News Karnataka Kannada
Friday, May 03 2024
ಮಂಗಳೂರು

ಉಳಿವಿಗಾಗಿ ಹೋರಾಟ: ಭೂಮಿ ಕಳೆದುಕೊಳ್ಳುವ ಭೀತಿಯಲ್ಲಿ ಹೋರಾಟದ ಹಾದಿ ಹಿಡಿದ ಜನರು!

Ulivigagi Horata
Photo Credit : News Kannada

ಮಂಗಳೂರು: ಹೆಚ್ಚಿನ  ಬೃಹತ್ ಕೈಗಾರಿಕೆಗಳು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೆಲೆ ಕಂಡಿವೆ. ಆದರೆ ಈ ಕೈಗಾರಿಕೆಗಳ ಸ್ಥಾಪನೆಗಾಗಿ ಈ ಭಾಗದ ಜನತೆ ತಮ್ಮ ನೆಲೆಯನ್ನೇ ಕಳೆದುಕೊಂಡಿದ್ದಾರೆ.

ಇನ್ನೂ ಇಲ್ಲಿನ ಜನತೆ ಇಂತಹ ಕಂಠಕದಿಂದ ಪಾರಾದಂತಿಲ್ಲ. ಇದೀಗ ಕೈಗಾರಿಕಾ ವಲಯವೊಂದರ ಸ್ಥಾಪನೆಗಾಗಿ ಜಿಲ್ಲೆಯ ಮೂರು ಗ್ರಾಮಗಳ ಜನತೆ ತಮ್ಮ ಮೂಲ ನೆಲೆಯನ್ನೇ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಹೀಗಾಗಿ ಸಾವಿರಾರು ಎಕರೆ ಭೂಮಿ ಕಳೆದುಕೊಳ್ಳುವ ಭೀತಿಯಲ್ಲಿ ಜನರು ಹೋರಾಟದ ಹಾದಿ ಹಿಡಿದಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ಕಿನ್ನಿಗೋಳಿ ಸಮೀಪದ ಉಳೆಪಾಡಿ, ಬಳ್ಕುಂಜೆ, ಕೊಲ್ಲೂರು ಗ್ರಾಮಗಳನ್ನ ಸ್ವಾಧೀನ ಪಡೆದುಕೊಂಡು ಕೈಗಾರಿಕಾ ವಲಯ ಸ್ಥಾಪನೆಗೆ ‌ಪ್ಲಾನ್ ನಡೆದಿದೆ. 2022ರ ಮಾರ್ಚ್ 21ರಂದು ಈ ಮೂರೂ ಗ್ರಾಮಗಳ ಭೂಮಿ ಕೈಗಾರಿಕಾ ವಲಯ ಸ್ಥಾಪನೆಗೆ ಮೀಸಲಿರಿಸಿದ ಬಗ್ಗೆ ಸರ್ಕಾರ ಅಧಿಸೂಚನೆ ಪ್ರಕಟಿಸಿತ್ತು.

ಆದರೆ ಮೂರು ಗ್ರಾಮಗಳಲ್ಲಿ ಕೈಗಾರಿಕಾ ವಲಯ ನಿರ್ಮಾಣದ ಬಗ್ಗೆ ಕನಿಷ್ಠ ಪಕ್ಷ ಎಂಎಲ್ಎ, ಗ್ರಾಮ ಪಂಚಾಯತ್ ಗಳಿಗೂ ಮಾಹಿತಿ ಲಭ್ಯವಿಲ್ಲ. ಇದೀಗ ಒಂದು ವಾರದಿಂದ ಮೂರೂ ಗ್ರಾಮಗಳ ಮನೆಮನೆಗೂ ಕೆಐಎಡಿಬಿ ನೋಟಿಸ್ ನೀಡುತ್ತಿದೆ. ಪರಿಣಾಮ ಈ ಗ್ರಾಮಗಳ ನಿವಾಸಿಗಳು ತಾವು ಹುಟ್ಟಿ ಬೆಳೆದ ಮನೆ, ಕಷ್ಟಪಟ್ಟು ಬೆಳೆಸಿದ ಕೃಷಿ ಭೂಮಿ ಎಲ್ಲವನ್ನೂ ತೊರೆಯಬೇಕೆನ್ನುವ ವಿಚಾರ ತಿಳಿದು ಅಕ್ಷರಶಃ ಕಂಗಾಲಾಗಿದ್ದಾರೆ.

ಹೀಗಾಗಿ ಈ ಮೂರು ಗ್ರಾಮಗಳ ಗ್ರಾಮಸ್ಥರು, ರೈತರು ಹಾಗೂ ಕೆಲ ಸಮಾನ ಮನಸ್ಕರು ಬಳ್ಕುಂಜೆಯಲ್ಲಿ ಬೃಹತ್ ಪ್ರತಿಭಟನೆ ನಡೆಸಿದ್ದಾರೆ. ‌ಮಹಿಳೆಯರೂ ಕೂಡ ಪ್ರತಿಭಟನೆಯಲ್ಲಿ ಪಾಲ್ಗೊಂಡು ತಮ್ಮ ಭೂಮಿ ಕೊಡಲ್ಲ ಅಂತ ಪಟ್ಟು ಹಿಡಿದಿದ್ದಾರೆ.

ಇನ್ನು ಪ್ರತಿಭಟನೆಯಲ್ಲಿ ಗ್ರಾಮದ ಹಿರಿಯರು, ಪ್ರಮುಖರು ಮಾತನಾಡಿ, ಸರ್ವಧರ್ಮೀಯರು ತಮ್ಮ ಫಲವತ್ತಾದ ಭೂಮಿಗಾಗಿ ನಡೆಸುವ ಹೋರಾಟ ಇದು. ಯಾವುದೇ ಕಾರಣಕ್ಕೂ ಭೂಮಿ ಕೊಡಲ್ಲ ಅಂತ ಪ್ರತಿಜ್ಞೆ ಕೈಗೊಂಡರು. ಆ ಬಳಿಕ ಸರ್ಕಾರದ ಕ್ರಮ ವಿರೋಧಿಸಿ ಕೆಲ ಕಾಲ ಕಿನ್ನಿಗೋಳಿ-ಬಳ್ಕುಂಜೆ ರಸ್ತೆ ತಡೆದು ಪ್ರತಿಭಟನೆ ನಡೆಸಿದ್ರು. ಬಳಿಕ ಜಾಥ ಮೂಲಕ ತೆರಳಿ ಸರ್ಕಾರಕ್ಕೆ ಮುಂದಿನ ಹೋರಾಟದ ಸಂದೇಶ ರವಾನಿಸಿದ್ದಾರೆ.

ಬಳ್ಕುಂಜೆ, ಕೊಲ್ಲೂರು, ಉಳೆಪಾಡಿ ಮೂರೂ ಗ್ರಾಮಗಳು ಯಥೇಚ್ಛವಾಗಿ ನೀರು, ಕೃಷಿ ಇರುವ ಭೂಮಿ ಇರುವ ಪ್ರದೇಶ. ಇಲ್ಲಿನ ಜನತೆ ಕೃಷಿ, ಹೈನುಗಾರಿಕೆಯನ್ನೇ ಅವಲಂಬಿಸಿ ಬದುಕುತ್ತಿರುವವರು. ತೆಂಗು, ಅಡಿಕೆ, ಬಾಳೆ, ಕರಿಮೆಣಸು, ಭತ್ತ, ಕಬ್ಬು, ಉದ್ದು, ಹೆಸರು, ಎಳ್ಳು, ಹಣ್ಣುಹಂಪಲುಗಳನ್ನು ಬೆಳೆದು ಸ್ವಾವಲಂಬಿಯಾಗಿ ಬದುಕುತ್ತಿರುವವರು. ಇದೀಗ ಈ ಗ್ರಾಮಗಳ ಸಾವಿರಾರು ಕುಟುಂಬಗಳು ತಮ್ಮ ಆಸ್ತಿ-ಪಾಸ್ತಿ, ಕೃಷಿ ಭೂಮಿಯನ್ನೆಲ್ಲಾ ಬಿಟ್ಟು ಹೋಗಬೇಕಾಗಿದೆ. ಅಲ್ಲದೆ ಇಲ್ಲಿನ ಜನರು ತಮ್ಮ ಪೂರ್ವಜರ ಕಾಲದಿಂದ ನಂಬಿಕೊಂಡು ಬಂದಿರುವ ದೈವಸ್ಥಾನಗಳು, ದೇವಸ್ಥಾನ, ಮಸೀದಿ, ಚರ್ಚ್ ಕೈಗಾರಿಕಾ ವಲಯ ನಿರ್ಮಾಣದಡಿ ಅವಶೇಷವಾಗುವ ಭೀತಿಯಲ್ಲಿದೆ. ಅಲ್ಲದೆ ತುಳುನಾಡಿನ ಕಾರಣಿಕ ಪುರುಷರಾದ ಕಾಂತಾಬಾರೆ-ಬೂದಬಾರೆಯರ ಜನ್ಮಸ್ಥಾನಕ್ಕೆ ಸಂಬಂಧಪಟ್ಟ ಭೂಮಿ, ತುಳುನಾಡಿನ ಮೂಲ ನಿವಾಸಿಗಳಾದ ಕೊರಗ ಸಮುದಾಯ, ಇನ್ನಿತರ ದಲಿತ ಸಮುದಾಯಗಳೂ ಈ ಕೈಗಾರಿಕಾ ವಲಯ ನಿರ್ಮಾಣದಿಂದ ಸಂತ್ರಸ್ತರಾಗಿದ್ದಾರೆ.

ವಿಷಾದವೆಂದರೆ ಕರಾವಳಿಯಲ್ಲಿ ಅತೀ ಹೆಚ್ಚು ಕೃಷಿ ಭೂಮಿ ಹೊಂದಿರುವ ಕೊರಗ ಸಮುದಾಯದ 11 ಎಕರೆ ಕೃಷಿ ಭೂಮಿ, 42 ದೈವಗಳಿರುವ ದೈವಸ್ಥಾನಗಳು ಕಣ್ಮರೆಯಾಗಲಿದೆ. ಏನೇ ಆದರೂ ತಾವು ಯಾರೂ ಈ ಜಾಗವನ್ನು ಬಿಟ್ಟು ಹೋಗುವುದಿಲ್ಲ. ನಾವು ಕಷ್ಟಪಟ್ಟು ಬೆಳೆಸಿದ ಕೃಷಿಯು ಫಸಲಿಗಾಗುವ ಹೊತ್ತಿಗೆ ಬಿಟ್ಟು ಹೋಗಿ ಎಂದು ಹೇಳಿದರೆ ನಾವು ಎಲ್ಲಿಗೆ ಹೋಗಲಿ. ಕೃಷಿ ಬಿಟ್ಟು ನಮಗೇನು ಗೊತ್ತಿಲ್ಲ. ಈ ಇಳಿ ವಯಸ್ಸಿನಲ್ಲಿ ಮಕ್ಕಳು – ಮರಿಗಳನ್ನು ಕಟ್ಟಿಕೊಂಡು ಎಲ್ಲಿಗೆ ಹೋಗಲಿ‌. ನಮಗೆ ಪರಿಹಾರ ಬೇಡ, ನಮ್ಮ ಭೂಮಿಯನ್ನು ನಮಗೆ ಬಿಟ್ಟುಕೊಡಿ ಎಂದು ಹನಿಗಣ್ಣಾಗುತ್ತಾರೆ ಇಲ್ಲಿನ ಗ್ರಾಮಸ್ಥರು‌. ನಮ್ಮ ಫಲವತ್ತಾದ ಭೂಮಿಯನ್ನು ಆಪೋಶನ ಪಡೆದು ಕೈಗಾರಿಕಾ ವಲಯ ನಿರ್ಮಾಣ ಮಾಡಿದರೆ ಖಂಡಿತಾ ಯಾರೂ ಉದ್ಧಾರವಾಗೋದಿಲ್ಲ ಎಂದು ಹಿಡಿಶಾಪ ಹಾಕುತ್ತಿದ್ದಾರೆ.

ಒಟ್ಟಿನಲ್ಲಿ ಸರಕಾರ ಈ ಭಾಗದ ಜನರ ಅಹವಾಲಿಗೆ ಸರ್ಕಾರ ಕಿವಿಯಾಗಬೇಕಿದ್ದು, ಸಕಾರಾತ್ಮಕ ಸ್ಪಂದನೆ ನೀಡಿ ಇಲ್ಲಿಯ ಜನರಿಗೆ ನ್ಯಾಯ ಕೊಡಬೇಕಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು