News Karnataka Kannada
Monday, May 06 2024
ಉತ್ತರಕನ್ನಡ

ಸರ್ವರಿಗೂ ಒಳಿತು ಬೆಳೆಸುವುದೇ ವೇದಗಳ ಸಾರ: ರಾಘವೇಶ್ವರ ಶ್ರೀ

The essence of Vedas is to promote good for all: Raghaveshwara Sri
Photo Credit : By Author

ಗೋಕರ್ಣ: ಆಧುನಿಕ ಸಮಾಜ ಮನುಷ್ಯರನ್ನು ಮಾತ್ರ ಪರಿಗಣನೆಗೆ ತೆಗೆದುಕೊಂಡರೆ ವೇದಗಳ ದೃಷ್ಟಿ ಹಾಗಿಲ್ಲ. ಮನುಷ್ಯರಿಗೆ ಒಳಿತಾಗಲಿ ಎಂದು ಹಾರೈಸಿದ ಉಸಿರಿನಲ್ಲೇ ಎಲ್ಲ ಚತುಷ್ಪದಿಗಳಿಗೂ (ಪ್ರಾಣಿಗಳಿಗೆ) ಒಳಿತಾಗಲಿ ಎಂದು ಹಾರೈಸುತ್ತದೆ. ಸರ್ವರಿಗೂ ಒಳಿತು ಬಯಸುವುದೇ ವೇದದ ಸಾರ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ನುಡಿದರು.

ಅಶೋಕೆಯ ಶ್ರೀ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಆವರಣದಲ್ಲಿ ಚಾತುರ್ಮಾಸ್ಯ ಕೈಗೊಂಡಿರುವ ಶ್ರೀಗಳು ‘ಶನ್ನೋ ಅಸ್ತು ದ್ವಿಪದೇ, ಶಂ ಚತುಷ್ಪದೇ’ ಎಂಬ ವಿಷಯದ ಬಗ್ಗೆ ಶ್ರೀಸಂದೇಶ ನೀಡಿ, “ಮನುಷ್ಯ- ಪ್ರಾಣಿಗಳಿಗೆ ಒಳಿತಾಗಲಿ. ಮೃಗ- ಪಕ್ಷಿಗಳಿಗೆ ಒಳ್ಳೆಯದಾಗಬೇಕು. ಪಶುಪಕ್ಷಿ, ಮರಗಿಡಗಳು, ಕ್ರಿಮಿಕೀಟಗಳಿಗೂ ಒಳ್ಳೆಯದಾಗಲಿ ಎಂದು ಹಾರೈಸುವ ವೈಶಾಲ್ಯತೆ ವೇದಗಳಲ್ಲಿದೆ” ಎಂದು ವಿಶ್ಲೇಷಿಸಿದರು.

ಛಂದೋಪನಿಷತ್ತಿನಿಂದ ತಿಳಿದು ಬರುವಂತೆ ವಿಶ್ವವೆಲ್ಲ ಲೀನವಾಗುವ ಒಂದು ಬಿಂದು ಅಥವಾ ಪರಮಾತ್ಮ ಎಂಬ ತತ್ಪ ಮಾತ್ರ ಆರಂಭದಲ್ಲಿತ್ತು. ಆಗ ಪರಮಾತ್ಮನಿಗೆ ಹಲವು ಪೀಳಿಗೆಗಳಿಗೆ ನಾನು ಜನಕನಾಗುತ್ತೇನೆ ಎಂಬ ಭಾವನೆ ಬಂತು. ಕೋಟಿ ರೂಪಗಳಲ್ಲಿ ಅನಂತವಾಗಿ ದೇವರು ಹೊರಹೊಮ್ಮಿದ್ದೇ ವಿಶ್ವದ ವಿಕಾಸಕ್ಕೆ ಕಾರಣವಾಯಿತು. ನಮ್ಮ ಸುತ್ತ ಮುತ್ತ ಕಾಣುವ ಪ್ರತಿಯೊಂದೂ ದೇವರ ಏಕಪಾತ್ರಾಭಿನಯದ ವೈವಿಧ್ಯಮಯ ರೂಪಗಳು. 33 ಕೋಟಿ ದೇವತೆಗಳು ಒಬ್ಬ ಪರಮಾತ್ಮನ ರೂಪ ಎಂದು ಬಣ್ಣಿಸಿದರು.

‘ನಾನು’ ಎನ್ನುವುದಕ್ಕೆ ಶಕ್ತಿ ಇಲ್ಲ. ‘ನಾವು’ ಎಂಬ ಸಮಷ್ಟಿ ಅತ್ಯಂತ ಬಲಿಷ್ಠ. ಎಲ್ಲರೂ ಕೂಡಿ ಬಾಳಬೇಕು. ಒಂಟಿತನ ಎನ್ನುವುದು ಬದುಕೇ ಅಲ್ಲ; ಎಲ್ಲರೂ ಜತೆಯಾಗಿ ಬೆಳೆಯಬೇಕು. ಒಂಟಿಯಾಗಿ ಬೆಳೆದರೆ ವಿಶ್ವದ ಜತೆ ಹೊಂದಿಕೊಳ್ಳಲು ಸಾಧ್ಯವಾಗುವುದಿಲ್ಲ. ನಮ್ಮ ಜತೆಗೆ ಗೋವು, ಇತರ ಸಾಕು ಪ್ರಾಣಿಗಳಾದ ನಾಯಿ, ಬೆಕ್ಕು, ತುಳಸಿ, ಗರಿಕೆ ಹೀಗೆ ಗಿಡಗಂಟಿಗಳು ಕೂಡಾ ನಮ್ಮ ಜತೆಜತೆಗೆ ಬೆಳೆಯುವುದೇ ಪರಿಪೂರ್ಣ ಬದುಕು ಎಂದು ವಿವರಿಸಿದರು. ಸಮಷ್ಟಿಯಲ್ಲಿ ನಾವು ಬೆಳೆಯಬೇಕು. ಒಂದು ಅಂಶ ಇಲ್ಲದಿದ್ದರೂ ಅದು ಕೊರತೆಯಾಗಿಯೇ ಕಾಡುತ್ತದೆ.

ಪಶು- ಪಕ್ಷಿಗಳ ಬಗ್ಗೆ ಇಂದು ಕೂಗು ಇದೆ. ಆದರೆ ಕಾಳಜಿ ಇಲ್ಲ. ಆದರೆ ಸನಾತನ ಪರಂಪರೆ ಬೆಳೆದು ಬಂದಿರುವುದೇ ಇಂಥ ಸಮಷ್ಟಿಯಲ್ಲಿ. ದಶರಥ ಅಶ್ವಮೇಧ ಯಾಗದಲ್ಲಿ 10 ಲಕ್ಷ ಗೋವುಗಳನ್ನು ದಾನ ಮಾಡಿದ ಉಲ್ಲೇಖ ಇದೆ. ರಾಮಲಕ್ಷ್ಮಣ, ಭರತ ಶತ್ರುಘ್ನರ ವಿವಾಹ ಸಂದರ್ಭದಲ್ಲಿ ಮಕ್ಕಳ ಹೆಸರಲ್ಲಿ ಒಂದೊಂದು ಲಕ್ಷ ಗೋವುಗಳನ್ನು ದಾನ ಮಾಡುತ್ತಾನೆ. ಅಂದರೆ ದಶರಥನಲ್ಲಿ ಎಷ್ಟು ಗೋವುಗಳು ಇದ್ದವು ಎಂದು ಕಲ್ಪಿಸಿಕೊಳ್ಳಬಹುದು. ಇದು ಪಶುಸಂಪತ್ತಿಗೆ ರಾಜವಂಶದವರು ನೀಡುತ್ತಿದ್ದ ಮಹತ್ವ ಇದು. ಇದಕ್ಕಾಗಿಯೇ ವೇದಗಳಲ್ಲಿ ಶಂಚತುಷ್ಪದೇ ಎಂಬ ಹಾರೈಕೆ ಇದೆ ಎಂದು ತಿಳಿಸಿದರು.

ರಾಮ ವನವಾಸಕ್ಕೆ ತೆರಳುವಾಗ ಗುಹನ ಆತಿಥ್ಯ ನಿರಾಕರಿಸಿದರೂ, ನನ್ನ ಕುದುರೆಗಳಿಗೆ ತಿನ್ನಲು ಏನನ್ನಾದರೂ ನೀಡು ಎಂದು ಗುಹನನ್ನು ಕೇಳುತ್ತಾನೆ. ಇದು ರಾಮನ ಹೃದಯ ವೈಶಾಲ್ಯ ಅಥವಾ ಪಶುಪ್ರೀತಿಗೆ ನಿದರ್ಶನ. ಆದರೆ ರಾಮನ ಜತೆಗೆ ಗಜ- ಅಶ್ವ ಕೂಡಾ ವನವಾಸಕ್ಕೆ ತೆರಳಿದವು. ಪ್ರಾಣಿಗಳಿಗೂ ಇಂಥದ್ದೇ ಪ್ರೀತಿ ತಮ್ಮ ಒಡೆಯನ ಬಗ್ಗೆ ಇತ್ತು ಎನ್ನುವುದಕ್ಕೂ ಸಾಕಷ್ಟು ನಿದರ್ಶನಗಳು ದೊರೆಯುತ್ತವೆ ಎಂದು ವಿವರಿಸಿದರು.

ಅರಮನೆಯಲ್ಲಿ ಕೇವಲ ರಾಜ ಮಾತ್ರ ವಾಸ ಇರಲಿಲ್ಲ. ಪ್ರಾಣಿ ಪಕ್ಷಿಗಳು, ಸಾಕು ಪ್ರಾಣಿಗಳು ಸಹಜೀವನ ನಡೆಸುತ್ತವೆ. ಆದರೆ ಇಂದಿನ ನಗರ ಬದುಕಿನಲ್ಲಿ ಗಿಡಮರಗಳು, ಪಶು ಪಕ್ಷಿಗಳು, ನೀರು, ಬೆಟ್ಟಗಳು ಏನೂ ಇಲ್ಲ. ಬದಲಾಗಿ ಕಾಂಕ್ರಿಟ್ ಕಾಡು, ತ್ಯಾಜ್ಯಗಳ ಜತೆ ನರಕ ಸದೃಶ ಬದುಕು ಸಾಗಿಸಬೇಕಾಗಿದೆ ಎಂದು ಮಾರ್ಮಿಕವಾಗಿ ನುಡಿದರು.

ಪ್ರಾಣಿ, ಪಕ್ಷಿಗಳಿಗಾಗಲೀ, ಕ್ರಿಮಿ ಕೀಟಗಳಿಗಾಗಲೀ ನೋವು ಮಾಡಿದರೆ ಅದರ ಪಾಪ ನಮ್ಮನ್ನು ತಟ್ಟುತ್ತದೆ. ಅವೆಲ್ಲವನ್ನೂ ಬೆಳೆಸಿ ಪೋಷಿಸಿ ನಾವು ಬೆಳೆಯಬೇಕು. ಅವುಗಳಿಗೆ ಸಂತೋಷ ಉಂಟುಮಾಡಿದರೆ ಅದರ ಪುಣ್ಯದ ಫಲ ನಮಗೆ ದೊರಕುತ್ತದೆ ಎಂದರು.

ಚಾತುರ್ಮಾಸ್ಯ ಸಮಿತಿ ಅಧ್ಯಕ್ಷ ಯುಎಸ್‍ಜಿ ಭಟ್, ಕಾರ್ಯಾಧ್ಯಕ್ಷ ಮಂಜುನಾಥ ಸುವರ್ಣಗದ್ದೆ, ಪ್ರಧಾನ ಕಾರ್ಯದರ್ಶಿ ನೀಲಕಂಠ ಯಾಜಿ, ಕಾರ್ಯದರ್ಶಿ ಶ್ರೀಕಾಂತ ಪಂಡಿತ್, ವಿವಿವಿ ಹಿರಿಯ ಲೋಕಸಂಪರ್ಕಾಧಿಕಾರಿ ಜಿ.ಕೆ.ಹೆಗಡೆ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಟಿ.ಜಿ.ಪ್ರಸನ್ನ ಕುಮಾರ್, ಶಿಕ್ಷಣ ಸಂಯೋಜಕಿ ಅಶ್ವಿನಿ ಉಡುಚೆ ಮತ್ತಿತರರು ಉಪಸ್ಥಿತರಿದ್ದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು