ಧರ್ಮಸ್ಥಳ: ಶಿವರಾತ್ರಿ ದಿನದಂದೇ ಶ್ರೀಕ್ಷೇತ್ರ ಧರ್ಮಸ್ಥಳದ ಲತಾ ಹೆಸರಿನ ಆನೆ ಮೃತಪಟ್ಟಿದೆ. ಆನೆ ಲತಾಗೆ 60 ವರ್ಷ ವಯಸ್ಸಾಗಿತ್ತು. ಇಂದು ಮಧ್ಯಾಹ್ನದ ವೇಳೆ ಲತಾ ಹೃದಯಾಘಾತದಿಂದ ಮೃತಪಟ್ಟಿದೆ. ಕಳೆದ 50 ವರ್ಷಗಳಿಂದ ಆನೆ ಲತಾ ಶ್ರೀಕ್ಷೇತ್ರ ಧರ್ಮಸ್ಥಳದ ಸೇವೆಯಲ್ಲಿ ನಿರತವಾಗಿತ್ತು.
ಲತಾ ಸುಮಾರು 50 ವರ್ಷಗಳಿಂದ ಧರ್ಮಸ್ಥಳ ಜಾತ್ರಾಮಹೋತ್ಸವದಲ್ಲಿ ಗಾಂಭೀರ್ಯದ ಹೆಜ್ಜೆ ಹಾಕಿ ಭಕ್ತರ ಗಮನವನ್ನು ತನ್ನತ್ತ ಸೆಳೆಯುತ್ತಿತ್ತು. ಧರ್ಮಸ್ಥಳದಲ್ಲಿ ಪ್ರಸ್ತುತ ಲತಾ, ಲಕ್ಷ್ಮೀ ಹಾಗೂ ಶಿವಾನಿ ಎಂಬ ಹೆಸರಿನ ಆನೆಗಳಿದ್ದು, ಲತಾ ಸಾವಿನಿಂದ ಲಕ್ಷ್ಮೀ ಹಾಗೂ ಶಿವಾನಿ ಆನೆಗಳು ಮಂಕಾಗಿವೆ.
ಸದ್ಯ ಲತಾ ಆನೆಯ ಅಂತ್ಯಸಂಸ್ಕಾರ ಇಂದು ಸಂಜೆ ವೇಳೆಗೆ ನಡೆಯುವ ಸಾಧ್ಯತೆ ಇದೆ. ಆನೆ ಸಾವಿನ ಸುದ್ದಿ ತಿಳಿದು ಸುತ್ತಮುತ್ತಲ ಭಕ್ತರು ದೇವಸ್ಥಾನದ ಬಳಿ ಆಗಮಿಸುತ್ತಿದ್ದಾರೆ.