News Karnataka Kannada
Sunday, April 28 2024
ಕರಾವಳಿ

ಆತ್ಮೀಯ ಸ್ನೇಹಿತರೇ ತಾ.ಪಂ.ಚುನಾವಣೆಯಲ್ಲಿ ಎದುರಾಳಿಗಳು!

Photo Credit :

ಆತ್ಮೀಯ ಸ್ನೇಹಿತರೇ ತಾ.ಪಂ.ಚುನಾವಣೆಯಲ್ಲಿ ಎದುರಾಳಿಗಳು!

ಬಂಟ್ವಾಳ: ತಾಲೂಕಿನ ಪ್ರತಿಷ್ಠಿತ ತಾ.ಪಂ. ಕ್ಷೇತ್ರವೆಂದೇ ಬಿಂಬಿತವಾಗಿರುವ ಸಂಗಬೆಟ್ಟು ತಾ.ಪಂ.ಕ್ಷೇತ್ರದ ಉಪಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ಸ್ನೇಹಿತರೊಳಗೆ ಭಾರೀ ಜಿದ್ದಾಜಿದ್ದಿನ ಸ್ಪರ್ಧೆಯ ಲಕ್ಷಣ ಕಂಡುಬಂದಿದೆ. ಅ. 28ರಂದು ಮತದಾರರು ತನ್ನ ತೀರ್ಪು ನೀಡಲಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಯಾಗಿ ದಿನೇಶ್ ಸುಂದರ್ ಶಾಂತಿ ಹಾಗೂ ಬಿಜೆಪಿ ಅಭ್ಯರ್ಥಿಯಾಗಿ ಪ್ರಭಾಕರ ಪ್ರಭು ಅವರಿಬ್ಬರೇ ಕಣದಲ್ಲಿರುವುದರಿಂದ ಉಪಸಮರದ ಕಾವು ದಿನದಿಂದ ದಿನಕ್ಕೆ ಏರುತ್ತಿದೆ.

ಆತ್ಮೀಯ ಸ್ನೇಹಿತರಿವರು..
ಒಂದು ಕಾಲದಲ್ಲಿ ಉಭಯ ಪಕ್ಷದ ಅಭ್ಯರ್ಥಿಗಳಿಬ್ಬರು ಆತ್ಮೀಯ ಸ್ನೇಹಿತರು. ಆದರೆ ಈಗ ಇಬ್ಬರು ಪರಸ್ಪರ ಎದುರಾಳಿಯಾಗಿ ಚುನಾವಣಾ ಸ್ಪರ್ಧೆಯಲ್ಲಿದ್ದು, ಚುನಾವಣಾ ಕಣ ರಂಗೇರುವಂತೆ ಮಾಡಿದೆ. ಪ್ರಭಾಕರ ಪ್ರಭು ಸಂಗಬೆಟ್ಟು ಗ್ರಾ.ಪಂ. ಉಪಾಧ್ಯಕ್ಷ, ಅಧ್ಯಕ್ಷರಾಗಿ ತಾ.ಪಂ. ಸದಸ್ಯರಾದವರು, ಪಂಚಾಯತ್ ರಾಜ್ ವ್ಯವಸ್ಥೆಯ ಬಗ್ಗೆಯು ಜ್ಞಾನವುಳ್ಳವರು, ಎರಡು ದಶಕಗಳ ರಾಜಕೀಯ ಅನುಭವ ಜೊತೆಗೆ ಪದವೀಧರರೂ ಹೌದು, ಸ್ಥಳೀಯವಾಗಿ ಪ್ರಭಾವಿ ಯುವನಾಯಕ ಎಂಬುದರಲ್ಲಿ ಎರಡು ಮಾತಿಲ್ಲ, ಹಾಗೆಯೇ ಕಾಂಗ್ರೆಸ್ ಅಭ್ಯರ್ಥಿ ದಿನೇಶ್ ಅವರು ಸಂಗಬೆಟ್ಟುವಿನ ಪಕ್ಕದ ಕುಕ್ಕಿಪ್ಪಾಡಿ ಗ್ರಾ.ಪಂ.ನ ಹಾಲಿ ಅಧ್ಯಕ್ಷರು ಅಗಿದ್ದಾರೆ. ಒಂದಷ್ಟು ರಾಜಕೀಯ ಅನುಭವ ಪಡೆದವರು. ಒಂದು ಕಾಲದಲ್ಲಿ ಒಂದೇ ಪಕ್ಷದಲ್ಲಿದ್ದು ಗಳಸ್ಯ -ಕಂಠಸ್ಯ ಸ್ನೇಹಿತರಾಗಿದ್ದ ಇವರು, ಸಂಗಬೆಟ್ಟುತಾ.ಪಂ. ಉಪಸಮರದಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಈ ಉಪಚುನಾವಣೆ ಉಭಯಪಕ್ಷಗಳಿಗೂ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ.

ಘಟಾನುಘಟಿ ನಾಯಕರೇ ಪ್ರಚಾರ ಕಾರ್ಯದಲ್ಲಿ
ಚುನಾವಣೆಗೆ ದಿನ ಹತ್ತಿರವಾಗುತ್ತಿರುವಂತೆಯೇ ಕ್ಷೇತ್ರ ವ್ಯಾಪ್ತಿಯಲ್ಲಿ ಎರಡೂ ರಾಜಕೀಯ ಪಕ್ಷಗಳ ಪ್ರಚಾರ ಭರಾಟೆ ಜೋರಾಗಿದೆ, ಬಿಜೆಪಿಯಿಂದ ಶಾಸಕ ರಾಜೇಶ್ ನಾಯ್ಕ್ ಸ್ವತಃ ಪ್ರಚಾರ ಕಾರ್ಯದಲ್ಲಿ ತೊಡಗಿದ್ದು, ಮೂಡಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್, ಹರಿಕೃಷ್ಣ ಬಂಟ್ವಾಳ, ಗೋವಿಂದ ಪ್ರಭು, ದೇವದಾಸ ಶೆಟ್ಟಿ ಸಹಿತ ಜಿಲ್ಲೆಯ ನಾಯಕರೂ ಮನೆಮನೆ ಭೇಟಿ ಮೂಲಕ ಪ್ರಭಾಕರ ಪ್ರಭು ಪರ ಮತಯಾಚನೆಯಲ್ಲಿ ತೊಡಗಿದ್ದಾರೆ. ಕಾಂಗ್ರೆಸ್ ನಿಂದ ಮಾಜಿ ಸಚಿವ ಬಿ.ರಮಾನಾಥ ರೈ ನೇತೃತ್ವದಲ್ಲಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರುಗಳಾದ ಬೇಬಿಕುಂದರ್, ಸುದೀಪ್ ಶೆಟ್ಟಿ, ಜಿ.ಪಂ.ಸದಸ್ಯರಾದ ಚಂದ್ರಪ್ರಕಾಶ ಶೆಟ್ಟಿ, ಮಮತಾಗಟ್ಟಿ, ಪದ್ಮಶೇಖರ್ ಜೈನ್, ಮಂಜುಳಾ ಮಾಧವಮಾವೆ, ಎಂಎಸ್.ಮಹಮ್ಮದ್, ತಾ.ಪಂ.ಅಧ್ಯಕ್ಷ ಚಂದ್ರಹಾಸ ಕರ್ಕೇರ, ಉಪಾಧ್ಯಕ್ಷ ಅಬ್ಬಾಸ್ ಆಲಿ, ಮಾಯಿಲಪ್ಪ ಸಾಲ್ಯಾನ್ ಸೇರಿದಂತೆ ಕಾಂಗ್ರೇಸ್ ನಾಯಕರ ದಂಡು ಬಿರುಸಿನ ಮತಯಾಚನೆ ನಡೆಯುತ್ತಿದ್ದು, ಸಂಗಬೆಟ್ಟು ತಾ.ಪಂ. ಕ್ಷೇತ್ರವನ್ನು ಕಾಂಗ್ರೇಸ್ ಪಕ್ಷದಲ್ಲೇ ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.

ಮತಯಂತ್ರ ಪರಿಶೀಲನೆ
ಸಂಗಬೆಟ್ಟು ತಾಲೂಕು ಪಂಚಾಯತ್ ಉಪಚುನಾವಣೆ ಹಿನ್ನೆಲೆಯಲ್ಲಿ ಮಂಗಳವಾರ ಬಿ.ಸಿ.ರೋಡಿನ ಮಿನಿವಿಧಾನಸೌಧದಲ್ಲಿ ಇವಿಎಂ ಮತಯಂತ್ರ ಅಳವಡಿಕೆ ಹಾಗೂ ಪರಿಶೀಲನಾ ಕಾರ್ಯ ನಡೆಯಿತು.
ಬಂಟ್ವಾಳ ತಹಶೀಲ್ದಾರ್ ಪುರಂದರ ಹೆಗ್ಡೆ, ಚುನಾವಣಾಧಿಕಾರಿ ನಾರಾಯಣ ಶೆಟ್ಟಿ, ಮಾಸ್ಟರ್ ಟ್ರೈನರ್ ನಾರಾಯಣ ಭಂಡಾರಿ, ಸಹಾಯಕ ಚುನಾವಣಾಧಿಕಾರಿ ಲಕ್ಷ್ಮಣ್, ಮತಗಟ್ಟೆಯ ಸೆಕ್ಟರ್ ಅಧಿಕಾರಿ ಮತ್ತಡಿ ಇವಿಎಂ ಮತಯಂತ್ರ ಅಳವಡಿಕಾ ಕಾರ್ಯದಲ್ಲಿ ತೊಡಗಿಕೊಂಡರು.

ಸಂಗಬೆಟ್ಟು ತಾಪಂ ಕ್ಷೇತ್ರ ಸಂಗಬೆಟ್ಟು ಮತ್ತು ಕುಕ್ಕಿಪ್ಪಾಡಿ ಗ್ರಾಮವನ್ನು ಒಳಗೊಂಡಿದ್ದು,11 ಬೂತ್ ನಲ್ಲಿ ಮತದಾನ ನಡೆಯಲಿದೆ. ಅಂಗನವಾಡಿಕೇಂದ್ರ, ಸರಕಾರಿ, ಖಾಸಗಿಶಾಲೆ, ಸಮುದಾಯಭವನದಲ್ಲಿ ಮತಗಟ್ಟೆಯನ್ನು ಗುರುತಿಸಲಾಗಿದೆ. ಇದರಲ್ಲಿ 8 ಅತೀ ಸೂಕ್ಷ್ಮ ಹಾಗೂ 3 ಸಾಮಾನ್ಯ ಮತಗಟ್ಟೆಯನ್ನಾಗಿ ಗುರುತಿಸಲಾಗಿದೆ ಎಂದು ತಹಶೀಲ್ದಾರ್ ಅವರು ಮಾಹಿತಿ ನೀಡಿದ್ದಾರೆ.

ಸಂಗಬೆಟ್ಟು ಕ್ಷೇತ್ರದಲ್ಲಿ 4643 ಪುರುಷರು, 4722 ಮಹಿಳೆಯರು ಸೇರಿ ಒಟ್ಟು 9365 ಮತದಾರರು ತಮ್ಮ ಹಕ್ಕನ್ನು ಚಲಾಯಿಸುವರು. ಚುನಾವಣೆಗೆ ತಾಲೂಕಾಳಿತ ಸಕಲ ಪೂರ್ವತಯಾರಿಯನ್ನು ಮಾಡಿಕೊಂಡಿದ್ದು, ಶಾಂತ ಮತದಾನಕ್ಕೆ ಸಿದ್ಧತೆಯನ್ನು ನಡೆಸಿದೆ ಎಂದು ತಹಶೀಲ್ದಾರ್ ಅವರು ಮಾಹಿತಿ ನೀಡಿದ್ದಾರೆ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
153
Mounesh V

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು