ಬೆಳ್ತಂಗಡಿ: ಮನೆಯಲ್ಲಿದ್ದ ವೃದ್ಧೆಯೊಬ್ಬರನ್ನು ಕೊಂದು, ಮನೆಯಲ್ಲಿದ್ದ ಅವರ ಚಿನ್ನಾಭರಣ, ನಗದನ್ನು ದರೋಡೆಗೈದ ಘಟನೆ ಶನಿವಾರ ಮಧ್ಯಾಹ್ನ ಬೆಳಾಲು ಗ್ರಾಮದ ಕೆರೆಕೋಡಿ ಎಂಬಲ್ಲಿ ನಡೆದಿದೆ.
ಬೆಳಾಲು ಗ್ರಾಮದ ಕೆರೆಕೋಡಿ ನಿವಾಸಿ ಅಕ್ಕು (೮೫) ಎಂಬುವರೇ ಹಲ್ಲೆಗೊಳಗಾಗಿ ಮೃತಪಟ್ಟವರು.
ಅಕ್ಕು ಅವರು ತಮ್ಮ ಮಗ, ಸೊಸೆ ಮತ್ತು ಮೊಮ್ಮಗಳ ಜೊತೆ ವಾಸವಿದ್ದರು. ಶನಿವಾರ ಮಗ ಮತ್ತು ಸೊಸೆ ಕೆಲಸಕ್ಕೆ ಹೋಗಿದ್ದರು. ಮೊಮ್ಮಗಳು ಮಧ್ಯಾಹ್ನ ಶಾಲೆ ಬಿಟ್ಟು ಮನೆಗೆ ಬಂದು ಅಜ್ಜಿಯನ್ನು ಕೆರೆದಾಗ, ಅಜ್ಜಿ ಮನೆಯಲ್ಲಿ ಇರಲಿಲ್ಲ. ನಂತರ ಹೊರಗಡೆ ಬಂದು ನೋಡಿದಾಗ ಅಕ್ಕು ಅವರು ತಮ್ಮ ಮನೆಯ ಸಮೀಪದ ಹಟ್ಟಿಯ ಹಿಂದೆ ಬಿದ್ದಿರುವುದು ಕಂಡು ಬಂದು ಪೋಷಕರಿಗೆ ವಿಷಯ ತಿಳಿಸಿದ್ದಾಳೆ.
ಅವರು ಬಂದು ನೋಡಿದಾಗ ಅಕ್ಕು ಅವರು ಮೃತಪಟ್ಟಿದ್ದು, ಅವರ ಕಿವಿಯಲ್ಲಿದ್ದ ಚಿನ್ನಾಭರಣ ಕಿತ್ತುಕೊಂಡು ಮನೆಯಲ್ಲಿದ್ದ ನಗದನ್ನು ಯಾರೋ ದರೋಡೆಗೈದಿರುವುದು ಬೆಳಕಿಗೆ ಬಂದಿದೆ. ದುಷ್ಕರ್ಮಿಗಳು ಅವರ ಮೇಲೆ ಹಲ್ಲೆ ನಡೆಸಿ ಕೊಲೆಗೈದು ಅವರು ಚಿನ್ನಾಭರಣ ದರೋಡೆಗೈದಿರಬೇಕೆಂದು ಸಂಶಯಿಸಲಾಗಿದೆ. ಈ ಬಗ್ಗ ಧರ್ಮಸ್ಥಳ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸಿದ್ದಾರೆ.