News Karnataka Kannada
Sunday, April 28 2024
ಮಂಗಳೂರು

ಕಾರ್ಯಕರ್ತರ ಪ್ರೀತಿಗೆ ನೆರೆದ ಜನಸ್ತೋಮವೇ ಸಾಕ್ಷಿ: ವೇದವ್ಯಾಸ ಕಾಮತ್‌ ಹೇಳಿಕೆ

MLA Vedavyas Kamath files nomination papers
Photo Credit : By Author

ಮಂಗಳೂರು: ಮಗಳೂರು ನಗರ ದಕ್ಷಿಣದಲ್ಲಿ ನನ್ನ ಗೆಲುವಿಗಾಗಿ ಪ್ರಾರ್ಥಿಸಿ, ಮಂಗಳೂರಿನ ನೂರಕ್ಕೂ ಮಿಕ್ಕಿ ದೇವಸ್ಥಾನ, ದೈವಸ್ಥಾನ, ಗರಡಿಗಳಲ್ಲಿ ಪೂಜೆ ಸಲ್ಲಿಸಿ  ಪ್ರಸಾದ ತಂದು ನನಗೆ ನೀಡಿರುವ ಎಲ್ಲಾ ಹಿರಿಯರಿಗೆ, ಮುಖಂಡರಿಗೆ ಧನ್ಯವಾದಗಳು.  ಒಂದು ದಿನದ ಹಿಂದೆಯಷ್ಟೇ ಮಾಹಿತಿ ಸಿಕ್ಕಿದರೂ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ ಕಾರ್ಯಕರ್ತ ಬಂಧುಗಳಿಗೆ ವಂದನೆಗಳು ಎಂದು ಮಂಗಳೂರು ನಗರ ದಕ್ಷಿಣ ಬಿಜೆಪಿ ಅಭ್ಯರ್ಥಿ ಡಿ ವೇದವ್ಯಾಸ ಕಾಮತ್ ಹೇಳಿದರು.

ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಪಾದಯಾತ್ರೆಯ ಮೊದಲು ಮಾಧ್ಯಮದವರೊಂದಿಗೆ ಮಾತನಾಡಿದರು.

ಕಳೆದ ಐದು ವರ್ಷಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರದ 4000 ಕೋಟಿ ರೂ ಮಿಕ್ಕಿ ಅನುದಾನ ತಂದು ನಮ್ಮ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿ ಮಾಡಲಾಗಿದೆ. ಇನ್ನು ಸಾಕಷ್ಟು ಅಭಿವೃದ್ಧಿ ಮಾಡಲಿದ್ದು, 2025-26 ರ ಒಳಗೆ ಮಂಗಳೂರು ಅಭಿವೃದ್ಧಿಯ ನಿಟ್ಟಿನಲ್ಲಿ ಹೊಸ ರೂಪ ಪಡೆದುಕೊಳ್ಳಲಿದೆ. ಕುದ್ರೋಳಿ ದೇವಸ್ಥಾನದಲ್ಲಿ ಪ್ರತಿ ಬಾರಿ ದೇವರಿಗೆ ಪೂಜೆ ಸಲ್ಲಿಸಿ ನಾಮಪತ್ರ ಸಲ್ಲಿಸುವ ಸಂಪ್ರದಾಯ ಪಾಲಿಸಿದ್ದೇನೆ. ಅದೇ ರೀತಿಯಲ್ಲಿ ಕದ್ರಿ ದೇವಸ್ಥಾನ, ಮಂಗಳಾದೇವಿ ದೇವಸ್ಥಾನ, ರಥಬೀದಿ ವೆಂಕಟರಮಣ ದೇವಸ್ಥಾನ, ಬಜಿಲಕೇರಿ ಮುಖ್ಯಪ್ರಾಣ ದೇವಸ್ಥಾನಕ್ಕೂ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದೇನೆ. ಇಂದಿನ ನಾಮಪತ್ರ ಸಲ್ಲಿಸುವಾಗ ಸೇರಿದ ಜನಸ್ತೋಮವನ್ನು ನೋಡುವಾಗ ಇದು ಗೆಲುವಿನ ನಂತರದ ವಿಜಯಯಾತ್ರೆಯಂತೆ ಕಂಗೊಳಿಸುತ್ತಿದೆ. ರಾಜ್ಯಾಧ್ಯಕ್ಷ, ನೆಚ್ಚಿನ ಸಂಸದ ನಳಿನ್ ಕುಮಾರ್ ಕಟೀಲು ಕುದ್ರೋಳಿ ದೇವಸ್ಥಾನಕ್ಕೆ ಆಗಮಿಸಿ ವಿಜಯ ಯಾತ್ರೆಗೆ ಶುಭ ಕೋರಿದ್ದಾರೆ. ನಮ್ಮ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಕಾರ್ಯಕರ್ತರು ಬೃಹತ್ ಸಂಖ್ಯೆಯಲ್ಲಿ ಸೇರಿರುವುದಕ್ಕೆ ಧನ್ಯವಾದ ಅರ್ಪಿಸುತ್ತೇನೆ ಎಂದು ಮಂಗಳೂರು ನಗರ ದಕ್ಷಿಣ ಬಿಜೆಪಿ ಅಭ್ಯರ್ಥಿ ಡಿ ವೇದವ್ಯಾಸ ಕಾಮತ್ ಹೇಳಿದರು.

ಪುಷ್ಪಾಲಂಕೃತ ವಾಹನದಲ್ಲಿ ಮೆರವಣಿಗೆ: ಪುಷ್ಪಗಳಿಂದ ಸಿಂಗರಿಸಿದ ಜೀಪಿನಲ್ಲಿ ಅಭ್ಯರ್ಥಿ ವೇದವ್ಯಾಸ ಕಾಮತ್ ಅವರನ್ನು ಕುದ್ರೋಳಿಯಿಂದ ಲಾಲ್ ಭಾಗ್ ತನಕ ಕರೆದೊಯ್ಯಲಾಯಿತು. ಪಾದಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಂಗಳೂರು ನಗರ ದಕ್ಷಿಣದಲ್ಲಿ ವೇದವ್ಯಾಸ ಕಾಮತ್ ಮಾಡಿರುವ ಅಭಿವೃದ್ಧಿಯನ್ನು ಜನ ಮೆಚ್ಚಿಕೊಂಡಿದ್ದಾರೆ. ಅವರ ಗೆಲುವು ಇಲ್ಲಿಂದಲೇ ಮುಂದುವರೆಯಲಿದೆ. ಕೇಂದ್ರ, ರಾಜ್ಯ ಸರಕಾರ ಭರಪೂರ ಅನುದಾನ ನೀಡಿ ಮಂಗಳೂರು ದಕ್ಷಿಣದ ಅಭಿವೃದ್ಧಿಗೆ ತುಂಬಾ ಸಹಕಾರ ನೀಡಿದೆ. ನಿತ್ಯ ಜನರ ನಡುವೆ ಇರುವ ನಾಯಕನಾಗಿ ವೇದವ್ಯಾಸ ಕಾಮತ್ ಗುರುತಿಸಿಕೊಂಡಿದ್ದಾರೆ. ಜಿಲ್ಲೆಯಲ್ಲಿ ಬಿಜೆಪಿ ಪರ ವಾತಾವರಣ ಇದ್ದು, ಎಲ್ಲಾ ಕ್ಷೇತ್ರದಲ್ಲಿ ನಮ್ಮ ಅಭ್ಯರ್ಥಿಗಳು ಗೆಲ್ಲಲಿದ್ದಾರೆ. ರಾಜ್ಯದಲ್ಲಿ ನಮ್ಮ ಸರಕಾರ ಬಹುಮತ ಗಳಿಸಲಿದೆ ಎಂದು ತಿಳಿಸಿದರು.

ಪಾದಯಾತ್ರೆಯಲ್ಲಿ ಚೆಂಡೆ ವಾದನ, ಕಲ್ಲಡ್ಕ ಬೊಂಬೆಗಳು, ಹಾಡುಗಳು ಕಾರ್ಯಕರ್ತರ ಖುಷಿ ಹೆಚ್ಚಿಸಿದವು. ವೇದವ್ಯಾಸ ಕಾಮತ್ ಅವರನ್ನು ಮೆಚ್ಚಿ ರಚಿಸಲಾದ ವಿಶೇಷ ಹಾಡಿಗೆ ಕಾರ್ಯಕರ್ತರು ಹೆಜ್ಜೆ ಹಾಕುವ ಮೂಲಕ ಸಂಭ್ರಮವನ್ನು ಇಮ್ಮಡಿಗೊಳಿಸಿದರು. ಅಲ್ಲಲ್ಲಿ ಉಚಿತವಾಗಿ ಮಜ್ಜಿಗೆ, ನೀರಿನ ವ್ಯವಸ್ಥೆ ಮಾಡಲಾಗಿತ್ತು.

ವಿಶೇಷತೆ: ಕಳೆದ ವರ್ಷ ನವೆಂಬರ್ 19 ರಂದು ಮಂಗಳೂರು ನಗರದಲ್ಲಿ ಶಂಕಿತ ಭಯೋತ್ಪಾದಕ ಮೊಹಮ್ಮದ್ ಶಾರೀಖ್ ಕುಕ್ಕರ್ ನಲ್ಲಿ ಬಾಂಬ್ ಇಟ್ಟು ಸ್ಫೋಟವಾದ ರಿಕ್ಷಾದ ಚಾಲಕರಾದ ಪುರುಷೋತ್ತಮ್ ಪೂಜಾರಿಯವರು ತಮ್ಮ ಮನೆಯಿಂದ ಕುದ್ರೋಳಿ ದೇವಸ್ಥಾನಕ್ಕೆ ಆಗಮಿಸಿ ಅಭ್ಯರ್ಥಿ ವೇದವ್ಯಾಸ ಕಾಮತ್ ಅವರ ಗೆಲುವಿಗೆ ಶುಭ ಹಾರೈಸಿದರು. ವೇದವ್ಯಾಸ ಕಾಮತ್ ಅವರು ಪುರುಷೋತ್ತಮ ಪೂಜಾರಿಯವರ ಆರ್ಶೀವಾದ ಪಡೆದುಕೊಂಡರು. ಈ ಬಗ್ಗೆ ಮಾತನಾಡಿದ ಸ್ಫೋಟ ಸಂತ್ರಸ್ತ ಪುರುಷೋತ್ತಮ ಪೂಜಾರಿ  ವೇದವ್ಯಾಸ ಕಾಮತ್ ಅಂದಿನ ದುರ್ಘಟನೆಯ ವಿಷಯ ತಿಳಿದ ತಕ್ಷಣ ಆಸ್ಪತ್ರೆಗೆ ಧಾವಿಸಿ ಬಂದು ಯೋಗ್ಯ ಸಹಾಯ ಮಾಡುವುದಾಗಿ ಕುಟುಂಬಕ್ಕೆ ಭರವಸೆ ನೀಡಿದ್ದರು. ಅದರಂತೆ ನಡೆದುಕೊಂಡಿದ್ದಾರೆ. ಪಕ್ಷದಿಂದ, ದಾನಿಗಳಿಂದ, ವೈಯಕ್ತಿಕವಾಗಿಯೂ ಸಾಕಷ್ಟು ಧನಸಹಾಯ ಮಾಡಿದ್ದಾರೆ. ಬಿಜೆಪಿ ಹೊಸ ಆಟೋರಿಕ್ಷಾವತಿಯಿಂದ ನೀಡಲಾಗಿದೆ. ಮುಂದೆಯೂ ವೇದವ್ಯಾಸ ಕಾಮತ್ ಸಹಾಯ ಮಾಡುವುದಾಗಿ ಹೇಳಿದ್ದಾರೆ. ಅವರಿಗೆ ಯಾವತ್ತೂ ನಾನು ಚಿರಋಣಿಯಾಗಿದ್ದೇನೆ ಎಂದು ತಿಳಿಸಿದರು.

ನಾಮಪತ್ರ ಸಲ್ಲಿಸುವಾಗ ಸಂಸದ ನಳಿನ್ ಕುಮಾರ್ ಕಟೀಲ್, ಮಂಗಳೂರು ನಗರ ದಕ್ಷಿಣ ಕ್ಷೇತ್ರದ ಸಂಚಾಲಕ ನಿತಿನ್ ಕುಮಾರ್, ಮೂಡಾ ಅಧ್ಯಕ್ಷ ರವಿಶಂಕರ್ ಮಿಜಾರ್, ಮಂಡಲ ಅಧ್ಯಕ್ಷ ವಿಜಯ ಕುಮಾರ್ ಶೆಟ್ಟಿ, ವಕೀಲ ರವೀಂದ್ರ ಕುಮಾರ್, ಮಾಜಿ ವಿಧಾನಪರಿಷತ್ ಸದಸ್ಯರಾದ ಮೋನಪ್ಪ ಭಂಡಾರಿ, ಪ್ರಮುಖರಾದ ಉಮಾನಾಥ್ ಅಮೀನ್, ಸಿಎ ಗೌತಮ್ ಪೈ ಉಪಸ್ಥಿತರಿದ್ದರು. ಪಾದಯಾತ್ರೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರಾದ ಸುದರ್ಶನ್ ಮೂಡಬಿದಿರೆ, ಚುನಾವಣಾ ಪ್ರಭಾರಿ ಸುಪ್ರಸಾದ್ ಶೆಟ್ಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಧೀರ್ ಶೆಟ್ಟಿ ಕಣ್ಣೂರು, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ರೂಪಾ ಡಿ ಬಂಗೇರ, ಪುರಂದರ ಜಪ್ಪಿನಮೊಗರು, ಮಂಡಲ ಉಪಾಧ್ಯಕ್ಷರಾದ ರಮೇಶ್ ಕಂಡೆಟ್ಟು, ದೀಪಕ್ ಪೈ, ಅಜಯ್ ಕುಲಶೇಖರ್, ರಮೇಶ್ ಹೆಗ್ಡೆ, ಪಾಲಿಕೆಯ ಸದಸ್ಯರು, ಸಮುದಾಯದ ಪ್ರಮುಖರು, ವಿವಿಧ ಕ್ಷೇತ್ರದ ಗಣ್ಯರು, ಉದ್ಯಮಿಗಳು, ಸಂಘ ಸಂಸ್ಥೆಗಳ ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು