News Karnataka Kannada
Wednesday, May 01 2024
ಶಿವಮೊಗ್ಗ

ಶಿವಮೊಗ್ಗ| ಸಕ್ರೆಬೈಲನ್ನು ಆಕರ್ಷಣೀಯ ತಾಣವಾಗಿ ಪರಿವರ್ತಿಸಲು ಕ್ರಮ : ಸಂಸದ ಬಿ.ವೈ.ರಾಘವೇಂದ್ರ

Steps will be taken to make Sakrebail an attractive destination: MP BY Raghavendra
Photo Credit : News Kannada

ಶಿವಮೊಗ್ಗ : ಶಿವಮೊಗ್ಗ ಸಮೀಪದ ಸಕ್ರೆಬೈಲು ಆನೆಗಳ ಬಿಡಾರಕ್ಕೆ ಹೊಂದಿಕೊಂಡಂತಿರುವ ತುಂಗಾ ಜಲಾಶಯದ ಹಿನ್ನೀರಿನ ಪ್ರದೇಶ ಹಾಗೂ ಸುತ್ತಮುತ್ತಲ ಪ್ರದೇಶವನ್ನು ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿ ಅಭಿವೃದ್ಧಿಪಡಿಸಲು ಕ್ರಿಯೋಯೋಜನೆಯೊಂದನ್ನು ರೂಪಿಸಿ ಅನುಷ್ಠಾನಗೊಳಿಸಲಾಗುವುದು ಎಂದು ಸಂಸದ ಬಿ.ವೈ.ರಾಘವೇಂದ್ರ ಅವರು ಹೇಳಿದರು.

ಅವರು ಇಂದು ಸಕ್ರೆಬೈಲು ಆನೆಗಳ ಬಿಡಾರಕ್ಕೆ ಹೊಂದಿಕೊಂಡಂತಿರುವ ತುಂಗಾ ಹಿನ್ನೀರಿನಲ್ಲಿ ಅರಣ್ಯ ವಸತಿ ಮತ್ತು ವಿಹಾರಧಾಮಗಳ ಸಂಸ್ಥೆಯ ವತಿಯಿಂದ ನೂತನವಾಗಿ ಆರಂಭಿಸಲಾಗಿರುವ ದೋಣಿವಿಹಾರವನ್ನು ಉದ್ಘಾಟಿಸಿ ಮಾತನಾಡಿದರು.

ನಿಕಟಪೂರ್ವ ಮುಖ್ಯಮಂತ್ರಿಗಳಾಗಿದ್ದ ಬಿ.ಎಸ್.ಯಡಿಯೂರಪ್ಪನವರು ಈ ಹಿಂದೆಯೇ ಈ ಪ್ರದೇಶದ ಅಭಿವೃದ್ಧಿಗೆ ಸುಮಾರು 20.00ಕೋಟಿ ರೂ.ಗಳನ್ನು ಮಂಜೂರು ಮಾಡಿದ್ದು, ಉದ್ದೇಶಿತ ಕಾಮಗಾರಿಗಳನ್ನು ಶೀಘ್ರದಲ್ಲಿ ಆರಂಭಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದ ಅವರು, ನಿಗಧಿಪಡಿಸಿದ ಕಾಲಮಿತಿಯಲ್ಲಿ ಇಲ್ಲಿನ ಅಭಿವೃದ್ಧಿ ಕಾಮಗಾರಿಗಳು ಆರಂಭಗೊಳ್ಳದಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದರು.

ಶಿವಮೊಗ್ಗ ಜಿಲ್ಲೆ ಪ್ರವಾಸೋದ್ಯಮ ಕ್ಷೇತ್ರದಲ್ಲಿ ನಿರೀಕ್ಷೆಗೆ ಮೀರಿದ ಪ್ರಗತಿ ಸಾಧಿಸಲು ವಿಫುಲ ಅವಕಾಶಗಳಿರುವುದನ್ನು ಗುರುತಿಸಲಾಗಿದೆ. 460ಕೋಟಿ ರೂ.ಗಳ ವೆಚ್ಚದಲ್ಲಿ ಅಂಬಾರಗೋಡ್ಲು-ಕಳಸವಳ್ಳಿ ಯೋಜನೆ, 1ಕೋಟಿ ರೂ.ವೆಚ್ಚದಲ್ಲಿ ಹೊಸನಗರದ ಕೋಟೆ, 2ಕೋಟಿ ರೂ.ಗಳ ವೆಚ್ಚದಲ್ಲಿ ಕವಲೇದುರ್ಗ, 2ಕೋಟಿ ರೂ.ಗಳ ವೆಚ್ಚದಲ್ಲಿ ಶಿವಪ್ಪನಾಯಕನ ಅರಮನೆ, ಅಕ್ಕಮಹಾದೇವಿ ಜನ್ಮಸ್ಥಳ ಉಡುಗಣಿ, ವಿಶೇಷವಾಗಿ ವಿಶ್ವವಿಖ್ಯಾತ ಜೋಗ ಜಲಪಾತದ ಅಭಿವೃದ್ಧಿಗೆ ವಿಶೇಷ ಅನುದಾನ ಬಿಡುಗಡೆ ಮಾಡಲಾಗಿದ್ದು, ಈಗಾಗಲೇ ಅಭಿವೃದ್ಧಿ ಕಾಮಗಾರಿಗಳನ್ನು ಆರಂಭಿಸಲಾಗಿದೆ ಎಂದರು.

ಅಲ್ಲದೇ ಇಲ್ಲಿನ ಲಯನ್ ಸಫಾರಿಯ ವಿಸ್ತೃತ ಅಭಿವೃದ್ಧಿ ಕಾಮಗಾರಿಗಳಿಗೆ ಕೇಂದ್ರ ಸರ್ಕಾರವು ಅಗತ್ಯ ಅನುದಾನ ಬಿಡುಗಡೆ ಮಾಡಿ ಮಂಜೂರಾತಿ ನೀಡಿದೆ. ಖಾಸಗಿ ಸಹಭಾಗಿತ್ವದಲ್ಲಿ ಕೊಲ್ಲೂರು-ಕೊಡಚಾದ್ರಿ ನಡುವೆ ಸಂಪರ್ಕ ಕಲ್ಪಿಸುವ ಕೇಬಲ್‌ಕಾರ್ ಅಳವಡಿಸುವ 1000ಕೋ.ವೆಚ್ಚದ ಕಾಮಗಾರಿಗೆ ಮಂಜೂರಾತಿ ದೊರೆತಿದ್ದು, ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದೆ. ಹೊಸನಗರ ಮತ್ತು ಕೊಲ್ಲೂರಿಗೆ 2ಘಂಟೆಗಳ ಸುದೀರ್ಘ ಹಾದಿಯಿದೆ. ಇದನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಕೇಂದ್ರ ಸರ್ಕಾರವು ಘೋಷಿಸಿದೆ. ಇದರಿಂದಾಗಿ ಹೊಸನಗರ ಮತ್ತು ಕೊಲ್ಲೂರು ನಡುವೆ ನೇರ ರಸ್ತೆ ಸಂಪರ್ಕ ಕಲ್ಪಿಸಿ 15ನಿಮಿಷದಲ್ಲಿ ಪ್ರಯಾಣ ಪೂರ್ಣಗೊಳಿಸುವ 400ಕೋಟಿ ರೂ.ಗಳ ಯೋಜನೆಗೆ ಸರ್ಕಾರವು ಈಗಾಗಲೆ 150ಕೋಟಿ ರೂ.ಗಳನ್ನು ಬಿಡುಗಡೆಗೊಳಿಸಿದೆ ಎಂದರು.

ಪ್ರಸ್ತುತ ಜಿಲ್ಲೆಯಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯಕ್ರಮಗಳಿಂದಾಗಿ ಕೆಲವೇ ವರ್ಷಗಳಲ್ಲಿ ಶಿವಮೊಗ್ಗ ಜಿಲ್ಲೆಯ ಭೌಗೋಳಿಕ ಚಿತ್ರಣವೇ ಬದಲಾಗಿ, ರಾಜ್ಯದ ಪ್ರವಾಸೋದ್ಯಮ ಕ್ಷೇತ್ರದ ಆಕರ್ಷಣೀಯ ಕೇಂದ್ರವಾಗಿ ರೂಪುಗೊಳ್ಳಲಿದೆ. ಮಾತ್ರವಲ್ಲ ದಿನಂಪ್ರತಿ ಸಹಸ್ರಾರು ಸಂಖ್ಯೆಯ ಪ್ರವಾಸಿಗರು ಆಗಮಿಸುವ ನಿರೀಕ್ಷೆ ಇದೆ ಎಂದವರು ನುಡಿದರು.

ದೂರದೃಷ್ಠಿಯ ಹಾಗೂ ಇಚ್ಚಾಶಕ್ತಿ ಹೊಂದಿರುವ ಜನಪ್ರತಿ ಇದ್ದಲ್ಲಿ ನಿರೀಕ್ಷಿತ ಅಭಿವೃದ್ದಿ ಕಾಮಗಾರಿಗಳನ್ನು ಕೈಗೊಳ್ಳಲು ಸಾಧ್ಯವಾಗಲಿದೆ. ಪ್ರಸ್ತುತ ಸಕ್ರೆಬೈಲಿನ ಹಿನ್ನೀರಿನ ದೋಣಿವಿಹಾರ ಮತ್ತು ಇಲ್ಲಿನ ಪ್ರಾಕೃತಿಕ ಸೊಬಗು ಅತ್ಯಾಕರ್ಷಕವಾಗಿದ್ದು, ಪ್ರವಾಸಿಗರನ್ನು ಸೆಳೆಯುವುದರಲ್ಲಿ ಸಂಶಯವಿಲ್ಲ. ಈ ದೋಣಿ ವಿಹಾರ ಕೇಂದ್ರವು ಅತ್ಯಲ್ಪ ಕಾಲದಲ್ಲಿ ಪೂರ್ಣಪ್ರಮಾಣದಲ್ಲಿ ಅಭಿವೃದ್ಧಿಗೊಂಡು ಕಾರ್ಯನಿರ್ವಹಿಸಲಿದೆ ಎಂದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ವಿಧಾನಪರಿಷತ್ ಸದಸ್ಯ ಡಿ.ಎಸ್.ಅರುಣ್ ಅವರು ಮಾತನಾಡಿ, ಪ್ರವಾಸೋದ್ಯಮ ಕ್ಷೇತ್ರದಲ್ಲಿ ದೊಡ್ಡಪ್ರಮಾಣದಲ್ಲಿ ಉದ್ಯೋಗಾವಕಾಶಗಳಿವೆ. ಬಹುತೇಕ ರಾಷ್ಟ್ರಗಳು ಪ್ರವಾಸೋದ್ಯಮವನ್ನೇ ಪ್ರಮುಖ ಆದಾಯದ ಮೂಲವನ್ನಾಗಿ ಅವಲಂಬಿಸಿವೆ ಎಂದರು.

ವಿಧಾನ ಪರಿಷತ್ ಸದಸ್ಯ ಆರ್.ರುದ್ರೇಗೌಡ ಅವರು ಮಾತನಾಡಿ, ಸಂಸದ ದೂರದೃಷ್ಠಿಯ ಚಿಂತನೆ, ಮತ್ತು ಆಲೋಚನೆಗಳ ಫಲಶೃತಿಯಿಂದಾಗಿ ಇಂತಹ ಅನೇಕ ಕಾರ್ಯಕ್ರಮಗಳನ್ನು ರೂಪಿಸಿ, ಅನುಷ್ಠಾನಗೊಳಿಸುವುದು ಸಾಧ್ಯವಾಗಿದೆ ಎಂದರು.

ಸಭೆಯಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಐ.ಎಂ.ನಾಗರಾಜ್, ಸಕ್ರೆಬೈಲಿನ ವ್ಯವಸ್ಥಾಪಕ ಎ.ಪಿ.ಕಿರಣ್, ಜಂಗಲ್ ಲಾಡ್ಜಸ್ ಮತ್ತು ರೆಸಾರ್ಟ್ನ ನಿರ್ದೇಶಕ ರಾಜೇಶ್ ಕಾಮತ್, ಜ್ಯೋತಿಪ್ರಕಾಶ್, ಬಳ್ಳೆಕರೆ ಸಂತೋಷ್, ಮಾಲತೇಶ್ ಸೇರಿದಂತೆ ನಿಗಮದ ಸದಸ್ಯರು, ಗ್ರಾ.ಪಂ.ಅಧ್ಯಕ್ಷೆ ಶ್ರೀಮತಿ ಜಯಶ್ರೀ, ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು