News Karnataka Kannada
Friday, May 10 2024
ಸಾಂಡಲ್ ವುಡ್

ಚಾಮರಾಜನಗರ: ರಾಜ್‌ಕುಮಾರ್ ಮ್ಯೂಸಿಯಂ ಸ್ಥಾಪಿಸಿ- ಮಂಡ್ಯ ರಮೇಶ್

Chamarajanagar: Rajkumar Museum to be set up- Mandya Ramesh
Photo Credit : By Author

ಚಾಮರಾಜನಗರ: ವರನಟ ಡಾ. ರಾಜ್‌ಕುಮಾರ್ ಅವರ ತವರು ಜಿಲ್ಲೆಯಾದ ಚಾಮರಾಜನಗರದಲ್ಲಿ ರಾಜ್‌ಕುಮಾರ್ ಅವರ ಮ್ಯೂಸಿಯಂ ಸ್ಥಾಪಿಸಲು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ರಂಗಕರ್ಮಿ, ಚಲನಚಿತ್ರ ನಟ ಮಂಡ್ಯ ರಮೇಶ್ ಮನವಿ ಮಾಡಿದರು.

ನಗರದ ರೋಟರಿ ಭವನದಲ್ಲಿ ಜಿಲ್ಲೆಯ ಬೆಳ್ಳಿ ಹಬ್ಬದ ಅಂಗವಾಗಿ ರೋಟರಿ ಸಂಸ್ಥೆ, ರಂಗವಾಹಿನಿ ಹಾಗೂ ಡಾ. ಎಸ್ ಪಿ ಬಾಲಸುಬ್ರಹ್ಮಣ್ಯಂ ಗಾನಗಂಧರ್ವ ಸಾಂಸ್ಕೃತಿಕ ಕಲಾ ವೇದಿಕೆ ಹಮ್ಮಿಕೊಂಡಿದ್ದ, ಕನ್ನಡ ಚಲನಚಿತ್ರರಂಗಕ್ಕೆ ಚಾಮರಾಜನಗರ ಜಿಲ್ಲೆಯ ಕೊಡುಗೆ ವಿಶೇಷ ಉಪನ್ಯಾಸ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿ, ಚಾಮರಾಜನಗರ ಜಾನಪದ ಸಮೃದ್ಧಿ ವುಳ್ಳ ಜಿಲ್ಲೆ. ವೃತ್ತಿ ರಂಗಭೂಮಿಗೆ ತನ್ನದೇ ಆದ ವಿಶೇಷ ಕೊಡುಗೆಯನ್ನು ಚಾಮರಾಜನಗರ ಜಿಲ್ಲೆ ನೀಡಿದೆ. ಸಿಂಗಾನಲ್ಲೂರು ಪುಟ್ಟಸ್ವಾಮಯ್ಯನವರು ಆ ಕಾಲಕ್ಕೆ ಅತ್ಯಂತ ಪ್ರತಿಭಾವಂತ ರಂಗಭೂಮಿ ಕಲಾವಿದರಾಗಿದ್ದರು. ಪ್ರಪಂಚಕ್ಕೆ ಡಾ. ರಾಜ್‌ಕುಮಾರ್ ಅವರನ್ನು ಕೊಡುಗೆಯಾಗಿ ನೀಡಿದವರು ಸಿಂಗಾನಲ್ಲೂರು ಪುಟ್ಟಸ್ವಾಮಯ್ಯನವರು. ಅವರು ತಮ್ಮ ಮಗನಿಗೆ ವಿನಯವನ್ನು ಹೇಳಿಕೊಟ್ಟರು. ರಾಜ್‌ಕುಮಾರ್ ಅವರು ಏನಾಗಿದ್ದರೋ ಅದಕ್ಕೆ ಪುಟ್ಟಸ್ವಾಮಯ್ಯನವರು ಕಾರಣ. ರಾಜ್‌ ಕುಮಾರ್ ಅವರು ಎಲ್ಲೆಡೆಯೂ ತಮ್ಮ ತಂದೆಯವರ ಕುರಿತೇ ಹೇಳಿಕೊಳ್ಳುತ್ತಿದ್ದರು. ಇಂಥ ಪುಟ್ಟಸ್ವಾಮಯ್ಯನವರ ತವರು ಚಾಮರಾಜನಗರ ಜಿಲ್ಲೆ ಎಂದು ಅವರು ಹೇಳಿದರು.

ವರನಟ ಡಾ. ರಾಜ್‌ಕುಮಾರ್ ಕೇವಲ ನಟರಾಗಿರಲಿಲ್ಲ. ಕನ್ನಡಿಗರಿಗೆ ಕನ್ನಡತನವನ್ನು ನೆನಪಿಸಿದರು. ಅವರ ಸಿನಿಮಾಗಳ ಮೂಲಕ ಅವರ ಸಂಭಾಷಣೆಯ ಮೂಲಕ ಕನ್ನಡದ ಸೊಬಗನ್ನು ಹೆಚ್ಚಿಸಿದರು. ಅವರ ನಡವಳಿಕೆ ಮೂಲಕ ಇತರರಿಗೂ ಮಾದರಿಯಾದರು. ಪ್ರಪಂಚವೇ ಮೆಚ್ಚುವಂಥ ಅಪರೂಪದ ಕಲಾವಿದರಾದರು. ಬಹುಮುಖ ಪ್ರತಿಭೆಯ ಡಾ. ರಾಜ್‌ ಕುಮಾರ್ ಅವರು ಭಾರತೀಯ ಚಲನಚಿತ್ರರಂಗದಲ್ಲೇ ಅಪರೂಪದ ಕಲಾವಿದರು. ಅವರ ತವರು ಜಿಲ್ಲೆಯಾದ ಚಾಮರಾಜನಗರದಲ್ಲಿ ಅವರ ಕುರಿತ ಮ್ಯೂಸಿಯಂ ನಿರ್ಮಾಣವಾಗಬೇಕು.

ಆ ವಸ್ತು ಸಂಗ್ರಹಾಲಯದಲ್ಲಿ ರಾಜ್‌ಕುಮಾರ್ ಅವರಿಗೆ ಸಂಬಂಧಿಸಿದ ವಸ್ತುಗಳು, ಉಡುಪುಗಳು, ಅವರ ನೆನಪುಗಳು, ಅಪರೂಪದ ಛಾಯಾಚಿತ್ರಗಳು ಇರಬೇಕು. ಎಲ್ಲೆಡೆಯಿಂದಲೂ ಅದನ್ನು ನೋಡಲು ಜನರು ಚಾಮರಾಜನಗರಕ್ಕೆ ಬರುವಂತಾಗಬೇಕು. ರಾಜ್ಯ ಸರ್ಕಾರ ಮ್ಯೂಸಿಯಂ ನಿರ್ಮಿಸಲು ಮುಂದಾಗಬೇಕು ಎಂದು ಮನವಿ ಮಾಡಿದರು.

ಚಲನಚಿತ್ರ ನಿರ್ದೇಶಕ , ಲೇಖಕ ಪ್ರಕಾಶ್ ರಾಜ್ ಮೇಹು ಮಾತನಾಡಿ, ಸಿನಿಮಾಗಳಿಗೆ 50-100 ಕೋಟಿ ರೂ. ಬಂಡವಾಳ ಹಾಕಿ, 100 ಕೋಟಿ ರೂ. ಬಂತು ಎಂದು ಹೇಳಿಕೊಳ್ಳುವುದು ಹೆಚ್ಚುಗಾರಿಕೆಯಲ್ಲ. ನಮ್ಮ ಸಿನಿಮಾಗಳು ನಮ್ಮ ಪರಿಸರ, ನಮ್ಮ ಆಚಾರ ವಿಚಾರ, ನಮ್ಮ ಸಂಸ್ಕೃತಿಯನ್ನು ಬಿಂಬಿಸಬೇಕು. ಇತ್ತೀಚಿಗೆ ಬಿಡುಗಡೆಯಾಗಿರುವ ರಿಷಬ್ ಶೆಟ್ಟಿಯವರ ಕಾಂತಾರ ಸಿನಿಮಾ ಇದಕ್ಕೆ ಉತ್ತಮ ಉದಾಹರಣೆ. ಅದು ಕರಾವಳಿಯ ಕಥೆಯನ್ನು ಇಡೀ ಜಗತ್ತಿಗೆ ತೋರಿಸಿದೆ. ಕೆಜಿಎಫ್ ನಂತಹ ಸಿನಿಮಾಗಳನ್ನು ಯಾವುದೇ ಭಾಷೆಯ ಜನರು ನೋಡಿದರೂ ಅದು ಅಲ್ಲಿಯ ಸಿನಿಮಾ ಎಂದೆನಿಸಿಕೊಳ್ಳುತ್ತದೆ, ಕನ್ನಡ ಸಿನಿಮಾ ಎನಿಸುವುದಿಲ್ಲ ಎಂದು ಅಭಿಪ್ರಾಯಪಟ್ಟರು.

ರಂಗವಾಹಿನಿ ಅಧ್ಯಕ್ಷ ಸಿ.ಎಂ. ನರಸಿಂಹಮೂರ್ತಿ ಮಾತನಾಡಿ, ಹಿರಿಯ ನಟ ಸುಂದರಕೃಷ್ಣ ಅರಸು, ನಟರಾದ ಅವಿನಾಶ್, ಡಾರ್ಲಿಂಗ್ ಕೃಷ್ಣ, ನಾಗಭೂಷಣ್, ನಿರ್ದೇಶಕರಾದ ಬಸವರಾಜ ಕೆಸ್ತೂರ್, ಹ.ಸೂ. ರಾಜಶೇಖರ್, ಆನಂದ್ ಪಿ ರಾಜು, ಎಸ್. ಮಹೇಂದರ್, ಮಹೇಶ್‌ಬಾಬು, ಚೇತನ್‌ಕುಮಾರ್, ಸಂಭಾಷಣೆಕಾರ ಬಿ.ಎ. ಮಧು, ಸಂಕಲನಕಾರ ಅಮ್ಮನಪುರ ಸ್ವಾಮಿ, ಮಿಮಿಕ್ರಿ ಗೋಪಿ, ಘಟಂ ಕೃಷ್ಣ ಇನ್ನೂ ಹಲವಾರು ಕಲಾವಿದರು ಚಾಮರಾಜನಗರ ಜಿಲ್ಲೆಯವರು. ಇಂಥ ಪ್ರತಿಭಾವಂತ ಕಲಾವಿದರನ್ನು ಚಾಮರಾಜನಗರ ಜಿಲ್ಲೆ ಕನ್ನಡ ಚಿತ್ರರಂಗಕ್ಕೆ ನೀಡಿದೆ ಎಂದು ಹೇಳಿದರು.

ರೋಟರಿ ಕ್ಲಬ್ ಅಧ್ಯಕ್ಷ ಕೆಂಪನಪುರ ಮಹದೇವಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಜೆಎಸ್‌ಎಸ್ ಕಾಲೇಜು ಸಾರ್ವಜನಿಕ ಸಂಪರ್ಕ ಅಧಿಕಾರಿ ಆರ್.ಎಂ. ಸ್ವಾಮಿ, ಸಿಂಹ ಚಿತ್ರಮಂದಿರದ ಮಾಲೀಕ ಎ. ಜಯಸಿಂಹ, ಪಶುವೈದ್ಯಕೀಯ ಇಲಾಖೆ ಸಹಾಯಕ ನಿರ್ದೇಶಕ ಸುಗಂಧರಾಜ್, ಜಿ.ಪಂ.ಲೆಕ್ಕಾಧಿಕಾರಿ ಎಚ್.ಎಸ್. ಗಂಗಾಧರ್, ರೋಟರಿ ಕಾರ್ಯದರ್ಶಿ ಕಾಗಲವಾಡಿ ಚಂದ್ರು, ಎಸ್‌ಪಿಬಿ ವೇದಿಕೆ ಗೌರವ ಅಧ್ಯಕ್ಷ ಸುರೇಶ್‌ಗೌಡ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು