ಬಂಟ್ವಾಳ: ಅಪ್ರಾಪ್ತ ಶಾಲಾ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಬಸ್ ನಿರ್ವಾಹಕನನ್ನು ಬಂಟ್ವಾಳ ನಗರ ಪೊಲೀಸರು ಬಂಧಿಸಿದ್ದಾರೆ.
ಬಾಗಲಕೋಟೆ ನಿವಾಸಿ ಬಿಸಿರೋಡ್ ಕೆ.ಎಸ್.ಆರ್.ಟಿ.ಸಿ.ಬಸ್ ಡಿಪೋ ನಿರ್ವಾಹಕ ದವಾಳ್ ಸಾಬ್ ಪೋಕ್ಸೋ ಕಾಯ್ದೆಯಡಿ ಬಂಧಿತ ಆರೋಪಿ.
ಅಪ್ರಾಪ್ತೆ ಕಲ್ಲಡ್ಕ ವಿದ್ಯಾ ಸಂಸ್ಥೆಯೊಂದರ ವಿದ್ಯಾರ್ಥಿನಿಯಾಗಿದ್ದು, ಇಂದು ಮಧ್ಯಾಹ್ನದ ವೇಳೆ ಶಾಲೆಯಿಂದ ಮನೆಗೆ ಕಲ್ಲಡ್ಕದಿಂದ ಬಿಸಿರೋಡಿಗೆ ಬರುವ ವೇಳೆ ಲೈಗಿಂಕ ಕಿರುಕುಳ ನೀಡಿದ್ದಾನೆ ಎಂದು ನೊಂದ ಬಾಲಕಿ ಬಂಟ್ವಾಳ ನಗರ ಪೋಲೀಸ್ ಠಾಣೆಗೆ ದೂರು ನೀಡಿದ್ದಳು.
ಕಲ್ಲಡ್ಕದಿಂದ ಬರುವ ವೇಳೆ ಪಾಣೆಮಂಗಳೂರು ಬಸ್ ಸ್ಟಾಪ್ ನಲ್ಲಿ ಬಸ್ ನಲ್ಲಿದ್ದ ಎಲ್ಲಾ ಪ್ರಯಾಣಿಕರು ಇಳಿದು ಹೋಗಿದ್ದರು.
ಅ ಸಂದರ್ಭದಲ್ಲಿ ಬಸ್ ನಲ್ಲಿ ನೊಂದ ಬಾಲಕಿ,ಬಸ್ ಚಾಲಕ ಮತ್ತು ನಿರ್ವಾಹಕ ಮೂರೇ ಜನ ಇದ್ದ ವೇಳೆ ಈತ ಲೈಗಿಂಕ ಕಿರುಕುಳ ನೀಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಪ್ರಕರಣ ದಾಖಲಾದ ಅರ್ಧ ಗಂಟೆಯಲ್ಲಿ ಆರೋಪಿಯನ್ನು ಬಂಟ್ವಾಳ ನಗರ ಪೋಲಿಸ್ ಠಾಣೆಯ ಪೋಲಿಸ್ ಇನ್ಸ್ ಪೆಕ್ಟರ್ ವಿವೇಕಾನಂದ ನೇತೃತ್ವದಲ್ಲಿ ಬಂಟ್ವಾಳ ನಗರ ಠಾಣಾ ಎಸ್.ಐ. ರಾಮಕೃಷ್ಣ ಅವರ ತಂಡ ಬಂಧಿಸಿದೆ.