News Karnataka Kannada
Tuesday, May 07 2024
ಮಂಗಳೂರು

ಬದುಕಿನ ಹಕ್ಕನ್ನು ವಂಚಿಸುವ ಬಗ್ಗೆ ಧ್ವನಿ ಎತ್ತುವುದು ಅತೀ ಅಗತ್ಯ ; ಎಚ್.ಎನ್. ನಾಗಮೋಹನ್ ದಾಸ್

Ailu
Photo Credit : News Kannada

ಮಂಗಳೂರು, ಫೆ. 18 : ನಮ್ಮನ್ನಾಳುವವರು ಮತಾಂತರದಂತಹ ಭಾವನಾತ್ಮಕ ವಿಚಾರಗಳನ್ನು ಮುಂದಿಟ್ಟು ಬದುಕಿನ ಮೂಲಭೂತ ಹಕ್ಕುಗಳಿಂದ ನಮ್ಮನ್ನು ವಂಚಿತರನ್ನಾಗಿಸುತ್ತಿರುವುದರ ಬಗ್ಗೆ ಐಕ್ಯ ಹೋರಾಟದ ಅಗತ್ಯವಿದೆ ಎಂದು ಹೈಕೋರ್ಟ್ ನಿವೃತ್ತ ನ್ಯಾಯಾಧೀಶ ಎಚ್.ಎನ್. ನಾಗಮೋಹನದಾಸ್ ಅಭಿಪ್ರಾಯ ಪಟ್ಟರು.

ಅಖಿಲ ಭಾರತ ವಕೀಲರ ಸಂಘ (ಎಐಎಲ್‌ಯು) ಆಶ್ರಯದಲ್ಲಿ ನಗರದ ಸಹೋದಯ ಸಭಾಂಗಣದಲ್ಲಿ ಆಯೋಜಿಸಲಾದ ‘‘ಸಂವಿಧಾನ ಮತ್ತು ಮತಾಂತರ’’ ಎಂಬ ವಿಚಾರಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.

ಜನರ ಸಂಕಷ್ಟಗಳಿಗೆ ಪರಿಹಾರದ ಮಾರ್ಗವಾಗಿ ಹುಟ್ಟಿಕೊಂಡ ಧರ್ಮ ಪ್ರಜಾಪ್ರಭುತ್ವ ವಿರೋಧಿಯಾದಾಗ ಸಮಾಜಕ್ಕೆ ಮಾರಕವಾಗುತ್ತದೆ. ಇಂದು ನಾವು ಅಂತಹ ಕಾಲಘಟ್ಟದಲ್ಲಿದ್ದು, ಪ್ರಜಾಪ್ರಭುತ್ವವನ್ನು ವಿರೋಧಿಸುವ ಈ ಪ್ರಕ್ರಿಯೆಯನ್ನು ಹಿಮ್ಮೆಟ್ಟಿಸಬೇಕಾಗಿದೆ ಎಂದವರು ಹೇಳಿದರು.

ಮಾನವ ಹಕ್ಕುಗಳಿಗೆ ಬದ್ಧವಾಗಿರುವುದಾಗಿ ಹೇಳಿಕೊಂಡು ವಿಶ್ವಸಂಸ್ಥೆಯಲ್ಲಿ ನಾವು ಒಪ್ಪಂದಕ್ಕೆ ಸಹಿ ಹಾಕಿಕೊಂಡಿದ್ದೇವೆ. ಅದರಲ್ಲಿನ ಮಾನವ ಹಕ್ಕುಗಳನ್ನೇ ನಮ್ಮ ಸಂವಿಧಾನದಲ್ಲೂ ಸೇರ್ಪಡೆಗೊಳಿಸಲಾಗಿದೆ. ಧರ್ಮದ ಹಕ್ಕಿನ ಕುರಿತು ಸಂವಿಧಾನದಲ್ಲಿ ವ್ಯಾಖ್ಯಾನಿಸಲಾಗಿದ್ದು, ವ್ಯಕ್ತಿಯೊಬ್ಬ ತನಗೆ ಇಷ್ಟ ಬಂದ ಧರ್ಮವನ್ನು ಒಪ್ಪಿ ಅದನ್ನು ಪ್ರಚಾರ ಮಾಡುವ ಹಕ್ಕನ್ನು ಹೊಂದಿರುತ್ತಾನೆ. ಒಂದು ಮತದಿಂದ ಇನ್ನೊಂದು ಮತಕ್ಕೆ, ಪರಿವರ್ತನೆಯಾಗುವ ಹಕ್ಕು,

ಹೊಸ ಮತವನ್ನು ಹುಟ್ಟು ಹಾಕುವ ಹಕ್ಕನ್ನೂ ಆತ ಹೊಂದಿರುತ್ತಾನೆ. ತನಗೆ ಯಾವುದೇ ಧರ್ಮ ಇಲ್ಲ ಎಂದು ಘೋಷಿಸಿಕೊಳ್ಳುವ ಹಕ್ಕನ್ನೂ ವ್ಯಕ್ತಿಗೆ ಸಂವಿಧಾನದ ಅನುಚ್ಛೇದ 25ರ ಪ್ರಕಾರ ನೀಡಲಾಗಿದೆ. 1950ರಿಂದ ಇಂದಿನವರೆಗೂ ಈ ವಿಚಾರವನ್ನು ಹಲವಾರು ಪ್ರಕರಣಗಳು, ಸಂದರ್ಭಗಳಲ್ಲಿ ನ್ಯಾಯಾಲಯ ವ್ಯಾಖ್ಯಾನ ಮಾಡುತ್ತಲೇ ಬರುತ್ತಿದೆ. ಆದರೆ ಇಂದು ಮತಾಂತರ ಕಾಯಿದೆ ಜಾರಿಗೆ ಸರಕಾರ ಹೊರಟಿದೆ. ಇಷ್ಟು ವರ್ಷ ಇಲ್ಲದ್ದು ಈಗ ಯಾಕೆ ಎಂದು ಪ್ರಶ್ನಿಸಿದ ನಾಗಮೋಹನದಾಸ್, ಭಾವನಾತ್ಮಕ ವಿಚಾರಗಳನ್ನು ಮುಂದಿಟ್ಟು ಜನರನ್ನು ಶಿಕ್ಷಣ, ಆರೋಗ್ಯ, ಉದ್ಯೋಗ, ಆಹಾರದ ಮೊದಲಾದ ಬದುಕಿನ ಹಕ್ಕುಗಳಿಂದ ವಂಚಿತರನ್ನಾಗಿಸುವ ಬಗ್ಗೆ ಧ್ವನಿ ಎತ್ತಬೇಕಾದ ತುರ್ತು ಅಗತ್ಯವಿದೆ ಎಂದವರು ಹೇಳಿದರು.

ಎಐಎಲ್‌ಯು ಜಿಲ್ಲಾದ್ಯಕ್ಷ ಯಶವಂತ ಮರೋಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಹಿರಿಯ ನ್ಯಾಯವಾದಿಗಳಾದ ನಾರಾಯಣಪೂಜಾರಿ, ಇಬ್ರಾಹಿಂ ಉಪಸ್ಥಿತರಿದ್ದರು. ಎಐಎಲ್‌ಯು ಕಾರ್ಯದರ್ಶಿ ರಾಮಚಂದ್ರ ಬಿ. ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
15229
Jaya Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು