ಮೂಡುಬಿದಿರೆ: ಮಹಿಳೆಯೋರ್ವರ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ಕಡಂದಲೆ ಸಮೀಪದ ಗುಡ್ಡೆಯಂಗಡಿ ಎಂಬಲ್ಲಿ ಸೋಮವಾರ ನಡೆದಿದೆ. ಅತ್ಯಾಚಾರಕ್ಕೆ ಬಂದವನಿಗೆ ಮೆಣಸಿನ ಹುಡಿ ಎರಚಿದ ಮಹಿಳೆ ಸ್ವರಕ್ಷಣೆಯನ್ನು ಮಾಡಿದ್ದು, ಬಳಿಕ ಸ್ಥಳೀಯರು ಹಿಡಿದು ಆತನನ್ನು ಪೊಲೀಸರಿಗೊಪ್ಪಿಸಿದ್ದಾರೆ.
ಆರೋಪಿಯನ್ನು ಮೂಡುಬಿದಿರೆ ಪೇಟೆಯ ನಾಗರಕಟ್ಟೆ ನಿವಾಸಿ ಸುಧೀರ್ (27) ಎಂದು ಗುರುತಿಸಲಾಗಿದೆ. ಈತ ಮೂಡುಬಿದಿರೆಯ ಮೊಬೈಲ್ ಔಟ್ಲೆಟ್ ಒಂದರ ಉದ್ಯೋಗಿ. ಈತ ಗುಡ್ಡೆಯಂಗಡಿ ಎಂಬಲ್ಲಿ ಮದ್ಯಪಾನ ಮಾಡಿ ತನ್ನ ಬೈಕ್ ಚಲಾಯಿಸಿಕೊಂಡು ಬರುತ್ತಿದ್ದ ವೇಳೆ ಕೊಡ್ಯಡ್ಕದಲ್ಲಿ ಮನೆಕೆಲಸ ನಿರ್ವಹಿಸುತ್ತಿದ್ದ ಮಹಿಳೆಯೋರ್ವರ ಜೊತೆ ಅನುಚಿತವಾಗಿ ವರ್ತಿಸಿದ್ದು, ನಂತರ ಮಹಿಳೆಯ ಮೇಲೆ ಮಾನಭಂಗಕ್ಕೂ ಯತ್ನಿಸಿರುವುದಾಗಿ ಮಹಿಳೆ ಠಾಣೆಗೆ ದೂರು ನೀಡಿದ ಆಧಾರದಲ್ಲಿ ಈತನನ್ನು ಪೊಲೀಸರು ಬಂಧಿಸಿದರು.
ಯುವಕನ ಮೇಲೆ ಐಪಿಸಿ 354ರ ಅನ್ವಯ ಅತ್ಯಾಚಾರ ಯತ್ನ ಪ್ರಕರಣ ದಾಖಲಿಸಿರುವ ಮೂಡುಬಿದಿರೆ ಪೊಲೀಸರು ಮಂಗಳವಾರ ನ್ಯಾಯಾಯಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಆರೋಪಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.