ಪುತ್ತೂರು: ಅಪ್ರಾಪ್ತ ವಿದ್ಯಾರ್ಥಿನಿಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆಂಬ ಆರೋಪಕ್ಕೆ ಸಂಬಂಧಿಸಿ ಪುತ್ತೂರಿನ ಪ್ರತಿಷ್ಠಿತ ಖಾಸಗಿ ವಿದ್ಯಾಸಂಸ್ಥೆಯ ದೈಹಿಕ ಶಿಕ್ಷಣ ನಿರ್ದೇಶಕರೊಬ್ಬರನ್ನು ಪೋಕ್ಸೊ ಕಾಯ್ದೆಯಡಿ ಮಹಿಳಾ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಪ್ರತಿಷ್ಠಿತ ಖಾಸಗಿ ವಿದ್ಯಾಸಂಸ್ಥೆಯ ದೈಹಿಕ ಶಿಕ್ಷಣ ನಿರ್ದೇಶಕ ಕೊಂಬೆಟ್ಟು ನಿವಾಸಿ ಎಲ್ಯಾಸ್ ಪಿಂಟೋ ಬಂಧಿತ ಆರೋಪಿ.
ವಿದ್ಯಾಸಂಸ್ಥೆಯ ವಸತಿ ನಿಲಯದಲ್ಲಿರುವ ಮಡಿಕೇರಿ ಮೂಲದ ಅಪ್ರಾಪ್ತ ವಿದ್ಯಾರ್ಥಿನಿಗೆ ಅ.23ರಂದು ಲೈಂಗಿಕ ಕಿರುಕುಳ ನೀಡಿದ್ದು, ಆಕೆ ಈ ವಿಚಾರವನ್ನು ತನ್ನ ಪೋಷಕರಿಗೆ ತಿಳಿಸಿದ್ದರು.
ಆಕೆಯ ಪೋಷಕರು ಸಂಸ್ಥೆಗೆ ಬಂದು ಆಕೆಯನ್ನು ವಿಚಾರಿಸಿ ಬಳಿಕ ಅ.25ರಂಂದು ಸಂಜೆ ಘಟನೆಯ ಕುರಿತು ಪುತ್ತೂರು ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ವಿದ್ಯಾರ್ಥಿನಿ ನೀಡಿದ ದೂರಿನಂತೆ ದೈಹಿಕ ಶಿಕ್ಷಣ ನಿರ್ದೇಶಕ ಎಲ್ಯಾಸ್ ಪಿಂಟೋ ಅವರ ವಿರುದ್ಧ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದು, ಆರೋಪಿಯನ್ನು ಮಹಿಳಾ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ತಿಮ್ಮಪ್ಪ ನಾಯ್ಕ ನೇತೃತ್ವದಲ್ಲಿ ಪುತ್ತೂರು ಕ್ಲಬ್ ಬಳಿ ಬಂಧಿಸಲಾಗಿದೆ.
ಸೊಂಟ ನೋವು ಎಂದು ಹೇಳಿದ್ದ ವಿದ್ಯಾರ್ಥಿನಿಗೆ ಎಲ್ಯಾಸ್ ಪಿಂಟೋ ವ್ಯಾಯಾಮ ಮಾಡಿಸಿದರೆಂದೂ ಈ ವೇಳೆ ಆಕೆಯ ಸೊಂಟ ಮುಟ್ಟಿದರೆಂದೂ ಆರೋಪ ಕೇಳಿ ಬಂದಿದೆ. ಕಳೆದ ಹಲವಾರು ವರ್ಷಗಳಿಂದ ನೃತ್ಯ ತರಬೇತಿಯೂ ನೀಡುತ್ತಿರುವ ಮತ್ತು ದೈಹಿಕ ಶಿಕ್ಷಣ ನಿರ್ದೇಶಕರಾಗಿ ನೂರಾರು ಕ್ರೀಡಾ ಪ್ರತಿಭೆಗಳನ್ನು ಬೆಳೆಸಿರುವ ಎಲ್ಯಾಸ್ ಪಿಂಟೋ ಇಂತಹ ಆರೋಪದಡಿ ಬಂಧಿತರಾಗಿದ್ದಾರೆ ಎಂಬ ವಿಚಾರ ಪ್ರಚಾರ ಆಗುತ್ತಿದ್ದಂತೆಯೇ ಅವರ ಆಪ್ತರು ದಿಗ್ಬ್ರಮೆ ವ್ಯಕ್ತಪಡಿಸಿದ್ದಾರೆ.