News Karnataka Kannada
Sunday, May 05 2024
ಮಂಗಳೂರು

ಧರ್ಮಸ್ಥಳ: ಲಕ್ಷದೀಪೋತ್ಸವದಲ್ಲಿ ರಸಮಂಜರಿ, ಶ್ರದ್ಧಾಭಕ್ತಿಯೊಂದಿಗೆ ಮನರಂಜನೆಯ ರಸದೌತಣ

Rasamanjari at Lakshdeepotsavam, entertainment with devotion
Photo Credit : By Author

ಧರ್ಮಸ್ಥಳ: ದೇವರ ಕುರಿತಾದ ಶ್ರದ್ಧೆ ಹೆಚ್ಚಿಸುವ ಭಕ್ತಿಗೀತೆಗಳೊಂದಿಗೆ ಜನಪ್ರಿಯ ಸಿನಿಮಾದ ಹಾಡುಗಳನ್ನೂ ಒಟ್ಟೊಟ್ಟಿಗೆ ಕೇಳುವ ಅವಕಾಶ ಲಭಿಸಿದರೆ ಹೇಗಿರುತ್ತದೆ? ಒಂದಷ್ಟು ಭಕ್ತಿಭಾವ. ಜೊತೆಗೊಂದಿಷ್ಟು ಮನರಂಜನೆ ಮೇಳೈಸುತ್ತದೆ.ಇಂಥದ್ದೇ ಅನುಭವವನ್ನು ಲಕ್ಷದೀಪೋತ್ಸವದ ಪ್ರಯುಕ್ತ ಧರ್ಮಸ್ಥಳದ ವಸ್ತುಪ್ರದರ್ಶನ ಭವನದಲ್ಲಿ ಗೋಣಿಕೊಪ್ಪದ ಶ್ರೀ ದುರ್ಗಾ ಮ್ಯೂಸಿಕ್ಸ್ ಆಯೋಜಿಸಿದ್ದ ರಸಮಂಜರಿ ಕಾರ್ಯಕ್ರಮ ಹಲವು ಪ್ರೇಕ್ಷಕರಿಗೆ ದಾಟಿಸಿತು.

ಜೀಕನ್ನಡ ವಾಹಿನಿಯ ಸರಿಗಮಪ ಖ್ಯಾತಿಯ ಅನ್ವಿತ್ ಹಾಗೂ ಕ್ಷಿತಿ ರೈ ಅವರ ಕಂಠದಲ್ಲಿ ಮೂಡಿ ಬಂದ ಹಾಡುಗಳಿಗೆ ತಬಲವಾದಕ ಗಿರೀಶ್ ಪೆರ್ಲ, ಕೀ ಬೋರ್ಡ್ನಲ್ಲಿ ಅಶ್ವಿನ್‌ಬಾಬಣ ರಿದಮ್‌ನಲ್ಲಿ ಸಚಿನ್ ಪುತ್ತೂರು, ಗಿಟಾರ್‌ನಲ್ಲಿ ಸಂಗೀತಾ ಪುತ್ತೂರು ತಮ್ಮ ಹಿನ್ನೆಲೆ ಸಂಗೀತದ ಮೂಲಕ ಕಾರ್ಯಕ್ರಮದ ಮೆರುಗನ್ನು ಇಮ್ಮಡಿಗೊಳಿಸಿದರು.

ಅಶ್ವಿನ್ ‘ಮಹಪ್ರಾಣ ದೀಪಂ’ ಹಾಡಿನ ಮೂಲಕ ರಸಮಂಜರಿ ಕಾರ್ಯಕ್ರಮ ಶುಭಾರಂಭಗೊಳಿಸಿದರು. ಸಂದರ್ಭಕ್ಕೆ ಸೂಕ್ತವಾಗುವಂತೆ ಮೂಡಿಬಂದ ಮಂಜುನಾಥನ ಭಕ್ತಿ ಗೀತೆ ಪ್ರೇಕ್ಷಕರನ್ನು ಹೆಚ್ಚಿನ ಸಂಖ್ಯೆಯಲ್ಲಿ ನೆರೆಯುವಂತೆ ಮಾಡಿತ್ತು. ಇದರ ಬೆನ್ನಲ್ಲೆ ಕ್ಷಿತಿ ರೈ ಧನಿಯಲ್ಲಿ ಮೂಡಿ ಬಂದ ‘ಆನಂದ ಪರಮಾನಂದ’ ಹಾಡು ಭಾವತನ್ಮಯತೆಯನ್ನು ಸೃಷ್ಟಿಸಿತು. ವಾದ್ಯವೃಂದವು ಗಾಯಕರು ಹಾಡಿದ ಪ್ರತಿ ಹಾಡಿಗೂ ಜೀವ ತುಂಬಿತು.

ಕಾರ್ಯಕ್ರಮದಲ್ಲಿ ಗಾಯನದೊಂದಿಗೆ ನೃತ್ಯದ ಮೂಲಕವು ಜನರನ್ನು ಮನರಂಜಿಸಲಾಯಿತು. ಅನ್ವೀತ್ ಹಾಡಿದ ‘ನಟನ ವಿಶಾರದೆ ನಟಶೇಖರ’ ಹಾಡಿಗೆ ಸಿಂಚನ ಭರತ ನಾಟ್ಯಂ ಶೈಲಿಯಲ್ಲಿ ಹೆಜ್ಜೆ ಹಾಕಿದರು. ನವ ರಸಗಳನ್ನು ಒಳಗೊಂಡ ನೃತ್ಯ ಶೈಲಿ ನೆರೆದಿದ್ದವರನ್ನು ಮೂಕವಿಸ್ಮಿತರನ್ನಾಗಿಸಿತ್ತು.

ಕನ್ನಡ ಸೇರಿದಂತೆ ಹಿಂದಿ, ತುಳು ಭಾಷೆಯ ಹದಿನೈದು ಗೀತೆಗಳನ್ನು ವೇದಿಕೆಯ ಮೇಲೆ ಪ್ರಸ್ತುತ ಪಡಿಸಲಾಯಿತು. ಹಿನ್ನೆಲೆ ಸಂಗೀತಗಾರರು ಈ ಹಿಂದೆ ಹಲವಾರು ಕಾರ್ಯಕ್ರಮಗಳನ್ನು ನೀಡಿದ್ದರೂ ಕೂಡ ಶ್ರೀ ದುರ್ಗಾ ಮ್ಯೂಸಿಕಲ್ ತಂಡಕ್ಕೆ ಇದು ಮೊದಲ ರಸಮಂಜರಿ ಕಾರ್ಯಕ್ರಮ.ಮೊದಲ ಪ್ರಯತ್ನವಾದರೂ ಕೇವಲ ಸಿನಿಮಾ ಹಾಡುಗಳನ್ನಷ್ಟೇ ಕೇಂದ್ರವಾಗಿಟ್ಟುಕೊಳ್ಳದೆ ಭಕ್ತಿಗೀತೆ, ಜಾನಪದ ಗೀತೆಗಳನ್ನು ಹಾಡಿದ ರೀತಿ ತಂಡದ ಯಶಸ್ವಿ ಪ್ರದರ್ಶನಕ್ಕೆ ಕಾರಣವಾಯಿತು.

ವರದಿ: ಜ್ಯೋತಿ ಜಿ,ಚಿತ್ರಗಳು: ವಿನೋಲ್
ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ
ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರ
ಉಜಿರೆ

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು