News Karnataka Kannada
Thursday, May 09 2024
ಕರಾವಳಿ

ವಿದ್ಯಾರ್ಥಿನಿಯರಲ್ಲಿ ಸ್ವಯಂ ಜಾಗೃತಿ ಅಗತ್ಯ: ಡಿವೈಸ್ಪಿ ದಿನಕರ್ ಶೆಟ್ಟಿ

Photo Credit :

ವಿದ್ಯಾರ್ಥಿನಿಯರಲ್ಲಿ ಸ್ವಯಂ ಜಾಗೃತಿ ಅಗತ್ಯ: ಡಿವೈಸ್ಪಿ ದಿನಕರ್ ಶೆಟ್ಟಿ

ಪುತ್ತೂರು: ಹುಟ್ಟಿನಿಂದ ಸಾವಿನ ತನಕ ಮಹಿಳೆಯರ ರಕ್ಷಣೆಗಾಗಿ ವಿಶೇಷ ಕಾನೂನಿನ ವ್ಯವಸ್ಥೆ ಇದೆ. ಆದರೂ ಕಾನೂನು ಇರುವುದು ಅಪರಾಧ ಆದ ಬಳಿಕ. ಈ ನಿಟ್ಟಿನಲ್ಲಿ ತಮಗೆ ಆಗಿರುವ ತೊಂದರೆಯನ್ನು ಭಯ ಪಟ್ಟು ತಮ್ಮಲ್ಲೆ ಮುಚ್ಚಿಟ್ಟು ಇಲ್ಲದ ಸಮಸ್ಯೆಗಳನ್ನೂ ತಂದುಕೊಳ್ಳಬೇಡಿ. ಇದಕ್ಕಿಂದ ಸ್ವಯಂ ಜಾಗೃತಿ ಅಗತ್ಯ. ಎಲ್ಲಾ ಹಂತದಲ್ಲೂ ಮೈಯೆಲ್ಲಾ ಕಣ್ಣಾಗಿ ಜಾಗೃತರಾಗಿರಿ, ಎಷ್ಟೆ ದೊಡ್ಡ ಸ್ನೇಹಿತರಾದರೂ ನೂರಕ್ಕೆ ನೂರು ನಂಬಬೇಡಿ ಎಂದು ಡಿವೈಎಸ್ಪಿ ದಿನಕರ್ ಶೆಟ್ಟಿಯವರು ಹೇಳಿದರು.

ಕಾಲೇಜಿನ ಆಂತರಿಕ ಗುಣಮಟ್ಟ ಮೌಲ್ಯವರ್ಧನ ಸಂಘದ ಆಶ್ರಯದಲ್ಲಿ ಜಿಲ್ಲಾಡಳಿತದ ನಿರ್ದೇಶನದಂತೆ ಪೊಲೀಸ್ ಇಲಾಖೆ ವತಿಯಿಂದ ಜು.10ರಂದು ಬಪ್ಪಳಿಗೆ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಸಭಾಭವನದಲ್ಲಿ ಮಹಿಳಾ ಕಾಲೇಜಿನ ವಿದ್ಯಾರ್ಥಿನಿಯರಿಗೆ ಜಾಗೃತಿ ಕಾರ್ಯಕ್ರಮ ನಡೆಯಿತು.

ಕಾರ್ಯಗಾರದ ಅಧ್ಯಕ್ಷತೆ ವಹಿಸಿದ್ದ ಡಿವೈಎಸ್ಪಿ ದಿನಕರ್ ಶೆಟ್ಟಿಯವರು ಮಾತನಾಡಿ ಪೋಷಕರು ಮಕ್ಕಳ ಕುರಿತು ಬೆಟ್ಟದಷ್ಟು ಕನಸುಗಳನ್ನು ಇಟ್ಟುಕೊಂಡಿರುತ್ತಾರೆ. ಮೊದಲು ತಂದೆ-ತಾಯಿ ನಮ್ಮ ಮೇಲೆ ಇಟ್ಟಿರುವ ಕಾಳಜಿಯನ್ನು ಅರಿತುಕೊಳ್ಳಬೇಕು. ಯಾವುದಕ್ಕೆ ಮಹತ್ವ ನೀಡಬೇಕು ಎನ್ನುವುದು ನಮಗೆ ತಿಳಿದಿರಬೇಕು. ಹೆಣ್ಣು ಮಗು ಭೂಮಿ ಕಾಲಿಟ್ಟಲ್ಲಿಂದ, ವಯೋಸಹಜ ಸಾವಿನ ತನಕವೂ ಅವರ ರಕ್ಷಣೆಗೆ ಕಾನೂನು ಇದೆ. ಆದರೆ ಒಬ್ಬ ಅಪರಾಧಿಗೆ ಶಿಕ್ಷೆ ನೀಡಲಾಗುತ್ತದೆ ಆದರೂ ಆತನ ಕೃತ್ಯದಿಂದ ಸಂತ್ರಸ್ತರು ಸಾಕಷ್ಟು ನಷ್ಟ ಹೊಂದಿರುತ್ತಾರೆ. ಆತನ ಜೀವನದ ಅಮೂಲ್ಯ ಸಮಯ ಕಳೆದು ಕೊಂಡಿರುತ್ತಾನೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ತಮ್ಮ ಓದಿನ ಜೀವನದಲ್ಲಿ ಬಹಳಷ್ಟು ಜಾಗ್ರತೆಯಿಂದ ಇರಬೇಕು. ಓದಿನೊಂದಿಗೆ ಬೇರೆ ಬೇರೆ ಚಟುವಟಿಕೆಗಳ ಬಗ್ಗೆ ಎಚ್ಚರಿಕೆ ವಹಿಸಬೇಕೆಂದರು.

ಪರಿಚಯಸ್ಥರ ನಂಬಿಕೆಯಲ್ಲಿ ಎಚ್ಚರವಿರಲಿ: ಸ್ನೇಹಿತರು, ಪರಿಚಯಸ್ಥರೊಂದಿಗೆ ಪಾರ್ಟಿಯಲ್ಲಿ ಎಂಜಾಯ್, ಅಪರಿಚಿತರ ಮನೆಗೆ ಹೋಗುವುದಾಗಲಿ ಅಥವಾ ಏಂತಹ ದೊಡ್ಡ ಸ್ನೇಹಿತರಾಗಲಿ ಹೊರಗಡೆ ಹೋಗುವಾಗ ನೂರಕ್ಕೆ ನೂರು ನಂಬುವುದು ಬೇಡ. ಬಹಳಷ್ಟು ಅಪರಾಧಗಳು ಇಂತಹ ಸಂದರ್ಭದಲ್ಲೇ ನಡೆಯುತ್ತವೆ ಎಂದ ಡಿವೈಎಸ್ಪಿ ದಿನಕರ್ ಶೆಟ್ಟಿಯವರು ಕೆಲವೊಂದು ಉದಾಹರಣೆಯನ್ನು ವಿವರಿಸಿದರು.

ದೂರು ನೀಡಿದರೆ ಹೆಸರು ಗೌಪ್ಯ: ಶೋಷಣೆ, ತೊಂದರೆ ಒಳಗಾದ ವಿದ್ಯಾರ್ಥಿನಿಯರು ತಕ್ಷಣ ದೂರು ನೀಡಿ. ತಮ್ಮ ಸಮಸ್ಯೆಗಳಿಗೆ ಹೆದರಿ ಸುಮ್ಮನಿರುವುದು ಬೇಡ. ಯಾರಿಗೆ ತೊಂದರೆ ಆಗಿದೆಯೋ ಅವರ ಹೆಸರನ್ನು ಗೌಪ್ಯವಾಗಿರಿಸಲಾಗುವುದು. ಅದೂ ಅಲ್ಲದೆ ಈ ಕುರಿತು ಮಾದ್ಯಮ ಪತ್ರಿಕೆಗಳು ಸಹ ಹೆಸರನ್ನು ಪ್ರಕಟಿಸುವುದಿಲ್ಲ ಎಂದ ಡಿವೈಎಸ್ಪಿಯವರು ಇತ್ತೀಚೆಗೆ ಪುತ್ತೂರಿನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಆರಂಭದಲ್ಲೇ ದೂರು ನೀಡುತ್ತಿದ್ದರೆ ವೀಡಿಯೋ ಪ್ರಚಾರ ಆಗುವುದನ್ನು ತಪ್ಪಿಸಬಹುದಿತ್ತು ಎಂದರು.

ಖಾಸಗಿತನವನ್ನು ಹಂಚಿಕೊಳ್ಳಬೇಡಿ; ಮೊಬೈಲ್ ಬಂದ ಬಳಿಕ ಖಾಸಗಿ ಬದುಕು ಹೋಗಿದೆ. ನೇರವಾಗಿ ಮಾತನಾಡದೆ ಮೊಬೈಲ್ ಮೂಲಕ ಮಾತನಾಡುವಾಗ ನಮ್ಮ ಎಲ್ಲಾ ವಿಚಾರಗಳು ಎಷ್ಟೋ ಸರ್ವರ್ ಗಳ ಮೂಲಕ ಹಾದು ಹೋಗುತ್ತವೆ. ನೀವು ಮೊಬೈಲ್‍ನಲ್ಲಿ ಚಾಟ್ ಮಾಡಿದು ಎಲ್ಲಿಯೋ ಒಂದು ಕಡೆ ಸೇವ್ ಆಗಿರುತ್ತದೆ. ಮೊಬೈಲ್‍ನಲ್ಲಿ ಪರಿಚಯಸ್ತರಲ್ಲೂ ಎನಾದರೂ ಹಂಚಿಕೊಳ್ಳುವಾಗ ಬಹಳ ಎಚ್ಚರ ವಹಿಸಬೇಕು. ನಂಬಿಕೆಯಿಂದ ಮೋಸ ಹೋಗದಿರಿ ಎಂದ ಡಿವೈಎಸ್ಪಿಯವರು ನಮ್ಮ ಇಲಾಖೆಗೆ ಇಂತಹ ಪ್ರಕರಣಗಳನ್ನು ಪತ್ತೆ ಹಚ್ಚಿ ಶಿಕ್ಷಕಿಸುವುದು ದೊಡ್ಡ ವಿಚಾರವಲ್ಲ. ಆದರೆ ಚಿಕ್ಕ ವಯಸ್ಸಿನ ಅಪರಾಧಿಗಳ ಭವಿಷ್ಯವೇನು ಎಂಬ ಚಿಂತೆ ಕಾಡುತ್ತದೆ ಎಂದರು. ವೇದಿಕೆಯಲ್ಲಿ ಪುತ್ತೂರು ಮಹಿಳಾ ಪೊಲೀಸ್ ಠಾಣೆಯ ಎಸ್.ಐ ಸೇಸಮ್ಮ, ಕಾಲೇಜಿನ ಪ್ರಾಂಶುಪಾಲ ಪೆÇ್ರ| ಝೇವಿಯರ್ ಡಿಸೋಜ, ಪ್ರೊ.ಐವನ್ ಪ್ರಾನ್ಸಿಸ್ ಲೋಬೊ, ಪ್ರೊ. ಜಯರಾಮ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಉಪನ್ಯಾಸಕ ಪ್ರೋ.| ಸ್ಟೀವನ್ ಕ್ವಾರ್ಡಸ್ ಕಾರ್ಯಕ್ರಮ ನಿರೂಪಿಸಿದರು. ಕಾಲೇಜಿನ ಸುಮಾರು 700 ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
188

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು