ಬೆಳ್ತಂಗಡಿ: ಮುಂಡಾಜೆ, ತೋಟತ್ತಾಡಿ, ನಡ, ಲಾಯಿಲ, ಉಜಿರೆ, ಕಲ್ಮಂಜ ಗ್ರಾಮಗಳು ಸೇರಿದಂತೆ ಬೆಳ್ತಂಗಡಿ ತಾಲೂಕಿನ ಕೆಲವು ಕಡೆ ಬುಧವಾರ ಮುಂಜಾನೆಯಿಂದ ಬೆಳಿಗ್ಗೆ 9ಗಂಟೆವರೆಗೂ ಉತ್ತಮ ಮಳೆ ಸುರಿದಿದೆ.ಮುಂಜಾನೆ 2ಗಂಟೆಯಿಂದ ಗುಡುಗು,ಸಿಡಿಲು ಆರಂಭವಾಗಿ ಮುಂಜಾನೆ 5ರ ವೇಳೆಗೆ ಉತ್ತಮ ಮಳೆಯಾಯಿತು.
ಸುಮಾರು ಅರ್ಧ ತಾಸಿಗಿಂತ ಅಧಿಕಕಾಲ ಸುರಿದ ಮಳೆ ಬಳಿಕ ಬಿಡುವು ನೀಡಿ ಮತ್ತೆ ಬೆಳಿಗ್ಗೆ 7ರಿಂದ 9ಗಂಟೆವರೆಗೆ ಸಾಮಾನ್ಯವಾಗಿ ಮುಂದುವರಿಯಿತು. ಇದು ಈ ಭಾಗದ ವರ್ಷದ ಪ್ರಥಮ ಮಳೆಯಾಗಿದೆ. ಬತ್ತಿ ಹೋಗಿದ್ದ ಕೆಲವು ಸಣ್ಣ ಹಳ್ಳಗಳಲ್ಲಿ ನೀರು ಹರಿಯಿತು. ಬೆಳಿಗ್ಗೆ 9ರ ಬಳಿಕ ಸಂಜೆವರೆಗೂ ಮೋಡ ಕವಿದ ವಾತಾವರಣ ಮತ್ತು ವಿಪರೀತ ಸೆಕೆ ಕಂಡುಬಂದಿತು.
2020,2021,2022 ಬೆಳ್ತಂಗಡಿ ತಾಲೂಕಿನಲ್ಲಿ ಮಾರ್ಚ್ ನಲ್ಲಿ ಆರಂಭವಾದ ಮಳೆ ಬಳಿಕ ನಿರಂತರವಾಗಿ ಸುರಿದಿತ್ತು. ಇದರಿಂದ ತಾಲೂಕಿನಲ್ಲಿ ನೀರಿನ ಸಮಸ್ಯೆ ಉಂಟಾಗಿರಲಿಲ್ಲ.
ಕಾಡ್ಗಿಚ್ಚು ಪ್ರದೇಶದಲ್ಲಿ ಮಳೆ ಇಲ್ಲ
ಶಿಶಿಲ,ಶಿಬಾಜೆ ಚಾರ್ಮಾಡಿ, ಮಲವಂತಿಗೆ ಮೊದಲಾದ ಗ್ರಾಮಗಳಲ್ಲಿ ಇತ್ತೀಚೆಗೆ ಕಾಡ್ಗಿಚ್ಚು ಉಂಟಾಗಿ ಹತೋಟಿಗೆ ಬಂದಿದೆ. ಗುಡ್ಡಗಳಲ್ಲಿ ಇನ್ನೂ ಕೂಡ ಬೆಂಕಿ ಹೊಗೆ ಕಂಡು ಬರುತ್ತಿದೆ.ಈ ಪ್ರದೇಶಗಳಲ್ಲಿ ಮಳೆಯಾಗಿಲ್ಲ. ಈ ಪರಿಸರಗಳಲ್ಲಿ ಮಳೆ ಸುರಿಯುತ್ತಿದ್ದರೆ ಕಾಡಿಗೆ ಹಿಡಿದಿರುವ ಬೆಂಕಿ ಪೂರ್ಣ ಹತೋಟಿಗೆ ಬರಲು ಸಹಾಯವಾಗುತ್ತಿತ್ತು