News Karnataka Kannada
Friday, May 10 2024
ಮಂಗಳೂರು

ಬೆಳ್ತಂಗಡಿ: ಮೃತ್ಯುಂಜಯ ಹಾಗೂ ನೇತ್ರಾವತಿ ನದಿಯಲ್ಲಿ ನೀರಿನ ಪ್ರಮಾಣ ಭಾರೀ ಏರಿಕೆ

Belthangady: Water level in Mrutyunjaya and Netravathi rivers rises sharply
Photo Credit : By Author

ಬೆಳ್ತಂಗಡಿ: ಮಂಗಳವಾರ ರಾತ್ರಿಯಿಂದ ಬುಧವಾರ ಇಡೀ ದಿನ ಬೆಳ್ತಂಗಡಿ ತಾಲೂಕಿನಾದ್ಯಂತ ಸಾಮಾನ್ಯ ಮಳೆ ನಿರಂತರವಾಗಿ ಸುರಿದಿದೆ. ನದಿಗಳು ತುಂಬಿ ಹರಿಯುವಷ್ಟು ಪ್ರಮಾಣದ ಮಳೆ ಇಲ್ಲದಿದ್ದರೂ ಮಂಗಳವಾರ ಮಧ್ಯಾಹ್ನದ ವೇಳೆ ಮತ್ತೆ ಮೃತ್ಯುಂಜಯ ಹಾಗೂ ನೇತ್ರಾವತಿ ನದಿಗಳಲ್ಲಿ ನೀರಿನ ಪ್ರಮಾಣದಲ್ಲಿ ಭಾರಿ ಪ್ರಮಾಣದ ಏರಿಕೆ ಕಂಡುಬಂತು. ಇದರಿಂದ ಅನೇಕ ಕಡೆ ಮರಮಟ್ಟುಗಳು, ವಿಪರೀತ ಮರಳಿನ ರಾಶಿ ಹರಿದು ಬಂದು ಆತಂಕ ಸೃಷ್ಟಿಸಿದೆ.

ಸುಮಾರು ಎರಡು ತಾಸುಗಳ ಬಳಿಕ ನೀರಿನ ಪ್ರಮಾಣ ಇಳಿಕೆಯಾಗ ತೊಡಗಿತು. ಈ ರೀತಿ ದಿಢೀರ್ ನೀರಿನ ಪ್ರಮಾಣ ಏರಿಕೆಗೆ ನದಿಗಳ ಉಗಮ ಸ್ಥಾನದ ಪರಿಸರದಲ್ಲಿ ಯಾವುದಾದರೂ ಗುಡ್ಡ ಕುಸಿತ ಉಂಟಾಗಿರುವ ಕುರಿತು ಸಂಶಯ ವ್ಯಕ್ತವಾಗಿದೆ. ಇದಕ್ಕೆ ಪೂರಕವೆಂಬಂತೆ ಬುಧವಾರವು ವಿಪರೀತ ಮಣ್ಣು ಮಿಶ್ರಿತ ನೀರು ನದಿಗಳಲ್ಲಿ ಹರಿದಿದೆ.

ಮೃತ್ಯುಂಜಯ ಹಾಗೂ ನೇತ್ರಾವತಿ ನದಿಗಳಲ್ಲಿ ಮಂಗಳವಾರ ಸಂಜೆ ಪ್ರವಾಹ ರೀತಿಯಲ್ಲಿ ನೀರು ಹರಿದ ಪರಿಣಾಮ 2019ರ ನೆರೆಪೀಡಿತ ಗ್ರಾಮಗಳ ಅಲ್ಲಲ್ಲಿ ಭಾರಿ ಹಾನಿಯೂ ಸಂಭವಿಸಿದೆ.

ಮೃತ್ಯುಂಜಯ ನದಿ ಹರಿಯುವ ಚಾರ್ಮಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರಣಪಾದೆ ಕಿರು ಸೇತುವೆ ಜಲಾವೃತವಾಗಿ ಭಾರಿ ಪ್ರಮಾಣದ ಮರಮಟ್ಟು,ತ್ಯಾಜ್ಯ ಸಂಗ್ರಹಗೊಂಡಿದೆ. ಇದರಿಂದ ಅರಣಪಾದೆ, ಅಂತರ,ಕೊಳಂಬೆ ಮೊದಲಾದ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ಈ ಸೇತುವೆಯ ಸಂಪರ್ಕ ರಸ್ತೆ ಕೊಚ್ಚಿ ಹೋಗಿದ್ದು ವಾಹನ ಸಂಚಾರ ದುಸ್ತರಗೊಂಡಿದೆ.

ಅಂತರ ಪ್ರದೇಶದ ಉಮೇಶಗೌಡ, ಚಂದಯ್ಯ ಗೌಡ,ದರ್ಮಣ ಗೌಡ, ಅರುಣ ಗೌಡ, ಉದಯ ಗೌಡ,ರಂಜಿತ್ ಮೊದಲಾದವರ ತೋಟಗಳಿಗೆ ನದಿ ನೀರು ನುಗ್ಗಿ ಅಡಕೆ ಹಾಗೂ ಬಾಳೆ ಗಿಡಗಳಿಗೆ ಹಾನಿ ಸಂಭವಿಸಿದೆ. ಇಲ್ಲಿನ ಕೆಲವು ತೋಟಗಳಲ್ಲಿ ಮರಳು ಕೂಡ ಸಂಗ್ರಹಗೊಂಡಿರುವ ಕುರಿತು ಸ್ಥಳೀಯರು ತಿಳಿಸಿದ್ದಾರೆ. 2019ರ ನೆರೆಯಲ್ಲಿ ಈ ಪ್ರದೇಶಗಳ ತೋಟಗಳಿಗೆ ಮರಳು ನುಗ್ಗಿ ಹಲವಾರು ಎಕರೆ ಅಡಕೆ ತೋಟ ಸಂಪೂರ್ಣ ಹಾನಿಗೊಳಗಾದ ಬಳಿಕ ಹೊಸ ಕೃಷಿಯನ್ನು ಮಾಡಲಾಗಿದೆ. ಈ ಬಾರಿ ಮತ್ತೆ ಮರಳು ಬಂದು ಬಿದ್ದಿರುವುದು ಕೃಷಿಕರನ್ನು ತೀವ್ರ ಆತಂಕಕ್ಕೆ ತಳ್ಳಿದೆ.

ಮುಂಡಾಜೆಯ ಕಡಂಬಳ್ಳಿ ಕಿಂಡಿ ಅಣೆಕಟ್ಟಿನಲ್ಲಿ ಭಾರಿ ಮರಮಟ್ಟು ಸಂಗ್ರಹಗೊಂಡು ಮೃತ್ಯುಂಜಯ ನದಿಯ ನೀರು ಹರಿಯಲು ಅಡ್ಡಿ ಉಂಟಾಗಿ ಸಮೀಪದ ಮುಂಡ್ರುಪಾಡಿಯ ಅವಿನಾಶ ಗೋಖಲೆ, ವಾಸುದೇವ ಗೋಖಲೆ, ಶ್ರೀನಿವಾಸ ಗೋಖಲೆ, ಸಂಜೀವ ಶೆಟ್ಟಿ ಹಾಗೂ ಪ್ರದೇಶದ ಇನ್ನಿತರದ ಹಲವಾರು ಎಕರೆ ತೋಟಗಳಿಗೆ ನದಿ ನೀರು ನುಗ್ಗಿ ಭಾರಿ ಮರಮಟ್ಟು ಮತ್ತು ತ್ಯಾಜ್ಯ ಬಂದುಬಿದ್ದಿದೆ. ಅಲ್ಲದೆ ಈ ತೋಟಗಳಿಗೆ ಇತ್ತೀಚೆಗೆ ಲಕ್ಷಾಂತರ ರೂ.ವ್ಯಯಿಸಿ ಹಾಕಲಾಗಿದ್ದ ಗೊಬ್ಬರ, ಮಣ್ಣು ಇತ್ಯಾದಿ ನೀರು ಪಾಲಾಗಿದೆ.ಈ ಮರ ಮಟ್ಟು ತೆರವು ಗೊಳಿಸುವುದು ಸವಾಲಾಗಿ ಪರಿಣಮಿಸಿದೆ.

ಚಾರ್ಮಾಡಿ ಕಡೆಯಿಂದ ಮೃತ್ಯುಂಜಯ ನದಿಯಲ್ಲಿ ಅಕ್ರಮ ಮರಳುಗಾರಿಕೆಗೆ ಬಳಸುತ್ತಿದ್ದ ಮೂರು ದೋಣಿಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗಿರುವ ಕುರಿತು ಕಲ್ಮಂಜ ಪರಿಸರದ ನಾಗರಿಕರು ತಿಳಿಸಿದ್ದಾರೆ.

ನೇತ್ರಾವತಿ ನದಿಯ ಸಂಪರ್ಕದ ಮಲವಂತಿಗೆ ಗ್ರಾಮದ ಏಳೂವರೆ ಹಳ್ಳ ಪ್ರದೇಶದ ಕಕ್ಕೆನೇಜಿ, ನಾಗಗುಂಡಿ,ಕಲ್ಲೋಲೆ, ಮಾಪಲದಡಿ ಮೊದಲಾದ ಕಡೆಗಳಲ್ಲಿ ಹಳ್ಳದ ತಡೆಗೋಡೆಗಳಿಗೆ ತೀವ್ರ ಪ್ರಮಾಣದ ಹಾನಿ ಉಂಟಾಗಿರುವ ಕುರಿತು ವರದಿಯಾಗಿದೆ. ಇಲ್ಲಿನ ಪರಿಸರದ ಅನೇಕ ತೋಟಗಳಿಗೆ ನೀರು ನುಗ್ಗಿ ಅಲ್ಲಲ್ಲಿ ತ್ಯಾಜ್ಯದ ರಾಶಿ ಬಂದು ಬಿದ್ದಿದೆ. ಮಲವಂತಿಗೆ ಪಂಚಾಯಿತಿ ಅಧ್ಯಕ್ಷೆ ಸುರೇಖಾ,ಉಪಾಧ್ಯಕ್ಷ ವಿನಯ ಚಂದ್ರ ಸೇನರಬೆಟ್ಟು ಹಾಗೂ ಸದಸ್ಯರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
154
Deepak Atavale

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು