Bengaluru 29°C
Ad

ಎಳನೀರಿನ ದರ 60ರೂ ಗೆ ಏರಿಕೆ: ಜನರಿಗೆ ಹೊರೆಯಾದ ದರ ಹೆಚ್ಚಳ

ಬಿಸಿಲ ಝಳ ದಿನದಿಂದ ದಿನಕ್ಕೆ ಏರುಗತಿಯಲ್ಲಿ ಸಾಗಿದೆ. ಬಿಸಿಲ ತಾಪ ತಡೆದುಕೊಳ್ಳಲು ಜನರು ನಿಂಬೆ ಪಾನಕ ಹಾಗೂ ಎಳ ನೀರು ಮೊರೆ ಹೋಗುತ್ತಿದ್ದು, ಅವುಗಳ ದರವೂ ಏರಿಕೆಯಾಗಿದೆ.

ಹುಲಸೂರ: ಬಿಸಿಲ ಝಳ ದಿನದಿಂದ ದಿನಕ್ಕೆ ಏರುಗತಿಯಲ್ಲಿ ಸಾಗಿದೆ. ಬಿಸಿಲ ತಾಪ ತಡೆದುಕೊಳ್ಳಲು ಜನರು ನಿಂಬೆ ಪಾನಕ ಹಾಗೂ ಎಳ ನೀರು ಮೊರೆ ಹೋಗುತ್ತಿದ್ದು, ಅವುಗಳ ದರವೂ ಏರಿಕೆಯಾಗಿದೆ.

ತಾಲ್ಲೂಕಿನಲ್ಲಿ ₹40ರಂತೆ ಮಾರಾಟವಾಗುತ್ತಿದ್ದ ಒಂದು ಎಳನೀರಿನ ಬೆಲೆ ಈಗ ₹60 ಕ್ಕೇರಿದೆ.

ಒಂದೇ ಬಾರಿಗೆ ಎಳನೀರಿನ ದರ ದಾಖಲೆಯ ₹20 ಹೆಚ್ಚಳವಾಗಿದೆ. ಇದರಿಂದಾಗಿ ಬಿರು ಬಿಸಿಲಿನ ಬೇಗೆಯ ನಡುವೆಯೇ ಗ್ರಾಹಕರ ಜೇಬಿಗೂ ಕತ್ತರಿ ಬೀಳುತ್ತಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯ ಜೊತೆಗೆ ಏಳನೀರ ದರ ಹೆಚ್ಚಳದ ಹೊರೆಯನ್ನೂ ತಡೆದುಕೊಳ್ಳಬೇಕಾದ ಅನಿವಾರ್ಯ ಸ್ಥಿತಿಗೆ ಗ್ರಾಹಕರು ಸಿಲುಕಿದ್ದಾರೆ.

ಸೆಖೆಯಿಂದ ಪಾರಾಗಲು ನಿಂಬೆಹಣ್ಣಿನ ಶರಬತ್‌, ಸೋಡಾ ಶರಬತ್‌, ಎಳನೀರು ಮುಂತಾದ ತಂಪು ಪಾನೀಯಗಳಿಗೆ ಬೇಡಿಕೆ ಹೆಚ್ಚಿದೆ. ಪ್ರತಿ ಬೇಸಿಗೆಯಲ್ಲೂ ಲಿಂಬೆ ಹಣ್ಣಿಗೆ ಹೆಚ್ಚಿನ ಬೇಡಿಕೆ ಇರುವ ಹಿನ್ನೆಲೆಯಲ್ಲಿ ಇದೇ ಅವಧಿಯಲ್ಲಿ ದರವೂ ದುಪ್ಪಟ್ಟಾಗುತ್ತಿದೆ. ಪ್ರತಿ ನಿಂಬೆ ಹಣ್ಣಿನ ದರ ಸರಾಸರಿ ₹10ಕ್ಕೆ ಏರಿಕೆಯಾಗಿದೆ.

ಚಿಕ್ಕಗಾತ್ರದ ನಿಂಬೆಗೆ ₹4 ರಿಂದ ₹5 ದರವಿದೆ. ಒಂದು ತಿಂಗಳಿನಿಂದ ಈಚೆಗೆ ದರದಲ್ಲಿ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ. ಒಂದು ತಿಂಗಳ ಹಿಂದೆ ದೊಡ್ಡ ಗಾತ್ರದ ನಿಂಬೆ ₹4-5 ದರಕ್ಕೆ ಮಾರಾಟವಾಗುತಿದ್ದರೆ, ಚಿಕ್ಕ ಗಾತ್ರದ ನಿಂಬೆ ಎರಡು ರೂಪಾಯಿಗೆ ದೊರೆಯುತ್ತಿತ್ತು.

ಭಾಲ್ಕಿ-ಬಸವಕಲ್ಯಾಣ ಸೇರಿದಂತೆ ಹೊರ ಜಿಲ್ಲೆಗಳಿಂದ ಮಾರುಕಟ್ಟೆಯಿಂದ ಎಳನೀರು ಪೂರೈಕೆಯಾಗುತ್ತದೆ. ಇವುಗಳನ್ನು ಮಾರಾಟಗಾರರು ಖರೀದಿ ಮಾಡುತ್ತಿದ್ದರು. ಆದರೀಗ ಬಸವಕಲ್ಯಾಣ ಮಾರುಕಟ್ಟೆಯಲ್ಲೂ ಎಳನೀರಿನ ಲಭ್ಯತೆ ಇಲ್ಲದಂತಾಗಿದೆ.

‘ಬೇಸಿಗೆಯಲ್ಲಿ ಉಷ್ಣತೆಯಿಂದ ಪಾರಾಗಲು ನಿಂಬೆಹಣ್ಣು, ಎಳನೀರು ಅಗತ್ಯವಿದೆ. ಬೇಡಿಕೆ ಇರುವ ಸಮಯದಲ್ಲೇ ಅವುಗಳ ಲಭ್ಯತೆ ಕಡಿಮೆಯಾಗಿರುವುದು ಜನರಿಗೆ ತೊಂದರೆ’ ಎನ್ನುತ್ತಾರೆ ನಾಗೇಶ ನೀಲಂಗೆ.

‘ಈಗ ಹುಲಸೂರ ತಾಲ್ಲೂಕಿನಲ್ಲಿ ಬೇಸಿಗೆ ಅವಧಿಯಲ್ಲಿ ನಿಂಬೆ ಹಣ್ಣಿನ ಇಳುವರಿ ಕಡಿಮೆ. ಅಲ್ಲದೇ ಎಲ್ಲೆಡೆ ಬೇಡಿಕೆಯೂ ಹೆಚ್ಚು. ಹೀಗಾಗಿ ದರದಲ್ಲಿ ವ್ಯತ್ಯಾಸ ಸಹಜ. ಹೆಚ್ಚು ದರ ನೀಡಿದರೂ ಬೇಡಿಕೆಯಷ್ಟು ನಿಂಬೆ ,ಎಳನೀರು ಪೂರೈಕೆ ಆಗದು’ ಎನ್ನುತ್ತಾರೆ ವ್ಯಾಪಾರಿ ಗೋವಿಂದ ಪವಾರ್‌.

ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಹಾಗೂ ದುಬಾರಿ ದರದ ಪಾನೀಯಗಳಿಗೆ ಹೋಲಿಸಿದರೆ ಎಳನೀರಿನ ಸೇವನೆ ಉತ್ತಮ. ಮಳೆಯಾಗುವವರೆಗೆ ಸಾರ್ವಜನಿಕರು ಎಳನೀರಿಗೆ ಹೆಚ್ಚಿನ ದರ ನೀಡುವುದು ಅನಿವಾರ್ಯ’ ಎಂದು ಗಡಿಗೌಡಗಾಂವ್ ಗ್ರಾಮದ ಪ್ರಗತಿಪರ ರೈತ ಬಂಡೆಪ್ಪ ಪಾಟೀಲ್ ಹೇಳಿದ್ದಾರೆ.

ಒಂದು ವಾರದಿಂದ ಎಳನೀರು ಪೂರೈಕೆ ಕಡಿಮೆಯಾಗಿದೆ. ಬಂದರೂ ಎರಡು ದಿನಕ್ಕಿಂತ ಹೆಚ್ಚು ದಿನ ತಾಜಾ ಎಳನೀರು ಇಟ್ಟುಕೊಳ್ಳುವುದು ಕಷ್ಟ ಅದರಲ್ಲಿ ಅತ್ಯಂತ ಸಣ್ಣ ಎಳನೀರು ಬರುತ್ತಿದ್ದು ಅದನ್ನು ಹೆಚ್ಚಿನ ದರಕ್ಕೆ ಮಾರಬೇಕಿದೆ ಎಂದು ಎಳನೀರು ವ್ಯಾಪಾರಿ.  ಶಿವಕುಮಾರ ಹೇಳಿದ್ದಾರೆ.

Ad
Ad
Nk Channel Final 21 09 2023
Ad