ಕಲಬುರಗಿ: ಇತ್ತೀಚೆಗೆ ವಿದ್ಯಾರ್ಥಿನಿಯರ ಶೌಚಾಲಯದಲ್ಲಿ ರಹಸ್ಯ ಕ್ಯಾಮೆರಾ ಇರಿಸಿ ವಿಡಿಯೋ ಮಾಡುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಅದೇ ರೀತಿ ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ಜೇವರ್ಗಿ ಪಟ್ಟಣದ ಶಾಂತಾನಗರದಲ್ಲಿರುವ ಅಲ್ಪಸಂಖ್ಯಾತರ ವಿದ್ಯಾರ್ಥಿನಿಯರ ಹಾಸ್ಟೆಲ್ ಬಾತ್ ರೂಮ್ನಲ್ಲಿ ಯುವಕನೊಬ್ಬ ಕ್ಯಾಮರಾ ಇಟ್ಟ ಘಟನೆ ನಡೆದಿದ್ದು, ಪೊಲೀಸರು ಆತನನ್ನು ಬಂಧಿಸಿದ್ದಾರೆ.
ಹಾಸ್ಟೆಲ್ಗೆ ಹೊಂದಿಕೊಂಡಂತಿರುವ ಮನೆಯಲ್ಲಿ ವಾಸವಾಗಿದ್ದ ಸಲೀಂ ಎಂಬ ವ್ಯಕ್ತಿಯಿಂದ ಈ ಕೃತ್ಯ ನಡೆದಿದೆ. ಇನ್ನು ಬಾತ್ರೂಮ್ಗೆ ಹೋದ ವಿದ್ಯಾರ್ಥಿನಿಯರು, ಕ್ಯಾಮೆರಾ ಇಟ್ಟಿರುವುದನ್ನು ಕಂಡ ಕೂಡಲೇ ಹೊರಬಂದು ಕಾಮುಕನನ್ನು ಹಿಡಿದು ಥಳಿಸಿದ್ದಾರೆ. ಈ ವೇಳೆ ಸ್ಥಳಕ್ಕೆ ಬಂದ ಸ್ಥಳೀಯರು, ಗಲಾಟೆಯನ್ನು ಬಿಡಿಸಿ ಆರೋಪಿ ಎಸ್ಕೇಪ್ ಆಗಲು ಸಹಕರಿಸಿದ್ದರು. ಆರೋಪಿ ತಪ್ಪಿಸಿಕೊಳ್ಳುತ್ತಿದ್ದಂತೆ ಎಚ್ಚೆತ್ತ ಸ್ಥಳೀಯರು, ತಹಶೀಲ್ದಾರ್ ಮತ್ತು ಜೇವರ್ಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.