News Karnataka Kannada
Sunday, April 28 2024
ಚಿಕಮಗಳೂರು

ಚಿಕ್ಕಮಗಳೂರು: ಸುನೀಲ್‌ಕುಮಾರ್ ಅವರನ್ನು ಸಂಪುಟದಿಂದ ಕೈಬಿಡುವಂತೆ ಕನ್ನಡ ಸೇನೆ ಮನವಿ

Kannada Sena demands removal of Sunil Kumar from cabinet
Photo Credit : News Kannada

ಚಿಕ್ಕಮಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಸುನೀಲ್‌ಕುಮಾರ್ ರವರನ್ನು ಸಂಪುಟದಿಂದ ತೆಗೆದು ಶಾಸಕ ಸ್ಥಾನಕ್ಕೆ ರಾಜೀನಾಮೆ ಪಡೆಯಬೇಕೆಂದು ಕನ್ನಡ ಸೇನೆ ವತಿಯಿಂದ ಜಿಲ್ಲಾಧಿಕಾರಿ ಕಛೇರಿ ಸಹಾಯಕರಾದ ಕೆ.ಚಂದ್ರಶೇಖರ್ ಮುಖಾಂತರ ಮುಖ್ಯ ಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ಕನ್ನಡ ಸೇನೆ ಜಿಲ್ಲಾಧ್ಯಕ್ಷ ಟಿ.ಸಿ.ರಾಜೇಗೌಡ ಮನವಿ ನೀಡಿ ಮಾತನಾಡಿ ತುಳು ಭಾಷೆಯನ್ನು ಕರ್ನಾಟಕ ರಾಜ್ಯದ ಎರಡನೇ ಅಧಿಕೃತ ಭಾಷೆ ಎಂಬುದಾಗಿ ಪರಿಗಣಿಸಲು ಕನ್ನಡ ಮತ್ತು ಸಂಸ್ಖೃತಿ ಇಲಾಖೆ ಕೈಗೊಂಡಿರುವ ಕ್ರಮವನ್ನು ಕೈಬಿಡಬೇಕು ಎಂದರು.

ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರು, ಟ್ವೀಟ್ ಮೂಲಕ ಮತ್ತು ದಿನಪತ್ರಿಕೆ, ವಾಹಿನಿಗಳಲ್ಲಿ ಪ್ರಸಾರವಾದಂತೆ ಕರ್ನಾಟಕ ಸರ್ಕಾರವು ತುಳು ಭಾಷೆಯನ್ನು ರಾಜ್ಯದ ೨ನೇ ಅಧಿಕೃತ ಭಾಷೆಯಾಗಿ ಪರಿಗಣಿಸುವ ಕುರಿತು ಸಮಿತಿಯನ್ನು ರಚಿಸಿದ್ದು, ಶೀಘ್ರ ವರದಿಯನ್ನು ನಿರೀಕ್ಷಿಸಲಾಗುತ್ತಿರುವುದು ಪ್ರಸಾರವಾಗಿರುತ್ತದೆ ಎಂದರು.

ತುಳು ಭಾಷೆ ದಕ್ಷಿಣದ ಕನ್ನಡ ಜಿಲ್ಲೆಯ ಬಹುಜನರು ಮಾತನಾಡುವ ಅಲ್ಲಿಯ ಮೂಲ ನಿವಾಸಿಗಳ ಭಾಷೆಯಾಗಿದ್ದು, ಸುಮಾರು ೧೭ ಲಕ್ಷಕ್ಕಿಂತಲೂ ಹೆಚ್ಚು ಜನರು ತುಳು ಭಾಷೆಯನ್ನು ಮಾತನಾಡುವವರಿದ್ದಾರೆ, ಆದ್ದರಿಂದ ತುಳು ಭಾಷೆಯನ್ನು ರಾಜ್ಯದ ೨ನೇ ಅಧಿಕೃತ ಭಾಷೆಯಾಗಿ ಪರಿಗಣಿಸಬೇಕೆಂದು ತುಳುಭಾಷಿಗರ ಬೇಡಿಕೆಯಾಗಿರುತ್ತದೆ ಎಂದರು.

ರಾಜ್ಯಗಳು ರಚನೆಯಾಗುವ ಸಂದರ್ಭದಲ್ಲಿ ಭಾಷಾವಾರು ಪ್ರಾಂತ್ಯಗಳನ್ನು ರಚಿಸಿ ಭಾಷೆಯ ಆಧಾರದ ಮೇಲೆ ರಾಜ್ಯ ರಚನೆಯಾಗಿರುತ್ತದೆ, ಇದರಲ್ಲಿ ರಾಜ್ಯದ ಗಡಿ ಭಾಗಗಳಲ್ಲಿರುವ ಜಿಲ್ಲೆಗಳು ಇತರೆ ಭಾಷೆಗಳನ್ನು ಒಳಗೊಂಡಂತೆ ಕನ್ನಡ ನಾಡು ರಚನೆಯಾಗಿರುತ್ತದೆ, ಅಖಂಡ ಕರ್ನಾಟಕದಲ್ಲಿ ಕನ್ನಡ ಭಾಷೆಯು ಸಾರ್ವಬೌಮತೆಯನ್ನು ಹೊಂದಿರುವ ಅಧಿಕೃತ ಭಾಷೆಯಾಗಿದ್ದು, ಕನ್ನಡ ನಾಡಿನಲ್ಲಿ ಕನ್ನಡ ಭಾಷೆ ಮಾತನಾಡುವ ಕನ್ನಡಿಗರೇ ಸಾರ್ವಬೌಮನಾಗಿರುತ್ತಾನೆ ಎಂದರು.

ತುಳು ಭಾಷೆ ಕೇವಲ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಹುಜನರು ಮಾತನಾಡುವ ಭಾಷೆಯಾಗಿರುತ್ತದೆ ಹೊರತು ಇಡೀ ರಾಜ್ಯದ ಜನರು ಮೊದಲನೇ ಅಥವಾ ಎರಡನೇ ಪ್ರಾಮುಖ್ಯತೆಯನ್ನು ಹೊಂದಿರುವ ಭಾಷೆಯಾಗಿರುವುದಿಲ್ಲ. ತುಳು ಭಾಷೆಗೆ ಯಾವುದೇ ಸ್ವಂತ ಲಿಪಿಯಾಗಲಿ, ಸಾಹಿತ್ಯವಾಗಲಿ ಇರುವುದಿಲ್ಲ, ರಾಜ್ಯದ ಇತರೆ ಯಾವುದೇ ಜಿಲ್ಲೆಗಳಲ್ಲಿಯೂ ಸಹ ಬಹುಜನರು ಮಾತನಾಡುವ ಭಾಷೆ ಆಗಿರುವುದಿಲ್ಲ. ಕೇವಲ ಒಂದು ಭಾಷೆಯಲ್ಲಿ ಬಹುಜನರು ಮಾತನಾಡುವ ಭಾಷೆಯನ್ನು ಇಡೀ ರಾಜ್ಯದ ಅದರಲ್ಲೂ ತುಳು ಭಾಷೆಯ ಗಂಧಗಾಳಿ, ಸಂಪರ್ಕವೇ ಇಲ್ಲದ ಉಳಿದ ಜಿಲ್ಲೆಗಳಿಗೂ ಅನ್ವಯವಾಗುವಂತೆ ಅಧಿಕೃತ ಭಾಷೆಯಾಗಿ ಪರಿಗಣಿಸುವುದು ಉಚಿತವಾಗಿರುವುದಿಲ್ಲ ಎಂದರು.

ತುಳು ಭಾಷೆ ಮಾತನಾಡುವವರ ಸಂಖ್ಯೆ ೧೭ ಲಕ್ಷಕ್ಕಿಂತಲೂ ಹೆಚ್ಚಿದೆ ಎನ್ನುವ ವಿಚಾರವನ್ನು ಆಧಾರವಾಗಿಟ್ಟುಕೊಂಡು, ಅಧಿಕೃತ ಭಾಷೆಯನ್ನಾಗಿ ಪರಿಗಣಿಸಲು ಕೋರುವುದಾದರೆ, ರಾಜ್ಯದ ಅನ್ಯಭಾಷಿಗರಾದ ಉರ್ದು, ತಮಿಳು, ತೆಲುಗು, ಮರಾಠಿ ಹಾಗೂ ಮಲೆಯಾಳಂ ಮಾತನಾಡುವವರ ಸಂಖ್ಯೆ ತುಳು ಮಾತನಾಡುವವರ ಸಂಖ್ಯೆಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಜತೆಗೆ ಅದರದ್ದೇ ಲಿಪಿಯನ್ನು ಸಹ ಇದೆ, ಆದರೆ ತುಳು ಭಾಷೆಗೆ ಲಿಪಿಯೇ ಇಲ್ಲ ಹಾಗಾಗಿ ಸಂಖ್ಯೆಯ ಮಾನದಂಡವನ್ನೇ ಇಟ್ಟುಕೊಳ್ಳುವುದಾದರೆ ಉಳಿದ ಭಾಷಿಗರನ್ನು ಸಹ ಪರಿಗಣಿಸಬೇಕಾಗುತ್ತದೆ ಎಂದರು.

ತುಳು ಭಾಷಿಗರ ಬೇಡಿಕೆ ಅಷ್ಟಕ್ಕೆ ನಿಲ್ಲದೆ ದಕ್ಷಿಣ ಕನ್ನಡ ಜಿಲ್ಲೆಯ ಹೆಸರನ್ನು ತುಳುನಾಡು ಎಂಬುದಾಗಿ ಬದಲಾಯಿಸುವುದರ ಜತೆಗೆ ದಕ್ಷಿಣ ಕನ್ನಡ ಜಿಲ್ಲೆಯ ಹಲವು ಊರುಗಳ ಈಗಿನ ಹೆಸರನ್ನು ತುಳು ಭಾಷೆಗೆ ಬದಲಾಯಿಸಬೇಕೆಂದು ಮುಂದೊಂದು ದಿನ ಉದ್ಬವವಾಗಬಹುದೆಂದು ಮುಂದಾಲೋಚಿಸದೇ ಭಾಷಾವಾರು ಪ್ರಾಂತ್ಯವನ್ನು ರಚಿಸಿದ ರಚನಾಕಾರರು ತುಳು ಭಾಷಿಕರು ಹೆಚ್ಚಿರುವ ಜಿಲ್ಲೆಯನ್ನು ದಕ್ಷಿಣ ಕನ್ನಡ ಎಂದು, ಉತ್ತರ ಕನ್ನಡ ಜಿಲ್ಲೆಯಲ್ಲಿ ಮಾತನಾಡುವ ಅರೆಭಾಷೆ ಹವ್ಯಕ ಭಾಷೆಯನ್ನು ಪರಿಗಣಿಸದೆ ಉತ್ತರ ಕನ್ನಡ ಜಿಲ್ಲೆ ಎಂದು ಅಧಿಕೃತವಾಗಿ ನಾಮಕರಣ ಮಾಡಿರುವುದನ್ನು ಗಮನಿಸಬೇಕಾಗುತ್ತದೆ ಎಂದರು.

ರಾಜ್ಯದ ೨ನೇ ಅಧಿಕೃತ ಭಾಷೆಯನ್ನಾಗಿ ಪರಿಗಣಿಸುತ್ತಿರುವ ಸರ್ಕಾರದ ನಿಲುವನ್ನು ತಕ್ಷಣವೇ ಕೈ ಬಿಡಬೇಕು, ಕನ್ನಡವನ್ನು ಹೊರತುಪಡಿಸಿ ಇತರೆ ಯಾವುದೇ ಭಾಷೆಯನ್ನು ಸ್ಥಾನಮಾನದ ಅಧಿಕೃತ ಭಾಷೆ ಎಂದು ಪರಿಗಣಿಸುವುದು, ಕನ್ನಡದ ಸಾರ್ವಬೌಮತಕ್ಕೆ ದಕ್ಕೆ ಉಂಟುಮಾಡಿದಂತಾಗುತ್ತದೆ, ದಕ್ಕೆಯನ್ನುಂಟುಮಾಡುವಂತಹ ಕ್ರಮವೆಂದು ಪರಿಗಣಿಸುವುದು, ಹಾಗೆ ಮಾಡದಿದ್ದಲ್ಲಿ ಕನ್ನಡ ಪರ ಸಂಘಟನೆಗಳು ಉಗ್ರ ಪ್ರತಿಭಟನೆ ಮಾಡುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಕನ್ನಡ ಸೇನೆ ನಗರ ಆಟೋ ಸಂಘದ ಅಧ್ಯಕ್ಷ ಜಯಪ್ರಕಾಶ್, ಉಪಾಧ್ಯಕ್ಷ ಶಂಕರೇಗೌಡ, ಹರೀಶ್, ಮೂಡಿಗೆರೆ ಪ್ರಸನ್ನ, ಹರೀಶ್, ಮೂರ್ತಿ, ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು