ಬೆಂಗಳೂರು : “ಬುಧವಾರ ನಡೆದ ವಿಕೋಡ್ ವಿಶೇಷ ಲಸಿಕೆ ಮೇಳದಲ್ಲಿ 9.50 ಲಕ್ಷ ಡೋಸ್ ಲಸಿಕೆ ನೀಡಿದ್ದು, ಉತ್ತಮವಾಗಿ ಲಸಿಕಾಕರಣ ನಡೆದಿದೆ,” ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, “ಲಸಿಕೆ ಮೇಳದಲ್ಲಿ 9.50 ಲಕ್ಷ ಡೋಸ್ ಲಸಿಕೆ ನೀಡಲಾಗಿದೆ. ಈ ಮೂಲಕ ರಾಜ್ಯದಲ್ಲಿ ಎರಡನೇ ಡೋಸ್ ಪಡೆದವರ ಪ್ರಮಾಣ ಶೇಕಡ 62 ಕ್ಕೆ ಏರಿದೆ. ಮೊದಲ ಡೋಸ್ ಪಡೆದವರ ಪ್ರಮಾಣ ಶೇಕಡ 92 ಕ್ಕೆ ತಲುಪಿದೆ. ಎರಡೂ ಡೋಸ್ ಪಡೆದವರ ಪ್ರಮಾಣ ಶೇಕಡ 62 ಕ್ಕೆ ಏರಿದೆ. ನಿನ್ನೆವರೆಗೆ ಒಟ್ಟು 7.50 ಕೋಟಿ ಡೋಸ್ಗಳನ್ನು ನೀಡಲಾಗಿದೆ. ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ಕರ್ನಾಟಕ ಲಸಿಕೆ ನೀಡುವಲ್ಲಿ 2 ಅಥವಾ 3 ನೇ ಸ್ಥಾನದಲ್ಲಿದೆ. ಆರೋಗ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಶ್ರಮದಿಂದ ಈ ಸಾಧನೆ ಸಾಧ್ಯವಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಅಧಿಕಾರ ಸ್ವೀಕರಿಸಿದ ಬಳಿಕ ವಿಶೇಷ ಯೋಜನೆಗಳಿಗೆ ಬಹಳ ಒತ್ತು ನೀಡುತ್ತಿದ್ದಾರೆ,” ಎಂದು ಹೇಳಿದರು.
“ಮುಂದುವರಿದ ದೇಶಗಳಲ್ಲಿ ಕೂಡ ಲಸಿಕೆ ತೆಗೆದುಕೊಳ್ಳಲು ಜನರು ಹಿಂದೇಟು ಹಾಕುತ್ತಿದ್ದಾರೆ. ಆದರೆ ನಮ್ಮ ರಾಜ್ಯದಲ್ಲಿ ಜನರು ದೊಡ್ಡ ಪ್ರಮಾಣದಲ್ಲಿ ಲಸಿಕೆ ತೆಗೆದುಕೊಳ್ಳುತ್ತಿದ್ದಾರೆ. ಹೆಚ್ಚು ರೋಗ ನಿರೋಧಕ ಶಕ್ತಿ ಪಡೆಯಲು ಎರಡೂ ಡೋಸ್ ಗಳನ್ನು ಪಡೆಯಬೇಕು. ಲಸಿಕೆಯ ಒಂದು ಡೋಸ್ ಪಡೆದರೆ ಸ್ವಲ್ಪ ರೋಗ ನಿರೋಧಕ ಶಕ್ತಿ ಬರುತ್ತದೆ. ಸಂಪೂರ್ಣ ರೋಗ ನಿರೋಧಕ ಶಕ್ತಿಗಾಗಿ ಹಾಗೂ ವೈರಾಣು ವಿರುದ್ಧ ಸದೃಢವಾಗಿ ಹೋರಾಡಲು 2 ಡೋಸ್ ತೆಗೆದುಕೊಳ್ಳಬೇಕು. ಒಂದು ಕಣ್ಣಿದ್ದರೆ ಕಾಣಿಸುತ್ತದೆ. ಆದರೆ ಎರಡೂ ಕಣ್ಣುಗಳಿದ್ದರೆ ಸಂಪೂರ್ಣ ದೃಷ್ಟಿ ಸಿಗುತ್ತದೆ. ಹಾಗೆಯೇ ಕೊರೊನಾ ಲಸಿಕೆಯ 2 ಡೋಸ್ ತೆಗೆದುಕೊಂಡರೆ ಸಂಪೂರ್ಣ ರೋಗ ನಿರೋಧಕ ಶಕ್ತಿ ಸಿಗುತ್ತದೆ,” ಎಂದರು.