News Karnataka Kannada
Sunday, April 28 2024
ಚಾಮರಾಜನಗರ

ಚಾಮರಾಜನಗರದಲ್ಲಿ ಬೇಟೆಗಾರರ ನಿಗ್ರಹಕ್ಕೆ ಕ್ರಮ

Hunt
Photo Credit :

ಚಾಮರಾಜನಗರ: ಬಂಡೀಪುರ, ಬಿಳಿಗಿರಿರಂಗನಬೆಟ್ಟ, ಮಲೆಮಹದೇಶ್ವರ ಬೆಟ್ಟ ಸೇರಿದಂತೆ ಸಮೃದ್ಧ ಅರಣ್ಯ ಪ್ರದೇಶ ಹೊಂದಿರುವ ಜಿಲ್ಲೆಯಲ್ಲೀಗ ಬೇಟೆಗಾರರ ಹಾವಳಿ ಶುರುವಾಗಿದೆ. ಅರಣ್ಯ ಇಲಾಖೆ ಸಿಬ್ಬಂದಿ ಕಣ್ತಪ್ಪಿಸಿ ಅರಣ್ಯದೊಳಗೆ ಪ್ರವೇಶಿಸಿ ಕಾಡುಪ್ರಾಣಿಗಳನ್ನು ಬೇಟೆಯಾಡುವವರ ಸಂಖ್ಯೆ ಹೆಚ್ಚಾಗಿದ್ದು, ಅವರನ್ನು ಮಟ್ಟ ಹಾಕುವ ಕಾರ್ಯಕ್ಕೆ ಪೊಲೀಸ್ ಇಲಾಖೆ, ಅರಣ್ಯ, ನಕ್ಸಲ್ ನಿಗ್ರಹ ದಳ ಮುಂದಾಗಿದ್ದು, ಕಳೆದ ಕೆಲ ದಿನಗಳ ಅಂತರದಲ್ಲಿ ಪ್ರತ್ಯೇಕ ಪ್ರಕರಣಗಳಲ್ಲಿ ಕಾಡು ಹಂದಿ ಮತ್ತು ಮೊಲ ಬೇಟೆಗಾರರನ್ನು ಬಂಧಿಸಲಾಗಿದೆ.

ಹಾಗೆನೋಡಿದರೆ ಚಾಮರಾಜನಗರದಲ್ಲಿ ಬೇಟೆಗಾರರ ಹಾವಳಿ ಹಿಂದಿನಿಂದಲೂ ಇದೆ. ಬಂಡೀಪುರ ಸೇರಿದಂತೆ ಅಭಯಾರಣ್ಯಗಳಲ್ಲಿ ಬಿಗಿ ಭದ್ರತೆಯಿರುವುದರಿಂದ ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಗಸ್ತು ತಿರುಗುತ್ತಿರುವುದರಿಂದ ಬೇಟೆಗಾರರಿಗೆ ಅಕ್ರಮ ಅರಣ್ಯ ಪ್ರವೇಶ ಕಷ್ಟವಾಗಿದ್ದರೂ ಕೆಲವರು ಕಳ್ಳಮಾರ್ಗಗಳಿಂದ ಪ್ರವೇಶಿಸಿ ಬೇಟೆಯಾಡುತ್ತಿದ್ದು, ಅಂತಹವರನ್ನು ಹುಡುಕಿ ಮಟ್ಟ ಹಾಕುವ ಕಾರ್ಯ ನಡೆಸಲಾಗಿದೆ.

ಇನ್ನು ಕಾಡಂಚಿನ ಗ್ರಾಮಗಳಲ್ಲಿ ಬೇಟೆಗಾರರ ಹಾವಳಿ ಹೆಚ್ಚಾಗಿದೆ. ಹೆಚ್ಚಿನ ಅರಣ್ಯ ತಮಿಳುನಾಡು ಮತ್ತು ಕೇರಳದೊಂದಿಗೆ ಹಂಚಿಕೊಂಡಿರುವುದರಿಂದ ಸ್ಥಳೀಯರಿಗಿಂತ ಹೆಚ್ಚಾಗಿ ಹೊರಗಿನಿಂದ ಬೇಟೆಗಾರರು ಇತ್ತ ಬಂದು ಹಂದಿ, ಜಿಂಕೆ ಸೇರಿದಂತೆ ವನ್ಯಪ್ರಾಣಿಗಳನ್ನು ಬೇಟೆಯಾಡುತ್ತಿದ್ದಾರೆ. ಕೆಲವರು ಸಿಕ್ಕಿಬಿದ್ದರೆ, ಉಳಿದವರು ಜಾಣ್ಮೆಯಿಂದ ತಪ್ಪಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಹೀಗೆ ಬೇಟೆಯಾಡಲು ಬಂದ ಬೇಟೆಗಾರರನ್ನು ಹಿಡಿದು ಜೈಲಿಗೆ ತಳ್ಳಲಾಗಿದೆ.

ಕೆಲವರು ವನ್ಯಪ್ರಾಣಿಗಳನ್ನು ಬೇಟೆಯಾಡಿ ಮಾಂಸವನ್ನು ಮಾರಾಟ ಮಾಡುವ ದಂಧೆ ನಡೆಸುತ್ತಿದ್ದು, ಅಂತಹವರನ್ನು ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸಿ ಬಂಧಿಸಿರುವುದನ್ನು ನಾವು ಕಾಣಬಹುದಾಗಿದೆ. ಆದರೂ ಎಷ್ಟೇ ಕಟ್ಟುನಿಟ್ಟಿನ ಕ್ರಮ ಕೈಗೊಂಡರೂ ಬೇಟೆಗಾರರನ್ನು ಮಟ್ಟ ಹಾಕಲು ಸಾಧ್ಯವಾಗುತ್ತಿಲ್ಲ. ಕಾರಣ ಬೇಟೆಗಾಗಿ ದೂರದ ಊರುಗಳಿಂದ ವಾಹನಗಳಲ್ಲಿ ಬೇಟೆಗಾರರು ಬರುತ್ತಿದ್ದು, ಬಳಿಕ ಹೊಂಚು ಹಾಕಿ ಪ್ರಾಣಿಗಳನ್ನು ಬೇಟೆಯಾಡಿಕೊಂಡು ಹಿಂತಿರುಗುತ್ತಾರೆ. ಇದೀಗ ಅದೇ ರೀತಿ ಬೇಟೆಗಾಗಿ ಬಂದಿದ್ದ ಬೆಂಗಳೂರು ಮೂಲದವರು ಬೇಟೆಯಾಡಿ ಮಾಂಸದ ಸಹಿತ ಸಿಕ್ಕಿಬಿದ್ದಿದ್ದಾರೆ.

ಕಾಡುಹಂದಿಯನ್ನು ಬೇಟೆಯಾಡಿದ ಬೇಟೆಗಾರರು ಅದನ್ನು ಮಾಂಸ ಮಾಡಿ ತಮ್ಮ ಊರು ಸೇರಿಕೊಳ್ಳುವ ಧಾವಂತದಲ್ಲಿದ್ದಾಗಲೇ ಹನೂರು ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಸಿಕ್ಕಿ ಬಿದ್ದಿದ್ದಾರೆ. ಇವರು ಬೆಂಗಳೂರು ಮೂಲದ ಆನೆಕಲ್ ತಾಲೂಕಿನ ಗೊಣಿನಾಯಕನ ದೊಡ್ಡಿ ಗ್ರಾಮದ ಬಾಲರಾಜು(45), ಜೋಸೆಫ್(20), ಕನಕಪುರ ರಸ್ತೆಯ ಗೊಬ್ಬಳಹಳ್ಳದ ವಾಹನ ಚಾಲಕ ಮಂಜುನಾಥ್(27) ಎಂದು ಗುರುತಿಸಲಾಗಿದ್ದು, ಇವರಿಂದ ಪೊಲೀಸರು ಕೃತ್ಯಕ್ಕೆ ಬಳಸಿದ್ದ ಕೆ.ಎ05, ಎಎಫ್ 3721 ಸಂಖ್ಯೆಯ ಟಾಟಾ ಇಂಡಿಕಾ ಕಾರು, ಒಂದು ಒಂಟಿ ಕೊಳವೆ ನಾಡ ಬಂದೂಕ, 10 ಸಜೀವ ಕಾಟ್ರೇಜ್, 2 ತಲೆ ಬ್ಯಾಟರಿ, 12 ಕೈ ಸಿಡಿಮದ್ದು, 3 ಮೊಬೈಲ್‌ಪೋನ್, ಎರಡು ಹಂದಿತಲೆ ಹಾಗೂ ದೇಹದ ಬಿಡಿಭಾಗಗಳು, ಹಂದಿ ಮಾಂಸವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಮತ್ತೊಂದು ಪ್ರಕರಣದಲ್ಲಿ ಮೊಲವನ್ನು ಬೇಟೆಯಾಡಿ ಅಡುಗೆ ತಯಾರಿಸುತ್ತಿದ್ದ ಕುರಿತು ಖಚಿತ ಮಾಹಿತಿ ಮೇರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಅಣ್ಣೂರುಕೇರಿ ಗ್ರಾಮದವರಾದ ಕುಮಾರ (27) ಮತ್ತು ಮಹೇಶ (35 ) ಎಂಬ ಬೇಟೆಗಾರರನ್ನು ಬಂಡೀಪುರ ಹುಲಿ ಸಂರಕ್ಷಿತಾ ಪ್ರದೇಶದ ಕುಂದಕೆರೆ ವಲಯದಲ್ಲಿ ಬಂಧಿಸಿದ್ದಾರೆ.

ಇವರು ಬಂಡೀಪುರ ಹುಲಿ ಸಂರಕ್ಷಿತಾ ಪ್ರದೇಶದ ಕುಂದಕೆರೆ ವಲಯದ ಕಡಬೂರು ಗಸ್ತಿನ ಕುರುಬರಹುಂಡಿ ಮಾಡಿವಾಳಪ್ಪನವರ ಜಮೀನಿನ ಸಮೀಪ ಮೊಲವನ್ನು ಬೇಟೆಯಾಡಿ ಅಡುಗೆ ಮಾಡುತ್ತಿದ್ದಾಗ ಸಿಕ್ಕಿಬಿದ್ದಿದ್ದಾರೆ. ಇವರಿಂದ ಒಂದು ನಾಡ ಬಂದೂಕು, ತಲೆ ಬ್ಯಾಟರಿ, ಬ್ಯಾಗ್, ಕೆ ಎ 10 ಎಲ್ 5496 ನೋಂದಣಿಯ ದ್ವಿಚಕ್ರವಾಹನವನ್ನ ವಶಪಡಿಸಿಕೊಳ್ಳಲಾಗಿದೆ.

ಚಾಮರಾಜನಗರ ಜಿಲ್ಲೆಯ ಬಹುತೇಕ ಭಾಗ ಅರಣ್ಯ ಸಂಪತ್ತು ಹೊಂದಿದೆ. ಉತ್ತಮ ಸಮಾಜ, ಪರಿಸರ, ವನ್ಯಪ್ರಾಣಿಗಳ ಉಳಿವಿಗೆ ಎಲ್ಲರೂ ಕೈಜೋಡಿಸಬೇಕು. ಕಾನೂನು ಬಾಹಿರ ಚಟುವಟಿಕೆಗಳು ಕಂಡು ಬಂದಲ್ಲಿ ಸಾರ್ವಜನಿಕರು ಇಲಾಖೆಗೆ ಮಾಹಿತಿ ನೀಡುವಂತೆ ಪೊಲೀಸರು ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಮನವಿ ಮಾಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು