News Karnataka Kannada
Monday, April 22 2024
Cricket
ಉಡುಪಿ

ಉಡುಪಿ: ಲಿಂಗತ್ವ ಅಲ್ಪಸಂಖ್ಯಾತರ ಗೌರವ ಬದುಕಿಗೆ ಯಕ್ಷಗಾನದ ಕೌಶಲ್ಯ ತರಬೇತಿ

Udupi: Yakshagana skill training for the respectable life of gender minorities
Photo Credit : News Kannada

ಉಡುಪಿ: ಕುಟುಂಬ ಮತ್ತು ಸಮಾಜದಿಂದ ದೂರ ಉಳಿದು, ದೈನಂದಿನ ಜೀವನ ನಿರ್ವಹಣೆಗಾಗಿ , ಇಷ್ಠವಿಲ್ಲದಿದ್ದರೂ ಅವಮಾನ ಪಡುವಂತಹ ಭಿಕ್ಷಾಟನೆ ಮತ್ತಿತರ ಚಟುವಟಿಕೆಗಳಲ್ಲಿ ತೊಡಗುವ ಅನಿವಾರ್ಯತೆಗೆ ಸಿಲುಕುವ ಲಿಂಗತ್ವ ಅಲ್ಪ ಸಂಖ್ಯಾತರು, ಕೌಶಲ್ಯಾಬಿವೃಧ್ದಿ ತರಬೇತಿಗಳನ್ನು ಪಡೆಯುವುದರ ಮೂಲಕ ಮತ್ತು ತಮ್ಮಲ್ಲಿನ ಪ್ರತಿಭೆಯ ಮೂಲಕ ಗೌರವಯುತ ಜೀವನ ನಡೆಸಲು ಹಾಗೂ ಅತ್ಯುನ್ನತ ಸಾಧನೆ ಮಾಡಬಹುದಾಗಿದ್ದು ಇದಕ್ಕೆ ಉಡುಪಿ ಜಿಲ್ಲಾಡಳಿತ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃಧ್ದಿ ಇಲಾಖೆ ಅತ್ಯುತ್ತಮ ಅವಕಾಶ ಕಲ್ಪಿಸುವ ಮೂಲಕ ರಾಜ್ಯಕ್ಕೆ ಮಾದರಿ ಕಾರ್ಯಕ್ರಮ ಆಯೋಜಿಸಿದೆ.

ಉಡುಪಿ ಜಿಲ್ಲಾಡಳಿತದ ಜಿಲ್ಲಾ ಖನಿಜ ಪ್ರತಿಷ್ಠಾನ ನಿಧಿಯಡಿಯಲ್ಲಿ , ಜಿಲ್ಲೆಯಲ್ಲಿರುವ ಆಸಕ್ತ 19 ಮಂದಿ ಲಿಂಗತ್ವ ಅಲ್ಪ ಸಂಖ್ಯಾತರಿಗೆ ಕಾರ್ಕಳದ ಸ್ತ್ರೀ ಶಕ್ತಿ ಭವನದಲ್ಲಿ ರೂ. 10000 ಗಳ ಸ್ಟೈಪೆಂಡ್ ನೊಂದಿಗೆ 5-6-2023 ರಿಂದ 4-7-2023 ರ ವರೆಗೆ ಒಂದು ತಿಂಗಳ ಕಾಲ ಕರಾವಳಿಯ ಹೆಮ್ಮಯೆ ಕಲೆಯಾದ ಯಕ್ಷಗಾನ ಪ್ರದರ್ಶನದ ಕುರಿತು ತರಬೇತಿ ನೀಡಲಾಗಿದೆ.

ತರಬೇತಿಯಲ್ಲಿ ನೃತ್ಯ, ಅಭಿನಯ, ಸಂಭಾಷಣೆ ಯಲ್ಲಿ ಪರಿಣಿತ ಸಾಧಿಸಿರುವ ಲಿಂಗತ್ವ ಅಲ್ಪ ಸಂಖ್ಯಾತರು ತರಬೇತಿ ಅಂತ್ಯದಲ್ಲಿ , ಶ್ವೇತ ಕುಮಾರ ಚೆರಿತ್ರೆ ಎಂಬ ಪೌರಾಣಿಕ ಯಕ್ಷಗಾನ ಪ್ರಸಂಗವನ್ನು ಅದ್ಬುತವಾಗಿ ಪ್ರದರ್ಶಿಸಿ, ನೆರದಿದ್ದವರ ಮೆಚ್ಚುಗೆ ಗಳಿಸಿದರು. ಯಕ್ಷಗಾನ ತರಬೇತಿಯ ನಾಟ್ಯ ಗುರುಗಳಾಗಿ ಸುಧೀರ್ ಉಪ್ಪೂರು ಮತ್ತು ವಿಜಯಗಾಣಿಗ ಬೀಜಮಕ್ಕಿ, ಚಂಡೆ ಶಶಿಕುಮಾರ್,ಮದ್ದಳೆ ಯಲ್ಲಿ ನವೀನ್ ಕುಮಾರ್ ಮತ್ತು ಭಾಗವತಿಕೆಯಲ್ಲಿ ಸುದೀಪ್ ಚಂದ್ರ ಶೆಟ್ಟಿ ಸಹಕಾರ ನೀಡಿದ್ದಾರೆ.

ಯಕ್ಷಗಾನ ತರಬೇತಿ ಪಡೆದಿರುವ ಈ ಲಿಂಗತ್ವ ಅಲ್ಪ ಸಂಖ್ಯಾತರು ಯಕ್ಷಗಾನ ಪ್ರಸಂಗಗಳಲ್ಲಿ ಸ್ವತಂತ್ರವಾಗಿ ವೇಷದಾರಿಗಳಾಗಿ ಅಭಿನಯಿಸುವ ಸಾಮರ್ಥ್ಯವನ್ನು ಹೊಂದಿದ್ದು ಈ ಮೂಲಕ ಜೀವನ ನಿರ್ವಹಣೆಗಾಗಿ ಆರ್ಥಿಕವಾಗಿ ಸಂಪಾದನೆ ಮಾಡಲು ಹಾಗೂ ತಮ್ಮದೇ ತಂಡಗಳನ್ನು ರಚಿಸಿಕೊಂಡು ಸ್ವತಂತ್ರವಾಗಿ ಕಾರ್ಯಕ್ರಮಗಳನ್ನು ನೀಡಲು ಸಮರ್ಥರಾಗಿದ್ದಾರೆ. ಹೊರ ಜಿಲ್ಲೆ , ರಾಜ್ಯ, ದೇಶ ವಿದೇಶಗಳಲ್ಲಿ ತಮ್ಮ ಕಲೆಯನ್ನು ಪ್ರದರ್ಶಿಸಲು ಉತ್ಸುಕರಾಗಿರುವ ಇವರಿಗೆ ಸೂಕ್ತ ಪ್ರೋತ್ಸಾಹ, ಬೆಂಬಲ ಮತ್ತು ಅವಕಾಶಗಳನ್ನು ನೀಡುವ ಮಹತ್ತರ ಜವಾಬ್ದಾರಿ ಇಡೀ ಸಮಾಜದ್ದಾಗಿದೆ.

ನಮಗೆ ಯಕ್ಷಗಾನದ ಯಾವುದೇ ತಲೆ ಬುಡ ಗೊತ್ತಿರಲಿಲ್ಲ. ಒಂದು ತಿಂಗಳ ಅವಧಿಯಲ್ಲಿ ಗುರುಗಳು ಬಡಗುತಿಟ್ಟು ಮಾದರಿಯಲ್ಲಿ , ಕುಣಿತ,ಸಂಭಾಷಣೆ, ತಾಳ, ಲಯದ ಬಗ್ಗೆ ಸಾಕಷ್ಟು ತರಬೇತಿ ನೀಡಿ ನಾವು ಸ್ವತಂತ್ರವಾಗಿ ರಂಗಸ್ಥಳದಲ್ಲಿ ಪ್ರದರ್ಶನ ನೀಡುವ ಮಟ್ಟಿಗೆ ತಯಾರು ಮಾಡಿದ್ದಾರೆ. ನಮಗೂ ಕೂಡ ಹೆಚ್ಚಿನ ಆತ್ಮ ವಿಶ್ವಾಸ ಮೂಡಿದೆ, ತರಬೇತಿಯ ಕೊನೆಯ ದಿನದಲ್ಲಿ ನಮ್ಮ ಪ್ರದರ್ಶನ ವೀಕ್ಷಿಸಿದ ಕೆಲವರು ಮೇಳಗಳಿಗೆ ಅತಿಥಿ ಕಲಾವಿದರಾಗಿ ಬರುವಂತೆ ಹಾಗೂ ಸಮಾರಂಭಗಳಲ್ಲಿ ಕಾರ್ಯಕ್ರಮ ನೀಡುವ0ತೆ ತಿಳಿಸಿದ್ದಾರೆ. ತರಬೇತಿ ಪಡೆದ ಎಲ್ಲಾ ಕಲಾವಿದರು ಸೇರಿ ತಮ್ಮದೇ ಆದ ಮಂಡಳಿ ರಚಿಸಿಕೊ0ಡು ನಿರಂತರವಾಗಿ ಅಭ್ಯಾಸ ನಡೆಸುವ ಹಾಗೂ ಕಾಯಕ್ರಮ ನೀಡುವ ಉದ್ದೇಶವಿದೆ. ನಮಗೆ ಈ ತರಬೇತಿಗೆ ಅವಕಾಶ ಕಲ್ಪಿಸಿದ ಜಿಲ್ಲಾಡಳಿತಕ್ಕೆ ಧನ್ಯವಾದಗಳು

ಸುಶಾಂತ್, ತರಬೇತಿ ಪಡೆದ ಲಿಂಗತ್ವ ಅಲ್ಪಸಂಖ್ಯಾತ ಕಲಾವಿದ.

ಜಿಲ್ಲೆಯಲ್ಲಿ 283 ಮಂದಿ ಲಿಂಗತ್ವ ಅಲ್ಪ ಸಂಖ್ಯಾತರಿದ್ದು, ಇವರು ಜೀವನ ನಿರ್ವಹಣೆಗೆ ತಮಗೆ ಇಷ್ಠವಿಲ್ಲದ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವ ಬದಲು ಕೌಶಲ್ಯ ತರಬೇತಿಗಳ ಮೂಲಕ ಸ್ವಾವಲಂಬಿ ಜೀವನ ನಡೆಸಲು ಅನುವು ಮಾಡಿಕೊಡಲು ಯಕ್ಷಗಾನ ತರಬೇತಿ ನೀಡಲಾಗಿದೆ. ಕಲಾ ಪ್ರತಿಭೆಯ ಮೂಲಕ ಅವರು ಸಾಮಾಜಿಕವಾಗಿ ಸಮಾಜದ ಮುಖ್ಯ ವಾಹಿನಿಯಲ್ಲಿ ಗುರುತಿಸಿಕೊಳ್ಳಲು ಮತ್ತು ಆರ್ಥಿಕವಾಗಿ ಸ್ವಾವಲಂಬಿಗಳಾಗಲು ಸಾಧ್ಯವಿದೆ. ಯಕ್ಷಗಾನ ಮಾತ್ರವಲ್ಲದೇ ಇತರೇ ಕೌಶಲ್ಯಯುಕ್ತ ತರಬೇತಿ ಪಡೆಯಲು ಇಚ್ಚಿಸಿದಲ್ಲಿ ಜಿಲ್ಲಾಡಳಿತ ಎಲ್ಲಾ ಅಗತ್ಯ ನೆರವು ನೀಡಲಿದೆ

ಜಿಲ್ಲಾಧಿಕಾರಿ ಕೂರ್ಮರಾವ್ ಎಂ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು