕ್ಷ್ಮಣಯ್ಯ ಕಾಂಗ್ರೆಸ್ ಪಕ್ಷದಿಂದ ಪುನರಾಯ್ಕೆಗೊಂಡರು.

೧೯೬೮ರಲ್ಲಿ ಸ್ವತಂತ್ರ ಪಕ್ಷದಿಂದ ಎಸ್.ಎಚ್.ಪುಟ್ಟರಂಗನಾಥ್ ಜಯಗಳಿಸಿದರು. ಇದೇ ಪುಟ್ಟರಂಗನಾಥ್ ೧೯೭೨ರಲ್ಲಿ ಆಡಳಿತ ಕಾಂಗ್ರೆಸ್ಸಿನಿಂದ (ಇಂದಿರಾ ಕಾಂಗ್ರೆಸ್) ಜಯಗಳಿಸಿದರು. ಇದಾದ ನಂತರ ೧೯೭೮ರಲ್ಲಿ ಬಿ.ಎಚ್.ಲಕ್ಷ್ಮಣಯ್ಯ ಜನತಾ ಪಕ್ಷದಿಂದ ಶಾಸಕರಾದರು. ನಂತರ ೧೯೮೩ರಲ್ಲಿ ಜನತಾ ಪಕ್ಷದಿಂದ ಡಿ.ಮಲ್ಲೇಶ್, ೧೯೮೫ರಲ್ಲಿ ಜನತಾದಳದಿಂದ ಎಚ್.ಕೆ.ಕುಮಾರಸ್ವಾಮಿ ಜಯ ಗಳಿಸಿದರು. ೧೯೮೯ರಲ್ಲಿ ಜನತಾದಳ ಇಬ್ಬಾಗವಾದಾಗ ಬಿ.ಎಚ್.ಲಕ್ಷ್ಮಣಯ್ಯ ಕಾಂಗ್ರೆಸ್ಸಿನಿಂದ ಸ್ಪರ್ಧಿಸಿ ಜಯಶಾಲಿಯಾದರು.

ಜನತಾದಳ ಒಗ್ಗೂಡಿದ ನಂತರ ೧೯೯೪ರಲ್ಲಿ ಎಚ್.ಕೆ. ಕುಮಾರಸ್ವಾಮಿ, ೧೯೯೯ರಲ್ಲಿ ಬಿಜೆಪಿಯಿಂದ ಎಸ್.ಎಚ್. ಪುಟ್ಟರಂಗನಾಥ್ ಶಾಸಕರಾದರು. ೨೦೦೪ರಲ್ಲಿ ಎಚ್.ಕೆ.ಕುಮಾರಸ್ವಾಮಿ ಮೀಸಲು ಕ್ಷೇತ್ರದಡಿ ಜನತಾದಳದಿಂದ ಶಾಸಕರಾದರು. ೨೦೦೮ರಲ್ಲಿ ಕ್ಷೇತ್ರವು ಸಾಮಾನ್ಯ ಕ್ಷೇತ್ರವಾಗಿ ಪರಿವರ್ತನೆಗೊಂಡಿತು. ವೈ.ಎನ್.ರುದ್ರೇಶಗೌಡರು ಬದಲಾದ ಸಾಮಾನ್ಯ ಕ್ಷೇತ್ರದಡಿ ಕಾಂಗ್ರೆಸ್ಸಿನಿಂದ ಸ್ಪರ್ಧಿಸಿ ಶಾಸಕರಾದರು. ಮತ್ತೆ ೨೦೧೩ರಲ್ಲೂ ಕಾಂಗ್ರೆಸ್ ಪಕ್ಷದಿಂದಲೇ ಸ್ಪರ್ಧಿಸಿ ವಿಜಯಿಯಾಗಿದ್ದರು.

ಜನತಾಪಕ್ಷದಿಂದ ೧೯೮೩ರಲ್ಲಿ ಶಾಸಕರಾಗಿದ್ದ ಡಿ.ಮಲ್ಲೇಶ್ ಅವರ ನೇರ ಹಾಗೂ ಕೋಪದ ಮಾತುಗಳು ಅವರನ್ನು ಜನತಾಪಕ್ಷದಿಂದ ದೂರ ಸರಿಯುವಂತೆ ಮಾಡಿತು ಎಂದೇ ಹೇಳಲಾಗುತ್ತದೆ. ಪರಿಣಾಮ ಹೊಳೆನರಸೀಪುರದಲ್ಲಿ ವಕೀಲ ವೃತ್ತಿಯಲ್ಲಿದ್ದ ಎಚ್.ಕೆ.ಕುಮಾರಸ್ವಾಮಿ ಅವರು ಬೇಲೂರಿಗೆ ೧೯೯೪ರಲ್ಲಿ ಕಾಲಿಟ್ಟಿದ್ದು ಮತ್ತೆ ಹೊಳೆನರಸೀಪು ರದತ್ತ ತಿರುಗಿ ನೋಡದಂತೆ ಮತದಾರರು ವರ ಕರುಣಿಸಿದ್ದರು.

ಪರಿಶಿಷ್ಟರ ನಂತರ ಎರಡನೇ ಸ್ಥಾನದಲ್ಲಿರುವ ಲಿಂಗಾಯತರು ಕಳೆದ ಒಂದು ಚುನಾವಣಿಯಲ್ಲಿ ಜಯಗಳಿಸಿದ್ದಾರೆ. ಒಕ್ಕಲಿಗರು ಮೂರನೇ ಸ್ಥಾನದಲ್ಲಿದ್ದರೂ ಇತರ ವರ್ಗದ ಮತಗಳಿಕೆಯಲ್ಲಿ ಮುಂದಿರುವುದರಿಂದ ಗೆಲುವಿಗೆ ಅಡ್ಡಿಯಾಗಿಲ್ಲ. ಯಾರದೊ ಮೇಲಿನ ಸಿಟ್ಟನ್ನು ತೀರಿಸಿಕೊಳ್ಳಲು ೧೯೯೯ರಲ್ಲಿ ಎಸ್.ಎಚ್.ಪುಟ್ಟರಂಗನಾಥ್ ಅವರನ್ನು ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಸಿ ಪಕ್ಷ ಬೇಧ ಮರೆತು ಗೆಲ್ಲಿಸಿದರು. ಜನತಾದಳದಲ್ಲಿ ಸಾಕಷ್ಟು ಹುದ್ದೆಗಳ ಅನುಭವಿಸಿದ್ದ ಹಾಲಿ ಶಾಸಕ ವೈ.ಎನ್.ರುದ್ರೇಶಗೌಡ ಅವರು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿ ಎರಡು ಅವಧಿಗೆ ಶಾಸಕರಾಗಿ ದ್ದರು. ೨೦೧೮ ರಲ್ಲಿ ಕೆ.ಎಸ್. ಲಿಂಗೇಶ್ ಜೆಡಿಎಸ್‌ನಿಂದ ಮೊದಲ ಬಾರಿಗೆ ಶಾಸಕರಾದರು.

೨೦೨೩ರ ಪೈಪೋಟಿ: ಲಿಂಗಾಯುತ ಸಮುದಾಯದವರ ಸಂಖ್ಯೆ ಹೆಚ್ಚಾಗಿರುವ ಕ್ಷೇತ್ರದಲ್ಲಿ ಮೂರೂ ಪಕ್ಷದಿಂದ ಲಿಂಗಾಯುತ ಅಭ್ಯರ್ಥಿಗೇ ಅವಕಾಶ ನೀಡುವ ಸಾಧ್ಯತೆ ಹೆಚ್ಚಿದೆ. ಹಾಲಿ ಜೆಡಿಎಸ್‌ನ ಕೆ.ಎಸ್.ಲಿಂಗೇಶ್ ಕ್ಷೇತ್ರದ ಶಾಸಕರಾಗಿದ್ದು, ಮುಂದಿನ ಬಾರಿಯೂ ಅವರೇ ಜೆಡಿಎಸ್‌ನಿಂದ ಸ್ಪರ್ಧಿಸುವುದು ಖಾತ್ರಿಯಾಗಿದೆ.

ಇತ್ತ ಬೆಜೆಪಿಯ ಜಿಲ್ಲಾಧ್ಯಕ್ಷರಾಗಿರುವ ಹುಲ್ಲಹಳ್ಳಿ ಸುರೇಶ್ ಕೂಡಾ ಈ ಬಾರಿಯ ಟಿಕೆಟ್‌ಗೆ ಓಡಾಟ ನಡೆಸುತ್ತಾ ಇದ್ದಾರೆ. ಕಳೆದ ಬಾರಿ ಸುರೇಶ್ ಸ್ಪರ್ಧಿಸಿದರಾದರೂ ೧೯,೭೫೦ ಮತಗಳಿಂದ ಪರಾಭವಗೊಂಡಿದ್ದರು. ಕಳೆದ ನಾಲ್ಕು ಚುನಾವಣೆಯಲ್ಲಿ ಇದು ಅತಿ ಹೆಚ್ಚಿನ ಸೋಲಿನ ಅಂತರವಾಗಿದೆ. ಇನ್ನೂ ರಾಜ್ಯ ಹಾಗೂ ಕೇಂದ್ರ ನಾಯಕರೊಟ್ಟಿಗೆ ಉತ್ತಮ ಬಾಂಧವ್ಯ ಇಟ್ಟುಕೊಂಡಿರುವ ಸುರಭಿ ರಘು ಕ್ಷೇತ್ರದಲ್ಲಿ ಮಿಂಚಿನ ಸಂಚಲನ ಮೂಡಿಸಿ ಸದ್ಯ ರಾಜ್ಯ ಮಟ್ಟದಲ್ಲಿ ಕಾರ್ಯಪ್ರವೃತ್ತರಾಗಿದ್ದು, ಕ್ಷೇತ್ರದಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿಲ್ಲವಾದ್ರೂ ಪಕ್ಷದ ಮಹಿಳಾ ಟಿಕೇಟ್ ಮೀಸಲು ಕೋಟಾದ ಅಡಿ ಟಿಕೇಟ್ ತರುವ ವಿಶ್ವಾಸದಲ್ಲಿದ್ದರೆ, ಕೊರಟಗೆರೆ ಪ್ರಕಾಶ್, ಸಿದ್ದೇಶ್ ನಾಗೇಂದ್ರ, ಸಂತೋಷ್ ಕೆಂಚಾಂಬ, ಅವರೂ ಬಿಜೆಪಿ ಟಿಕೆಟ್‌ಗಾಗಿ ಫೈಟ್ ಮಾಡ್ತಿದ್ದಾರೆ.

ಈ ಹಿಂದೆ ಇದ್ದ ಗಂಡಸಿ ಕ್ಷೇತ್ರವನ್ನು ಪ್ರತಿನಿಧಿಸಿದ್ದ, ಗಂಡಸಿ ಶಿವರಾಮ್ ಎಂದೇ ಹೆಸರು ಪಡೆದ ಬಿ.ಶಿವರಾಮ್ ಕಾಂಗ್ರೆಸ್ ಟಿಕೆಟ್‌ಗೆ ಪ್ರಯತ್ನಿಸುತ್ತಿದ್ದಾರೆ. ಸಚಿವರೂ ಆಗಿದ್ದ ಶಿವರಾಮ್, ಕ್ಷೇತ್ರ ಪುನರ್‌ವಿಂಗಡಣೆ ವೇಳೆ ಕ್ಷೇತ್ರ ಇಲ್ಲವಾದ್ದರಿಂದ ರಾಜಕೀಯ ನೆಲೆಯನ್ನು ಕಳೆದುಕೊಂಡಿದ್ದರು. ಇನ್ನೂ ಉದ್ಯಮಿ, ಸಮಾಜ ಸೇವಕರಾದ ಗ್ರಾನೈಟ್ ರಾಜಶೇಖರ್ ಕೂಡಾ ಕಾಂಗ್ರೆಸ್ ಟಿಕೆಟ್‌ಗಾಗಿ ಪ್ರಬಲ ಆಕಾಂಕ್ಷಿಯಾಗಿದ್ದು, ಲಿಂಗಾಯುತ ಕೋಟಾದ ಅಡಿಯಲ್ಲಿ ಟಿಕೆಟ್ ಲಭಿಸುವ ವಿಶ್ವಾಸದಲ್ಲಿದ್ದು, ಪಕ್ಷ ಸಂಘಟನೆ ಹಾಗೂ ಕಾಂಗ್ರೆಸ್ ಕಾರ್ಯಕರ್ತರನ್ನು ಒಂದೆಡೆ ಕರೆದುಕೊಂಡು ಹೋಗುವತ್ತ ಶ್ರಮಿಸುತ್ತಿದ್ದಾರೆ. ಒಟ್ಟಿನಲ್ಲಿ ಈ ಬಾರಿ ಬೇಲೂರು ವಿಧಾನ ಸಭಾ ಕ್ಷೇತ್ರ ಕೂಡ ತ್ರಿಕೋನ ಪೈಪೋಟಿಗೆ ಸಜ್ಜಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು