News Karnataka Kannada
Monday, April 29 2024
ಮಂಗಳೂರು

ಬೆಳ್ತಂಗಡಿ: ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಡಾ. ಹೇಮಾವತಿ ವೀ. ಹೆಗ್ಗಡೆ ಆಯ್ಕೆ

Dakshina Kannada District Sahitya Sammelana President Dr. Hemavathi V. Heggade Selection
Photo Credit : By Author

ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸರ್ವಾಧ್ಯಕ್ಷರನ್ನಾಗಿ ಡಾ. ಹೇಮಾವತಿ ವೀ. ಹೆಗ್ಗಡೆಯವರನ್ನು ಆಯ್ಕೆ ಮಾಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ  ಪರಿಷತ್ ವತಿಯಿಂದ ಉಜಿರೆ ರಾಮಕೃಷ್ಣ ಸಭಾ ಮಂಟಪದಲ್ಲಿ ನಡೆದ ಪದಾಧಿಕಾರಿಗಳ ಸಭೆಯಲ್ಲಿ ಫೆಬ್ರವರಿ 3 ರಿಂದ 5ರವರೆಗೆ ನಡೆಯಲಿರುವ 25ನೇ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸರ್ವಾಧ್ಯಕ್ಷರನ್ನಾಗಿ ಹೇಮಾವತಿ ವೀ. ಹೆಗ್ಗಡೆಯವರನ್ನು ಆಯ್ಕೆ ಮಾಡಲಾಗಿದೆ ಎಂದು ಅಧ್ಯಕ್ಷರಾದ ಡಾ. ಎಂ. ಪಿ. ಶ್ರೀನಾಥ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಧರ್ಮಪತ್ನಿ ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರು ಕರ್ನಾಟಕ ರಾಜ್ಯದ ಲಕ್ಷಾಂತರ ಗ್ರಾಮೀಣ ಮಹಿಳೆಯರಿಗೆ ಸ್ಫೂರ್ತಿಯ ಚಿಲುಮೆಯಾಗಿದ್ದಾರೆ. ಅವರ ದೂರದೃಷ್ಟಿ, ಆಲೋಚನೆಗಳು ಮತ್ತು ಚಿಂತನೆಗಳು ಕರ್ನಾಟಕ ರಾಜ್ಯಾದ್ಯಂತ ವಿವಿಧ ಮಹಿಳಾ ಸಬಲೀಕರಣ ಕಾರ್ಯಕ್ರಮಗಳನ್ನು ರೂಪಿಸಿ ರಾಜ್ಯದ ಗ್ರಾಮೀಣ ಮಹಿಳೆಯರ ಜೀವನದಲ್ಲಿ ಸಮಗ್ರವಾದ ಸಬಲೀಕರಣವನ್ನುಂಟು ಮಾಡಿದೆ.

ಡಾ. ಹೇಮಾವತಿ ವೀ. ಹೆಗ್ಗಡೆಯವರು 1951 ರ ಏ.2 ರಂದು ಪೆರಾಡಿ ಬೀಡಿನಲ್ಲಿ ಶ್ರೀ ರಘುಚಂದ್ರ ಶೆಟ್ಟಿ ಮತ್ತು ಶ ಪುಷ್ಪಾವತಿ ಅಮ್ಮ ದಂಪತಿಗಳಿಗೆ ಜನಿಸಿದರು. ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ಪದವಿಯನ್ನು ಮುಗಿಸಿದರು. 1972ರ ಡಿ. 27ರಂದು ಧರ್ಮಸ್ಥಳದ
ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ಅವರನ್ನು ಮದುವೆಯಾದರು. ಬಾಲ್ಯದಿಂದಲೇ ಸಮಾಜ ಸೇವೆಯ ಚಿಂತನೆಯನ್ನು ಹೊತ್ತ ಹೇಮಾವತಿ ವೀ. ಹೆಗ್ಗಡೆಯವರು ಪೂಜ್ಯ ಹೆಗ್ಗಡೆಯವರ ಸಹಧರ್ಮಿಣಿಯಾದ ನಂತರ ಸೇವಾ ಕೈಂಕರ್ಯಗಳನ್ನು ಕೈಗೊಳ್ಳಲು ಸೇವಾ ಸಾಗರಕ್ಕೆ ಧುಮಿಕಿದಂತಾಯಿತು.

ಡಾ. ಹೇಮಾವತಿ ಹೆಗ್ಗಡೆಯವರ ಸೇವಾ ಪಯಣ ಪ್ರಾರಂಭವಾದದ್ದು ಒಂದು ಸ್ತ್ರೀಶಕ್ತಿಯ ರಚನೆಯೊಂದಿಗೆ ಧರ್ಮಸ್ಥಳದಲ್ಲಿ ಸಮಾಜದ ಮುಖ್ಯವಾಹಿನಿಯಿಂದ ಹೊರಗುಳಿದಿದ್ದ ಸ್ತ್ರೀಯರನ್ನು ಗುರುತಿಸಿ, ಕನ್ಯಾಕುಮಾರಿ ಯುವತಿ ಮಂಡಳಿಯನ್ನು 1973ರಲ್ಲಿ ಪ್ರಾರಂಭಿಸಿದರು. ಸ್ತ್ರೀಶಕ್ತಿ ಸಂಘದ ಪರಿಕಲ್ಪನೆಯಲ್ಲಿ ಎಲ್ಲ ಮಹಿಳೆಯರು ಆರ್ಥಿಕ ಸ್ವಾವಲಂಬನೆಯ ಬದುಕನ್ನು ನಡೆಸಲು ಕಾರಣೀಭೂತರಾದರು. ಜ್ಞಾನವಿಕಾಸ ಕಾರ್ಯಕ್ರಮಗಳ ಮೂಲಕ ಲಕ್ಷಾಂತರ ಅನಕ್ಷರಸ್ಥ ಮಹಿಳೆಯರಿಗೆ ಜೀವನ ಶಿಕ್ಷಣವನ್ನು ಧಾರೆ ಎರೆದಿದ್ದಾರೆ. ಗ್ರಾಮೀಣ ಮಹಿಳೆಯರಿಂದ ಸ್ವಸಹಾಯ ಸಂಘವನ್ನು ರಚಿಸಿ, ಅವರನ್ನು ಸಬಲೀಕರಿಸಿದರು.

ವಾತ್ಸಲ್ಯ ಕಾರ್ಯಕ್ರಮದ ಮೂಲಕ ಕುಟುಂಬದವರಿಂದ ನಿರ್ಲಕ್ಷ್ಯಕ್ಕೊಳಗಾದವರಿಗೆ ಆಸರೆಯಾದರು. ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಯ ಮೂಲಕ ಗ್ರಾಮೀಣ ಮಹಿಳೆಯರ ಆರ್ಥಿಕ ಸಬಲೀಕರಣದತ್ತ ಚಿಂತನೆ ನಡೆಸಿದರು. ಹೀಗೆ ಹತ್ತು ಹಲವು ಸಾಮಾಜಿಕ ಕಾರ್ಯಗಳ ಮೂಲಕ ಸಮಾಜಕ್ಕೆ ವಿಶಿಷ್ಟ ಕೊಡುಗೆ ನೀಡುತ್ತಿದ್ದಾರೆ.

ಸಾಹಿತ್ಯ ಪ್ರೀತಿ

ಮಹಿಳೆಯರಿಗೆ ಸಹಾಯ ಮಾಡಲೇಬೇಕೆಂಬ ಅವರ ಬದ್ಧತೆ ಅವರನ್ನು ಭಿನ್ನವಾಗಿ ಯೋೀಚಿಸುವಂತೆ ಮಾಡಿತು. ಏಕಕಾಲದಲ್ಲಿ ಎಲ್ಲ ಮಹಿಳೆಯರನ್ನು ಮುಟ್ಟಬಲ್ಲ ಒಂದು ಮಾಧ್ಯಮದ ಬಗ್ಗೆ ಯೋಚಿಸಿದರು. ಆಗ ಅವರಿಗೆ ಹೊಳೆದದ್ದೇ ಬರಹ. ಮಹಿಳೆಯರಿಗೆ ಹೇಳಬೇಕಾದ ಎಲ್ಲ ಮಾತುಗಳನ್ನು ಬರಹದ ಮೂಲಕ ತಲುಪಿಸುವ ವ್ಯವಸ್ಥೆಗೆ ಅಣಿಯಾದರು.

ಈ ಉದ್ದೇಶದಿಂದ ವಿವಿಧ ವಿಚಾರ, ಸಮಾಜಿಕ ಕಳಕಳಿಯ ಲೇಖನಗಳು ಬರೆಯಲು ಆರಂಭಿಸಿದರು. ಮಂಜುವಾಣಿ ಮಾಸ ಪತ್ರಿಕೆಯಲ್ಲಿ ಮಗಳಿಗೊಂದು ಪತ್ರ, ‘ನಿರಂತರ’ದಲ್ಲಿ ‘ಗೆಳತಿ’ ಎಂಬ ಅಂಕಣಗಳ ಮೂಲಕ ತನ್ನದೇ ಶೈಲಿಯಲ್ಲಿ ಬರಹಗಳ ಮೂಲಕ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಅಂಕಣ ಬರಹಗಳು ಪುಸ್ತಕ ರೂಪದಲ್ಲೂ ಪ್ರಕಟವಾಗಿವೆ. ನಿರಂತರ ಮಾಸ ಪತ್ರಿಕೆಯ ಗೌರವ ಸಂಪಾದಕರಾಗಿದ್ದಾರೆ.

ಕ್ಷೇತ್ರದ ಹತ್ತಾರು ಮಹತ್ತರವಾದ ಹೊಣೆಗಾರಿಕೆಯ ನಡುವೆಯೂ ಹೇಮಾವತಿ ಹೆಗ್ಗಡೆಯವರ ಸಾಹಿತ್ಯಾಸಕ್ತಿ ಕುಂದಿಲ್ಲ. ಬದಲು ಬೆಳೆದುಕೊಂಡು ಬಂದಿದೆ. ಇಂದಿಗೂ ಒಂದು ಒಳ್ಳೆಯ ಪುಸ್ತಕದ ಹೆಸರನ್ನು ಕೇಳಿದರೆ ಸಾಕು ಅದನ್ನು ತರಿಸಿಕೊಂಡು ಓದಿಯೇ ಓದುತ್ತಾರೆ ಹೇಮಾವತಿ ವೀ. ಹೆಗ್ಗಡೆಯವರ ಕವನ ಸಂಕಲನದಲ್ಲಿ ಅವರು ಬರೆದ ಕವನಗಳು ಒಂದಕ್ಕೊಂದು ಭಿನ್ನ, ಇಲ್ಲಿ ‘ಜ್ಞಾನವಿಕಾಸ ಕೇಂದ್ರ’ದ ಪ್ರಾರ್ಥನಾ ಪದ್ಯವಿದೆ.

ಪ್ರಾರ್ಥನಾ ಗೀತೆಗಳಿವೆ, ಕೋಲಾಟವಿದೆ, ತಾಯಿ ಭಾರತಿಯ ಮುಡಿಗೆ ಕಿರೀಟವಾದವರ ನೆನಪಿನ ನೇವರಿಕೆಗಳಿವೆ. ಲಕ್ಷ ದೀಪೋತ್ಸವದಲ್ಲಿ ಕಂಗೊಳಿಪ
ಧರ್ಮಸ್ಥಳದ ವೈಭವದ ವರ್ಣನೆಯಿದೆ. ಅದರಡಿ ಜರುಗುವ ಸಾಹಿತ್ಯ ಸಮ್ಮೇಳನ, ಧರ್ಮ ಸಮ್ಮೇಳನಗಳೆಂಬ ದೀಪಗಳ ಬೆಳಕಿದೆ, ಪರಿಸರದ ಬಗೆಗಿನ ಅವರ ಕಾಳಜಿಯ ಕಣ್ಣೀರಿದೆ, ಹಕ್ಕಿಗಳ ಕಲರವ, ಬಾಹುಬಲಿಯ ತ್ಯಾಗ, ತಾಯಿಯ ಪ್ರೀತಿ, ಮಗಳ ರೀತಿ, ಮೊಮ್ಮಗಳ ಬಾಲ್ಯಗೀತೆ, ಶೋಭಾನೆ ಹಾಡು, ಕೂಸು ಒಪ್ಪಿಸುವ ಹಾಡು, ಉಪನಯನದ ಸಂದರ್ಭದಲ್ಲಿ ಆರತಿ ಹಾಡು, ಬೀಗರ ಹಾಡು, ಮೆಹಂದಿಗೆ, ತಾಳಿಬಂದಿಯ ಹಾಡು, ಬಾಸಿಂಗ ಬಂಗಾರದೊಡವೆ ಹಾಕುವಾಗ, ಅರಿಸಿನ ಹಚ್ಚುವಲ್ಲಿ, ಹಸೆಮಣೆ ಹಾಡುಗಳು, ಸೀಮಂತಕ್ಕೆ ಹರಸುವ ಹಾಡು, ಜೋಗುಳದ ಹಾಡು ಇತ್ಯಾದಿಗಳಿವೆ.

ಇವಿಷ್ಟು ಲೌಕಿಕವಾದ ಕವನಗಳಾದರೆ, ಪಾರಮಾರ್ಥಿಕವಾದ ಕವನಗಳೂ ಇಲ್ಲಿವೆ. ಅವರು ಪಾರಮಾರ್ಥಿಕ ಕವನಗಳಲ್ಲಿ ಮಹಾವೀರ ಸ್ವಾಮಿ ಜೋಗುಳ, ಗೊಮ್ಮಟ ಸ್ತುತಿ, ಗರ್ಭಾವತರಣ ಕಲ್ಯಾಣ, ಪದ್ಮಾವತಿ ದೇವಿಸ್ತುತಿ, ಕುಡುಮಾಧೀಶನ ಬಗ್ಗೆ, ಅಷ್ಟವಿಧಾರ್ಚನೆ ಹಾಡು, ಜಿನದೇವನ ಸ್ತುತಿ, ಜಿನದೇವಗಾರತಿ ಜೊತೆಗೆ ಕ್ಷೇತ್ರದಲ್ಲಿ ಜರಗುವ ಭಜನಾ ಕಮ್ಮಟಕ್ಕೂ ಇವರ ಕವನಗಳ ಕೊಡುಗೆ ಇದೆ. ಅವರ ಸಾಹಿತ್ಯದ ಭಾಷೆ ಶುದ್ಧವೂ,
ಸರಳವೂ ಸುಭಗವೂ ಆಗಿದೆ. ಇದು ಓದುಗನನ್ನು ಲೀಲಾಜಾಲವಾಗಿ ಓದಿಸುತ್ತಾ ವಸ್ತು ವಿಷಯವನ್ನು ಹೊಂದಿದೆ. ನಾಟಕ ರಚನೆ, ನಿರ್ದೇಶನ, ಸಂಯೋಜನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ನೃತ್ಯ, ನೃತ್ಯ ರೂಪಕ ಮುಂತಾದ ವಿವಿಧ ಕಲಾ ಪ್ರಕಾರಗಳನ್ನು ಸಾಹಿತ್ಯದೊಂದಿಗೆ ಸಮ್ಮಿಳಿತಗೊಳಿಸಿ ಪ್ರಯೋಗಶೀಲತೆಯ ಮೂಲಕ ಪ್ರೋತ್ಸಾಹ ಒದಗಿಸುತ್ತಾ ಬಂದಿದ್ದಾರೆ.

ಜಾನಪದ ಕಲಾ ಸಾಹಿತ್ಯಗಳ ಬಗ್ಗೆ ಅಪಾರ ಒಲವು ಹೊಂದಿರುವ ಅವರು ಅವುಗಳನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೂ ಅವುಗಳ ಮಹತ್ವ ತಿಳಿಸುವ, ಅರಿವು ಮೂಡಿಸುವ ಮಹತ್ತರವಾದ ಆಕಾಂಕ್ಷೆ ಹೊಂದಿದ್ದಾರಲ್ಲದೆ, ಕಾರ್ಯ ಪ್ರವೃತ್ತರಾಗಿದ್ದಾರೆ. ಹೇಮಾವತಿ ಹೆಗ್ಗಡೆಯವರಿಗೆ ಪ್ರತಿಷ್ಠಿತ ಮಂಗಳೂರು ವಿಶ್ವವಿದ್ಯಾನಿಲಯ ಈ ವರ್ಷ ತನ್ನ ನಲವತ್ತನೆ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಘನವೆತ್ತ ಕರ್ನಾಟಕ ರಾಜ್ಯದ ಗೌರವಾನ್ವಿತ
ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ರವರು ಶಿಕ್ಷಣ ಮತ್ತು ಸಮಾಜ ಸೇವೆ ಕ್ಷೇತ್ರಾಧಾರಿತ ಗೌರವ ಡಾಕ್ಟರೇಟ್ ಪುರಸ್ಕಾರವನ್ನು ನೀಡಿ ಗೌರವಿಸಿದರು. ಇವರ ವಿವಿಧ ಕ್ಷೇತ್ರಗಳಲ್ಲಿನ ಇವರ ಸೇವ ಸಾಧನೆ ಪರಿಗಣಿಸಿ ಅನೇಕ ಸಂಘ-ಸಂಸ್ಥೆಗಳು, ಸರಕಾರ ಅವರನ್ನು ಗೌರವಿಸಿದೆ.

ಜಿಲ್ಲಾ ಸಾಹಿತ್ಯ ಸಮ್ಮೇಳನದ ತಯಾರಿಗಳ ಕುರಿತು ಇಂದು ಸಂಜೆ 5 ಗಂಟೆಗೆ ಉಜಿರೆಯ ಶ್ರೀ ಕೃಷ್ಣಾನುಗ್ರಹ ಸಭಾಭವನದಲ್ಲಿ ಪೂರ್ವಭಾವಿ ಸಭೆ ನಡೆಯಲಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
154
Deepak Atavale

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು