News Karnataka Kannada
Sunday, May 05 2024
ಚಾಮರಾಜನಗರ

ಹೊಯ್ಸಳರ ಕಾಲದ ಶಿವಲಂಕಾರೇಶ್ವರ ದೇಗುಲ ನೋಡಿದ್ದೀರಾ?

ಜಿಲ್ಲೆಯಲ್ಲಿರುವ ಹಲವು ದೇಗುಲಗಳ ನಡುವೆ ಹನೂರು ತಾಲೂಕಿನ   ವೈಶಂಪಾಳ್ಯ ಗ್ರಾಮದ ಬಳಿಯಿರುವ ಶಿವಲಂಕಾರರೇಶ್ವರ ದೇಗುಲ ಕೂಡ ಇತಿಹಾಸ ಪ್ರಸಿದ್ಧವಾಗಿದ್ದು, ಹೊಯ್ಸಳರ ಕಾಲದಲ್ಲಿ ನಿರ್ಮಾಣವಾಗಿದ್ದು ಅಂದಿನ ರಾಜವೈಭವಕ್ಕೆ ಸಾಕ್ಷಿಯಾಗಿ ನಿಂತಿದೆ.
Photo Credit : By Author

ಚಾಮರಾಜನಗರ: ಜಿಲ್ಲೆಯಲ್ಲಿರುವ ಹಲವು ದೇಗುಲಗಳ ನಡುವೆ ಹನೂರು ತಾಲೂಕಿನ ವೈಶಂಪಾಳ್ಯ ಗ್ರಾಮದ ಬಳಿಯಿರುವ ಶಿವಲಂಕಾರರೇಶ್ವರ ದೇಗುಲ ಕೂಡ ಇತಿಹಾಸ ಪ್ರಸಿದ್ಧವಾಗಿದ್ದು, ಹೊಯ್ಸಳರ ಕಾಲದಲ್ಲಿ ನಿರ್ಮಾಣವಾಗಿದ್ದು ಅಂದಿನ ರಾಜವೈಭವಕ್ಕೆ ಸಾಕ್ಷಿಯಾಗಿ ನಿಂತಿದೆ.

ಈ ದೇಗುಲದ ನಿರ್ಮಾಣದ ನೋಡುವುದಾದರೆ ಹೊಯ್ಸಳರ ಕಾಲದಲ್ಲಿ ರಾಜರಾಜಚೋಳನು ತನ್ನ ಸಾಮ್ರಾಜ್ಯವನ್ನು ವಿಸ್ತರಿಸುವ ಸಲುವಾಗಿ ಸೈನ್ಯದೊಂದಿಗೆ ದಂಡೆತ್ತಿ ಹೋಗುತ್ತಿದ್ದನಲ್ಲದೆ, ಯುದ್ಧದ ಗೆಲುವಿನ ನೆನಪಿಗಾಗಿ ಅಲ್ಲಲ್ಲಿ ದೇಗುಲಗಳನ್ನು ನಿರ್ಮಿಸುತ್ತಿದ್ದನೆಂದೂ ಅದರಂತೆ ಹನೂರಿನ ವೈಶಂಪಾಳ್ಯದ ಬಳಿ ಶಿವಲಂಕಾರೇಶ್ವರ ದೇಗುಲವನ್ನು ನಿರ್ಮಿಸಿದನೆಂದು ಹೇಳಲಾಗುತ್ತಿದ್ದು, ದೇಗುಲದಲ್ಲಿರುವ ಶಿವಲಿಂಗವನ್ನು ಅಗಸ್ತ್ಯಮುನಿಗಳೇ ಪ್ರತಿಷ್ಠಾಪಿಸಿದ್ದಾರೆ ಎನ್ನಲಾಗಿದೆ.

ಕ್ರಿ.ಶ.  9ನೇ ಶತಮಾನದ ನಂತರ ಪಲ್ಲವ ಸಾಮ್ರಾಜ್ಯ ಅಳಿದು ಹೋದ ಬಳಿಕ ದಕ್ಷಿಣ ಭಾರತದ ಬಹುತೇಕ ಪ್ರದೇಶಗಳು ತಂಜಾವೂರಿನ ಚೋಳರ ಆಳ್ವಿಕೆಗೆ ಒಳಪಟ್ಟಿದ್ದವು. ಅದರಲ್ಲಿ ಹನೂರು ಭೂ ಪ್ರದೇಶವೂ ಕೂಡ ಸೇರಿತ್ತು. ಕ್ರಿ.ಶ. 989ರಲ್ಲಿ ಚೋಳರ ಪ್ರಸಿದ್ಧ ಅರಸ ರಾಜರಾಜಚೋಳನ ಆಳ್ವಿಕೆಯ ಕಾಲದಲ್ಲಿ ಈ ದೇವಾಲಯವನ್ನು ನಿರ್ಮಾಣ  ಮಾಡಲಾಯಿತಂತೆ. ಚೋಳರ ಅರಸರು ವಿಷ್ಣು, ಶಿವ, ಗಣಪತಿ, ದುರ್ಗೆ ದೇವರನ್ನು ಪೂಜಿಸುತ್ತಿದ್ದರು. ಅದರಂತೆ ಇವರ ಕಾಲದಲ್ಲಿ ಹಲವು ದೇವಾಲಯಗಳು ನಿರ್ಮಾಣಗೊಂಡವು ಎಂಬುದು ಇತಿಹಾಸದಿಂದ ತಿಳಿದು ಬರುತ್ತದೆ.

ಮಹಾಶೂರನೂ ದೈವಭಕ್ತನೂ ಆಗಿದ್ದ ಚೋಳರ ವಂಶದ ರಾಜರಾಜಚೋಳನು ಈಗಿನ  ಹನೂರು  ಭಾಗಕ್ಕೆ ಆಗಮಿಸಿದ ಸಂದರ್ಭದಲ್ಲಿ ಈ ಪ್ರದೇಶದಲ್ಲಿ ಹಳ್ಳ ತುಂಬಿ ಹರಿಯುತ್ತಿತ್ತಲ್ಲದೆ, ಇಡೀ ಪ್ರದೇಶ ಹಸಿರಿನಿಂದ ಕೂಡಿ ಸಂಪದ್ಭರಿತವಾಗಿತ್ತು. ಇಂತಹ ಸುಂದರ ಪ್ರಕೃತಿ ಮಡಿಲು ತಾನು ತಂಗಲು ಯೋಗ್ಯವಾದ ಸ್ಥಳ ಎಂದರಿತು ಇಲ್ಲಿಯೇ ವಾಸ್ತವ್ಯ ಹೂಡಿದ್ದನಲ್ಲದೆ. ಇಲ್ಲೊಂದು ದೇಗುಲ ನಿರ್ಮಿಸುವ ಸಂಕಲ್ಪ ಮಾಡಿ ಶಿವಲಂಕಾರೇಶ್ವರ ದೇವಾಲಯವನ್ನು ನಿರ್ಮಿಸಿ ಅಗಸ್ತ್ಯ ಮುನಿಗಳಿಂದ ಶಿವಲಿಂಗವನ್ನು ಪ್ರತಿಷ್ಠಾಪಿಸಿದ ಎನ್ನಲಾಗಿದೆ.

ಅವತ್ತು  ರಾಜಪರಿವಾರ ನಿಂತು ಪೂಜಾ ಕೈಂಕರ್ಯವನ್ನು ನೆರವೇರಿಸಲು  ಅನುಕೂಲವಾಗುವಂತೆ  ದೇವರನ್ನು ತೂಗುಯ್ಯಲೆಯಲ್ಲಿ ಪ್ರತಿಷ್ಠಾಪಿಸಿ ಪೂಜಾ ಕೈಂಕರ್ಯವನ್ನು ನೆರವೇರಿಸಲು ಅನುಕೂಲವಾಗುವಂತೆ ಮಂಟಪವನ್ನು ಪ್ರತ್ಯೇಕವಾಗಿ ನಿರ್ಮಿಸಲಾಗಿತ್ತು. ಈಗಲೂ ಆ ಮಂಟಪ ದೇವಸ್ಥಾನದ ಸಮೀಪದಲ್ಲಿಯೇ ಕಂಡು ಬರುತ್ತಿದೆ. ಕಾಲಾಂತರದಲ್ಲಿ ಅಂದರೆ ಕ್ರಿ.ಶ. 1050ರ ತರುವಾಯ ಚೋಳರ ಸಂತತಿ ಅವನತಿಯನ್ನು ಹೊಂದಿದ ನಂತರ ಈ ದೇವಾಲಯದಲ್ಲಿ ಪೂಜೆ ಸಲ್ಲಿಸುವವರು ಇಲ್ಲವಾದರು. ಹೀಗಾಗಿ ದೇಗುಲದ ಗರ್ಭಗುಡಿಯ ಗೋಪುರ ಶಿಥಿಲಗೊಂಡು ಕುಸಿದು ಬಿದ್ದು ನಾಶವಾಗಿತ್ತಲ್ಲದೆ, ನಂತರ ಪಾಳು ದೇವಾಲಯವಾಗಿ ಮಾರ್ಪಟ್ಟಿತ್ತು.

ಜನರೇ ವಿರಳವಿದ್ದ ಕಾಲದಲ್ಲಿ ದೇಗುಲದ ರಕ್ಷಣೆಗಾಗಿ  ಬಸವವೊಂದು ಪ್ರತಿನಿತ್ಯ ರಾತ್ರಿ ವೇಳೆ ಮೇವನ್ನು ಅರಿಸಿ ದೇವಾಲಯದ ಬಳಿ ಬಂದು ಮೇವು ತಿಂದು ಸಮೀಪದಲ್ಲಿಯೇ ಹಳ್ಳದಲ್ಲಿ ನೀರು ಕುಡಿದು ಹೋಗುತ್ತಿತ್ತಂತೆ ಇದಕ್ಕೆ ನಿದರ್ಶನ ಎನ್ನುವಂತೆ ಬಸವನ ಪಾದದ ಗುರುತುಗಳನ್ನು ಜನ ತೋರಿಸುತ್ತಾರೆ. ಈ ಕ್ಷೇತ್ರದಲ್ಲಿ ಬಸವನ ಮಹಿಮೆಯಿತ್ತು ಎಂಬುದು ದೇಗುಲದಲ್ಲಿರುವ ಕಲ್ಲಿನ ಬಸವಮೂರ್ತಿ ಸಾಕ್ಷಿಯಾಗಿದೆ.

ಸುಮಾರು ಎರಡೂವರೆ ದಶಕಗಳ ಹಿಂದಿನವರೆಗೂ ಶಿವಲಂಕಾರೇಶ್ವರ ಪಾಳುದೇಗುಲವಾಗಿಯೇ ಉಳಿದು ಹೋಗಿತ್ತು.  ಆ ನಂತರ ಜನರ ಮನದಲ್ಲಿ ಶಿವನ ಪೂಜಿಸುವ ಬಯಕೆ ಶುರುವಾಯಿತು. ಅದರಂತೆ ಎಲ್ಲರೂ ಸೇರಿ ದೇಗುಲದ ಪುನರುಜ್ಜೀವಕ್ಕೆ ಮುಂದಾದರು ದೇಗುಲವನ್ನು ಶುಚಿಗೊಳಿಸಿ ಅಲ್ಲಿರುವ ಶಿವಲಿಂಗಕ್ಕೆ ಪೂಜಾ ಕೈಂಕರ್ಯವನ್ನು ನೆರವೇರಿಸಲು ಅರ್ಚಕರನ್ನು ನೇಮಿಸಿದರು. ಹಲವು ವರ್ಷಗಳ ಹಿಂದೆ  ಗ್ರಾಮಸ್ಥರು ಹಾಗೂ ಭಕ್ತರ ಸಹಾಯದಿಂದ ದೇಗುಲದ ಗೋಪುರವನ್ನು ನಿರ್ಮಿಸಿದ್ದು, ದೇಗುಲವನ್ನು ಜೀರ್ಣೋದ್ಧಾರಗೊಳಿಸಿದ್ದಾರೆ.

ಈ ದೇಗುಲವು ಕಲ್ಲಿನ ಚಪ್ಪಡಿಗಳಿಂದ ನಿರ್ಮಾಣವಾಗಿದ್ದು, ಉತ್ತಮ ಕೆತ್ತನೆ ಕುಸುರಿಗಳಿಂದ ಕೂಡಿದೆ. ಚೋಳರ ಕಾಲದ ಕಲಾ ವೈಭವ ಇರುವುದು ಗೋಚರಿಸುತ್ತದೆ.  ಶಿವಲಂಕಾರರೇಶ್ವರ ದೇಗುಲ ಪುಟ್ಟದಾಗಿದ್ದರೂ ಸುಮಾರು ಎರಡು ಸಾವಿರ ವರ್ಷಗಳ ಹಿಂದಿನ ಚೋಳರ ಕಾಲದ ಇತಿಹಾಸವನ್ನು ಹೇಳುತ್ತಿರುವುದು ವಿಶೇಷವಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು