ಮಂಗಳೂರು: ಆಗಸ್ಟ್ 14 ಮತ್ತು 28ರಂದು ನಿಗದಿಯಾಗಿದ್ದ ಪದವಿ ಹಾಗೂ ಸ್ನಾತಕೋತ್ತರ ಪರೀಕ್ಷೆಗಳನ್ನು ಮಂಗಳೂರು ವಿಶ್ವವಿದ್ಯಾಲಯವು ಮುಂದೂಡಿದೆ.
ವಾರಾಂತ್ಯ ಕರ್ಫ್ಯೂ (ಕೋವಿಡ್) ಹಿನ್ನೆಲೆಯಲ್ಲಿ ಆ. 14 ಮತ್ತು 28ರಂದು ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ವ್ಯತ್ಯಯ ಆಗಬಹುದು. ಈ ನಿಟ್ಟಿನಲ್ಲಿ ಅಂದಿನ ಪರೀಕ್ಷೆಗಳನ್ನು ಮುಂದೂಡಲಾಗಿದ್ದು, ಆ ದಿನಗಳ ಪರೀಕ್ಷೆಗಳ ಪರಿಷ್ಕೃತ ವೇಳಾಪಟ್ಟಿಯನ್ನು ಆ.12ರಂದು ವಿಶ್ವವಿದ್ಯಾಲಯದ ವೆಬ್ಸೈಟ್ (www.mangaloreuniversity.co.in)ನಲ್ಲಿ ಪ್ರಕಟಿಸಲಾಗುವುದು ಎಂದು ಪರೀಕ್ಷಾಂಗ ಕುಲಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮುಂದೂಡಲಾಗಿದ್ದ ಮಂಗಳೂರು ವಿಶ್ವವಿದ್ಯಾಲಯದ ಪದವಿ ಮತ್ತು ಸ್ನಾತಕೋತ್ತರ ಪರೀಕ್ಷೆಗಳು ಪುನಃ ಆರಂಭಗೊಂಡಿದ್ದು, ಬುಧವಾರ 47,665 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ.
ವಿಶ್ವವಿದ್ಯಾಲಯ ವ್ಯಾಪ್ತಿಯ ವಿವಿಧ ಕಾಲೇಜುಗಳಲ್ಲಿ ಪದವಿಯ 51 ವಿಷಯಗಳಿಗೆ ಪರೀಕ್ಷೆ ನಡೆದಿದ್ದು, ನೋಂದಾಯಿಸಿದ್ದ 43,864 ವಿದ್ಯಾರ್ಥಿಗಳಲ್ಲಿ 41,989 ಮಂದಿ ಪರೀಕ್ಷೆ ಬರೆದಿದ್ದಾರೆ. 1875 ವಿದ್ಯಾರ್ಥಿಗಳು ಗೈರಾಗಿದ್ದಾರೆ. ಸ್ನಾತಕೋತ್ತರ ವಿಭಾಗದ 59 ವಿಷಯಗಳಿಗೆ ಪರೀಕ್ಷೆ ನಡೆದಿದ್ದು, 5,732 ವಿದ್ಯಾರ್ಥಿಗಳಲ್ಲಿ 5,676 ಮಂದಿ ಹಾಜರಾಗಿದ್ದು, 56 ಮಂದಿ ಗೈರಾಗಿದ್ದಾರೆ.