ಚಾಮರಾಜನಗರ: ಪತ್ನಿಯನ್ನು ಕೊಂದಿದ್ದ ಆರೋಪ ಸಾಕ್ಷ್ಯಾಧಾರಗಳಿಂದ ಸಾಬೀತಾದ ಹಿನ್ನಲೆಯಲ್ಲಿ ಆರೋಪಿಗೆ ಜಿಲ್ಲಾ ನ್ಯಾಯಲಯವು ಜೀವಾವಧಿ ಶಿಕ್ಷೆ ವಿಧಿಸಿದೆ.
ಉತ್ತುವಳ್ಳಿ ಗ್ರಾಮದ ನಿವಾಸಿ ಮಂಜು ಎಂಬಾತನೇ ಜೀವಾವಧಿ ಶಿಕ್ಷೆಗೊಳಗಾದವನು. ಈತ ಕಳೆದ 18 ವರ್ಷಗಳ ಹಿಂದೆ ಉತ್ತುವಳ್ಳಿ ಗ್ರಾಮದ ಚಿನ್ನತಾಯಮ್ಮ ಎಂಬಾಕೆಯನ್ನು ವಿವಾಹವಾಗಿದ್ದನು. ಆದರೆ, ಐದಾರು ವರ್ಷಗಳಿಂದೀಚೆಗೆ ಮದ್ಯಪಾನಕ್ಕೆ ದಾಸನಾಗಿ ನಿತ್ಯ ಪತ್ನಿಯೊಂದಿಗೆ ಜಗಳ ಮಾಡುವುದನ್ನು ರೂಢಿಸಿಕೊಂಡಿದ್ದನು. ಅದೇ ರೀತಿ, 2017 ರ ಅಕ್ಟೋಬರ್ 26 ಮಧ್ಯರಾತ್ರಿ ದಂಪತಿ ಜಗಳ ತಾರಕಕ್ಕೇರಿತ್ತು.
ಆ ವೇಳೆ, ಮಂಜು ಪತ್ನಿ ಚಿನ್ನತಾಯಮ್ಮಳಿಗೆ ಮರದ ಪಟ್ಟಿಯಿಂದ ತಲೆಗೆ ಹೊಡೆದು ಜುಟ್ಟು ಹಿಡಿದು ಗೋಡೆಗೆ ಗುದ್ದಿ ಕೊಲೆ ಮಾಡಿದ್ದನು.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಚಾಮರಾಜನಗರ ಗ್ರಾಮಾಂತರ ಠಾಣೆ ಪೊಲೀಸರು ಹಂತಕ ಮಂಜುವಿನ ಪುತ್ರ ನನ್ನು ಸಾಕ್ಷಿಯನ್ನಾಗಿಸಿ ಆತ ನೀಡಿದ ಸಾಕ್ಷ್ಯಾಧಾರಗಳನ್ನೊಳಗೊಂಡ ಆರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಈ ಸಂಬಂಧ ವಿಚಾರಣೆ ನಡೆಸಿದ ನ್ಯಾಯಾಲಯವು ಅಪರಾಧಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿದೆ. ಸರ್ಕಾರದ ಪರವಾಗಿ ವಕೀಲೆ ಉಷಾ ವಾದ ಮಂಡಿಸಿದ್ದರು.