ಚಾಮರಾಜನಗರ: ಕಾಡಾನೆ ದಾಳಿ ನಡೆಸಿದ ಪರಿಣಾಮ ವ್ಯಕ್ತಿಯೊಬ್ಬರ ಕಾಲು ಮುರಿದಿದ್ದು, ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಜಿಲ್ಲೆಯ ಹನೂರು ತಾಲ್ಲೂಕಿನ ಚಂಗಡಿಯಿಂದ ಕೌದಳ್ಳಿ ಗ್ರಾಮದ ಬಳಿ ನಡೆದಿದೆ.
ಮುನಿವೆಂಕಟೇಗೌಡ ಎಂಬುವವರೇ ಕಾಡಾನೆ ದಾಳಿಗೆ ಸಿಲುಕಿದವರಾಗಿದ್ದು, ಗಾಯಗೊಂಡ ಅವರನ್ನು ಕೊಳ್ಳೇಗಾಲದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಮುನಿವೆಂಕಟೇಗೌಡ ಅವರು ಮಲೆ ಮಹದೇಶ್ವರ ವನ್ಯಧಾಮದ ವ್ಯಾಪ್ತಿಯಲ್ಲಿರುವ ಚಂಗಡಿ ಗ್ರಾಮದಿಂದ ಕೌದಳ್ಳಿಯಲ್ಲಿ ನಡೆಯುವ ಸಂತೆಗೆ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಕಾಡಿನ ದಾರಿಯಲ್ಲಿ ಕಾಡಾನೆಯೊಂದು ದಾಳಿ ಮಾಡಿದ್ದು, ಪರಿಣಾಮ ಮುನಿವೆಂಕಟೇಗೌಡರವರ ಬಲಕಾಲು ಮುರಿದಿದೆ.
ಸೊಂಟದ ಭಾಗಕ್ಕೂ ಗಾಯವಾಗಿದೆ. ಕೂಡಲೇ ಅವರನ್ನು ಕೊಳ್ಳೇಗಾಲದ ಸರ್ಕಾರಿ ಉಪ ವಿಭಾಗ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ವ್ಯಾಪ್ತಿಯಲ್ಲಿ ಇಂತಹ ಘಟನೆಗಳು ಆಗಾಗ್ಗೆ ನಡೆಯುತ್ತಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಇತ್ತ ಗಮನಹರಿಸಬೇಕಾಗಿದೆ.