News Karnataka Kannada
Sunday, April 28 2024
ಕರಾವಳಿ

ಬಂಟ್ವಾಳ : ಧರಶಾಯಿಯಾಗಲಿದೆ ಸ್ವಾತಂತ್ರ್ಯ ಪೂರ್ವದ ಹಳೆ ಕಟ್ಟಡಗಳು

Photo Credit :

ಬಂಟ್ವಾಳ :  ಧರಶಾಯಿಯಾಗಲಿದೆ ಸ್ವಾತಂತ್ರ್ಯ ಪೂರ್ವದ ಹಳೆ ಕಟ್ಟಡಗಳು

ಬಂಟ್ವಾಳ:  ಬಿ.ಸಿ.ರೋಡಿನಲ್ಲಿ ಸುಸಜ್ಜಿತ ಮಿನಿವಿಧಾನ ಸೌಧ ಎದ್ದು ನಿಂತಿದ್ದರೆ, ಇದರ ಸನಿಹದಲ್ಲೇ ಇರುವ ಸ್ವಾತಂತ್ರ್ಯ ಪೂರ್ವದ ಹಳೆ ಕಟ್ಟಡ ಬಂಟ್ವಾಳ ಸಬ್ ರಿಜಿಸ್ಟ್ರಾರ್ ಕಚೇರಿ, ಬಂಟ್ವಾಳ ಪ್ರೆಸ್ ಕ್ಲಬ್ ಹಾಗೂ ಚುನಾವಣಾ ಶಾಖಾ ಕಚೇರಿ ಕಾರ್ಯಾಚರಿಸುತ್ತಿರುವ ಮಹಾತ್ಮಾ ಗಾಂಧಿ ಜನ್ಮಶತಾಬ್ಧಿ ಸ್ಮಾರಕ ಭವನ ಧರಶಾಯಿಯಾಗಲಿದೆ..!

ಹೌದು, ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಯವರ ಮುತುವರ್ಜಿಯಲ್ಲಿ ಬಿ.ಸಿ.ರೋಡಿನ ಹೃದಯ ಭಾಗದಲ್ಲಿ ಪಿಪಿಪಿ ಮಾದರಿಯ ಸುಸಜ್ಜಿತ ಖಾಸಗಿ ಬಸ್ ನಿಲ್ದಾಣಕ್ಕೆ ಪೂರಕವಾಗಿ, ಬಿ.ಸಿ.ರೋಡಿನಲ್ಲಿ ಹಲವಾರು ಮಾರ್ಪಾಡುಗಳು ನಡೆಯಲಿದೆ. ಈ ಬದಲಾವಣೆಯ ಕಾಲಘಟ್ಟದಲ್ಲಿ ಬಿ.ಸಿ.ರೋಡಿನ ಹಳೇ ಬಿಡಿಒ ಕಚೇರಿ (ತಾಲೂಕು ಪಂಚಾಯತ್) ಹೀಗಿರುವ ಪಾಣೆಮಂಗಳೂರು ಹೋಬಳಿಯ ನಾಡ ಕಚೇರಿ, ಸಮಾಜ ಕಲ್ಯಾಣ, ಆಹಾರ, ಸಾಮಾಜಿಕ ಅರಣ್ಯ ಇಲಾಖೆ ಸಹಿತ ಪ್ರಮುಖ ಚಟುವಟಿಕೆಗಳ ಕೇಂದ್ರಬಿಂದುವಾಗಿದ್ದ ಕಟ್ಟಡಗಳಿನ್ನು ಕಾಲಗರ್ಭದಲ್ಲಿ ಸೇರುವ ಕಾಲ ಸನ್ನಿಹಿತವಾಗಿದೆ. ಸಬ್ ರಿಜಿಸ್ಟ್ರಾರ್ ಕಚೇರಿ ಮುಂದೆ ಪಕ್ಕದಲ್ಲೇ ನೂತನವಾಗಿ ನಿರ್ಮಾಣವಾಗುತ್ತಿರುವ ಮಿನಿ ವಿಧಾನಸೌಧದ ಮೊದಲ ಅಂತಸ್ತಿಗೆ ಶಿಫ್ಟ್ ಆಗಲಿದೆ. ಬಳಿಕ ಈಗಿರುವ ಕಟ್ಟಡದ ಜಾಗ ಪಾರ್ಕಿಂಗ್ ಗೆ ಉಪಯೋಗವಾಗುವ ನಿರೀಕ್ಷೆ ಇದೆ. ಬಂಟ್ವಾಳ ಸಬ್ ರಿಜಿಸ್ಟ್ರಾರ್ ಕಟ್ಟಡ ನಿರ್ಮಾಣಗೊಂಡಿದ್ದು 1924ರಲ್ಲಿ. ಸಬ್ ರಿಜಿಸ್ಟ್ರಾರ್ ಕಚೇರಿ 1865ನೇ ಇಸವಿಯಲ್ಲಿ ಅಂದಿನ ಮದ್ರಾಸ್ ಪ್ರಾಂತ್ಯವಿದ್ದಾಗ ಆರಂಭಗೊಂಡಿತ್ತು. ಇದಕ್ಕೂ ಮೊದಲು ಬಂಟ್ವಾಳ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬಳಿಯ ಕಟ್ಟಡದಲ್ಲಿ ಕಾರ್ಯಾಚರಿಸಿದ್ದ ಸಬ್ ರಿಜಿಸ್ಟ್ರಾರ್ ಕಚೇರಿ, 1921ರ ನೇತ್ರಾವತಿ ನದಿ ಪ್ರವಾಹಕ್ಕೆ ಕೊಚ್ಚಿ ಹೋಯಿತು. ಬಳಿಕ 1924ರಲ್ಲಿ ಹೊಸ ಕಟ್ಟಡ ನಿರ್ಮಿಸಿ, ಕಚೇರಿಯನ್ನು ವರ್ಗಾಯಿಸಲಾಯಿತು. ಈಗಲೂ ಅದೇ ಕಚೇರಿಯಲ್ಲಿ ನೋಂದಣಿ ನಡೆಯುತ್ತಿದೆ. ಆದರೆ ಮಿನಿ ವಿಧಾನಸೌಧಕ್ಕೆ ಶಿಫ್ಟ್ ಆಗುವ ಕಾರಣ ಈ ಕಟ್ಟಡದ ಆಯಸ್ಸು ಮುಗಿಯುತ್ತಾ ಬಂದಿದೆ.

ಸಬ್ ರಿಜಿಸ್ಟ್ರಾರ್ ಕಚೇರಿ ಎದುರೇ ಇರುವ ಮಹಾತ್ಮಾ ಗಾಂಧಿ ಜನ್ಮಶತಾಬ್ಧಿ ಭವನವನ್ನು ಅಂದಿನ ಮೈಸೂರು ಸರಕಾರದ ಸಹಕಾರ ಸಚಿವ ಎ.ಶಂಕರ ಆಳ್ವ ಉದ್ಘಾಟಿಸಿದ್ದರು. ಶಾಸಕ ಬಿ.ವಿ.ಕಕ್ಕಿಲ್ಲಾಯ ಅಧ್ಯಕ್ಷತೆ ವಹಿಸಿದ್ದರು. 1978ನೇ ಇಸವಿ, ಜೂನ್ 11ರಂದು ಉದ್ಘಾಟನೆಗೊಂಡಿದ್ದ ಈ ಕಟ್ಟಡ ಬಂಟ್ವಾಳ ತಾಲೂಕು ಅಭಿವೃದ್ಧಿ ಮಂಡಳಿ ಸುಪರ್ದಿಯಲ್ಲಿತ್ತು. 1970ರಲ್ಲಿ ಈ ಕಟ್ಟಡಕ್ಕೆ ಶಂಕುಸ್ಥಾಪನೆಯನ್ನು ಆಹಾರ ಸಚಿವ ವಿಠಲದಾಸ ಶೆಟ್ಟಿ ನೆರವೇರಿಸಿದ್ದರು. ಆಗ ಎಂಎಲ್ ಎ ಆಗಿದ್ದವರು ಕೆ.ಲೀಲಾವತಿ ರೈ.  ಈ ಕಟ್ಟಡದ ಪಕ್ಕವೇ ನಿರ್ಮಾಣಗೊಂಡಿದ್ದ ಕಚೇರಿಗಳ ಕಟ್ಟಡವನ್ನು ಭಾರತ ಸರಕಾರದ ಸಂಸದೀಯ ಕಾರ್ಯದರ್ಶಿ ದೊಡ್ಡ ತಮ್ಮಯ್ಯ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಗಿನ ಎಂಎಲ್ ಸಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರೂ ಆಗಿದ್ದ ಕೆ.ಕೆ.ಶೆಟ್ಟಿ ವಹಿಸಿದ್ದರು. 1964ರ ಮೇ 19ರಂದು ಈ ಕಟ್ಟಡ ಲೋಕಾರ್ಪಣೆಗೊಂಡಿತ್ತು. ಇದೇ ಕಟ್ಟಡದ ಶಂಕುಸ್ಥಾಪನೆಯನ್ನು ಅಂದಿನ ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪ 1962ರ ಅಕ್ಟೋಬರ್ 13ರಂದು ನೆರವೇರಿಸಿದ್ದರು. ಅಂದು ತಾಲೂಕು ಅಭಿವೃದ್ಧಿ ಮಂಡಳಿ (ತಾಲೂಕು ಬೋರ್ಡ್) ಪ್ರಭಾವಶಾಲಿಯಾಗಿತ್ತು.

ಪ್ರಥಮ ಅವಧಿ ತಾಲೂಕು ಬೋರ್ಡಿನ ಅಧ್ಯಕ್ಷರಾಗಿ ಕಾಡುಮಠ ಮಹಾಬಲ ಶೆಟ್ಟಿ ಕಾರ್ಯನಿರ್ವಹಿಸಿದ್ದರೆ ಬರಂಗರೆ ಸದಾನಂದ ಪೂಂಜರವರು ಉಪಾಧ್ಯಕ್ಷರಾಗಿದ್ದರು. ಬಳಿಕ ರಾಯಿ ಸದಾಶಿವ ಭಂಡಾರಿ ಸಹಿತ ಪ್ರಮುಖ ರಾಜಕಾರಣಿಗಳು ಅಂದು ತಾಲೂಕು ಮಟ್ಟದಲ್ಲಿ ಪ್ರಮುಖ ಸ್ಥಾನಗಳಲ್ಲಿ ಮಿಂಚಿದ್ದರು. ಬಿಡಿಒ ಹಾಲ್ನಲ್ಲಿ ತಾಲೂಕಿನ ಮಹತ್ವದ ರಾಜಕೀಯ, ಆಡಳಿತಾತ್ಮಕ ತೀರ್ಮಾನಗಳನ್ನು ಕೈಗೊಳ್ಳಲಾಗುತ್ತಿತ್ತು.  ಬಂಟ್ವಾಳ ಪರಿಸರದ ಪ್ರಮುಖ ಕಾರ್ಯಕ್ರಮಗಳಿಗೆ ಇದೇ ಬಿಡಿಒ ಹಾಲ್ (ಮಹಾತ್ಮಾಗಾಂಧಿ ಜನ್ಮಶತಾಬ್ದಿ ಭವನ) ಬೇಕಾಗುತ್ತಿತ್ತು. ಪ್ರತಿದಿನ ಎಂಬಂತೆ ಇಲ್ಲಿ ಕಾರ್ಯಕ್ರಮಗಳು ನಡೆಯುತ್ತಿದ್ದವು. ಕ್ರಮೇಣ ತಾಲೂಕು ಪಂಚಾಯಿತಿ ಕಚೇರಿ ಕೂಡಾ ಪಕ್ಕದ ಶ್ರೀ ರಕ್ತೇಶ್ವರಿ ದೇವಿ ದೇವಸ್ಥಾನದ ಹಿಂಬಾಗಕ್ಕೆ ಸ್ಥಳಾಂತರಗೊಂಡಿತ್ತು. ಹಾಗೆಯೇ ಹಳೆ ತಾಲೂಕು ಕಚೇರಿಯ ಕಟ್ಟಡವನ್ನು ಕೆಡವಿ ಅಲ್ಲಿ ನೂತನವಾಗಿ ಮಿನಿ ವಿಧಾನಸೌಧದ ಕಾಮಗಾರಿ ನಡೆಯುತ್ತಿರುವುದರಿಂದ ಹಳೆ ತಾಲೂಕು ಪಂಚಾಯತ್ ಕಟ್ಟಡದಲ್ಲಿ ತಾತ್ಕಾಲಿಕ ಮಟ್ಟಕ್ಕೆ ಕಂದಾಯ ಇಲಾಖೆಯ ಆಹಾರ ಶಾಖೆ, ಸಾಮಾಜಿಕ ಅರಣ್ಯ ಇಲಾಖೆ, ನಾಡಕಚೇರಿಯಂಥ ಕೆಲ ಕಚೇರಿಗಳು ಕಾಯರ್ಾಚರಿಸುತ್ತಿವೆ. ಈ ಕಛೇರಿಗಳು ಮಿನಿವಿಧಾನ ಸೌಧಕ್ಕೆ ವರ್ಗಾವಣೆಗೊಳ್ಳಲಿದೆ. ಜೊತೆಗೆ ಕಳೆದ 10 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಬಂಟ್ವಾಳ ಪ್ರೆಸ್ ಕ್ಲಬ್ ಕೂಡ ಈ ಕಟ್ಟಡದಿಂದ ಬೇರೆಡೆಗೆ ವರ್ಗಾವಣೆಗೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ.

ಶಾಸಕರ ಕಚೇರಿ ಇತ್ತು: ಎ.ರುಕ್ಮಯ ಪೂಜಾರಿ ಅವರು ಶಾಸಕರಾಗಿದ್ದ ಸಂದರ್ಭ ಅವರ ಕಚೇರಿ ಇದೇ ಕಟ್ಟಡದಲ್ಲಿತ್ತು. ಅವರ ಬಳಿಕ ಕೆ.ಎಂ.ಇಬ್ರಾಹಿಂ, ಪದ್ಮನಾಭ ಕೊಟ್ಟಾರಿಯವರ ಕಚೇರಿಗಳೂ ಇಲ್ಲೇ ಕಾರ್ಯಾಚರಿಸಿದವು. ನಾಗರಾಜ ಶೆಟ್ಟರ ಕಚೇರಿಯೂ ಇಲ್ಲೇ ಇತ್ತು. ರುಕ್ಮಯ ಪೂಜಾರಿ, ಕೆ.ಎಂ.ಇಬ್ರಾಹಿಂ ಮತ್ತು ಕೊಟ್ಟಾರಿ ಅವರು ಇಲ್ಲೇ ಸಾರ್ವಜನಿಕರ ಅಹವಾಲು ಸ್ವೀಕರಿಸುತ್ತಿದ್ದರು. ಇದರ ಜೊತೆಗೆ ತಾ.ಪಂ. ಅಧ್ಯಕ್ಷ ಉಪಾದ್ಯಕ್ಷರುಗಳು ಕೂಡ ಇಲ್ಲಿ ಕಚೇರಿಯನ್ನು ಹೊಂದಿ ಕಾರ್ಯಭಾರ ಮಾಡುತ್ತಿದ್ದರು.

ಈಗ ಧರೆಗುರುಳಲು ಸಿದ್ಧವಾಗುತ್ತಿರುವ ಕಚೇರಿಗಳು..
ತಾಲೂಕು ಪಂಚಾಯಿತಿ (ಹಿಂದಿನ ತಾಲೂಕು ಅಭಿವೃದ್ಧಿ ಮಂಡಳಿ) ಹಳೇ ಕಟ್ಟಡ. ಸಬ್ ರಿಜಿಸ್ಟ್ರಾರ್ ಕಚೇರಿ ಹಾಗೂ ತಾಲೂಕು ಪಂಚಾಯಿತಿ ವಾಣಿಜ್ಯ ಸಂಕೀರ್ಣ. ಇದರ ಜೊತೆಗೆ ಜೇನು ವ್ಯವಸಾಯ ಮಂಡಳಿಯ ಕಟ್ಟಡ. ಇವುಗಳಲ್ಲಿ ಅಳಿದುಳಿದ ಕಚೇರಿಗಳು ಮಿನಿ ವಿಧಾನಸೌಧಕ್ಕೆ ಶಿಫ್ಟ್ ಆಗಲಿವೆ. ಸಬ್ ರಿಜಿಸ್ಟ್ರಾರ್ ಕಚೇರಿಯ ಜಾಗ ಪಾರ್ಕಿಂಗ್ ಗೆ ಮೀಸಲಾದರೆ ಉಳಿದ ಕಟ್ಟಡದ ಜಾಗದಲ್ಲಿ ಬಸ್ ನಿಲ್ದಾಣ ನಿರ್ಮಾಣವಾಗಲಿದೆ. ಸುಮಾರು 84 ಸೆಂಟ್ಸ್ ಜಾಗದಲ್ಲಿ ಮತ್ತೊಂದು ಬದಲಾವಣೆಗೆ ಬಿ.ಸಿ.ರೋಡ್ ಸಜ್ಜಾಗಲಿದೆ. ಖಾಸಗಿ ಬಸ್ಸು ನಿಲ್ಧಾಣ ನಿರ್ಮಿಸುವ ನಿಟ್ಟಿನಲ್ಲಿ ಈಗಾಗಲೇ ಸಚಿವ ರಮಾನಾಥ ರೈಯವರು ಅಧಿಕಾರಿಗಳ ಜತೆ ಒಂದೆರಡು ಸಭೆಯನ್ನು ಕೂಡ ನಡೆಸಿದ್ದು ಈ ಬಗ್ಗೆ ಅಂದಾಜು ಪಟ್ಟಿ ಹಾಗೂ ನೀಲನಕ್ಷೆಯನ್ನು ತಯಾರಿಸುವಂತೆ ಸೂಚಿಸಿದ್ದಾರೆ. ಸಚಿವ ರಮಾನಾಥ ರೈಯವರ ಪರಿಕಲ್ಪನೆಯಡಿ ಇಲ್ಲಿ ಖಾಸಗಿ ಬಸ್ಸು ನಿಲ್ದಾಣ ನಿರ್ಮಾಣವಾಗುತ್ತಿದೆ. ಈಗಿರುವ ತಾ.ಪಂ.ನವಾಣಿಜ್ಯ ಸಂಕಿರ್ಣವನ್ನು ಕೂಡ ಕೆಡವಲಾಗುತ್ತಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು