News Karnataka Kannada
Monday, May 13 2024
ಕರಾವಳಿ

ಕೆರೆ ಇದ್ದರೂ ಕೇಳುವವರು ಇಲ್ಲ ; 5 ಕೋಟಿ ಅನುದಾನ ಕಥೆ ಗುಳುಂ..!

Photo Credit :

ಕೆರೆ ಇದ್ದರೂ ಕೇಳುವವರು ಇಲ್ಲ ; 5 ಕೋಟಿ ಅನುದಾನ ಕಥೆ ಗುಳುಂ..!

ಪುತ್ತೂರು: ತಾಲೂಕಿನಲ್ಲಿ ಕೆರೆಗಳಿಗೆ ಬರವಿಲ್ಲ. ವಿಸ್ತೀರ್ಣದಲ್ಲಿ ಇಳಿಕೆ ಕಂಡರೂ, ಅಸ್ತಿತ್ಥದಲ್ಲಿ ಇನ್ನೂ ಇದೆ. ಅಷ್ಟಕ್ಕೆ ಸಮಾದಾನ ಪಡುವಂತಿಲ್ಲ. ಅಭಿವೃದ್ಧಿಗೆಂದೂ ಬಂದ ಕೋಟಿ ಹಣದ್ದು ನೀರು ಪಾಲಾದ ಕಥೆ. ಹಾಗಾಗಿ ಸದ್ಬಳಕೆ ಬಗ್ಗೆ ಇಲ್ಲಿ ಇನ್ನೂ ಪ್ರಾಮಾಣಿಕ ಪ್ರಯತ್ನ ಆಗಿಲ್ಲ..!

ಜಿ.ಪಂ. ಮಾಹಿತಿ ಪ್ರಕಾರ ತಾಲೂಕಿನಲ್ಲಿರುವ ಕೆರೆಗಳ ಸಂಖ್ಯೆ 33. ಆದರೆ ಕಂದಾಯ ಇಲಾಖೆಯಲ್ಲಿ ಇರುವ ದಾಖಲೆಗಳಲ್ಲಿ ಸರಕಾರಿ ಕೆರೆಗಳ ಸಂಖ್ಯೆ 17. ಇದರಲ್ಲಿ ಯಾವುದೂ ಸತ್ಯ ಅನ್ನುವುದು ಅಕಾರಿಗಳಿಗೆ ಮಾತ್ರ. ಯಾಕೆಂದರೆ 2014 ಆ.18 ರಂದು ಮಾಹಿತಿ ಹಕ್ಕು ಕಾರ್ಯಕರ್ತನಿಗೆ ಕಂದಾಯ ಇಲಾಖೆ ನೀಡಿದ ಮಾಹಿತಿಯಲ್ಲಿ ತಾಲೂಕಿನಲ್ಲಿ 17 ಕೆರೆಗಳಿವೆ ಎಂದಿತ್ತು. ಅದೇ ಆಧಾರದಲ್ಲಿ 2015 ಜು.20 ರಲ್ಲಿ ಕಂದಾಯ ಇಲಾಖೆ ನೀಡಿದ ಮಾಹಿತಿಯಲ್ಲಿ ತಾಲೂಕಿನಲ್ಲಿರುವ ಕೆರೆಗಳ ಸಂಖ್ಯೆ-0. ಹಾಗಾಗಿ ಇಲ್ಲಿ ಇಲಾಖೆಯಲ್ಲಿಯೇ ಕೆರೆಗಳ ಅಸ್ತಿತ್ವದ ಬಗ್ಗೆ ಗೊಂದಲ ಮೂಡಿವೆ.

ದೇವಾಲಯಗಳಲ್ಲಿ ಕೆರೆ
ಪುತ್ತೂರು ತಾಲೂಕಿನ ಶೇ.90 ರಷ್ಟು ದೇವಾಲಯಗಳಲ್ಲಿ ಕೆರೆಗಳು ಇವೆ. ಇನ್ನೂ ಖಾಸಗಿ ಕೃಷಿ ಜಮೀನಿನಲ್ಲಿಯು ಕೆರೆಗಳು ಇವೆ. ಆದರೆ ಮಳೆಗಾಲದಲ್ಲಿ ನೀರು ತುಂಬಿಕೊಂಡಿರುವ ಕೆರೆ, ಬೇಸಗೆ ಕಾಲದಲ್ಲಿ ತಟ ಕಾಣಿಸಿಕೊಳ್ಳುತ್ತದೆ. ಕಾರಣ ವರ್ಷಂಪ್ರತಿ ತುಂಬುವ ಹೂಳು ತೆಗೆಯುವ ಸಮಸ್ಯೆ. ಇಲಾಖೆ ವ್ಯಾಪ್ತಿಯ ಕೆರೆಗಳಿಗಂತೂ ನಿರ್ವಹಣೆ ಮಾಡುವ ಬಗ್ಗೆ ಅನುದಾನ ಇಲ್ಲ.

ಬಳಕೆ ಇಳಿಮುಖ
ನಳ್ಳಿ, ಟ್ಯಾಂಕ್, ಕೊಳವೆ ಬಾವಿ ಅನಂತರ ಕೆರೆ ಜಲಮೂಲ ಬಳಕೆ ಕಡಿಮೆ ಆಗುತ್ತಾ ಸಾಗಿದೆ. ಸರಕಾರಿ ಕೆರೆ ಅಭಿವೃದ್ಧಿಗೆ ಅನುದಾನ ಲಭ್ಯವಾದರೂ ಅದು ಸದ್ಭಳಕೆ ಕಂಡದ್ದು ಕೆಲವು ಮಾತ್ರ. ನಗರದಲ್ಲಿಯೇ ಹತ್ತಾರು ಕೆರೆ ಇದ್ದರೂ, ಬೇಸಗೆ ಕಾಲದಲ್ಲಿ ಅದನ್ನು ಬಳಸುವ ಬಗ್ಗೆ ಆಡಳಿತಕ್ಕಾಗಲಿ, ಜನರಿಗಾಗಲೀ ಆಸಕ್ತಿ ಮೂಡಿಲ್ಲ. ಗ್ರಾಮಾಂತರ ವ್ಯಾಪ್ತಿಯದ್ದು ಅದೇ ಕಥೆ. ಒಂದು ವೇಳೆ ಆ ಪ್ರಯತ್ನ ಪ್ರಾಮಾಣಿಕವಾಗಿ ಸಾಗಿದರೆ, ನಗರಕ್ಕೆ ಬೇಕಾದ ನೀರಿಗೆ ಕುಮಾರಧಾರೆಯನ್ನು ಮಾತ್ರ ಅವಲಂಬಿಸುವುದು ತಪ್ಪುತ್ತದೆ.

5 ಕೋಟಿ ಕಥೆ
ಈ ಹಿಂದೆ ಯಡಿಯೂರಪ್ಪ ಸರಕಾರ ಇದ್ದ ಸಂದರ್ಭದಲ್ಲಿ ಕೆರೆ ಅಭಿವೃದ್ಧಿಗೆಂದೂ, ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಐದು ಕೋ.ರೂ. ಅನುದಾನ ಬಿಡುಗಡೆಗೊಂಡಿತ್ತು. ತಾಲೂಕಿನ 17 ಕೆರೆಗಳ ಅಭಿವೃದ್ಧಿಗೆ ಯೋಜನೆ ರೂಪಿಸಲಾಗಿತ್ತು. ಅದಕ್ಕಾಗಿ ಹಣ ವಿಂಗಡಿಸಲಾಗಿತ್ತು. ಅಭಿವೃದ್ಧಿ 10 ಶೇ. ಕೂಡ ಆಗಿಲ್ಲ ಅನ್ನುವುದು ಸಾರ್ವಜನಿಕರ ನೇರ ಆರೋಪ.

ಕೆರೆ ಹೂಳು ತೆಗೆಯುವುದು, ಬದಿಗಳಲ್ಲಿ  ತಡೆಗೋಡೆ, ಕಾಲುವೆಗಳ ದುರಸ್ತಿ ಇತ್ಯಾದಿಗಳು ಈ ಕೋಟಿ ಲೆಕ್ಕದಲ್ಲಿ ಸೇರಿಕೊಂಡಿತ್ತು. ನಗರದ ಹೊರವಲಯದ ಬನ್ನೂರು ಗ್ರಾಮದ ಆಲುಂಬುಡ ಕೆರೆ, ಉಪ್ಪಿನಂಗಡಿಯ ಮಠ, ಆರ್ಯಾಪು ಗ್ರಾಮದ ಸಂಪ್ಯ ಕೆರೆ, ಚಿಕ್ಕಮುಡ್ನೂರು ಗ್ರಾಮದ ಕೆರೆ ಹೂಳೆತ್ತುವುದು ಮತ್ತು ಕಾಂಕ್ರೀಟ್ ಗೋಡೆ ರಚನೆ, ಬಲ್ನಾಡು ಗ್ರಾಮದ ಮುದಲಾಜೆ, ಪಡುವನ್ನೂರು ಗ್ರಾಮದ ಪುಂಡಿಕಾಯಿ, ಕೊಡಿಪ್ಪಾಡಿ ಗ್ರಾಮದ ಅರ್ಕ, ಕೆಯ್ಯೂರು ಗ್ರಾಮದ ಬೈರೆತ್ತಿ ಕೆರೆ, ಕಬಕ ಕುಡಿಪ್ಪಾಡಿ ಗ್ರಾಮದ ದೇವಸ್ಥಾನದ ಕೆರೆ, ಕೋಡಿಂಬಾಡಿ ಬೆಳ್ಳಿಪ್ಪಾಡಿ ಗ್ರಾಮದ ಕೆರೆ, ಮುಂಡೂರು ಸರ್ವೇ ಗ್ರಾಮದ ಕಟ್ಟತ್ತಾರು ಕೆರೆ ಅಭಿವೃದ್ಧಿಗೆಂದೂ ಹಣ ಮೀಸಲಿಡಲಾಗಿತ್ತು. ಇದರಲ್ಲಿ ಬೆರೆಳೆಣಿಕೆಯ ಕೆರೆಗಳು ಮಾತ್ರ ಅಭಿವೃದ್ಧಿಗೊಂಡಿತ್ತು.

ಐದು ಕೋಟಿ ಹಣದಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದ ಗ್ರಾಮಾಂತರ ಪ್ರದೇಶದ 11 ಕೆರೆಗಳ ಅಭಿವೃದ್ಧಿಗೆ ( ಒಟ್ಟು 17 ಕೆರೆಗಳಲ್ಲಿ ಈ 11 ಕೆರೆಗಳು ಸೇರಿವೆ) 2011-12 ನೇ ಸಾಲಿನಲ್ಲಿ 3.15 ಕೋ. ರೂ. ಬಿಡುಗಡೆಗೊಂಡಿತ್ತು. ಇದರಲ್ಲಿ ಎರಡು ಕೆರೆಗಳಿಗೆ 47.65 ಲಕ್ಷ ಹಣ ಮಾತ್ರ ಖರ್ಚಾಗಿತ್ತು. ಇದು ಅಕಾರಿಗಳು ಮಾಹಿತಿ ಹಕ್ಕಿನಲ್ಲಿ ನೀಡಿದ ದಾಖಲೆ. ಮಾಹಿತಿ ಹಕ್ಕು ಕಾರ್ಯಕರ್ತರು ಹೇಳುವ ಪ್ರಕಾರ, ಕೆರೆ ಕಾಮಗಾರಿ ಆರಂಭಕ್ಕೆ ಮುನ್ನ ಕೆರೆಯ ಪರಿಶೀಲನೆ ಮತ್ತು ವಿಡಿಯೋಕ್ಕಾಗಿ 25 ಸಾವಿರ ರೂ. ಖರ್ಚು ಮಾಡಲಾಗಿದೆ. ವಾಸ್ತವಾಗಿ ಅದು ಸುಳ್ಳು. ಯಾಕೆಂದರೆ ಅನುದಾನ ಮೀಸಲಿರಿಸಿದ ಕೆರೆಗಳ ಪೈಕಿ ಕೆಲ ಕೆರೆಗಳು ಊರ್ಜಿತದಲ್ಲಿಯೇ ಇಲ್ಲ..!

ಎರಡು ಕೆರೆ ಅಭಿವೃದ್ಧಿ
ಕಳೆದ ಬರದ ಅನಂತರ 6 ತಿಂಗಳು ಕೆರೆ ಸಂರಕ್ಷಣೆ ಕುರಿತು ಏನಾದರೂ ಗಂಭೀರ ಪ್ರಯತ್ನ ಆಗಿದೆಯೋ ಅಂದರೆ, ಪುತ್ತೂರು ವಿಧಾನಸಭಾ ಕ್ಷೇತ್ರದ ನೆಟ್ಟಣಿಗೆ ಮುಡ್ನೂರು, ವಿಟ್ಲದಲ್ಲಿ ಕೆರೆ ಅಭಿವೃದ್ಧಿಗೊಂಡಿದೆ. ಅದಕ್ಕೆ ಶಾಸಕರು 90 ಲಕ್ಷ ರೂ. ಅನುದಾನ ವ್ಯಯಿಸಲಾಗಿದೆ. ಇನ್ನುಳಿದಂತೆ ಉಪ್ಪಿನಂಗಡಿ, ಬನ್ನೂರು, ಅಜಿಲಾಡಿ ಕೆರೆ ಅಭಿವೃದ್ಧಿಗೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.

33 ಕೆರಗಳಿವೆ
ಜಿ.ಪಂ. ವ್ಯಾಪ್ತಿಗೆ ಸಂಬಂಸಿ ಪುತ್ತೂರು ತಾಲೂಕಿನಲ್ಲಿ 33 ಕೆರೆಗಳು ಇವೆ. ಕೆಲ ಕೆರೆಗಳ ಅಭಿವೃದ್ಧಿಗೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ನಿರ್ವಹಣೆಗೆಂದೂ ಪ್ರತ್ಯೇಕ ಅನುದಾನ ಬಿಡುಗಡೆ ಆಗುವುದಿಲ್ಲ.
ರೋಹಿದಾಸ್ , ಸಹಾಯಕ ಕಾರ್ಯಕಾರಿ ಅಭಿಯಂತರು ಎಂಜಿನಿಯರ್ ಉಪವಿಭಾಗ

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು