News Karnataka Kannada
Sunday, May 12 2024
ಕರಾವಳಿ

ಪ್ಲಾಟಿನಂ ಜ್ಯುಬಿಲಿ (1953-2023) ಸಂಭ್ರಮದಲ್ಲಿ ಕಸ್ತೂರ್ಬಾ ಮೆಡಿಕಲ್‌ ಕಾಲೇಜು

Mani
Photo Credit : News Kannada

ಮಣಿಪಾಲ: ಮಣಿಪಾಲ ಮಾಹೆಯ ಪ್ರತಿಷ್ಠಿತ ಘಟಕವಾಗಿರುವ ಕಸ್ತೂರ್ಬಾ ಮೆಡಿಕಲ್‌ ಕಾಲೇಜು [ಕೆಎಂಸಿ] ತನ್ನ 70 ನೆಯ ವರ್ಷಾಚರಣೆ [ಪ್ಲಾಟಿನಂ ಜ್ಯುುಬಿಲಿ]ಯನ್ನು  ನವೆಂಬರ್‌ 20ರಂದು ಸಂಭ್ರಮೋಲ್ಲಾಸದಿಂದ ಆಚರಿಸಿತು. ಈ ಅರ್ಥಪೂರ್ಣ ಕಾರ್ಯಕ್ರಮವು ವೈದ್ಯಕೀಯ ಶಿಕ್ಷಣಕ್ಕೆ ಮತ್ತು ಆರೋಗ್ಯ ಪಾಲನೆಯ ಸೇವೆಗಳಿಗೆ ಕೆಎಂಸಿಯ ದೀರ್ಘಕಾಲೀನ ಬದ್ಧತೆಯ ಪ್ರತೀಕವಾಗಿದ್ದು, ಇದರಲ್ಲಿ ಗಣ್ಯರು, ಪ್ರಾಧ್ಯಾಪಕರು, ವಿದ್ಯಾರ್ಥಿಗಳು, ಪೂರ್ವವಿದ್ಯಾರ್ಥಿಗಳು ಪಾಲ್ಗೊಂಡರು.

ಕೆನಡಾದ ಬ್ರಿಟಿಷ್‌ ಕೊಲಂಬಿಯಾ ವಿಶ್ವವಿದ್ಯಾನಿಲಯದ ಮೂಳೆ ಚಿಕಿತ್ಸಾ ವಿಭಾಗದ ಪ್ರಾಧ್ಯಾಪಕ ಮತ್ತು ಮುಖ್ಯಸ್ಥರಾಗಿರುವ, ಕೆಎಂಸಿಯ ಅಭಿಮಾನದ ಪೂರ್ವವಿದ್ಯಾರ್ಥಿಯಾಗಿರುವ ಡಾ. ಕಿಶೋರ್‌ ಮುಲುಪುರಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಡಾ. ಮುಲುಪುರಿ ಅವರು ತಮ್ಮ ಭಾಷಣದಲ್ಲಿ ತಮ್ಮ ಔದ್ಯೋಗಿಕ ಜೀವನವನ್ನು ರೂಪಿಸುವಲ್ಲಿ ಪ್ರಧಾನ ಪಾತ್ರ ವಹಿಸಿದ ಕೆಎಂಸಿಯಲ್ಲಿ ಕಳೆದ ಅವಿಸ್ಮರಣೀಯ ದಿನಗಳನ್ನು ನೆನಪಿಸಿಕೊಂಡರು. ಬೃಹತ್‌ ಸಂಸ್ಥೆಯನ್ನು ಕಟ್ಟಿ ವೈದ್ಯಕೀಯ ಕ್ಷೇತ್ರಕ್ಕೆ ಗಣನೀಯ ಸೇವೆ ಸಲ್ಲಿಸುತ್ತಿರುವ ಡಾ. ಟಿ. ಎಂ. ಎ. ಪೈಯವರ ಕುಟುಂಬವನ್ನು ಅಭಿನಂದಿಸಿದರು.

ಮಾಹೆ ಟ್ರಸ್ಟ್‌ನ ವಿಶ್ವಸ್ತರಾದ ವಸಂತಿ ಆರ್‌. ಪೈ, ಮಾಹೆಯ ವರಿಷ್ಠರಾದ ಉಪಕುಲಪತಿ ಲೆ. ಜನರಲ್‌ [ಡಾ.] ಎಂ. ಡಿ. ವೆಂಕಟೇಶ್‌, ಆರೋಗ್ಯ ವಿಜ್ಞಾನ ವಿಭಾಗದ ಸಹಉಪಕುಲಪತಿ ಡಾ. ಶರತ್‌ ಕೆ. ರಾವ್‌, ರಿಜಿಸ್ಟ್ರಾರ್‌ ಪಿ. ಗಿರಿಧರ ಕಿಣಿ, ಸಲಹೆಗಾರ ಡಾ. ಪಿಎಲ್‌ಎನ್‌ಜಿ ರಾವ್‌, ಕೆಎಂಸಿಯ ಡೀನ್‌ ಡಾ. ಪದ್ಮರಾಜ ಹೆಗ್ಡೆಅವರು ಉಪಸ್ಥಿತರಿದ್ದರು. ಮಾಹೆಯ ಸಹಕುಲಾಧಿಪತಿಗಳಾದ ಡಾ. ಎಚ್‌. ಎಸ್‌. ಬಲ್ಲಾಳ್‌ ಅಧ್ಯಕ್ಷತೆ ವಹಿಸಿದ್ದರು.


‘ಮಣಿಪಾಲದ ಸವಿನೆನಪುಗಳು’ ಪ್ರಸ್ತುತಿಯೂ ಸೇರಿದಂತೆ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಆರಂಭವಾದ ಪ್ಲಾಟಿನಂ ಜ್ಯುಬಿಲಿ ಸಮಾರಂಭದ ಆರಂಭದಲ್ಲಿ ಕೆಎಂಸಿಯ ಡೀನ್‌ ಡಾ. ಪದ್ಮರಾಜ ಹೆಗ್ಡೆ ಸ್ವಾಗತಿಸಿದರು. ಡಾ. ವಸಂತಿ ಆರ್‌. ಪೈ ಡಾ. ಟಿಎಂಎ ಪೈಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು. ಇದೇ ಕಾರ್ಯಕ್ರಮದಲ್ಲಿ ವಿಭಿನ್ನ ವಿಭಾಗಗಳ ಮುಖ್ಯಸ್ಥರಿಗೆ ಮತ್ತು ಆಸ್ಪತ್ರೆಯ ಆಡಳಿತಾಧಿಕಾರಿಗಳಿಗೆ ಸಂಮಾನ, ಪ್ಲಾಟಿನಂ ಜ್ಯುಬಿಲಿ ಲಾಂಛನದ ಅನಾವರಣ, ಕೆಎಂಸಿಯ ಐತಿಹಾಸಿಕ ಸಾಧನೆಯ ಮತ್ತು ಭವಿಷ್ಯದ ಪಯಣದ ಬಗ್ಗೆ ಸಂವಾದಗೋಷ್ಠಿಗಳು ನಡೆದವು.

ಕೆಎಂಸಿಯ ಆರಂಭದ ದಿನಗಳಲ್ಲಿ ಡೀನ್‌ಗಳಾಗಿ ಗಣನೀಯ ಸೇವೆ ಸಲ್ಲಿಸಿದ ಡಾ. ಎನ್‌. ಮಂಗೇಶ್‌ ರಾವ್‌ [1953-1955), ಡಾ. ಆರ್. ಪಿ. ಕೊಪ್ಪೀಕರ್‌ [1956-1963) ಅವರನ್ನು ಸ್ಮರಿಸಲಾಯಿತು. ಕೆಎಂಸಿಯನ್ನು ಸಾಧನೆಯ ಪಥದಲ್ಲಿ ಒಯ್ದು ಖಾಸಗಿ ರಂಗದಲ್ಲಿ ಪ್ರತಿಷ್ಠಿತ ಮೆಡಿಕಲ್‌ ಕಾಲೇಜನ್ನಾಗಿ ಬೆಳೆಸಿದ ಮಾಜಿ ಡೀನ್‌ಗಳಾದ ಡಾ. ಎ. ಕೃಷ್ಣ ರಾವ್‌ (1963 -1985), ಡಾ. ಪಿ. ಲಕ್ಷ್ಮೀನಾರಾಯಣ ರಾವ್‌ (1985 -2001 ) , ಡಾ. ಆರ್‌ಎಸ್‌ಪಿ ರಾವ್‌ (2001 -2007), ಡಾ. ಶ್ರಿೀಪತಿ ರಾವ್‌ (2007-2013 ) , ಡಾ. ಜಿ. ಪ್ರದೀಪ್‌ ಕುಮಾರ್‌ ( 2013 -2015), ಡಾ. ಪೂರ್ಣಿಮಾ ಬಾಳಿಗಾ ಬಿ. ( 2015 -2017 ), ಡಾ. ಪ್ರಜ್ಞಾ ರಾವ್‌( 2017 -2019 ), ಡಾ. ಶರತ್‌ ಕುಮಾರ್‌ ರಾವ್‌ ಕೆ. ( 2019 -2022) ಇವರನ್ನು [ ಅಥವಾ ಇವರ ಕುಟುಂಬದ ಪ್ರತಿನಿಧಿಗಳನ್ನು ಸಮಾರಂಭದಲ್ಲಿ ಸಂಮಾನಿಸಲಾಯಿತು.

ಕೆಎಂಸಿಯ 70 ವರ್ಷಗಳಲ್ಲಿ ಸಾಧನೆಯ ಪಥದಲ್ಲಿ ಸಾಗಿ ಬಂದ ಬಗ್ಗೆ ಸಹಕುಲಾಧಿಪತಿಗಳಾದ ಡಾ. ಎಚ್‌. ಎಸ್. ಬಲ್ಲಾಳ್‌ ಮಾತನಾಡಿದರು. ಶೈಕ್ಷಣಿಕ ಮತ್ತು ಆರೋಗ್ಯಪಾಲನೆಯ ಕ್ಷೇತ್ರದಲ್ಲಿ ಕೆಎಂಸಿಯ ಉನ್ನತ ಸಾಧನೆಯ ಬಗ್ಗೆ ಉಪಕುಲಪತಿಗಳಾದ ಲೆ. ಜನರಲ್‌ [ಡಾ.] ಎಂ. ಡಿ. ವೆಂಕಟೇಶ್‌ ಉಲ್ಲೇಖಿಸಿದರು. ವೈದ್ಯಕೀಯ ಶಿಕ್ಷಣ ಮತ್ತು ಆರೋಗ್ಯ ರಕ್ಷಣೆಯ ಸುಧಾರಣೆಯ ಕುರಿತ ಕೆಎಂಸಿಯ ಬದ್ಧತೆ ಮತ್ತು ಭವಿಷ್ಯದ ದೂರದೃಷ್ಟಿತ್ವದ ಬಗ್ಗೆ ಡಾ, ಶರತ್‌ ರಾವ್‌ ಮಾತನಾಡಿದರು. ಸಮಾರಂಭದ ಅಂಗವಾಗಿ ಕೆಎಂಸಿಯ ಚೈತನ್ಯ ಮತ್ತು ಪರಂಪರೆಯನ್ನು ಪ್ರತಿನಿಧಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು. ಇದು ಕೇವಲ 70 ವರ್ಷಗಳ ಪಯಣದ ಸಂಭ್ರಮಾಚರಣೆಯಷ್ಟೇ ಆಗದೆ, ವೈದ್ಯಕೀಯ ಶಿಕ್ಷಣ ಮತ್ತು ಆರೋಗ್ಯಪಾಲನೆಯ ಕುರಿತ ಬದ್ದತೆಯನ್ನು ದೃಢೀಕರಿಸಿತು.

ಕೆಎಂಸಿಯ ಡೀನ್‌ ಡಾ. ಪದ್ಮರಾಜ ಹೆಗ್ಡೆ ಧನ್ಯವಾದ ಸಮರ್ಪಣೆ ಮಾಡಿದರು. ಸಹ-ಡೀನ್‌ಗಳಾದ ಡಾ. ಅನಿಲ್‌ ಭಟ್‌, ಡಾ. ಕೃಷ್ಣಾನಂದ ಪ್ರಭು, ಡಾ. ಕೃತಿಲತಾ ಪೈ, ಡಾ. ನವೀನ್‌ ಸಾಲಿನ್ಸ್‌, ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಪ್ಲಾಟಿನಂ ಜ್ಯುಬಿಲಿ ಸಂಭ್ರಮಾಚರಣೆಯ ಸಮಾರಂಭದ ಸಂಯೋಜನೆಯಲ್ಲಿ ಸಹಕರಿಸಿದರು. ಕೆಎಂಸಿ ಮಣಿಪಾಲ ಮತ್ತು ಕಾರ್ಯಕ್ರಮದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಡೆಪ್ಯುಟಿ ಡೈರೆಕ್ಟರ್‌-ಪಿಆರ್‌ ಇವರನ್ನು ಸಂಪರ್ಕಿಸಬಹುದು. [7338625909 ಅಥವಾ dpr.mu@manipal.edu.]

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು