ಬಂಟ್ವಾಳ: ನೋಟ್ ಬ್ಯಾನ್ ಆದೇಶ ಶ್ರೀಮಂತರಿಗೆ ಲಾಭ, ಬಡವರಿಗೆ ಕಷ್ಟ ಎಂಬಂತಾಗಿದ್ದು, ಗ್ರಾಮೀಣ ಪ್ರದೇಶದಲ್ಲಿ ಜನಸಾಮಾನ್ಯರು ದಿನಸಾಗಿಸುವುದೇ ಕಷ್ಟ ಎಂಬಂಥ ಸ್ಥಿತಿಯಲ್ಲಿದ್ದಾರೆ. ಇದಕ್ಕೆಲ್ಲಾ ನರೇಂದ್ರಮೋದಿ ಅವರು ಕೈಗೊಂಡ ಹಠಾತ್ ನಿರ್ಧಾರವೇ ಕಾರಣ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.
ಪಾಣೆಮಂಗಳೂರು ಹಾಗೂ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ವತಿಯಿಂದ ಸೋಮವಾರ ಬಿ.ಸಿ.ರೋಡಿನಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.
ಬಿಜೆಪಿಯ ಜನವಿರೋಧಿ ನೀತಿಯಿಂದ ಜನಸಾಮಾನ್ಯರು ತಮ್ಮ ಶ್ರಮದ ಹಣಕ್ಕಾಗಿ ಬ್ಯಾಂಕ್ ಮುಂದೆ ಕ್ಯೂ ನಿಲ್ಲುವಂತಾಗಿದೆ, ಎಟಿಎಂ, ಹಾಗೂ ಬ್ಯಾಂಕ್ ಗಳಲ್ಲಿ ಕಂಡು ಬಂದಿರುವ ಹಣದ ಕೊರತೆ ಬ್ಯಾಂಕಿಂಗ್ ವ್ಯವಸ್ಥೆಯ ಮೇಲಿನ ನಂಬಿಕೆ ಕುಸಿಯುವಂತೆ ಮಾಡಿದೆ ಎಂದರು.
ಜಿಲ್ಲಾ ಪಂಚಾಯಿತಿ ಸದಸ್ಯ ಎಂ.ಎಸ್. ಮಹಮ್ಮದ್, ಚಂದ್ರಪ್ರಕಾಶ್ ಶೆಟ್ಟಿ, ಗೇರು ಅಭಿವೃದ್ಧಿ ನಿಗಮ ಅಧ್ಯಕ್ಷ ಬಿ.ಎಚ್.ಖಾದರ್, ಪುರಸಭಾಧ್ಯಕ್ಷ ರಾಮಕೃಷ್ಣ ಆಳ್ವ, ಉಪಾಧ್ಯಕ್ಷ ಮಹಮ್ಮದ್ ನಂದರಬೆಟ್ಟು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಮಾಯಿಲಪ್ಪ ಸಾಲಿಯಾನ್, ಅಬ್ಬಾಸ್ ಆಲಿ, ಪಕ್ಷ ಪ್ರಮುಖರಾದ ಪಿಯುಸ್ ರೋಡ್ರಿಗಸ್, ಎ.ಸಿ.ಭಂಡಾರಿ, ಅಬೂಬಕರ್, ಮಾಧವ ಮಾವೆ ಸಹಿತ ಪ್ರಮುಖ ನಾಯಕರು, ಕಾರ್ಯಕರ್ತರು ಉಪಸ್ಥಿತರಿದ್ದರು.