News Karnataka Kannada
Thursday, May 02 2024
ಮಂಗಳೂರು

ಧರ್ಮಸ್ಥಳ ಲಕ್ಷದೀಪೋತ್ಸವದ 89 ನೇ ಸರ್ವಧರ್ಮ ಸಮ್ಮೇಳನದಲ್ಲಿ ಭಾಗಿಯಾದ ರಾಜ್ಯಪಾಲರು

Dharmasthala
Photo Credit :

ಬೆಳ್ತಂಗಡಿ: ಸರ್ವರೂ ಸುಖಿಗಳಾಗಿರಬೇಕು, ನಿರೋಗಿಗಳಾಗಿರಬೇಕು ಎಂಬ ನಮ್ಮ ಪೂರ್ವಜರ ಆಶಯವನ್ನು ಸಾಕಾರಗೊಳಿಸಲು ಶ್ರೀಕ್ಷೇತ್ರ ಧರ್ಮಸ್ಥಳ ಅಹರ್ನಿಶಿ ಶ್ರಮಿಸುತ್ತಿದೆ ಎಂದು ರಾಜ್ಯದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಹೇಳಿದರು.

ಧರ್ಮಸ್ಥಳ ಲಕ್ಷದೀಪೋತ್ಸವದ ಸಂದರ್ಭ ಗುರುವಾರ ನಡೆದ 89 ನೇ ಸರ್ವಧರ್ಮ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಈ ಕ್ಷೇತ್ರಕ್ಕೆ ಬರಬೇಕು ಎಂದು ಹಲವು ಸಮಯದಿಂದ ಆಸೆ ಪಟ್ಟಿದ್ದೆ. ಅದು ಇಂದು ಸಾಕಾರಗೊಂಡಿದೆ. ಮಂಜುನಾಥನ ಚರಣದತ್ತ ಬಂದಿದ್ದೇನೆ. ಮಾನವ ವಿಕಾಸದ ಸರ್ವೋತ್ಕೃಷ್ಟ ಸ್ಥಳ ಇದು. ಭಕ್ತಿಯ ಮೂಲಕ ಸಾಮಾಜಿಕ ಪರಿವರ್ತನೆಯನ್ನೂ ಮಾಡಲಾಗುತ್ತಿದೆ. ಇದರಿಂದ ದೇವಸ್ಥಾನದ ಪರಂಪರೆ ಉನ್ನತಿಗೇರಿದೆಯಲ್ಲದೆ ದೇಶದಲ್ಲಿ ಮಾತ್ರವಲ್ಲದೆ ವಿಶ್ವವ್ಯಾಪಿಯಾಗುತ್ತಿದೆ ಎಂದರು.

ಧಾರ್ಮಿಕತೆ, ಸಾಂಸ್ಕೃತಿಕತೆಯೊಂದಿಗೆ ಆರ್ಥಿಕ ಪ್ರಗತಿಗೆ ಅನೇಕ ಯೋಜನೆಗಳನ್ನು ಇಲ್ಲಿ ತಂದಿರುವುದು ಅದ್ವಿತೀಯ. ಹೆಗ್ಗಡೆಯವರ ಸರಳತೆ, ಆದರ್ಶ ಜೀವನ ಎಲ್ಲರಿಗೂ ಪ್ರೇರಣೆ ನೀಡುವಂತಾಗಿದೆ. ಅವರು ತಿಳಿಸಿದ ಮಾರ್ಗದಲ್ಲಿ ಎಲ್ಲರೂ ಮುನ್ನಡೆಯುವಂತಾಗಬೇಕು. ಮಾನವ ಸೇವೆಗಾಗಿ ಅವರಿಗೆ ಪದ್ಮವಿಭೂಷಣ ಸಂದಿರುವುದನ್ನು ನೆನಪಿಸಿದ ಅವರು ಧರ್ಮಾಧಿಕಾರತ್ವದ ಸುವರ್ಣ ಕಾಲ ಇದಾಗಿದೆ ಎಂದು ವಿಶ್ಲೇಷಿಸಿದರು.

ಪ್ರತಿಯೊಂದು ಸಂಪ್ರದಾಯಗಳಲ್ಲಿ ಪ್ರೇಮದ ತತ್ವವಿದೆ. ಸರಕಾರಗಳ ಚಿಂತನೆಯೂ ಸರ್ವಧರ್ಮಸಮಭಾವವೇ ಆಗಿದೆ. ನಮ್ಮ ದೇಶದ ಪರಂಪರೆ, ಸಂಸ್ಕೃತಿ ಪ್ರಪಂಚಕ್ಕೆ ತಿಳಿಯುವಂತಾಗಬೇಕು. ವಸುಧೈವ ಕುಟುಂಬಕಂ ಭಾರತೀಯ ಕಲ್ಪನೆಯಾಗಿದೆ. ವಿಶ್ವದ ಎಲ್ಲಾ ದೇಶಗಳಲ್ಲಿ ಇಂತಹ ಸಮ್ಮೇಳನ ನಡೆಯಬೇಕು ಎಂದು ರಾಜ್ಯಪಾಲರು ಬಯಸಿದರು.

ಅಧ್ಯಕ್ಷತೆ ವಹಿಸಿದ್ದ ಬೆಂಗಳೂರಿನ ಎಸ್.ವ್ಯಾಸ ಯೋಗ ವಿಶ್ವವಿದ್ಯಾಲಯ ವಿಶ್ರಾಂತ ಕುಲಪತಿ ಪ್ರೊ. ರಾಮಚಂದ್ರ ಭಟ್ಟ ಅವರು, ಧರ್ಮವು ಸಮಸ್ತ ವಿಶ್ವದ ಚಾಲನೆಗೆ ಆಧಾರ. ಧರ್ಮದಲ್ಲಿಯೇ ಎಲ್ಲವೂ ಪ್ರತಿಷ್ಠಿತವಾಗಿದೆ. ಧರ್ಮದಲ್ಲಿ‌ ಬುದ್ಧಿ ನೆಲೆಗೊಳ್ಳಬೇಕು. ಧರ್ಮದಲ್ಲಿ ವೈಯಕ್ತಿಕ ಬೇಡಿಕೆಗಳನ್ನು ತಂದಾಗ ಅದು ಸಂಕುಚಿತವಾಗುತ್ತದೆ. ದೇಹ, ಭೌತಿಕತೆ, ಐಂದ್ರಿಕತೆ ಈ ಎಲ್ಲವನ್ನು ದಾಟಿ ಹೋದಾಗ ಧರ್ಮದ ಮರ್ಮ ತಿಳಿಯುತ್ತದೆ‌. ಪೂಜೆ, ಪುನಸ್ಕಾರಗಳು ತನಗಾಗಿ ಎಂಬ ವ್ಯಾಖ್ಯೆಯಿಂದ ನಾವು ಮೀರಿ ನಿಲ್ಲಬೇಕು. ಮತ- ಸಂಪ್ರದಾಯಗಳ ನೆಲೆಯನ್ನು ಹುಟ್ಟು ಹಾಕಿದ ವ್ಯಕ್ತಿಗಳ ಅನುಯಾಯಿಗಳಿಂದಾಗಿ ಮೌಢ್ಯ,ದ್ವೇಷ, ಅಸೂಯೆಗಳು ಪಸರಿಸುತ್ತಿವೆ ಎಂದು ವಿಶ್ಲೇಷಿಸಿದರು.

ಭಾರತೀಯ ಶಿಕ್ಷಣ ಪದ್ಧತಿಯಲ್ಲಿ ಸಾಮರಸ್ಯ ಪರಂಪರೆಯನ್ನು ಅಳವಡಿಸಬೇಕು. ಶಿಕ್ಷಣ ಸಂಸ್ಕೃತ-ಸಂಸ್ಕೃತಿಯ ವಾಹಕವಾಗಬೇಕು. ಮನುಷ್ಯ- ಮನುಷ್ಯನ ನಡುವೆ ಬಿರುಕು ತರುವುದು ಎಂದಿಗೂ, ಯಾವತ್ತಿಗೂ ಮಾನ್ಯವಾಗುವುದಿಲ್ಲ. ಇಲ್ಲಿ ಹೆಗ್ಗಡೆಯವರು ಭೇಟಿಯಾದ ಸಾವಿರಾರು ಭಕ್ತರೊಂದಿಗೆ ಆಪ್ತಸಂವಾದ ನಡೆಸುವುದನ್ನು ನಾನು ಪ್ರತ್ಯಕ್ಷ ಕಂಡಿದ್ದೇನೆ. ಇದು ಭಗವಂತನ‌ ಪ್ರೇರಣೆಯಿಂದ ಮಾತ್ರ ಸಾಧ್ಯ ಎಂದರು.

ಹೃದಯಗಳನ್ನು ಬೆಸೆಯೋಣ, ಹಲ್ಲುಗಳನ್ನು ಮಸೆಯದಿರೋಣ. ಯಾವುದೇ ಮತ- ಸಂಪ್ರದಾಯಗಳ ಮೂಲ ಶಾಂತಿ, ಸಹಬಾಳ್ವೆಯೇ ಆಗಿದೆ. ಪ್ರಕೃತಿ ಪ್ರೇಮಿ ಜೀವನ ನಮ್ಮದಾಗಬೇಕು. ಸಂಸ್ಕೃತ- ಸಂಸ್ಕಾರ-ಸಂಸ್ಕೃತಿ ಇದು ವಿಶ್ವಕ್ಕೇ ಸೇರಿದ ವಿಚಾರ. ಎಲ್ಲಾ ಶಿಕ್ಷಣ ತಜ್ಞರು ಬಯಸುತ್ತಿರುವುದು ನಾಲ್ಕಕ್ಷರವಿರುವ ” ಗುರುಕುಲ” ವನ್ನು ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಸ್ವಾಗತಿಸುತ್ತಾ, ನಾನು ಪೀಠದ ಕರ್ತವ್ಯ ಸ್ವೀಕರಿಸಿದ ದಿನದಿಂದ ದೇಶದಲ್ಲಿನ ವಿಧ ವಿಧರ್ಮಗಳ ಮಹತ್ ಸಂದೇಶಗಳ ಸದ್‌ವಿಚಾರಗಳನ್ನು ತಿಳಿದು ನಮ್ಮ ಪರಂಪರೆಯನ್ನು ಪಾಲಿಸುತ್ತಾ, ಯಾವುದೇ ಸಂಕುಚಿತ ಭಾವನೆಗಳಿಗೆ ನಿರ್ಬಂಧಿಸಿಕೊಳ್ಳದೆ, ಪ್ರಗತಿಪರ ಚಿಂತನೆಗಳೊಂದಿಗೆ, ಲೌಕಿಕ ಹಾಗೂ ಪಾರಮಾರ್ಥಿಕ ಎರಡೂ ದಿಕ್ಕುಗಳಲ್ಲಿ ಕ್ಷೇತ್ರವನ್ನು ಮುನ್ನಡೆಸಿದ್ದೇನೆ ಎಂದರು.

ನಾಗರಿಕ ಸಮಾಜವೆಂದರೆ ಅಲ್ಲಿ‌ ಕಲೆ-ಸಂಸ್ಕೃತಿ, ಆಧ್ಯಾತ್ಮಿಕ, ಆರ್ಥಿಕ ಹೀಗೆ ಸಮಕಾಲೀನ ಸಮಾಜದ ಆಗುಹೋಗುಗಳಿಗೆ ಲಯಬದ್ಧವಾಗಿ ಸ್ಪಂದಿಸಿ ಧಾರ್ಮಿಕ ವಿಚಾರಗಳೊಂದಿಗೆ ವಿವೇಕ, ಕ್ಷಮೆ, ಸಹಾನುಭೂತಿ, ಶ್ರದ್ಧೆ, ಸತ್ಯಗಳನ್ನು ಒಳಗೊಂಡ ನಡತೆಯ ನಾಗರಿಕತೆಯ ಧರ್ಮದ ಮೂಲ ಜೀವದ್ರವ್ಯವಾಗಿದೆ ಎಂದರು.

ಸ್ವಾತಂತ್ರ್ಯ ದೊರಕಿದ ಬಳಿಕ 75 ವರ್ಷಗಳಲ್ಲಿ ನಮ್ಮ ಸಮಾಜದಲ್ಲಿ ಮೇಲು-ಕೀಳು ಎಂಬಂತಹ ವ್ಯತ್ಯಾಸ ಮೊದಲಿಗಿಂತ ಕಡಿಮೆಯಾಗಿದೆ. ಧರ್ಮದ ಮರ್ಮವಿರುವುದು ಆಚರಣೆಯಲ್ಲಿ. ಆದ್ಧರಿಂದಲೇ ಸತ್ಯಂ ವದ ಧರ್ಮಂ ಚರ ಎಂದು ಉಪನಿಷತ್ತಿನಲ್ಲಿ ಹೇಳಿರುವುದು ಎಂದು ಹೆಗ್ಗಡೆ ವಿವರಿಸಿದರು.

ಶ್ರೀಕ್ಷೇತ್ರ ಧ.ಗ್ರಾ.ಯೋಜನೆಯಲ್ಲಿ ರಾಜ್ಯಾದ್ಯಂತ 5 ಲಕ್ಷದ 55 ಸಾವಿರ‌ ಸ್ವಸಹಾಯ ಸಂಘಗಳಿದ್ದು 50 ಲಕ್ಷ‌ ಕುಟುಂಬಗಳು ಲಾಭ ಪಡೆಯುತ್ತಿವೆ. ಬ್ಯಾಂಕುಗಳಿಂದ 14 ಸಾವಿರ ಕೋಟಿಷ್ಟು ವ್ಯವಹಾರಕ್ಕೆ ಒದಗಿಸಲಾಗಿದೆ. 20 ಲಕ್ಷ ಮಂದಿ ಜೀವನ ಮಧುರ ಪಾಲಿಸಿ ಹೊಂದಿದ್ದಾರೆ. ಧರ್ಮೋತ್ಥಾನ ಟ್ರಸ್ಟ್ ಮೂಲಕ 843 ದೇವಾಲಯಗಳ ಪುನರ್ ನಿರ್ಮಾಣಕ್ಕಾಗಿ 14 ಕೋಟಿ ರೂ.ಗಳ ಸಹಾಯ ಮಾಡಲಾಗಿದೆ. ಕ್ಷೇತ್ರದ ವೈದ್ಯಕೀಯ, ಸಾಮಾಜಿಕ, ಶೈಕ್ಷಣಿಕ ಸಹಾಯಕ್ಕಾಗಿ ರೂ.61 ಕೋಟಿ 23 ಲಕ್ಷ ಕೈ ಧರ್ಮವಾಗಿ ನೀಡಲಾಗಿದೆ. ಆರ್‌ಸೆಟಿ ಮೂಲಕ ದೇಶಾದ್ಯಂತ 585 ತರಬೇತಿ ಕೇಂದ್ರಗಳಲ್ಲಿ 5 ಲಕ್ಷಕ್ಕೂ ಹೆಚ್ಚು ಮಂದಿಗೆ ಸ್ವ-ಉದ್ಯೋಗ ತರಬೇತಿ ನೀಡಿ ಸ್ವಂತ ಉದ್ಯೋಗ ಪ್ರಾರಂಭಿಸುವಂತೆ ಮಾಡಲಾಗಿದೆ .

ಕನ್ನಡ ಪ್ರಾಧ್ಯಾಪಕ, ಪರಸ್ಪರ ಸಾಹಿತ್ಯ ವೇದಿಕೆಯ ಅಧ್ಯಕ್ಷ ಡಾ. ಸರ್ಫಾಜ್ ಚಂದ್ರಗುತ್ತಿ ಅವರು ಭಾರತೀಯ ಧರ್ಮಗಳು ಎಂಬ ವಿಚಾರದ ಬಗ್ಗೆ, ಮೈಸೂರು ವಿ.ವಿ.ಯ ನಿವೃತ್ತ ಪ್ರಾಧ್ಯಾಪಕಿ ಡಾ.ಎಂ.ಎಸ್.ಪದ್ಮ ಅವರು ಜೈನ ಧರ್ಮದ ಮೌಲಿಕತೆ ಮತ್ತು ಮಹತ್ವದ ಕುರಿತು ಹಾಗೂ ಶಿವಮೊಗ್ಗ ಕ್ರೈಸ್ತ ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ಫಾ.ವೀರೇಶ್ ವಿ.ಮೊರಾಸ್ ಅವರು ಧರ್ಮ ಮತ್ತು ಸಾಮಾಜಿಕ ಸ್ವಾಸ್ಥ್ಯ ಎಂಬ ವಿಚಾರವಾಗಿ ಉಪನ್ಯಾಸ ನೀಡಿದರು.

ಉದ್ಘಾಟಕರ ಸಮ್ಮಾನ ಪತ್ರವನ್ನು ಉಪನ್ಯಾಸಕ ಸುನಿಲ್ ಪಂಡಿತ್, ಅಧ್ಯಕ್ಷರ ಸಮ್ಮಾನ ಪತ್ರವನ್ನು ಶ್ರದ್ಧಾ ಅಮಿತ್ ವಾಚಿಸಿದರು. ರಾಜ್ಯಪಾಲರನ್ನು ಹಾಗೂ ಅಧ್ಯಕ್ಷರನ್ನು ಡಾ.ಹೆಗ್ಗಡೆ ಸಮ್ಮಾನಿಸಿದರು. ಉಪನ್ಯಾಸಕರನ್ನು ಡಿ.ಸುರೇಂದ್ರ ಕುಮಾರ್ ಸಮ್ಮಾನಿಸಿದರು. ಧರ್ಮಸ್ಥಳ ಪಿ.ಡಿ.ಒ.ಉಮೇಶ್ ಕುಲಕರ್ಣಿ ವಂದಿಸಿದರು. ಎಸ್.ಡಿ.ಎಂ.ಉಪನ್ಯಾಸಕ ಡಾ.ಬಿ.ಎ.ಕುಮಾರ ಹೆಗ್ಡೆ ನಿರ್ವಹಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
154
Deepak Atavale

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು