News Karnataka Kannada
Monday, April 29 2024
ಮೈಸೂರು

ಗ್ಯಾರಂಟಿ ಯೋಜನೆ ಮುಂದಿಟ್ಟು ಮತ ಕೇಳಲು ಕೈ ನಾಯಕರ ನಿರ್ಧಾರ

ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಸಿದ್ದರಾಮಯ್ಯ ನೇತೃತ್ವದ  ಸರ್ಕಾರ  ಅನುಷ್ಠಾನಕ್ಕೆ ತಂದಿರುವ   ಪಂಚ ಗ್ಯಾರಂಟಿಗಳೇ ಶ್ರೀರಕ್ಷೆಯಾಗಿದ್ದು, ಅಭಿವೃದ್ಧಿ ಆಧಾರದ ಮೇಲೆ ಮತ ಕೇಳಲು  ಜಿಲ್ಲಾ ಕಾಂಗ್ರೆಸ್ ಮುಖಂಡರು  ಮುಂದಾಗಿದ್ದಾರೆ.
Photo Credit : By Author

ಮೈಸೂರು: ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಸಿದ್ದರಾಮಯ್ಯ ನೇತೃತ್ವದ  ಸರ್ಕಾರ ಅನುಷ್ಠಾನಕ್ಕೆ ತಂದಿರುವ ಪಂಚ ಗ್ಯಾರಂಟಿಗಳೇ ಶ್ರೀರಕ್ಷೆಯಾಗಿದ್ದು, ಅಭಿವೃದ್ಧಿ ಆಧಾರದ ಮೇಲೆ ಮತ  ಕೇಳಲು  ಜಿಲ್ಲಾ ಕಾಂಗ್ರೆಸ್ ಮುಖಂಡರು  ಮುಂದಾಗಿದ್ದಾರೆ.

ಕೆಪಿಸಿಸಿ ಜಿಲ್ಲಾ ಸಮಿತಿಯಿಂದ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ  ಭಾಗವಹಿಸಿದ್ದ ಕಾಂಗ್ರೆಸ್ ಪಕ್ಷದ ಹಾಲಿ  ಶಾಸಕರು, ಮಾಜಿ ಶಾಸಕರು, ವಿಧಾನಸಭೆ ಚುನಾವಣೆಯಲ್ಲಿ ಪರಾಜಿತಗೊಂಡಿದ್ದ ಅಭ್ಯರ್ಥಿಗಳು ಹಾಗೂ ಲೋಕಸಭಾ ಚುನಾವಣೆಗೆ ಟಿಕೆಟ್ ಆಕಾಂಕ್ಷಿಗಳಾಗಿದ್ದವರು ಈ ನಿರ್ಧಾರವನ್ನು ಪ್ರಕಟಿಸಿದ್ದಾರೆ.

ಈ ವೇಳೆ ಶಾಸಕ ಶಾಸಕ ತನ್ವೀರ್ ಸೇಠ್ ಮಾತನಾಡಿ, ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಒಮ್ಮತದ ಅಭ್ಯರ್ಥಿಯಾಗಿ ಲಕ್ಷ್ಮಣ್ ಅವರನ್ನು ಆಯ್ಕೆ ಮಾಡಲಾಗಿದೆ. ನೂರಕ್ಕೆ ನೂರು  ನಮ್ಮ ಅಭ್ಯರ್ಥಿ ಗೆಲ್ಲುವ ವಿಶ್ವಾಸವಿದೆ. ಕ್ಷೇತ್ರದಲ್ಲಿರುವ ಕಾಫಿ, ತಂಬಾಕು ಬೆಳೆಗಾರರ ಸಮಸ್ಯೆ ಬಗೆಹರಿಸಬೇಕಿದೆ. ವಿಮಾನ ನಿಲ್ದಾಣದ ರನ್ ವೇ ವಿಸ್ತರಣೆ ಆಗಬೇಕಿದ್ದು, ಅದಕ್ಕೆ ಅಗತ್ಯವಿರುವ ಭೂ ಸ್ವಾಧೀನ ಪ್ರಕ್ರಿಯೆ ಆರಂಭವಾಗಿದೆ.

ಮೌಲ್ಯಾಧಾರಿತ ರಾಜಕೀಯ ಆರಂಭಿಸಬೇಕಿದ್ದು, ದ್ವೇಷದ ರಾಜಕಾರಣವನ್ನು ನಾವು ಎಂದಿಗೂ ಮಾಡುವುದಿಲ್ಲ.  ಸರ್ವರನ್ನೊಳಗೊಂಡ ರಾಜಕೀಯ ನಮ್ಮದು. ಇದೆಲ್ಲವನ್ನು ನಮ್ಮ ಪ್ರಣಾಳಿಕೆ ಒಳಗೊಳ್ಳುತ್ತದೆ. ಶಿಕ್ಷಣ, ಆರೋಗ್ಯ ಸೇರಿದಂತೆ ನಮ್ಮ ಸರ್ಕಾರ ನೀಡಿರುವ ಕೊಡುಗೆಗಳನ್ನು ಜನರಿಗೆ ತಿಳಿಸುತ್ತೇವೆ. ಜನರ ಸೇವೆ ಮಾಡುವ ಸಾಮಾನ್ಯ ಕಾರ್ಯಕರ್ತರಿಗೆ ಟಿಕೆಟ್ ನೀಡಿದ್ದೇವೆ. ಜಾತಿ-ಧರ್ಮ ಇವುಗಳನ್ನು ಹೊರತು ಪಡಿಸಿ, ಬಡಜನರ ಕಷ್ಟಕಾರ್ಪಣ್ಯಗಳಿಗೆ ಸ್ಪಂದಿಸುವ ಅಭ್ಯರ್ಥಿಗೆ ಮತ ನೀಡಬೇಕು ಎಂದು ಜನರಲ್ಲಿ ಕೇಳಿಕೊಳ್ಳುತ್ತೇವೆ. ಮತದಾರರು ಪ್ರಬುದ್ಧರಾಗಿದ್ದು ಯಾರಿಗೆ ಮತ ನೀಡಬೇಕು, ಏಕೆ ನೀಡಬೇಕು ಎನ್ನುವುದು ಅವರಿಗೆ ತಿಳಿದಿದೆ. ಅವರೇ ನಿರ್ಧಾರ ಮಾಡುತ್ತಾರೆ ಎಂದರು.

ಶಾಸಕ ಕೆ.ಹರೀಶ್ ಗೌಡ ಮಾತನಾಡಿ, ಚುನಾವಣೆಗೆ ಎಲ್ಲರೂ ಸಜ್ಜಾಗಿದ್ದು ಗೆಲ್ಲುವ ವಿಶ್ವಾಸವಿದೆ. ಕ್ಷೇತ್ರ ವ್ಯಾಪ್ತಿಯಲ್ಲಿ  ಐವರು ಶಾಸಕರು ನಮ್ಮವರೇ ಇದ್ದಾರೆ. ನಮ್ಮ ಎದುರಾಳಿ ಅಭ್ಯರ್ಥಿ ಯಾರು ಎಂಬುದಕ್ಕಿಂತ ಹೆಚ್ಚಾಗಿ ಬಿಜೆಪಿಯ ದುರಾಡಳಿತ, ಅನಾಚಾರಗಳನ್ನು ಜನರಿಗೆ ತಿಳಿಸುತ್ತೇವೆ. ಮೈಸೂರಿಗೆ ನಮ್ಮ ಸರ್ಕಾರದ ಕೊಡುಗೆ ಏನು ಎಂಬುದನ್ನೂ ಮನವರಿಕೆ ಮಾಡಿಕೊಡುತ್ತೇವೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ತವರು ಜಿಲ್ಲೆಯಲ್ಲಿ ಮಾಡಿರುವ ಅಭಿವೃದ್ಧಿ ಯೋಜನೆಗಳ ಬಗ್ಗೆ ತಿಳಿಸುತ್ತೇವೆ. ಈಗಾಗಲೇ ಗ್ಯಾರಂಟಿಗಳ ಜಾರಿ ಮೂಲಕ ನುಡಿದಂತೆ ನಡೆದ ಸರ್ಕಾರ ಎಂದು ಸಾಬೀತು ಮಾಡಿದ್ದೇವೆ. ಈಗಾಗಿ ನಮ್ಮ ಗೆಲುವಿಗೆ ಯಾವುದೇ ಅಡತಡೆ ಇಲ್ಲ. ನಮ್ಮ ಅಭ್ಯರ್ಥಿ ವಿವಾದರಹಿತ ಸ್ವಚ್ಛ ರಾಜಕಾರಣಿ. ಯದುವೀರ್ ರಾಜವಂಶಸ್ಥರಲ್ಲ. ಅವರು ದತ್ತು ಪುತ್ರ ಅಷ್ಟೇ ಎಂದರು.

ಮಾಜಿ ಶಾಸಕ ಎಚ್.ಪಿ.ಮಂಜುನಾಥ್ ಮಾತನಾಡಿ, ನಮ್ಮದು ತಾರತಮ್ಯ ಇಲ್ಲದ ಆಡಳಿತ. ಟಿಕೆಟ್ ಹಂಚಿಕೆಯಲ್ಲೂ  ಎಲ್ಲಾ ವರ್ಗಕ್ಕೂ ಸಮಾನತೆ ನೀಡಲಾಗಿದೆ. ದೇಶಕ್ಕೆ ಸ್ವಾತಂತ್ರ್ಯ ಬಂದಾಗಿನಿಂದ ಕಾಂಗ್ರೆಸ್ ಏನನ್ನೂ ಮಾಡಿಲ್ಲ ಎಂದು ವಿರೋಧಿಗಳು ಆರೋಪಿಸುತ್ತಾರೆ. ಆದರೆ, ನಾವು ಕಟ್ಟಡ ಕಟ್ಟಿ, ಅದಕ್ಕೆ ಸುಣ್ಣ ಬಳಿದು, ಗರ್ಭಗುಡಿಯನ್ನು ಮಾಡಿ, ಅಲ್ಲಿ ದೇವರನ್ನು ನಾವೇ ಪ್ರತಿಷ್ಠಾಪನೆ ಮಾಡಿದ್ದರೂ, ಕೊನೆಗೆ ಗಂಟೆ ಬಾರಿಸುವ ಮೂಲಕ ವಿರೋಧ ಪಕ್ಷದವರು ನಾವು ಕಟ್ಟಿಸಿದ್ದು ಎನ್ನುತ್ತಾರೆ. ರೈಲು ಹಳಿ ನಿರ್ಮಾಣ ಮಾಡಿ ಮೂರು ರೈಲುಗಳನ್ನು ನಾವು ಬಿಟ್ಟಿದ್ದೇವೆ. ಆದರೆ ನಾಲ್ಕನೆಯದನ್ನು ಅವರು ಬಿಟ್ಟು ಎಲ್ಲವನ್ನೂ ನಾವೇ ಮಾಡಿದ್ದು ಎನ್ನುತ್ತಾರೆ ಎಂದು ವ್ಯಂಗ್ಯವಾಡಿದರು.

ವಿಧಾನ ಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ, ಮಾಜಿ ಶಾಸಕ ಎಂ.ಕೆ.ಸೋಮಶೇಖರ್, ಮುಖಂಡರಾದ ಮಾವಿನಹಳ್ಳಿ  ಸಿದ್ದೇಗೌಡ, ಡಾ.ಶುಶ್ರೂತ ಗೌಡ, ಎಚ್.ಕೆ.ವೆಂಕಟೇಶ್, ಪ್ರದೀಪ್, ಮತ್ತಿತರರು ಹಾಜರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು