News Karnataka Kannada
Wednesday, May 08 2024
ಚಾಮರಾಜನಗರ

ಚಾಮರಾಜನಗರದಲ್ಲಿ ಆದಿವಾಸಿ ಆರೋಗ್ಯ ಕೋಶ ಸ್ಥಾಪನೆ

Adivasi Health Cell to be set up in Chamarajanagar
Photo Credit : By Author

ಚಾಮರಾಜನಗರ: ರಾಜ್ಯದಲ್ಲಿ ಮೊಟ್ಟಮೊದಲ ಆದಿವಾಸಿ ಆರೋಗ್ಯ ಕೋಶವನ್ನು ಚಾಮರಾಜನಗರದಲ್ಲಿ ಪ್ರಾರಂಭ ಮಾಡಲಾಗುವುದು ಎಂದು ಮೆಡಿಕಲ್ ಕಾಲೇಜಿನ ಡೀನ್ ಡಾ . ಸಂಜೀವ್ ಹೇಳಿದ್ದಾರೆ.

ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಗಿರಿಜನರ ಆರೋಗ್ಯ ಸಮಸ್ಯೆಗಳು ಹಾಗು ಸುಧಾರಣೋಪಾಯಗಳ ಕುರಿತ ಹೆಚ್ಚಿನ ಅಧ್ಯಯನ ಹಾಗೂ ಕೈಗೊಳ್ಳಬೇಕಾಗ ಅಗತ್ಯ ಕ್ರಮಗಳ ಕುರಿತು ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಸಮುದಾಯ ವೈದ್ಯಕೀಯ ವಿಭಾಗ, ಇನ್ನಿಟ್ಯೂಟ್ ಆಫ್ ಪಬ್ಲಿಕ್ ಹೆಲ್ತ್ ಬೆಂಗಳೂರು ಹಾಗು ರಾಜ್ಯ ಸರ್ಕಾರದ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಸಹಯೋಗದೊಂದಿಗೆ ಆಯೋಜಿಸಿದ್ದ ವೈದ್ಯಕೀಯ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದರು.

ಆದಿವಾಸಿ ಹಾಗೂ ಬುಡಕಟ್ಟು ಸಮುದಾಯದ ರೋಗಿಗಳ ಸಂಬಂಧಿಕರಿಗೆ ಚಿಕಿತ್ಸೆ ಸಮಯದಲ್ಲಿ ಉಳಿಯಲು ಸುಸಜ್ಜಿತ ವಸತಿ ಒದಗಿಸುವ “ ಧರ್ಮಶಾಲಾ” ಯೋಜನೆಗೂ ಚಾಲನೆ ನೀಡಲಾಗುವುದು ಎಂದ ಅವರು, ಚಾಮರಾಜನಗರ ಜಿಲ್ಲೆಯಲ್ಲಿರುವ ಅತ್ಯಧಿಕ ಅರಣ್ಯ ಹಾಗೂ ಗಿರಿಜನರು ನಮ್ಮ ಜಿಲ್ಲೆಯ ನಿಜವಾದ ಹೆಮ್ಮೆ. ನಮ್ಮ ದೇಶದ ಪ್ರಥಮ ಪ್ರಜೆಯೇ ಆದಿವಾಸಿ ಮಹಿಳೆ ಎಂಬುದು ನಾವೆಲ್ಲರೂ ಹೆಮ್ಮೆ ಪಡಬೇಕಾದ ಸಂಗತಿ. ಇತ್ತೀಚಿನ ದಿನಗಳಲ್ಲಿ ಆದಿವಾಸಿ ಸಮುದಾಯದಲ್ಲಿ ಆರೋಗ್ಯ ಸಮಸ್ಯೆಗಳು ಹೆಚ್ಚುತ್ತಿರುವುದು ಅತ್ಯಂತ ನೋವಿನ ಸಂಗತಿ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಈ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿದ್ದು ಅನೇಕ ಸುಧಾರಣೋಪಾಯಗಳನ್ನು ರೂಪಿಸುತ್ತಿವೆ ಎಂದರು.

ಆದಿವಾಸಿ ಆರೋಗ್ಯ ಸುಧಾರಣೆಯಾಗಬೇಕಿದ್ದಲ್ಲಿ ಆ ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಅಧ್ಯಯನ ಹಾಗೂ ಸಂಶೋಧನೆಗಳಾಗಬೇಕು. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರದ ವಿಶೇಷ ಅನುದಾನದಡಿಯಲ್ಲಿ ಆದಿವಾಸಿಗಳು ನೆಲೆಸಿರುವ ರಾಜ್ಯದ 8 ಜಿಲ್ಲೆಗಳ ವೈದ್ಯಕೀಯ ಕಾಲೇಜುಗಳಲ್ಲಿ ಆದಿವಾಸಿ ಆರೋಗ್ಯ ಕೋಶ ಸ್ಥಾಪನೆ ಮಾಡಲು ಅನುಮತಿ ದೊರಕಿರುವುದು ಅದರಲ್ಲೂ ಬುಡಕಟ್ಟು ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿರುವ ನಮ್ಮ ಜಿಲ್ಲೆಗೆ ನಿಜಕ್ಕೂ ಸಂತಸದ ವಿಷಯ. ಇದನ್ನು ಸಂಶೋಧನಾ ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು .

ಚಾಮರಾಜನಗರ ಜಿಲ್ಲೆಯು ಸದ್ಯದಲ್ಲೇ ಈ ಯೋಜನೆಯನ್ನು ಅನುಷ್ಠಾನಗೊಳಿಸಿದ ಪ್ರಥಮ ಜಿಲ್ಲೆಯಾಗಲಿದೆ. ಅಲ್ಲದೇ ಆದಿವಾಸಿ ಆರೋಗ್ಯ ವಿಷಯದ ಹೆಚ್ಚಿನ ಸಂಶೋಧನೆಗೆ ಸಂಬಂಧಪಟ್ಟಂತೆ ಸದ್ಯದಲ್ಲೇ ಜೆ.ಎಸ್.ಎಸ್ ಸಂಸ್ಥೆ, ಇನ್ಸಿಟ್ಯೂಟ್ ಆಫ್ ಪಬ್ಲಿಕ್ ಹೆಲ್ತ್ ಸೇರಿದಂತೆ ಇತರೆ ಸಂಘ ಸಂಸ್ಥೆಗಳೊಡನೆ ಒಪ್ಪಂದ ಸರ್ಕಾರ ಅನುಮೋದನೆ ನೀಡಿರುವಂತೆ, ಜಿಲ್ಲಾ ಮಟ್ಟದಲ್ಲಿ ಮಾಡಿಕೊಳ್ಳಲಾಗುತ್ತಿದೆ. ಸದ್ಯದಲ್ಲೇ ನಮ್ಮ ವಿವಿಧೆಡೆಯಿಂದ ಬರುವ ಆದಿವಾಸಿ ರೋಗಿಗಳ ಸಂಬಂಧಿಕರಿಗೆ ಆಸ್ಪತ್ರೆಯ ಸಮೀಪದಲ್ಲಿ ಉಳಿಯಲು ಸುಸಜ್ಜಿತ “ ಧರ್ಮಶಾಲಾ ” ವ್ಯವಸ್ಥೆಗೆ ಚಾಲನೆ ನೀಡಲಾಗುವುದು ” ಎಂದರು.

ರಾಜ್ಯ ಮೂಲ ಆದಿವಾಸಿಗಳ ವೇದಿಕೆಯ ಕಾರ್ಯದರ್ಶಿ ಮುತ್ತಯ್ಯ ಮಾತನಾಡಿ, ಆದಿವಾಸಿಗಳೆ೦ದರೆ ಜಾತಿಯಲ್ಲ ಅದು ಒಂದು ಸಮುದಾಯ ಜೀವನ, ದೇಶ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸುತ್ತಿರುವ ಈ ಸಮಯದಲ್ಲೂ ನಾವು ನಮ್ಮ ಬುಡಕಟ್ಟು ಜನರ ಆರೋಗ್ಯ ವ್ಯವಸ್ಥೆಯಲ್ಲಿನ ಸಮಸ್ಯೆಗಳನ್ನು ನಿವಾರಿಸುವಂತೆ ಕೇಳಿಕೊಳ್ಳುತ್ತಿರುವುದು ಅತ್ಯಂತ ವಿಪರ್ಯಾಸದ ಸಂಗತಿ.

ಸರ್ಕಾರ ನಮ್ಮ ಆರೋಗ್ಯ ಸಂಬಂಧಿತ ಸಮಸ್ಯೆಗಳ ಸುಧಾರಣೆಯ ನಿಟ್ಟಿನಲ್ಲಿ ಅನೇಕ ಯೋಜನೆಗಳನ್ನು ನೀಡುತ್ತಾ ಬಂದಿದೆ ಆದರೆ ನಿಜಾರ್ಥದಲ್ಲಿ ತಳಮಟ್ಟದಲ್ಲಿ ಇದರ ಅನುಷ್ಠಾನ ಸರಿಯಾಗಿ ಆಗುತ್ತಿಲ್ಲ. ಚಿಕಿತ್ಸೆ ಉಚಿತವಿದ್ದರೂ ಅನೇಕ ಇತರೇ ವೆಚ್ಚಗಳನ್ನು ಭರಿಸುವ ಶಕ್ತಿ ನಮ್ಮ ಸಮುದಾಯದ ಜನರಲ್ಲಿ ಇಲ್ಲವಾದ್ದರಿಂದ ಜನ ಆಸ್ಪತ್ರೆಗಳ ಕಡೆ ಬರುವುದಕ್ಕೆ ಹಿಂಜರಿಯುತ್ತಿದ್ದಾರೆ. ಆದಿವಾಸಿಗಳನ್ನು ನೋಡುವ ಸಮಾಜದ ಈ ವ್ಯವಸ್ಥೆ ಬದಲಾಗಬೇಕು, ಮನೋಧೋರಣೆ ಬದಲಾಗಬೇಕು. ನಮ್ಮ ಸಮುದಾಯದಲ್ಲಿ ಆರೋಗ್ಯ ಸಂಬಂಧಿತ ವಿಷಯಗಳ ಜಾಗೃತಿಯ ಕೊರತೆ ಇದ್ದು, ಆರೋಗ್ಯ ವಿಷಯದಲ್ಲಿ ಹೆಚ್ಚಿನ ಜಾಗೃತರಾಗಬೇಕು ಎಂದರು.

ಕಾರ್ಯಾಗಾರದಲ್ಲಿ ಭಾಗವಹಿಸಿರುವ 150 ಕ್ಕೂ ಹೆಚ್ಚು ವೈದ್ಯರು, ಸಂಶೋಧನಾ ವಿದ್ಯಾರ್ಥಿಗಳು, ವಿವಿಧ ಸ೦ಘ ಸಂಸ್ಥೆಗಳ ಪ್ರತಿನಿಧಿಗಳಿಗೆ ಇನ್ಸಿಟ್ಯೂಟ್ ಆಫ್ ಪಬ್ಲಿಕ್ ಹಲ್ ನ ವತಿಯಿ0ದ ಹೆಚ್ಚಿನ ಅಧ್ಯಯನಕ್ಕಾಗಿ ಬುಡಕಟ್ಟು ಜೀವನವನ್ನು ಪರಿಚಯಿಸುವ ನಿಟ್ಟಿನಲ್ಲಿ ಬಿಳಿಗಿರಿರಂಗನ ಬೆಟ್ಟದ ವಿವಿಧ ಆದಿವಾಸಿ ಪೋಡುಗಳಿಗೆ ಕ್ಷೇತ್ರ ಭೇಟಿಗೆ ಕರೆದೊಯ್ಯಲಾಗುವುದು ಎಂದು ಸಮುದಾಯ ವೈದ್ಯಕೀಯ ವಿಭಾಗದ ಮುಖ್ಯಸ್ಥರಾದ ಡಾ. ದಮಯಂತಿ ಎಂ.ಎನ್ ರವರು ತಿಳಿಸಿದರು .

ಕಾರ್ಯಕ್ರಮದಲ್ಲಿ ಸಿಮ್ಸ್ ಪ್ರಾಂಶುಪಾಲರಾದ ಡಾ . ಗಿರೀಶ್ ವಿ, ಸ್ಥಾನಿಕ ವೈದ್ಯಾಧಿಕಾರಿ ಡಾ. ಮಹೇಶ್‌, ಸಮುದಾಯ ವೈದ್ಯಕೀಯ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ. ಗಿರೀಶ್ ಬಿ. ಸೇರಿದಂತೆ ಇತರೆ ಸಿಬ್ಬಂದಿ, ಇನ್ಸಿಟ್ಯೂಟ್ ಆಫ್ ಪಬ್ಲಿಕ್ ಹೆಲ್ತ್ ಬೆಂಗಳೂರಿನ ಉಪನಿರ್ದೇಶಕ ಡಾ. ಪ್ರಶಾಂತ್ ಎನ್.ಎಸ್ . ಹಾಗೂ ಡಾ.ತಾನ್ಯ ಶೇಷಾದ್ರಿ , ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಡಾ. ರವಿಕುಮಾರ್, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಸಹ ನಿರ್ದೇಶಕರಾದ ಮಂಜುಳಾರವರು, ಜಿಲ್ಲಾ ಬುಡಕಟ್ಟು ಗಿರಿಜನ ಅಭಿವೃದ್ಧಿ ಸಂಘದ ಅಧ್ಯಕ್ಷ ಸಿ. ಮಹದೇವ್ ಸೇರಿದಂತೆ ಹಲವರು ಇದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು