Bengaluru 26°C
Ad

ಎಲ್ಲ ರೈತರಿಗೆ ಬರ ಪರಿಹಾರ ಕೊಡಿ : ಕರ್ನಾಟಕ ರಾಜ್ಯ ರೈತ ಸಂಘ ಆಗ್ರಹ

ಜಿಲ್ಲೆಯ ಎಲ್ಲ ರೈತರಿಗೆ ಕೂಡಲೇ ಬರ ಪರಿಹಾರ ನೀಡಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಆಗ್ರಹಿಸಿದೆ.

ಬೀದರ್ : ಜಿಲ್ಲೆಯ ಎಲ್ಲ ರೈತರಿಗೆ ಕೂಡಲೇ ಬರ ಪರಿಹಾರ ನೀಡಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಆಗ್ರಹಿಸಿದೆ. ಈ ಸಂಬಂಧ ಸಂಘಟನೆಯ ಪದಾಧಿಕಾರಿಗಳು ನಗರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಅವರಿಗೆ ಮನವಿ ಪತ್ರ ಸಲ್ಲಿಸಿ ಒತ್ತಾಯಿಸಿದರು.

ಜಿಲ್ಲೆಯಲ್ಲಿ 11,000ಕ್ಕಿಂತ ಅಧಿಕ ರೈತರಿಗೆ ಬರ ಪರಿಹಾರ ಸಿಕ್ಕಿಲ್ಲ. ಎಲ್ಲ ರೈತರಿಗೆ ಪರಿಹಾರದ ಮೊತ್ತ ಜಮೆ ಮಾಡಬೇಕು. ಬೆಳೆ ವಿಮೆ ಕಟ್ಟಿದರೂ ರೈತರಿಗೆ ಪರಿಹಾರ ಸಿಕ್ಕಿಲ್ಲ. ತಕ್ಷಣವೇ ಪರಿಹಾರ ಕೊಡಿಸುವ ಕೆಲಸ ಜಿಲ್ಲಾಡಳಿತ ಮಾಡಬೇಕು ಎಂದು ಆಗ್ರಹಿಸಿದರು.

ಜಿಲ್ಲೆಯ ನಾರಂಜಾ, ಭಾಲ್ಕೇಶ್ವರ ಹಾಗೂ ಬಿಕೆಎಸ್‌ಕೆ ಸಕ್ಕರೆ ಕಾರ್ಖಾನೆಗಳು ರೈತರ ಕಬ್ಬಿನ ಬಾಕಿ ಉಳಿಸಿಕೊಂಡಿದ್ದು ಅದನ್ನು ಪಾವತಿಸಬೇಕು. ಕೃಷಿ ಪಂಪ್‌ಸೆಟ್‌ಗಳಿಗೆ ಸಮರ್ಪಕ ವಿದ್ಯುತ್‌ ಪೂರೈಕೆ ಆಗುತ್ತಿಲ್ಲ. ರಾತ್ರಿ ಹೊತ್ತಿನಲ್ಲಿ ತೋಟದ ಮನೆಗಳಿಗೆ ವಿದ್ಯುತ್‌ ಕೊಡಬೇಕು. ಎಪಿಎಂಸಿಯಲ್ಲಿ ರೈತರ ಉತ್ಪನ್ನಗಳಿಗೆ ಶೇ 2ರಷ್ಟು ಕಮಿಷನ್‌ ತೆಗೆದುಕೊಳ್ಳುತ್ತಿದ್ದು, ಅದಕ್ಕೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು.

ಇತ್ತೀಚೆಗೆ ಸುರಿದ ಮಳೆಗೆ ಬಸವಕಲ್ಯಾಣ ತಾಲ್ಲೂಕಿನ ಕೊಹಿನೂರ್‌, ಅಟ್ಟೂರ್‌ ಕೆರೆಗಳು ಒಡೆದು ಅಪಾರ ಹಾನಿಯಾಗಿದೆ. ಸರ್ವೇ ನಡೆಸಿ, ಆದಷ್ಟು ಶೀಘ್ರ ಪರಿಹಾರ ಕೊಡಿಸಬೇಕು. ಅರಣ್ಯ ಇಲಾಖೆಯಿಂದ ತಂತಿಬೇಲಿ ಹಾಕಿಸಿಕೊಳ್ಳಲು ರೈತರಿಗೆ ಶೇ 50ರಷ್ಟು ಸಹಾಯ ಧನ ಕೊಡಬೇಕು. ಅದೇ ರೀತಿ ಸೋಲಾರ್‌ ತಂತಿ ಬೇಲಿ ಹಾಕಿಸಿಕೊಳ್ಳಲು ಶೇ 90ರಷ್ಟು ಧನ ಸಹಾಯ ನೀಡಬೇಕು. ಹೆಚ್ಚಿಸಿರುವ ಪೆಟ್ರೋಲ್‌, ಡೀಸೆಲ್‌ ದರ ಹಿಂಪಡೆಯಬೇಕು. ಒಂದು ವಾರದಲ್ಲಿ ಕ್ರಮ ಕೈಗೊಳ್ಳದಿದ್ದಲ್ಲಿ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ರೈತ ಸಂಘದ ಜಿಲ್ಲಾಧ್ಯಕ್ಷ ಸಿದ್ರಾಮಪ್ಪ ಆಣದೂರೆ, ಜಿಲ್ಲಾ ಪ್ರಧಾನ ಕರ‍್ಯರ‍್ಶಿ ದಯಾನಂದ ಸ್ವಾಮಿ ಸಿರ್ಸಿ, ಜಿಲ್ಲಾ ಕಾರ್ಯಾಧ್ಯಕ್ಷ ಶ್ರೀಮಂತ ಬಿರಾದಾರ, ಜಿಲ್ಲಾ ಉಪಾಧ್ಯಕ್ಷ ಚಂದ್ರಶೇಖರ ಜಮಖಂಡಿ, ಕಮಲನಗರ ತಾಲ್ಲೂಕು ಅಧ್ಯಕ್ಷ ಪ್ರವೀಣ ಕುಲಕರ್ಣಿ, ಬಸವಕಲ್ಯಾಣ ತಾಲ್ಲೂಕು ಅಧ್ಯಕ್ಷ ಸುಭಾಷ ರಗಟೆ, ಔರಾದ ತಾಲ್ಲೂಕು ಅಧ್ಯಕ್ಷ ಪ್ರಕಾಶ ಬಾವಗೆ, ಹುಮನಾಬಾದ್‌ ತಾಲ್ಲೂಕು ಅಧ್ಯಕ್ಷ ಸತೀಶ ನನ್ನೂರೆ, ಪ್ರಮುಖರಾದ ವಿಶ್ವನಾಥ ಧರಣೆ, ರೇವಣಸಿದ್ದಪ್ಪ ಯರಬಾಗ, ಧೂಳಪ್ಪ ಆಣದೂರ ಮತ್ತಿತರರು ಹಾಜರಿದ್ದರು.

Ad
Ad
Nk Channel Final 21 09 2023
Ad