News Karnataka Kannada
Sunday, April 28 2024
ಕರಾವಳಿ

ಉಡುಪಿ: ರಾಜ್ಯದ ಸಮಗ್ರ ಅಭಿವೃದ್ಧಿಗೆ ಬಿಜೆಪಿಗೆ ಬೆಂಬಲ, ಜೆ.ಪಿ. ನಡ್ಡಾ ಮನವಿ

State, Latest News, BJP, Congress, Newskannada, Party, Meeting
Photo Credit : News Kannada

ಉಡುಪಿ: ಕರ್ನಾಟಕದ ಬಿಜೆಪಿ ಸರಕಾರವು ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ದೃಷ್ಟಿಕೋನದಿಂದ ಕೆಲಸ ಮಾಡುತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ತಿಳಿಸಿದರು.

ಉಡುಪಿಯಲ್ಲಿ ಇಂದು ಜಿಲ್ಲಾ ಬೂತ್ ಮಟ್ಟದ ಸಮಾವೇಶದಲ್ಲಿ ಮಾತನಾಡಿದರು. ಬಿಜೆಪಿಯನ್ನು ತಳಮಟ್ಟದಲ್ಲಿ ಬಲಪಡಿಸಿ. ಬಿಜೆಪಿ ಸರಕಾರಗಳ ವಿಶೇಷ ಸಾಧನೆಗಳನ್ನು ಜನರಿಗೆ ತಿಳಿಸುವ ಮೂಲಕ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲು ಶ್ರಮಿಸಿ ಎಂದು ಮನವಿ ಮಾಡಿದರು.

ಮೋದಿಜಿ ಅವರ 9 ವರ್ಷದ ಆಡಳಿತ , ರಾಜ್ಯದಲ್ಲಿ ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಅವರ ಸರಕಾರದ ಮೂಲಕ ರಾಜ್ಯದ ಎಲ್ಲ ವರ್ಗದ ಜನತೆಯ ಸಶಕ್ತೀಕರಣ ಕಾರ್ಯ ನಡೆದಿದೆ ಎಂದರು. ಡಬಲ್ ಎಂಜಿನ್ ಸರಕಾರಗಳ ಸಾಧನೆಯನ್ನು ಜನರಿಗೆ ತಿಳಿಸಬೇಕು ಎಂದು ಮನವಿ ಮಾಡಿದರು.

ಕೋವಿಡ್ ಸಂದರ್ಭದಲ್ಲಿ ಮೋದಿಜಿ ಅವರ ನೇತೃತ್ವದಲ್ಲಿ ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯಿಂದ 80 ಕೋಟಿ ಜನರು ಪ್ರಯೋಜನ ಪಡೆದರು. ಅಲ್ಲದೆ, ಜನರು ಹಸಿವಿನಿಂದ ಸಾಯುವುದು ತಪ್ಪಿತು. ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ 3.50 ಕೋಟಿ ಮನೆ ನಿರ್ಮಿಸಲಾಗಿದೆ. ಹಿಂದೆ ನಾನು ಶಾಸಕನಾಗಿದ್ದಾಗ 2 ಪಂಚಾಯತ್‍ಗೆ ಒಂದು ಇಂದಿರಾ ಆವಾಸ್ ಮನೆ ನೀಡುತ್ತಿದ್ದರು ಎಂದು ವಿವರ ನೀಡಿದರು. ಕರ್ನಾಟಕದಲ್ಲಿ 9 ಲಕ್ಷ ಮನೆಗಳನ್ನು ನಿರ್ಮಿಸಲಾಗುತ್ತಿದೆ ಎಂದು ತಿಳಿಸಿದರು. ಕೊಳೆಗೇರಿಗಳ ಸಂಖ್ಯೆ ಕಡಿಮೆ ಆಗಿದೆ. ಉಜ್ವಲ, ಉಜಾಲಾ, ಸ್ವಚ್ಛತಾ ಅಭಿಯಾನ, ಶೌಚಾಲಯ ನಿರ್ಮಾಣ ಕಾರ್ಯವು ಜನರ ಸಶಕ್ತೀಕರಣಕ್ಕೆ ಕಾರಣವಾಗಿದೆ ಎಂದು ವಿವರಿಸಿದರು.

ಹೆಚ್ಚಿದ ವಿದೇಶಿ ಹೂಡಿಕೆ: ಕರ್ನಾಟಕದಲ್ಲಿ ಗರಿಷ್ಠ ವಿದೇಶಿ ನೇರ ಹೂಡಿಕೆ ಬರುತ್ತಿದೆ. ಬಾಹ್ಯಾಕಾಶ ಕ್ಷೇತ್ರದಲ್ಲಿ ಕರ್ನಾಟಕದ ಕೊಡುಗೆ ಶೇ 25ರಷ್ಟಿದೆ. ರಕ್ಷಣಾ ಕ್ಷೇತ್ರದಲ್ಲಿ ಶೇ 75ರಷ್ಟು ಕೊಡುಗೆ ಈ ರಾಜ್ಯದ್ದು. ರಾಜ್ಯದ ಬಿಜೆಪಿ ಸರಕಾರವು ಎಸ್‍ಸಿ, ಎಸ್‍ಟಿ ಮೀಸಲಾತಿ ಹೆಚ್ಚಿಸಿದೆ. ರೈತ ವಿದ್ಯಾನಿಧಿ ಮೂಲಕ ಲಕ್ಷಾಂತರ ಮಕ್ಕಳಿಗೆ ಪ್ರಯೋಜನವಾಗಿದೆ ಎಂದು ವಿವರಿಸಿದರು.

ಕರ್ನಾಟಕ ದೇಶದ ಎರಡನೇ ದೊಡ್ಡ ಶಕ್ತಿ: ವಂದೇ ಭಾರತ್ ಎಕ್ಸ್‍ಪ್ರೆಸ್ ಮೂಲಕ ಸಂಪರ್ಕ ಕ್ರಾಂತಿ ಆಗುತ್ತಿದೆ. ಕೆಂಪೇಗೌಡ ವಿಮಾನನಿಲ್ದಾಣ ಆಧುನೀಕರಣ ಕಾರ್ಯ ನಡೆದಿದೆ. ನಾಡಪ್ರಭು ಕೆಂಪೇಗೌಡರ ಪ್ರತಿಮೆ ಸ್ಥಾಪಿಸಲಾಗಿದೆ. ಕರ್ನಾಟಕದ ಅಭಿವೃದ್ಧಿಗೆ ಹೆಚ್ಚುವರಿ ಹಣವನ್ನು ಕೇಂದ್ರ ಸರಕಾರ ನೀಡಿದೆ. ಈ ಮೂಲಕ ಕರ್ನಾಟಕವು ದೇಶದ ಎರಡನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಲಿದೆ ಎಂದರು.

ಬ್ರಿಟನ್ ದೇಶವು 2 ಶತಮಾನಗಳ ಕಾಲ ನಮ್ಮನ್ನು ಆಳಿತ್ತು. ಆ ದೇಶವನ್ನು ಭಾರತವು ಹಿಂದಿಕ್ಕಿ ದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದೆ ಎಂದು ವಿವರಿಸಿದರು. ಫ್ರಾನ್ಸ್, ಅಮೆರಿಕಗಳು ನಮ್ಮಿಂದ ವಿಮಾನಗಳನ್ನು ಆಮದು ಮಾಡಿಕೊಳ್ಳುವ ಹಂತಕ್ಕೆ ತಲುಪಿದ್ದೇವೆ. ಇಲೆಕ್ಟ್ರಾನಿಕ್ ವಸ್ತುಗಳ ಉತ್ಪಾದನೆ ಮತ್ತು ರಫ್ತಿನಲ್ಲಿ, ಮೊಬೈಲ್ ಉತ್ಪಾದನೆಯಲ್ಲಿ ನಾವು ಗಮನಾರ್ಹ ಸಾಧನೆ ಮಾಡಿದ್ದೇವೆ. 2014 ಮತ್ತು ಅದಕ್ಕಿಂತ ಹಿಂದೆ 92 ಶೇಕಡಾ ಮೊಬೈಲ್‍ಗಳನ್ನು ವಿದೇಶದಿಂದ ತರಲಾಗುತ್ತಿತ್ತು. ಈಗ ಶೇ 97ರಷ್ಟು ಮೊಬೈಲ್‍ಗಳನ್ನು ಆಂತರಿಕವಾಗಿ ಉತ್ಪಾದಿಸಲಾಗುತ್ತಿದೆ ಎಂದು ತಿಳಿಸಿದರು. ಔಷಧಿ, ಉಕ್ಕು ಉತ್ಪಾದನೆಯಲ್ಲೂ ನಾವು ಮಹತ್ವದ ಸಾಧನೆ ಮಾಡಿದ್ದೇವೆ ಎಂದರು.

ಆಟೋಮೊಬೈಲ್‌ ಕ್ಷೇತ್ರದಲ್ಲಿ ಕ್ರಾಂತಿ: ಕಾರು ಉತ್ಪಾದನೆಯಲ್ಲೂ ನಾವು ಹಿಂದೆ ಇದ್ದೆವು. ನಾವು ಆಟೋಮೊಬೈಲ್ ಕ್ಷೇತ್ರದಲ್ಲೂ ಜಪಾನನ್ನು ಹಿಂದಿಕ್ಕಿ ಮೂರನೇ ಅತಿ ದೊಡ್ಡ ಉತ್ಪಾದನಾ ರಾಷ್ಟ್ರವಾಗಿದ್ದೇವೆ. ಹೆಲಿಕಾಪ್ಟರ್ ಕ್ಷೇತ್ರದಲ್ಲೂ ಕ್ರಾಂತಿಕಾರಕ ಹೆಜ್ಜೆಯನ್ನು ಎಚ್‍ಎಎಲ್ ಮಾಡಲಿದೆ ಎಂದು ನುಡಿದರು.

ಉಕ್ರೇನ್- ರಷ್ಯಾ ಯುದ್ಧದ ಸಂದರ್ಭದಲ್ಲಿ ಉಕ್ರೇನ್‍ನಿಂದ ಸಾವಿರಾರು ವಿದ್ಯಾರ್ಥಿಗಳನ್ನು ಕರೆತರಲು ಭಾರತವು ಸಮರ್ಥ ಹೆಜ್ಜೆ ಇಟ್ಟಿತು. ಎರಡೂ ದೇಶಗಳ ಮುಖ್ಯಸ್ಥರ ಜೊತೆ ಮೋದಿಜಿ ಮಾತನಾಡಿದರಲ್ಲದೆ ಯುದ್ಧ ಸ್ಥಗಿತದ ಮೂಲಕ ಸುರಕ್ಷಿತವಾಗಿ ಮಕ್ಕಳನ್ನು ಕರೆತರಲು ಕಾರಣರಾದರು ಎಂದು ತಿಳಿಸಿದರು.

ಲಸಿಕೆ ಅಭಿಯಾನ ಜವಾಬ್ದಾರಿಯುತ ಕರ್ತವ್ಯ: ನಮ್ಮ ಪಕ್ಷ ಜನಪರ, ಜವಾಬ್ದಾರಿಯುತ ಎಂದು ಹೆಮ್ಮೆಯಿಂದ ಹೇಳಬಹುದು. ಕೋವಿಡ್ ವೇಳೆ ಅಮೆರಿಕದಲ್ಲಿ ಶೇ 76, ಯುರೋಪ್‍ನಲ್ಲಿ ಶೇ 67 ರಷ್ಟು ಜನರಿಗೆ ಲಸಿಕೆ ಹಾಕಲಾಗಿದೆ. ಚೀನಾದಲ್ಲಿ ಎಷ್ಟು ಶೇಕಡಾ ಲಸಿಕೆ ಕೊಡಲಾಗಿದೆ ಎಂದು ಗೊತ್ತಿಲ್ಲ. ನಾವು ಮೋದಿಜಿ ಅವರ ನೇತೃತ್ವದಲ್ಲಿ ಎಲ್ಲ ಜನರಿಗೆ ಶೇ 100ರಷ್ಟು ಡಬಲ್ ಡೋಸ್, ಬೂಸ್ಟರ್ ಉಚಿತ ಲಸಿಕೆ ಕೊಟ್ಟಿದ್ದೇವೆ ಎಂದು ತಿಳಿಸಿದರು. ಇದು ಜನಪರ ನಿಲುವು ಎಂದು ವಿವರಿಸಿದರು.

ಬಿಜೆಪಿ ಕುಟುಂಬ ಪಕ್ಷವಲ್ಲ, ಕಾರ್ಯಕರ್ತರ ಪಕ್ಷ: ಎಲ್ಲ ಪಕ್ಷಗಳು ಇಂದು ಕೌಟುಂಬಿಕ ಪಕ್ಷವಾಗಿವೆ. ಕಾಂಗ್ರೆಸ್ ಪಕ್ಷವೂ ಕುಟುಂಬದಿಂದ ಹೊರತಾಗಿಲ್ಲ. ಸಮಾಜವಾದಿ ಪಕ್ಷ, ರಾಷ್ಟ್ರೀಯ ಜನತಾದಳ, ಶಿವಸೇನಾ, ವೈಎಸ್‍ಆರ್‌ಪಿ, ಟಿಆರೆಸ್, ಡಿಎಂಕೆ ಹೀಗೆ ಎಲ್ಲವೂ ಪರಿವಾರವಾದದ ಪಕ್ಷಗಳಾಗಿವೆ. ಆದರೆ, ಬಿಜೆಪಿ ಸಮರ್ಥ ವಿಚಾರಧಾರೆ ಹೊಂದಿದೆ, ಕೌಟುಂಬಿಕ ಪಕ್ಷವಾಗಿಲ್ಲ ಎಂದು ವಿವರಿಸಿದರು. ಬಿಜೆಪಿ ಕಾರ್ಯಕರ್ತರ ಪಕ್ಷ; ನಮ್ಮ ಪಕ್ಷವೇ ಒಂದು ಕುಟುಂಬದಂತಿದೆ ಎಂದರು.

ಬಿಜೆಪಿ ಕಾರ್ಯಕರ್ತರಾಗುವ ಸೌಭಾಗ್ಯ ಸಿಕ್ಕಿದೆ ಎಂಬ ಆಶಾಭಾವ ನಮ್ಮ ಕಾರ್ಯಕರ್ತರಲ್ಲಿದೆ. ವೈಚಾರಿಕ ದೃಷ್ಟಿಕೋನ, ಕೇಡರ್ ಇರುವ ಪಕ್ಷ ಬಿಜೆಪಿ. ಶ್ಯಾಮಪ್ರಸಾದ ಮುಖರ್ಜಿ ಅವರ ಚಿಂತನೆಯನ್ನು ಮೋದಿಜಿ ಅವರು 370ನೇ ವಿಧಿ ರದ್ದು ಮಾಡುವ ಮೂಲಕ ಸಾಕಾರಗೊಳಿಸಿದ್ದಾರೆ ಎಂದು ನುಡಿದರು.

ಬಿಜೆಪಿಯಲ್ಲಿ ಉಡುಪಿಗೆ ಮಹತ್ವದ ಸ್ಥಾನ: ಮಾಧ್ವರು ಸ್ಥಾಪಿಸಿದ ಪವಿತ್ರ ಸ್ಥಾನ ಶ್ರೀಕೃಷ್ಣನ ಮಠಕ್ಕೆ ಇಂದು ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದೇನೆ. ಸ್ವಾಮೀಜಿಗಳಿಂದ ಆಶೀರ್ವಾದ ಲಭಿಸಿದೆ. ಉಡುಪಿ ಕೃಷ್ಣಮಠದ ಆಶೀರ್ವಾದವು ಪಕ್ಷಕ್ಕೆ ಹೆಚ್ಚಿನ ಬಲ ನೀಡಲಿದೆ ಎಂದು ಆಶಿಸಿದರು. ಬಿಜೆಪಿಯ ಚರಿತ್ರೆಯಲ್ಲಿ ಉಡುಪಿಗೆ ವಿಶೇಷ ಸ್ಥಾನ ಇದೆ. ಕರ್ನಾಟಕ, ಕೇಂದ್ರದಲ್ಲಿ ಹಲವು ಬಾರಿ ನಾವು ಆಡಳಿತ ಮಾಡಿದ್ದೇವೆ. ಉಡುಪಿ ಸ್ಥಳೀಯ ಸಂಸ್ಥೆಯಲ್ಲಿ ಹಲವು ದಶಕಗಳ ಹಿಂದೆಯೇ ಪಕ್ಷವು ಆಡಳಿತದಲ್ಲಿತ್ತು. ಅದು ದಕ್ಷಿಣ ಭಾರತದ ಬಿಜೆಪಿ ಆಡಳಿತದ ಹೆಬ್ಬಾಗಿಲು ಎಂದು ನೆನಪಿಸಿದರು.

ಆಚಾರ್ಯರ ನೆನಪು: ಉಡುಪಿಯ ಡಾ.ವಿ.ಎಸ್.ಆಚಾರ್ಯ ಮತ್ತು ನನ್ನ ನಡುವೆ 25ರಿಂದ 30 ವರ್ಷಗಳ ಅಂತರವಿದೆ. ವಯಸ್ಸಿನ ಅಂತರವಿದ್ದರೂ ಅವರು ಮತ್ತು ನನ್ನ ನಡುವೆ ಉತ್ತಮ ಮಿತ್ರತ್ವ ಇತ್ತು ಎಂದು ವಿವರಿಸಿದರು. ನಾನು ಯುವ ಘಟಕದ ಅಧ್ಯಕ್ಷನಾಗಿದ್ದಾಗ ಪ್ರಾಮಾಣಿಕ- ಸರಳ ವ್ಯಕ್ತಿತ್ವದ ಆಚಾರ್ಯರ ಮಾರ್ಗದರ್ಶನ ಪಡೆದಿದ್ದೆ ಎಂದು ನುಡಿದರು.

ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಅವರು ಮಾತನಾಡಿ, ಬೂತ್ ಗೆಲುವಿನ ಮೂಲಕ ರಾಜ್ಯದ ಗೆಲುವಿಗೆ ಕಾರ್ಯಕರ್ತರು ಸಂಕಲ್ಪ ಮಾಡಬೇಕೆಂದು ಮನವಿ ಮಾಡಿದರು. ಈ ಚುನಾವಣೆಯಲ್ಲಿ ಬಿಜೆಪಿ 150 ಸ್ಥಾನಗಳನ್ನು ಗೆದ್ದೇ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಮುಖ್ಯಮಂತ್ರಿ ಸ್ಥಾನಕ್ಕಾಗಿ ಡ್ರೆಸ್ ಹೊಲಿಸಿ ಕಾಯುತ್ತಿರುವ ವಿರೋಧ ಪಕ್ಷದವರು ಮತ್ತೊಮ್ಮೆ ನಿರುದ್ಯೋಗಿಗಳಾಗಲಿದ್ದಾರೆ ಎಂದು ನುಡಿದರು. ಯಡಿಯೂರಪ್ಪ ಅವರ ಮಾರ್ಗದರ್ಶನ ಮತ್ತು ಬೊಮ್ಮಾಯಿಯವರ ನೇತೃತ್ವದಲ್ಲಿ ರಾಜ್ಯದಲ್ಲಿ ಮತ್ತೆ ಬಿಜೆಪಿ ಸರಕಾರ ಬರಲಿದೆ. ಅದಕ್ಕಾಗಿ ಮತ್ತೆ ಅಹರ್ನಿಶಿ ದುಡಿಯೋಣ ಎಂದು ಕಾರ್ಯಕರ್ತರನ್ನು ಪ್ರೇರೇಪಿಸಿದರು.

ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಕೇಂದ್ರ ಸಚಿವೆ ಕು. ಶೋಭಾ ಕರಂದ್ಲಾಜೆ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಸಚಿವರಾದ ಸುನಿಲ್‍ಕುಮಾರ್, ಅಂಗರ, ಕೋಟ ಶ್ರೀನಿವಾಸ ಪೂಜಾರಿ, ಶಾಸಕ ರಘುಪತಿ ಭಟ್, ಜಿಲ್ಲಾ ಅಧ್ಯಕ್ಷ ಕುಯಿಲಾಡಿ ಶ್ರೀನಿವಾಸ ನಾಯಕ್, ಪಕ್ಷದ ಪ್ರಮುಖರು ಈ ಸಂದರ್ಭದಲ್ಲಿ ಇದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು