News Karnataka Kannada
Thursday, May 02 2024
ಮಂಗಳೂರು

ಬಾಹುಬಲಿ ಸ್ವಾಮಿಗೆ ೨೦೨೪ರ ಫೆ. ೨೨ ರಿಂದ ಮಾ.೧ ರವರೆ ಮಹಾಮಜ್ಜನ

For Baahubali Swami, february 2024. Mahamajjana from March 22 to March 1
Photo Credit : News Kannada

ಬೆಳ್ತಂಗಡಿ: ಐತಿಹಾಸಿಕ ವೇಣೂರಿನಲ್ಲಿ ಸ್ಥಾಪಿತವಾಗಿರುವ ಬಾಹುಬಲಿ ಸ್ವಾಮಿಗೆ ೨೦೨೪ರ ಫೆ. ೨೨ ರಿಂದ ಮಾ.೧ ರವರೆ ಮಹಾಮಜ್ಜನ ನಡೆಯಲಿದೆ ಎಂದು ಧರ್ಮಾಧಿಕಾರಿ ಡಾ| ವೀರೇಂದ್ರ ಹೆಗ್ಗಡೆ ಪ್ರಕಟಿಸಿದರು.

ಜೂ. ೨೪ ರಂದು ಅವರು ವೇಣೂರಿನ ಬಾಹುಬಲಿ ಸಭಾಭವನದಲ್ಲಿ ನಡೆದ ಮಹಾಮಸ್ತಕಾಭಿಷೇಕದ ಪೂರ್ವಭಾವಿ ಶ್ರಾವಕರ ಸಮಾಲೋಚನಾ ಸಭೆಯಲ್ಲಿ ದಿನಾಂಕದ ಫಲಕವನ್ನು ಅನಾವರಣಗೊಳಿಸುವ ಮೂಲಕ ಪ್ರಕಟಿಸಿದರು.

ವೇಣೂರು ಭಗವಾನ್‌ ಶ್ರೀ ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕ ಸಮಿತಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲಿರುವ ಡಾ| ಹೆಗ್ಗಡೆಯವರು ಸಭೆಯನ್ನು ದೀಪಬೆಳಗಿಸಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಮಸ್ತಕಾಭಿಷೇಕವು ದಾನಕ್ಕೆ ಪ್ರೇರಣೆ ನೀಡಲು ಇರುವುದು. ಅಲೌಕಿಕವಾಗಿ ಮಾಡುವ ಈ ಕಾರ್ಯದ ಮೂಲಕ ಧರ್ಮದ ಪ್ರಸಾರ, ಪ್ರಚಾರ ಆಗುವುದು. ಮಸ್ತಕಾಭಿಷೇಕದ ನೆನಪಿನಲ್ಲಿ ಹಲವಾರು ಜನಮಂಗಲ ಕಾರ್ಯಗಳು ನಡೆಯುವಂತಾಗಬೇಕು. ವೇಣೂರಿನ ಸುತ್ತಮುತ್ತಲಿನ ಗ್ರಾಮಗಳಲ್ಲಿ ಜನಹಿತದ ಕಾರ್ಯಗಳನ್ನು ಆಯೋಜಿಸಬೇಕು ಎಂದರು.

೯ ದಿನಗಳ ಕಾಲ ನಡೆಯುವ ಸ್ವಾಮಿಯ ಮಸ್ತಕಾಭಿಷೇಕದ ವ್ಯವಸ್ಥೆಯಲ್ಲಿ ಯುವಜನತೆ ಹೆಚ್ಚಾಗಿ ಪಾಲ್ಗೊಳ್ಳಬೇಕು. ಮಹಿಳೆಯರ ಪಾತ್ರವೂ ಗಣನೀಯವಾಗಿರಬೇಕು. ಇಂದು ಜೈನ ಸಮುದಾಯ ಎಲ್ಲಾ ರೀತಿಯಿಂದಲೂ ಸಶಕ್ತವಾಗಿದೆ. ತನು-ಮನ-ಧನಗಳ ಯಾವುದೇ ಕೊರತೆಯಾಗಲಾರದು. ಹನ್ನೆರಡು ವರ್ಷಗಳ ಬಳಿಕ ನಡೆಯುವ ಈ ಮಜ್ಜನ ಕಾರ್ಯವು ಅಖಿಲ ಕರ್ನಾಟಕ ಮಟ್ಟದ್ದಾಗಿದ್ದು ಹೊಸ ಸ್ಪೂರ್ತಿಯಿಂದ ನೆರವೇರಬೇಕು ಎಂದ ಅವರು ಲೇಸರ್‌ ಇತ್ಯಾದಿ ಆಧುನಿಕ ತಂತ್ರಜ್ಞಾನಗಳನ್ನು ಸಂಪೂರ್ಣವಾಗಿ ಉಪಯೋಗಿಸಿಕೊಂಡು ಯಶಸ್ವಿಯಾಗಿಸುವಲ್ಲಿ ಎಲ್ಲರ ಸಹಕಾರ ಅಗತ್ಯದ ಬಗ್ಗೆ ವಿವರಿಸಿದರು.

ಅತಿಥಿಯಾಗಿದ್ದ ಮಾಜಿ ಸಚಿವ ಅಭಯಚಂದ್ರ ಜೈನ್‌ ಮಾತನಾಡಿ ಭೂ ಮಸೂದೆಯಿಂದಾಗಿ ಜೈನ ಸಮುದಾಯ ತತ್ತರಿಸಿತ್ತು. ಆದರೆ ಈಗ ಕೃಷಿಯ ಜೊತೆಗೆ ಇನ್ನಿತರ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಎತ್ತರಕ್ಕೆ ಬೆಳೆದಿದೆ. ಹೀಗಾಗಿ ಸಮುದಾಯ ಮಾಡುವ ಕಾರ್ಯವು ಯಶಸ್ವಿಯಾಗುವುದು ನಿಶ್ಚಿತ. ಈ ಬಾರಿಯ ಮಸ್ತಕಾಭಿಷೇಕ ಎಲ್ಲರ ನೆನಪಿನಲ್ಲಿ ಉಳಿಯುವಂತಹ ಕಾರ್ಯಕ್ರಮವಾಗಬೇಕು. ಜಗತ್ತಿಗೆ ಶಾಂತಿಯ ಮಹತ್ವವನ್ನು ತಿಳಿಯಪಡಿಸುವಂತಾಗಬೇಕು ಎಂದ ಅವರು ಸರಕಾರಿ ಸಂಪರ್ಕ ಸಮಿತಿಯ ಜವಾಬ್ದಾರಿಯನ್ನು ಸ್ವೀಕರಿಸುವುದಾಗಿ ಪ್ರಕಟಿಸಿದರು.

ಕಾರ್ಕಳ ಜೈನಧರ್ಮ ಜೀರ್ಣೋದ್ಧಾರ ಸಂಘದ ಕಾರ್ಯದರ್ಶಿ, ನ್ಯಾಯವಾದಿ ಎಮ್.ಕೆ. ವಿಜಯಕುಮಾರ್‌ ಅವರು, ಮಸ್ತಕಾಭಿಷೇಕದ ಮೂಲಕ ಜೈನರ ಸಂಸ್ಕಾರ, ಸಂಸ್ಕೃತಿ, ನಡೆ, ನುಡಿಯ ಪರಿಚಯ ಸಮಗ್ರ ಸಮಾಜಕ್ಕೆ ಆಗಬೇಕಲ್ಲದೆ ಜೈನ ಸಮುದಾಯಕ್ಕೂ ಗೌರವ ತರುವಂತಾಗಬೇಕು. ಹೆಗ್ಗಡೆಯವರ ನೇತೃತ್ವ ಮಹಾಮಸ್ತಕಾಭಿಷೇಕಕ್ಕೆ ಇರುವುದರಿಂದ ಇದು ಅತ್ಯಂತ ಯಶಸ್ವಿಯಾಗುವುದು ನಿಶ್ಚಿತ ಎಂದರು.

ಮಹಾಮಸ್ತಕಾಭಿಷೇಕ ಸಮಿತಿಯ ಕಾರ್ಯಾಧ್ಯಕ್ಷರಾಗಿ ಅಳದಂಗಡಿ ಅರಮನೆ ಡಾ| ಪದ್ಮಪ್ರಸಾದ್‌ ಕಾರ್ಯನಿರ್ವಹಿಸಲಿದ್ದು ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಲಿರುವ ವೇಣೂರು ಶ್ರೀ ದಿಗಂಬರ ಜೈನ ತೀರ್ಥಕ್ಷೇತ್ರ ಸಮಿತಿಯ ಕಾರ್ಯದರ್ಶಿ ಸ್ವಾಗತಿಸಿದರು. ಮಹಾವೀರ ಜೈನ್‌ ಮೂಡುಕೋಡಿ ಗುತ್ತು ಕಾರ್ಯಕ್ರಮ ನಿರ್ವಹಿಸಿದರು.

ಸಭೆಯಲ್ಲಿ ಉಪಸಮಿತಿಗಳ ಮಾಹಿತಿಯನ್ನು ನೀಡಲಾಯಿತು. ಮಹಾಮಸ್ತಕಾಭಿಷೇಕಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಹ್ವಾನಿಸುವ ಬಗ್ಗೆ, ಹಗಲಲ್ಲಿ ಮಸ್ತಕಾಭಿಷೇಕ ನೆರವೇರಿಸುವ ಬಗ್ಗೆ, ಅಭಿಷೇಕ ನೋಡಲು ಮೂರ್ತಿಯ ಸುತ್ತ ಅಟ್ಟೊಳಿಗೆ ನಿರ್ಮಿಸುವ ಬಗ್ಗೆ ಇತ್ಯಾದಿ ಸಲಹೆ ಸೂಚನೆಗಳು ಸಭೆಯಲ್ಲಿ ವ್ಯಕ್ತವಾದವು.

ಚಾವುಂಡವಂಶದ ತಿಮ್ಮರಾಜನಿಂದ ೧೬೦೪ ರಲ್ಲಿ ಸ್ಥಾಪಿತವಾದ ೩೫ ಅಡಿ ಎತ್ತರದ ಬಾಹುಬಲಿ ಮೂರ್ತಿಗೆ ೧೯೨೮, ೧೯೫೬, ೨೦೦೦ ಹಾಗೂ ೨೦೧೨ ರಲ್ಲಿ ಮಹಾಮಸ್ತಕಾಭಿಷೇಕಗಳು ನಡೆದಿದ್ದು ಇದೀಗ ೨೦೨೪ರಲ್ಲಿ ನಡೆಯಲಿದೆ. ಮಹಾಮಜ್ಜನದ ಯಶಸ್ವಿಗೆ ೨೭ ಉಪ ಸಮಿತಿಗಳನ್ನು ರಚಿಸಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು