News Karnataka Kannada
Sunday, May 19 2024
ಕರಾವಳಿ

ತುಳು ಭಾಷೆಗೆ ಪರಿಚ್ಛೇದದ ಮಾನ್ಯತೆ ಸಿಗದಿರುವುದು ವಿಷಾದನೀಯ: ಜಯರಾಮ ರೈ

Photo Credit :

ತುಳು ಭಾಷೆಗೆ ಪರಿಚ್ಛೇದದ ಮಾನ್ಯತೆ ಸಿಗದಿರುವುದು ವಿಷಾದನೀಯ: ಜಯರಾಮ ರೈ

ಬಂಟ್ವಾಳ: ತುಳು ಭಾಷಿಕರಿಗಂತ ಕಡಿಮೆ ಸಂಖ್ಯೆಯಲ್ಲಿರುವ ಸಿಂಧಿ, ನೇಪಾಲಿ, ಕೊಂಕಣಿ, ಮಣಿಪುರಿ, ಸಂಸ್ಕೃತ ಭಾಷೆಗಳು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿದೆ. ಆದರೆ ತುಳು ಭಾಷೆಗೆ ಪರಿಚ್ಛೇದದ ಮಾನ್ಯತೆ ಸಿಗದಿರುವುದು ವಿಷಾದನೀಯ ಎಂದು ಬಂಟ್ವಾಳ ತುಳು ಸಾಹಿತ್ಯ ಸಮ್ಮೇಳನಾಧ್ಯಕ್ಷ ಮಲಾರ್ ಜಯರಾಮ ರೈ ಹೇಳಿದ್ದಾರೆ.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಹಾಗೂ ಬಂಟ್ವಾಳ ತಾಲೂಕು ತುಳು ಸಾಹಿತ್ಯ ಸಮ್ಮೇಳನ ಸಮಿತಿ ಆಶ್ರಯದಲ್ಲಿ ಭಾನುವಾರ ಬಿ.ಸಿ.ರೋಡಿನ ಸ್ಪರ್ಶ ಕಲಾಮಂದಿರದಲ್ಲಿ ನಡೆದ ಬಂಟ್ವಾಳ ತಾಲ್ಲೂಕು ಮಟ್ಟದ ಪ್ರಥಮ ತುಳು ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಜನ ಭಾಷೆಯೊಂದನ್ನು ಮಾನ್ಯತೆ ನೀಡದೆ ದೂರವಿಟ್ಟಿರುವುದು ನ್ಯಾಯ ವಿರೋಧಿ, ಜನ ವಿರೋಧಿ ನಡವಳಿಕೆಯಾಗಿದೆ ಎಂದರು.
ಭಾಷೆಯ ಹಕ್ಕು ಜನರ ಮೂಲಭೂತ ಸಾಂಸ್ಕೃತಿಕ ಹಕ್ಕು. ಅದಕ್ಕೂ ಆ ಭಾಷೆಯನ್ನು ಮಾತನಾಡುವ ಜನರ ಆರ್ಥಿಕ, ಸಾಂಸ್ಕೃತಿಕ, ಸಾಮಾಜಿಕ ವ್ಯವಸ್ಥೆಗೂ ಅವರ ರಾಜಕೀಯ ಹಕ್ಕಿಗೂ ಸಂಬಂಧ ಇದೆ. ಲಿಪಿ ಇದ್ದರೂ, ಇಲ್ಲದಿದ್ದರೂ ಯುನೆಸ್ಕೊ ಸಂಸ್ಥೆಯು ಪ್ರತಿ ಭಾಷೆಗೂ ಮನ್ನಣೆ ನೀಡಿದೆ ಎಂದು ತಿಳಿಸಿದರು.

ಹಿರಿಯ ಸಾಹಿತಿ ಏರ್ಯ ಲಕ್ಷ್ಮೀ ನಾರಾಯಣ ಆಳ್ವ ವಸ್ತುಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿ, ತುಳು ಅದ್ಭುತವಾದ ಭಾಷೆ. ಆದರೆ ಪ್ರಸ್ತುತ ದಿನಗಳಲ್ಲಿ ಇಂಗ್ಲಿಷ್ ವ್ಯಾಮೋಹದಿಂದಾಗಿ ತುಳು ಮರೆಯಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಡಿವಟಿಕೆಯನ್ನು ಉರಿಸುವುದರ ಮೂಲಕ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿ, ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ಭಾರತವನ್ನು ಹೋಲಿಸುವ ಜಗತ್ತಿನಲ್ಲಿ ಇನ್ನೊಂದು ದೇಶವಿಲ್ಲ. ತುಳು ಭಾಷೆ ಹಾಗೂ ಸಂಸ್ಕೃತಿಯನ್ನು ಉಳಿಸುವ ಕೆಲಸವಾಗಬೇಕಿದೆ ಎಂದು ಹೇಳಿದರು.

ಇದಕ್ಕೂ ಮೊದಲು ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎ.ಸಿ.ಭಂಡಾರಿ ಅವರು ಸಭಾಂಗಣದ ಮುಂಭಾಗ ದ್ವಜಾರೋಹಣ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಸಮ್ಮೇಳನದಲ್ಲಿ ಒಳ್ಳೆಯ ವಿಚಾರಗಳ ಬಗ್ಗೆ ಚಿಂತನ -ಮಂಥನ ನಡೆಯುವ ಮೂಲಕ ಉತ್ತಮ ನಿರ್ಧಾರಗಳು ಹೊರಬರಬೇಕೆಂದು ಅವರು ಆಶಿಸಿದರು.
ಇದೇ ವೇಳೆ ತುಳು ಅಕಾಡೆಮಿಯಿಂದ ಮೂರು ತಿಂಗಳಿಗೊಮ್ಮ ಪ್ರಕಟಗೊಳ್ಳುವ “ಮದಿಪು” ಹಾಗೂ ಬಿ.ತಮ್ಮಯ್ಯ ಅವರ 15ನೆ ಸಂಚಿಕೆ “ತುಳುವೆ” ಪುಸ್ತಕಗಳನ್ನು ಬಿಡುಗಡೆಗೊಳಿಸಲಾಯಿ.

ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಪುರಸಭಾಧ್ಯಕ್ಷ ರಾಮಕೃಷ್ಣ ಆಳ್ವ, ಗೇರು ನಿಗಮ ಅಧ್ಯಕ್ಷ ಬಿ.ಎಚ್.ಖಾದರ್, ಅಕಾಡೆಮಿ ರಿಜಿಸ್ಟರ್ ಚಂದ್ರಹಾಸ ರೈ, ಸುಭಾಶ್ ಚಂದ್ರ ಜೈನ್, ಶಿವಾನಂದ, ಚಂದ್ರಶೇಖರ್ ಶೆಟ್ಟಿ ಬೋಳಂತೂರು, ತಾರಾನಾಥ್ , ಪುರುಷೋತ್ತಮ, ಸುಧಾ ಹಾಗೂ ಅಕಾಡೆಮಿ ಸದಸ್ಯರು ವೇದಿಕೆಯಲ್ಲಿದ್ದರು.

ಸಮ್ಮೇಳನ ಸಮಿತಿ ಅಧ್ಯಕ್ಷ ಸುದರ್ಶನ್ ಜೈನ್ ಸ್ವಾಗತಿಸಿದರು. ಅಕಾಡೆಮಿ ಸದಸ್ಯ ಗೋಪಾಲ ಅಂಚನ್ ಪ್ರಸ್ತಾವಿಸಿದರು. ಡಿ.ಯಂ. ಕುಲಾಲ್ ವಂದಿಸಿದರು. ಎಚ್.ಕೆ.ನಯನಾಡ್, ಮಲ್ಲಿಕಾ ಶೆಟ್ಟಿ ನಿರೂಪಿಸಿದರು.

ಸಭಾಕಾರ್ಯಕ್ರಮದ ನಂತರ “ಚಿಣ್ಣರ ಲೋಕ” ಮೋಕೆದ ಕಲಾವಿದೆರ್ ಸೇವಾ ಟ್ರಸ್ಟ್ ನಿಂದ “ತುಳುನಾಡ ಐಸಿರ”, ತುಳು ಸಾಹಿತ್ಯ ಸಮಿತಿಯ ಮಾಜಿ ಸದಸ್ಯ ಡಾ. ತುಕ್ಕಪ್ಪ ಕಚೇಕಾರು ಅವರ ಅಧ್ಯಕ್ಷತೆಯಲ್ಲಿ “ತುಳು ಪರಪುದ ಒರಿಪು” ಚಾವಡಿ ಪಟ್ಟಾಂಗ ಗೋಷ್ಠಿ ನಡೆಯಿತು.

ಸಮ್ಮೇಳನದ ನೋಟ: ಮಹಿಳೆಯರು, ಮಕ್ಕಳು ಮತ್ತು ಸಾರ್ವಜನಿಕರಿಗೆ ಸೈಕಲ್ ಟಯರ್, ಕಾರ್ ಕಂಬುಲ, ಪಾಲೆ ಬಂಡಿ, ಗೋಲಿಗೊಬ್ಬು, ಜಿಬಿಲಿ, ಕೆರೆದಂಡೆ, ಡೊಂಕಾಟ, ಕಲ್ಲಾಟ, ಉಪ್ಪು ಮುಡಿ, ಲಗೋರಿ, ಗೋಣಿ ಚೀರವು, ಹಗ್ಗ ಜಗ್ಗಾಟ, ಮುಟ್ಟಾಲೆ ಪಾಡಿ, ಹಿರಿಯ ನಾಗರಿಕರಿಗೆ ವೇಗದ ಸ್ಪರ್ಧೆ, ಬಟ್ಟಿ, ಕುಡುಪು, ಮುಟ್ಟಾಳೆ, ಬೀಡಿದ ಸೂಪು, ಪಜೆ, ಮಣ್ಣ್ದ ಬಾಜನ, ಕೈಲ್, ತಡ್ಪೆ, ಕುರುವೆ, ಮೈಪುಸೂಡಿ, ಕರ್ಬದ ಕೊಟ್ಯ,ಕೈಮಗ್ಗ, ಗಾಣದ ಕೊಟ್ಯ, ಮರತ್ತ ಕೊಟ್ಯ, ಚಮ್ಮಾರಿಕೆ, ಮೂರ್ತೆಗಾರಿಕೆ, ಬೆಲ್ಲ ತಯಾರಿಕೆಗಳ ಪ್ರಾತ್ಯಕ್ಷಿಕೆ, ಪುಸ್ತಕ, ವಸ್ತುಗಳ ಪ್ರದರ್ಶನ, ಮಾರಾಟ ಸಮ್ಮೇಳನದಲ್ಲಿ ಕಂಡುಬಂತು.

ಬಂಧವರಿಗೆ ಬೆಲ್ಲ, ನೀರು, ಆತಿಥ್ಯ ತುಳು ಸಾಂಪ್ರದಾಯಿಕ ಜನಜೀವನವನ್ನು ನೆನಪಿಸುವ ವಸ್ತುಪ್ರದರ್ಶನಗಳು ಸಮ್ಮೇಳನಕ್ಕೆ ಮೆರುಗು ಕೊಟ್ಟಿತು.

ಮೆರವಣಿಗೆಯಲ್ಲಿ ತುಳುನಾಡಿನ ಸಾಂಸ್ಕೃತಿಕ ಸೊಬಗು:  ಬಿ.ಸಿ.ರೋಡಿನ ಬ್ರಹ್ಮಶ್ರೀ ನಾರಾಯಣಗುರು ವ್ರತ್ತದಿಂದ ಕಲಾಮಂದಿರದವರೆಗೆ ತುಳುನಾಡಿನ ಸಾಂಸ್ಕೃತಿಕ ಸೊಬಗನ್ನು ಪ್ರತಿಬಿಂಬಿಸುವ ಕಲಾಪ್ರದರ್ಶನಗಳೊಂದಿಗೆ ತುಳುವೆರೆ ದಿಬ್ಬಣದ ವೈಭವಪೂರ್ಣ ಮೆರವಣಿಗೆ ನಡೆಯಿತು. ಕೊಂಬು, ಕಹಳೆ ವಿವಿಧ ವಾದ್ಯ ಗೋಷ್ಠಿ, ಗೊಂಬೆ ಕುಣಿತ ಮೆರವಣಿಗೆಗೆ ವಿಶೆಷ ಮೆರಗು ನೀಡಿತು.

ಸಮ್ಮೇಳನಾಧ್ಯಕ್ಷ ಜಯರಾಮ ರೈ ಮತ್ತು ಅತಿಥಿಗಳನ್ನು ತೆರದ ವಾಹನದಲ್ಲಿ ಮೆರವಣಿಗೆಯಲ್ಲಿ ಕರೆತರಲಾಯಿತು. ತುಳು ಸಾಹಿತ್ಯ,ಸಂಸ್ಕ್ರತಿಯನ್ನು ಬಿಂಬಿಸುವ ವಸ್ತುಗಳ ಪ್ರದರ್ಶನ, ಮಾರಾಟ ಜೊತೆಗೆ ವಿವಿಧ ವಸ್ತುಗಳ ಪ್ರದರ್ಶನವು ಗಮನ ಸೆಳೆಯಿತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

153
Mounesh V

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು