News Karnataka Kannada
Sunday, May 12 2024
ಮಂಗಳೂರು

ಬೆಳ್ತಂಗಡಿ: ವಿಶಿಷ್ಟ ರೀತಿಯಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಣೆ

Belthangady: Independence Amrit Mahotsava celebrated in a unique way
Photo Credit : By Author

ಬೆಳ್ತಂಗಡಿ: ಹಿರಿಯರ ತ್ಯಾಗ ಬಲಿದಾನದ ಫಲಶೃತಿಯಾಗಿ ಪಡೆದ ಸ್ವಾತಂತ್ರ್ಯದ ಅಮೃತೋತ್ಸವ ನಮ್ಮ ಅವಧಿಯಲ್ಲಿ ಆಚರಿಸುವ ಅವಕಾಶ ದೊರೆತದ್ದು ನಮ್ಮಲ್ಲರ ಸೌಭಾಗ್ಯವೇ ಸರಿ. ಆ ನಿಟ್ಟಿನಲ್ಲಿ ವಿವಿಧ ಸರಕಾರಿ ಇಲಾಖೆಗಳು ಮತ್ತು ಸಹಭಾಗಿಗಳ ಜೊತೆ ಸೇರಿಕೊಂಡು ವಿಶಿಷ್ಟ ರೀತಿಯಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಣೆಗೆ ಬೆಳ್ತಂಗಡಿ ಆಡಳಿತ ಸಜ್ಜುಗೊಂಡಿದೆ ಎಂದು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ಅಧ್ಯಕ್ಷ, ಶಾಸಕ ಹರೀಶ್ ಪೂಂಜ ವಿವರ ನೀಡಿದರು.

ಆ.10 ರಂದು ಗುರುವಾಯನಕೆರೆ ನವಶಕ್ತಿ ಸಭಾಂಗಣದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಸ್ವಾತಂತ್ರ್ಯದ ಅಮೃತ ಮಹೋತ್ಸವ ವರ್ಷದಡಿ ದೇಶದಲ್ಲಿ, ರಾಜ್ಯದಲ್ಲಿ ಹಲವು ರೀತಿಯ ವಿವಿಧ ವಲಯಗಳ ಅಭಿವೃದ್ಧಿಗಾಗಿ ಹಲವು ಯೋಜನೆಗಳು ಜಾರಿಯಾಗಿದ್ದು, ಸ್ವಾತಂತ್ರ್ಯ ಅಮೃತ ಮಹೋತ್ಸವದ ಸಮಾರೋಪ ಆಗಸ್ಟ್ 15ರಂದು ದೇಶದೆಲ್ಲೆಡೆ ನಡೆಯುವಂತೆ, ಬೆಳ್ತಂಗಡಿಯಲ್ಲೂ ನಡೆಯಲಿದ್ದು ಈ ಕಾರ್ಯಕ್ರಮ ಜನಮಾನಸದಲ್ಲಿ ಅವಿಸ್ಮರಣೀಯವಾಗಿ ಉಳಿಯುವಂತೆ ಮಾಡಲು ತಾಲೂಕು ಆಡಳಿತದ ವತಿಯಿಂದ ಅರ್ಥಪೂರ್ಣವಾಗಿ ಆಚರಿಸಲು ತೀರ್ಮಾನಿಸಿದ್ದೇವೆ ಎಂದರು.

ವರ್ಷಂಪ್ರತಿ ಜರಗುವಂತೆ ಪೂರ್ವಾಹ್ನ:9.00 ಗಂಟೆಗೆ ತಾಲೂಕು ಕಚೇರಿಯಲ್ಲಿ ರಾಷ್ಟ್ರೀಯ ಹಬ್ಬಗಳ ಶಿಷ್ಟಾಚಾರದಂತೆ ಧ್ವಜಾರೋಹಣ ಕಾರ್ಯಕ್ರಮ ನಡೆದು, ಬಳಿಕ ಸರ್ಕಾರಿ ಅಧಿಕಾರಿಗಳು, ಸಿಬ್ಬಂದಿಗಳು 750 ದ್ವಿ ಚಕ್ರ ವಾಹನದ ಜಾಥಾ ಮೂಲಕ ಗುರುವಾಯನಕೆರೆಯ ಕಿನ್ಯಮ್ಮ ಯಾನೆ ಗುಣವತಿ ಅಮ್ಮ ಸಭಾಭವನಕ್ಕೆ ತೆರಳಿ ಸಭಾ ಕಾರ್ಯಕ್ರಮ ನಡೆಯಲಿದೆ. ಚಿಂತಕರಾದ ಪ್ರಕಾಶ್ ಮಲ್ಪೆ ಅವರು ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಅಮೃತ ಮಹೋತ್ಸವದ ಸವಿ ನೆನಪಿಗಾಗಿ ಇಲಾಖೆಗಳಿಂದ ಫಲಾನುಭವಿಗಳಿಗೆ ಸವಲತ್ತು, ಸಾಧನಾ ಸಲಕರಣೆ ಮತ್ತು ಸೌಲಭ್ಯ ನೀಡಲಾಗುವುದು.

ಕಂದಾಯ ಇಲಾಖೆಯಿಂದ 750 ಜನರಿಗೆ 94ಸಿ ಹಕ್ಕುಪತ್ರ, ಪಿಂಚಣಿ ಯೋಜನೆಯಲ್ಲಿ 750 ಜನರಿಗೆ ಸಂಧ್ಯಾ ಸುರಕ್ಷಾ, ವಿಧವಾ ವೇತನ, ಅಂಗವಿಕಲ ವೇತನ ನಿಧಿ ವಿತರಣೆ, ತಾಲೂಕು ಪಂಚಾಯತ್‌ ವತಿಯಿಂದ 75 ನಿವೇಶನ ರಹಿತರಿಗೆ ನಿವೇಶನ ಹಂಚಿಕೆ, 75 ಅಂಗನವಾಡಿಗೆ ಗ್ರಾಮ ಪಂಚಾಯತ್ ನಿಧಿಯಿಂದ ತೂಕದ ಯಂತ್ರ ಹಾಗೂ ತಾಲೂಕು ಮಟ್ಟದ ಚೆಸ್‌ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಗುವುದು.

ಪಶುಸಂಗೋಪನೆ ಇಲಾಖೆಯಿಂದ ಪುಣ್ಯಕೋಟಿ ಯೋಜನೆಗೆ ಚಾಲನೆ, ದನದ ಕೊಟ್ಟಿಗೆಗೆ 75 ಮ್ಯಾಟ್ ವಿತರಣೆ, 75 ಜಾನುವಾರುಗಳಿಗೆ ವಿಮಾ ಸೌಲಭ್ಯ, ಸಂಚಾರಿ ಪಶು ಚಿಕಿತ್ಸಾಲಯ ಉದ್ಘಾಟನೆ. ಶಿಕ್ಷಣ ಇಲಾಖೆಯಿಂದ 75 ಎಸ್.ಎಸ್.ಎಲ್.ಸಿ ಸಾಧಕರಿಗೆ ಟ್ಯಾಬ್‌ ವಿತರಣೆ ಹಾಗೂ ಅರಣ್ಯ ಇಲಾಖೆ ಸಹಯೋಗದಿಂದ ಶಾಲೆಗಳಿಗೆ 75 ಡೆಸ್ಕ್ ಬೆಂಚ್ ವಿತರಣೆ. ಕೃಷಿ ಇಲಾಖೆಯಿಂದ 75 ರೈತರಿಗೆ ತೋಟಗಾರಿಕಾ ಬೆಳೆಗಳ ಗಿಡ ವಿತರಣೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ 75 ಮಂದಿಗೆ ಭಾಗ್ಯಲಕ್ಷ್ಮೀ ಯೋಜನೆಯ ಬಾಂಡ್ ವಿತರಣೆ, ಅರಣ್ಯ ಇಲಾಖೆಯಿಂದ ಫಲಾನುಭವಿಗಳಿಗೆ 750 ರಕ್ತ ಚಂದನ, ಶ್ರೀಗಂಧ, ಸಾಗುವಾನಿ ಗಿಡ ವಿತರಣೆ, ಟೀ ಪಾರ್ಕ್‌ನಲ್ಲಿ 75 ವಿವಿಧ ತಳಿಯ ಗಿಡ ನೆಡುವ ಕಾರ್ಯಕ್ರಮ, ಮೆಸ್ಕಾಂ ಇಲಾಖೆಯಿಂದ ಮೆಸ್ಕಾಂ ಬೆಳ್ತಂಗಡಿ ಹಾಗೂ ಉಜಿರೆ ಉಪ ವಿಭಾಗ ಮತ್ತು ವಿದ್ಯುತ್ ಗುತ್ತಿಗೆದಾರರ ಸಂಘ, ಬೆಳ್ತಂಗಡಿ ವತಿಯಿಂದ 75 ಅಂಗನವಾಡಿಗಳಿಗೆ ಫ್ಯಾನ್ ವಿತರಣೆ.

ಸರ್ವೇ ಇಲಾಖೆಯಿಂದ 75 ಪೋಡಿ ಕಡತಗಳ ವಿಲೇವಾರಿ, ಪೊಲೀಸ್ ಇಲಾಖೆಯಿಂದ 23 ಹಾಸ್ಟೆಲ್ ಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಪೂರ್ವ ತಾಲೂಕಿಗೆ ಸಂಬಂಧಿಸಿದ ಪುಸ್ತಕಗಳ ವಿತರಣೆ, ಕಾರ್ಮಿಕ ಇಲಾಖೆಯಿಂದ 75 ಜನ ವಿವಿಧ ಕಾರ್ಮಿಕ ಯೋಜನೆಯಡಿ ಫಲಾನುಭವಿಗಳಿಗೆ ಮಂಜೂರಾತಿ ಆದೇಶ ಪತ್ರ ವಿತರಣೆ, ವಿಕಲಚೇತನ ಕಲ್ಯಾಣ ಇಲಾಖೆಯಿಂದ 75 ಜನ ವಿಶೇಷ ಚೇತನರಿಗೆ ಯು.ಡಿ.ಐ.ಡಿ ಕಾರ್ಡ್ ವಿತರಣೆ, ಲೋಕೋಪಯೋಗಿ ಗುತ್ತಿಗೆದಾರರ ಸಂಘದಿಂದ ಸ್ವ ಉದ್ಯೋಗಾಸಕ್ತ 75 ಮಹಿಳೆಯರಿಗೆ ಹೊಲಿಗೆ ಯಂತ್ರ ವಿತರಣೆ, ತಾಲೂಕು ವೈನ್ ಮರ್ಚೆಂಟ್ ಅಸೋಸಿಯೇಸನ್ ಸಹಯೋಗದೊಂದಿಗೆ 75 ಕೃಷಿಕರಿಗೆ ಕಳೆಕೊಚ್ಚುವ ಯಂತ್ರ ವಿತರಣೆ, ಸಭಾ ಕಾರ್ಯಕ್ರಮದ ಬಳಿಕ ರಾಷ್ಟ್ರ ಭಕ್ತಿಯನ್ನು ಉದ್ದೀಪನಗೊಳಿಸುವ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದರು.

ತಾಲೂಕು ಕೇಂದ್ರದಲ್ಲಿ ಈ ಎಲ್ಲಾ ಕಾರ್ಯಕ್ರಮಗಳಲ್ಲದೆ ತಾಲೂಕಿನ 48 ಗ್ರಾಮ ಪಂಚಾಯತ್ ಗಳಲ್ಲೂ ಜನಪ್ರತಿನಿಧಿಗಳು ಸಂಘ ಸಂಸ್ಥೆಗಳು ಊರ ಹಿರಿಯರು ಮಾಜಿ ಸೈನಿಕರನ್ನು ಒಗ್ಗೂಡಿಸಿ ಸ್ಥಳೀಯ ಮಟ್ಟದಲ್ಲಿ 75 ಫಲಾನುಭವಿಗಳಿಗೆ ಸಾಧನ ಸಲಕರಣೆ ಸವಲತ್ತು ಸೌಲಭ್ಯ ವಿತರಿಸಲಾಗುವುದು. ಈಗಾಗಲೇ ಕೇಂದ್ರ ಸರಕಾರದ ಸೂಚನೆ ಪ್ರಕಾರ ಆಗಸ್ಟ್ 13ರ ಪೂರ್ವಾಹ್ನ 8.00 ಗಂಟೆಯಿಂದ ಪ್ರತಿ ಮನೆಯಲ್ಲೂ ರಾಷ್ಟ್ರ ಧ್ವಜಾರೋಹಣ ಹಾಗೂ ಆಗಸ್ಟ್ 15ರ ಸಂಜೆ 5.00ಕ್ಕೆ ಗೌರವಯುತವಾಗಿ ಧ್ವಜಾವರೋಹಣ ನಡೆಯುವ ‘ಹರ್ ಘರ್ ತಿರಂಗ ಅಭಿಯಾನ’ ಮನೆ ಮನೆಗಳಿಗೂ ತಲುಪಿದ್ದು, ನಮ್ಮ ನಾಡಿನ ಈ ಸಾಂಸ್ಕೃತಿಕ ಉತ್ಸವ ನಾವೆಲ್ಲರೂ ಒಗ್ಗೂಡಿ ಆಚರಿಸುವ ಯಶಸ್ವಿಗೊಳಿಸುವ. ಏಕ್ ಭಾರತ್ ಶ್ರೇಷ್ಠ ಭಾರತ್ ಎಂಬ ಸಂದೇಶವನ್ನು ಜಗತ್ತಿಗೆ ಸಾರುವ, ತಾಯಿ ಭಾರತಿಗೆ ಅಮೃತದ ಗೌರವ ನೀಡೋಣ ಎಂದು ಶಾಸಕರು ವಿನಂತಿಸಿದರು.

ಪತ್ರಿಕಾಗೋಷ್ಠಿಯಲ್ಲಿ ತಹಶಿಲ್ದಾರ್ ಪೃಥ್ವಿ ಸಾನಿಕಮ್, ತಾ.ಪಂ ಕಾರ್ಯನಿರ್ವಹಣಾಧಿಕಾರಿ ಕುಸುಮಾಧರ, ಸರ್ಕಲ್ ಇನ್ಸ್‌ಪೆಕ್ಟರ್ ಶಿವಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ವಿರೂಪಾಕ್ಷಪ್ಪ, ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ರಾಜೇಶ್ ಕೆ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ರಂಜಿತ್, ಮೆಸ್ಕಾಂ ಕಾರ್ಯಪಾಲಕ ಇಂಜಿನಿಯರ್ ಶಿವಶಂಕರ್, ಸಿ.ಡಿ.ಪಿ.ಒ. ಪ್ರಿಯಾ ಆಗ್ನೇಸ್ ಚಾಕೋ, ಸಮಾಜ ಕಲ್ಯಾಣ ಇಲಾಖೆಯ ಹೇಮಚಂದ್ರ, ಬಿ.ಸಿ.ಎಮ್. ಇಲಾಖೆಯ ಜೋಸೆಫ್,‌ ವಲಯ ಅರಣ್ಯಾಧಿಕಾರಿ ತ್ಯಾಗರಾಜ್, ತೋಟಗಾರಿಕಾ ಇಲಾಖೆಯ ಚಂದ್ರಶೇಖರ, ಪಶುಸಂಗೋಪನೆ ಇಲಾಖೆಯ ಮಂಜು ನಾಯ್ಕ್ ಇದ್ದರು.

ಈ ಸಂದರ್ಭ ಶಾಸಕರು ಪತ್ರಕರ್ತರಿಗೆ ತ್ರಿವರ್ಣಧ್ವಜವನ್ನು ಕೊಡುಗೆಯಾಗಿ ನೀಡಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
154
Deepak Atavale

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು