News Karnataka Kannada
Friday, May 10 2024
ಮಂಗಳೂರು

“ವಿನೂತನ ಶೈಲಿಯ ನಿರೂಪಣೆಯಿಂದ ಮಾಧ್ಯಮದ ಯಶಸ್ಸು ಸಾಧ್ಯ”

"The success of the media is possible through innovative style of narration"
Photo Credit : News Kannada

ಉಜಿರೆ, ಫೆ.4: ಸಾಂಪ್ರದಾಯಿಕ ಮಾಧ್ಯಮವನ್ನು ಉಳಿಸುವ ನಿಟ್ಟಿನಲ್ಲಿ ಪತ್ರಕರ್ತರು ಕಾರ್ಯನಿರತರಾಗಬೇಕು. ವಿಭಿನ್ನ ಶೈಲಿಯ ಸುದ್ದಿಗಳನ್ನು ಬರೆದಾಗ ಮಾತ್ರ ಮಾಧ್ಯಮರಂಗದಲ್ಲಿ ಯಶಸ್ಸು ಸಾಧ್ಯ ಎಂದು ಸನ್ಮಾರ್ಗ ಪತ್ರಿಕೆಯ ಪತ್ರಕರ್ತ ಎ.ಕೆ. ಕುಕ್ಕಿಲ ಬಂಟ್ವಾಳ ಹೇಳಿದರು.

ಇಲ್ಲಿನ ಶ್ರೀ ಕೃಷ್ಣಾನುಗ್ರಹ ಸಭಾಭವನದ ಸಾರಾ ಅಬೂಬಕ್ಕರ್ ವೇದಿಕೆಯಲ್ಲಿ ನಡೆಯುತ್ತಿರುವ ದ.ಕ. ಜಿಲ್ಲಾ 25ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಎರಡನೆಯ ದಿನವಾದ ಶನಿವಾರ ‘ಮಾಧ್ಯಮ-ಸವಾಲುಗಳು’ ಗೋಷ್ಠಿಯಲ್ಲಿ ಅವರು

ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.

ಪ್ರಸ್ತುತ ಸ್ಪರ್ಧಾತ್ಮಕ ಜಗತ್ತಿನಲ್ಲಿ ಎಲ್ಲಾ ವೃತ್ತಿಗಳಂತೆ ಮಾಧ್ಯಮ ವೃತ್ತಿಯೂ ಅನೇಕ ಸವಾಲುಗಳನ್ನು ಎದುರಿಸುತ್ತಿದೆ. ಬದಲಾದ ಕಾಲಘಟ್ಟದಲ್ಲಿ ಸಾಂಪ್ರದಾಯಿಕ ಮಾಧ್ಯಮಗಳಿಗಿಂತ ಸಾಮಾಜಿಕ ಜಾಲತಾಣಗಳು ಸುದ್ದಿಗಳ ಕೇಂದ್ರವಾಗುತ್ತಿವೆ. ಹೀಗಾಗಿ ವಿನೂತನ ವಿಷಯ ವಿಸ್ತೃತಿಗಳೊಂದಿಗೆ ಮಾಧ್ಯಮಗಳು ಕಾರ್ಯಪ್ರವೃತ್ತರಾಗಬೇಕು ಎಂದು ಅವರು ಅಭಿಪ್ರಾಯಪಟ್ಟರು.

ಡಿಜಿಟಲ್ ಯುಗದಲ್ಲಿ ಗುಣಾತ್ಮಕ ಸುದ್ದಿಗಳಿಗಿಂತ ಅತ್ಯಂತ ವೇಗವಾಗಿ ಜನರಿಗೆ ತಲುಪುವ ಸುದ್ದಿಗಳಿಗೆ ಪ್ರಾಮುಖ್ಯ ಹೆಚ್ಚು ಎನ್ನುವುದು ಕೆಲ ಮಾಧ್ಯಮದವರ ಪರಿಕಲ್ಪನೆ. ಆದರೆ ಇದರಿಂದಾಚೆಗಿನ ಮೌಲಿಕ ಅಂಶಗಳೇ ನಿರ್ಣಾಯಕವಾಗುತ್ತವೆ ಎಂದ ಅವರು, “ಇಂದಿನ ಕಾಲದಲ್ಲಿ ಮಾಧ್ಯಮದ ಸವಾಲೆಂದರೆ ವಿಶ್ವಾಸಾರ್ಹತೆ ಮತ್ತು ಅಸ್ತಿತ್ವದ ಸಮಸ್ಯೆ. ಹೀಗಾಗಿ ಪತ್ರಕರ್ತರು ಹತ್ತರಲ್ಲಿ ಹನ್ನೊಂದಾಗದೇ ವಿಶೇಷ ಬಗೆಯ ಸುದ್ದಿಗಳೊಂದಿಗೆ ಹೊರಹೊಮ್ಮಬೇಕು. ಹೀಗಾದಾಗ ಮಾತ್ರ ಜನರು ಸುದ್ದಿಗಳಿಗೆ ಪರ್ಯಾಯ ಹುಡುಕದೇ ಮಾಧ್ಯಮವನ್ನು ಅವಲಂಬಿಸುತ್ತಾರೆ” ಎಂದು ಅವರು ಸಲಹೆ ನೀಡಿದರು.

‘ಪತ್ರಿಕಾರಂಗ ಎದುರಿಸುತ್ತಿರುವ ಸವಾಲು’

ಪತ್ರಕರ್ತ ಸಿನಾನ್ ಇಂದಬೆಟ್ಟು ಅವರು ಪತ್ರಿಕಾರಂಗ ಎದುರಿಸುತ್ತಿರುವ ಸವಾಲುಗಳ ಬಗ್ಗೆ ಮಾತನಾಡಿದರು. ದೃಶ್ಯಮಾಧ್ಯಮಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಪತ್ರಿಕಾರಂಗವೂ ಎದುರಿಸುತ್ತಿದೆ. ತಂತ್ರಜ್ಞಾನದ ಬೆಳವಣಿಗೆ, ಸಾಮಾಜಿಕ ಜಾಲತಾಣಗಳು, ಡಿಜಿಟಲ್ ಪತ್ರಿಕೆಗಳು ಮುದ್ರಣ ಮಾಧ್ಯಮಕ್ಕೆ ಸಮಸ್ಯೆಯಾಗಿ ಕಾಡುತ್ತಿವೆ ಎಂದರು.

ಕನ್ನಡ ಪತ್ರಿಕೋದ್ಯಮದಲ್ಲಿ ಹೊಸ ತಂತ್ರಜ್ಞಾನದ ಅಳವಡಿಕೆ ಹೆಚ್ಚು ಸಾಧ್ಯವಾಗದಿರುವ ಕಾರಣ ಪತ್ರಿಕೆಗಳು ಹಿನ್ನಡೆ ಅನುಭವಿಸುತ್ತಿವೆ. ಜಾಹಿರಾತು ಹಾಗೂ ಓದುಗರ ಹೊರತಾಗಿ ಪತ್ರಿಕೆಗಳಿಗೆ ಯಾವುದೇ ಹಣಕಾಸಿನ ಸೌಲಭ್ಯಗಳಿಲ್ಲ. ಪತ್ರಿಕೋದ್ಯಮದ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯದೆ ಇರುವವರು ಪತ್ರಿಕಾರಂಗಕ್ಕೆ ಕಾಲಿಡುತ್ತಿರುವುದು ದೊಡ್ಡ ಮಟ್ಟದ ಹಿನ್ನಡೆಯಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

“ಇತ್ತೀಚಿನ ಬೆಳವಣಿಗೆಯಲ್ಲಿ ಪತ್ರಕರ್ತರಿಗೆ ಕನ್ನಡದ ಶಬ್ದಗಳನ್ನು ಸರಿಯಾಗಿ ಬರೆಯಲು ಬರುವುದಿಲ್ಲ. ಹೆಚ್ಚಾಗಿ ಚಾಟ್ ಜಿ.ಬಿ. ಬಳಸುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಯುವ ಪತ್ರಕರ್ತರು ಪೂರ್ವಾಗ್ರಹಪೀಡಿತರಾಗಿ ಬರುತ್ತಿರುವುದು ಪತ್ರಿಕಾರಂಗಕ್ಕೆ ದೊಡ್ಡ ಸವಾಲಾಗಿದೆ ಜಾತಿ, ಧರ್ಮ, ಪಕ್ಷ, ರಾಜ್ಯ, ದೇಶ ಎಲ್ಲೆಗಳನ್ನು ಮೀರಿ ಕಾರ್ಯನಿರ್ವಹಿಸುವ ಕೌಶಲ, ಅನುವಾದ ಪರಿಣತಿ, ಭಾಷೆಯ ಮೇಲಿನ ಹಿಡಿತ ಹಾಗೂ ಶಬ್ದ ಭಂಡಾರ ಹೊಂದಿರುವ ಪತ್ರಕರ್ತರು ಸಿಗುವುದು ಅಪರೂಪ ಎಂಬಂತಾಗಿದೆ” ಎಂದರು.

‘ಸಾಮಾಜಿಕ ಜಾಲತಾಣ’

ಪುತ್ತೂರಿನ ಅಂಬಿಕಾ ಕಾಲೇಜಿನ ಪ್ರಾಂಶುಪಾಲ ರಾಕೇಶ್ ಕುಮಾರ್ ಕಮ್ಮಾಜೆ ಅವರು ಸಾಮಾಜಿಕ ಜಾಲತಾಣದ ಬಗ್ಗೆ ಮಾತನಾಡಿದರು. “ಮಾಹಿತಿ ಜ್ಞಾನಯುಗದಲ್ಲಿ ಅತ್ಯಂತ ವೇಗವಾಗಿ ಮಾಹಿತಿಯನ್ನು ಕೊಡಬೇಕು ಎನ್ನುವ ಭರದಲ್ಲಿ ಸಮಗ್ರವಾಗಿ ಮಾಹಿತಿಯನ್ನು ಕೊಡುವುದನ್ನೇ ನಿಲ್ಲಿಸಿದ್ದೇವೆ” ಎಂದು ಅವರು ಅಭಿಪ್ರಾಯಪಟ್ಟರು.

ದೃಶ್ಯ ಮಾಧ್ಯಮದಲ್ಲಿ ಹಾಗೂ ಪತ್ರಿಕೆಗಳಲ್ಲಿ ಒಂದು ವಿಷಯ ಪ್ರಕಟಗೊಳ್ಳಬೇಕಾದರೆ ಹಲವು ಬಾರಿ ಪರಿಶೀಲನೆಗೊಳಗಾಗುತ್ತದೆ. ಆದರೆ, ಸಾಮಾಜಿಕ ಜಾಲತಾಣದಲ್ಲಿ ಅಂತಹ ಯಾವುದೇ ನಿರ್ಬಂಧ ಇಲ್ಲದೆ ಇರುವ ಕಾರಣದಿಂದಾಗಿ ಹಲವು ವಿಷಯಗಳು ಪರೀಕ್ಷೆಗೆ ಒಳಗೊಳ್ಳದೆ ಜನರನ್ನು ತಲುಪುತ್ತಿದೆ ಎಂದರು.

ಸಾಮಾಜಿಕ ಜಾಲತಾಣಗಳಿಗೆ ಎದುರಾಗುವ ಸಮಸ್ಯೆಗಳಿಗಿಂತ ಸಾಮಾಜಿಕ ಜಾಲತಾಣದಿಂದ ಎದುರಾಗುತ್ತಿರುವ ಸವಾಲುಗಳೇ ಹೆಚ್ಚು. ಈ ಮಾಧ್ಯಮಗಳಲ್ಲಿ ಕೃತಿ ಚೌರ್ಯ ಹಾಗೂ ಯಾರೋ ಬರೆದ ಸಾಲುಗಳನ್ನು ಮತ್ತೊಬ್ಬರು ಬಳಸಿಕೊಳ್ಳುವ ಸಾಧ್ಯತೆಯೇ ಹೆಚ್ಚು ಎಂದರು. ಸಾಮಾಜಿಕ ಜಾಲತಾಣಗಳು ಬಂದ ನಂತರ ನಾಗರಿಕ ಪತ್ರಿಕೋದ್ಯಮ ಪ್ರಾರಂಭವಾಗಿದೆ. ಇದರಿಂದ ಸುಳ್ಳು ಮಾಹಿತಿಗಳ ಪ್ರಚಾರ ಹೆಚ್ಚಾಗುತ್ತಿದ್ದು, ಇದರ ಮೇಲಿನ ನಿಯಂತ್ರಣ ಪ್ರತಿಯೊಬ್ಬರ ಕೈಯಲ್ಲಿಯೇ ಇದೆ ಎಂದರು.

“ಅಪಘಾತ ಅಥವಾ ಇನ್ನಾವುದೇ ಸಂದರ್ಭದಲ್ಲಿ ನಮ್ಮಿಂದ ಏನೂ ಮಾಡಲು ಸಾಧ್ಯವಾಗದೇ ಹೋದರೆ, ವಿಡಿಯೋ ಮಾಡುವ ಬದಲು ಸುಮ್ಮನಿರುವುದೇ ಉತ್ತಮ. ಎಲ್ಲಕ್ಕಿಂತ ಮೊದಲು ಮಾನವನಾಗಬೇಕು” ಎಂದು ಅವರು ಕರೆ ನೀಡಿದರು.

“ಪತ್ರಿಕೋದ್ಯಮವು ಮರಳಿ ಪತ್ರಿಕಾರಂಗವಾಗಬೇಕು”

ಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಜೈಕನ್ನಡಮ್ಮ ವಾರಪತ್ರಿಕೆಯ ಸಂಪಾದಕ ದೇವಿಪ್ರಸಾದ್ ಅವರು, “ಪತ್ರಿಕಾ ರಂಗವು ಪತ್ರಿಕೋದ್ಯಮವಾಗಿದೆ. ನಾವು ಬದುಕಬೇಕಾದರೆ ಪತ್ರಿಕೋದ್ಯಮವು ಮರಳಿ ಪತ್ರಿಕಾರಂಗವಾಗಬೇಕು” ಎಂದು ಪ್ರತಿಪಾದಿಸಿದರು.

ಮಾಧ್ಯಮವು ಸಮಾಜದ ಮುಂದಿನ ಸವಾಲಲ್ಲ. ಮಾಧ್ಯಮದಿಂದಲೆ ಸಮಾಜಕ್ಕೊಂದು ಸವಾಲು. ಓದುಗರು ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಬಂದ ಕೂಡಲೇ ಅದನ್ನು ವಿಮರ್ಷಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಇಲ್ಲದಿದ್ದರೆ ಈ ಮಾಧ್ಯಮಗಳು ಮುಂದಿನ ಸಮಾಜಕ್ಕೆ ದಾರಿ ತೋರಿಸುವುದರ ಬದಲು ಓದುಗರಿಗೆ ಬೇಕಾದ ಹಾಗೆ ಮಾಧ್ಯಮಗಳು ಸುದ್ದಿ ಪ್ರಸರಿಸಿದರೆ ಸಮಾಜದ ಅಂಕುಡೊಂಕುಗಳನ್ನು ತಿದ್ದುವವರು ಯಾರು ಎಂಬ ಪ್ರಶ್ನೆಗೆ ಉತ್ತರವಿಲ್ಲದಂತಾಗುತ್ತದೆ. ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾದ ಪತ್ರಿಕಾ ರಂಗವು ಯಾವಾಗ ಉದ್ಯಮವಾಯಿತೋ ಅದು ಬೇರೆಯವರ ಕೈಗೆ ಸಿಕ್ಕಿ ನಾಶವಾಗುತ್ತಿದೆ. ಪತ್ರಿಕಾ ರಂಗವು ಮತ್ತೆ ತನ್ನತನವನ್ನು ಮರಳಿ ಪಡೆದುಕೊಳ್ಳಬೇಕು. ಆಗ ಪತ್ರಿಕೋದ್ಯಮವು ಪ್ರಜಾಪ್ರಭುತ್ವದ ನಾಲ್ಕನೇ ಸ್ಥಂಭವಾಗುತ್ತದೆ ಎಂದು ಸಲಹೆ ನೀಡಿದರು.

ಸಾಮಾಜಿಕ ಜಾಲತಾಣ ಯುವಕರನ್ನು ಹೆಚ್ಚು ಆಕರ್ಷಿಸುತ್ತದೆ. ಸತ್ಯಾಸತ್ಯತೆಯನ್ನು ವಿಮರ್ಶೆ ಮಾಡದೆ ಕೇವಲ ಮನಸ್ಸಿಗೆ ಮುದ ನೀಡುವಂತಹ ವರದಿಗಳು ಬಂದ ಕೂಡಲೇ ನಾವು ಅದರ ದಾಸರಾಗಿಬಿಡುತ್ತೇವೆ. ಸತ್ಯಾನ್ವೇಷನೆಯಲ್ಲಿ ನಾವು ಹಿಂದುಳಿದಿದ್ದೇವೆ.

ಮೊಬೈಲ್ ಹಾವಳಿ ಎಲ್ಲ ಕ್ಷೇತ್ರಗಳಿಗಿಂತ ಮುದ್ರಣ ಮಾಧ್ಯಮದ ಮೇಲೆ ಹೆಚ್ಚು ಪ್ರಭಾವ ಬೀರಿದೆ. ಯಾವುದೇ ಸುದ್ದಿಯಾದರೂ ಸಾಮಾಜಿಕ ಜಾಲತಾಣದಲ್ಲಿ ತಕ್ಷಣ ಪ್ರಸಾರವಾಗುತ್ತದೆ. ಮೊದಲಾದರೆ ರೇಡಿಯೋದಲ್ಲಿ ಕ್ರಿಕೆಟಿನ ಕುರಿತಾಗಿ ಸುದ್ದಿ ಕೂಡಲೇ ಪ್ರಸಾರವಾಗುತ್ತಿತ್ತು. ಆದರೆ ಓದುಗರಿಗೆ ಮರುದಿವಸ ಪತ್ರಿಕೆಯಲ್ಲಿ ಹೇಗೆ ವಿಶ್ಲೇಷಿಸಿದ್ದಾರೆ ಅನ್ನುವುದರ ಬಗ್ಗೆ ಕುತೂಹಲ ಇರುತ್ತಿತ್ತು. ಆದರೆ ಈಗ ಹಾಗಲ್ಲ, ಘಟನೆಯ ಸಂಕ್ಷಿಪ್ತ ವಿವರ ತಿಳಿದರೆ ಸಾಕು. ಸಾಹಿತ್ಯಿಕವಾಗಿ ತಿಳಿದುಕೊಳ್ಳಬೇಕು ಎನ್ನುವ ಮನೋ ಇಚ್ಛೆ ಇಂದಿನ ದಿನಗಳಲ್ಲಿ ಕಡಿಮೆಯಾಗಿದೆ. ಆದ್ದರಿಂದ ಪತ್ರಿಕೆ ಓದುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಆಗ ಪತ್ರಿಕೆ ನಡೆಸುವಾತ ಪತ್ರಿಕೆ ಉಳಿಸುವ ಅನಿವಾರ್ಯತೆಯಿಂದ ಜಾಹೀರಾತಿನ ಮೊರೆ ಹೋಗುತ್ತಾನೆ. ಇಂದಿನ ಕಾಲದ ಮಾಧ್ಯಮಗಳು ಉಸಿರಾಡುವುದೇ ಜಾಹಿರಾತಿನಿಂದ ಎಂದರು.

ದ.ಕ. ಇಂಡಿಯನ್ ರೆಡ್ ಕ್ರಾಸ್ ಸಂಸ್ಥೆಯ ಅಧ್ಯಕ್ಷ ಸಿ.ಎ. ಶಾಂತರಾಮ ಶೆಟ್ಟಿ ಉಪಸ್ಥಿತರಿದ್ದರು. ಡಾ. ಭಾಸ್ಕರ್ ಹೆಗಡೆ ಸ್ವಾಗತಿಸಿ, ಶ್ರೀನಿವಾಸ್‌ ತಂತ್ರಿ ವಂದಿಸಿ, ಮನೋಹರ ಬಳಂಜ ಕಾರ್ಯಕ್ರಮ ನಿರೂಪಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು