Bengaluru 22°C
Ad

371 (ಜೆ) ವಿರೋಧಿಸಿದರೆ ಸಂವಿಧಾನ ವಿರೋಧಿಸಿದಂತೆ: ಲಕ್ಷ್ಮಣ ದಸ್ತಿ

'ಕಲ್ಯಾಣ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿರುವ ಸಂವಿಧಾನದ 371(ಜೆ) ಕಲಂ ವಿರೋಧಿಸಿದರೆ ಸಂವಿಧಾನವನ್ನು ವಿರೋಧಿಸಿದಂತೆ' ಎಂದು ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ಸಂಸ್ಥಾಪಕ ಅಧ್ಯಕ್ಷ ಲಕ್ಷ್ಮಣ ದಸ್ತಿ ಹೇಳಿದರು.

ಬೀದರ್ : ‘ಕಲ್ಯಾಣ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿರುವ ಸಂವಿಧಾನದ 371(ಜೆ) ಕಲಂ ವಿರೋಧಿಸಿದರೆ ಸಂವಿಧಾನವನ್ನು ವಿರೋಧಿಸಿದಂತೆ’ ಎಂದು ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ಸಂಸ್ಥಾಪಕ ಅಧ್ಯಕ್ಷ ಲಕ್ಷ್ಮಣ ದಸ್ತಿ ಹೇಳಿದರು.

ರಾಜ್ಯದಲ್ಲಿಯೇ ಕಲ್ಯಾಣ ಕರ್ನಾಟಕ ಎಲ್ಲದರಲ್ಲೂ ಅತಿ ಹಿಂದುಳಿದಿದೆ ಎಂಬ ಕಾರಣಕ್ಕಾಗಿ ಈ ಭಾಗದವರನ್ನು ಮುಖ್ಯವಾಹಿನಿಗೆ ತರಲು ಸಂವಿಧಾನದ 371(ಜೆ) ಪ್ರಕಾರ ವಿಶೇಷ ಸ್ಥಾನಮಾನ ಕಲ್ಪಿಸಲಾಗಿದೆ.

2013ರಲ್ಲಿ ತಿದ್ದುಪಡಿ ಆಗಿದ್ದು, ಈಗ ಹತ್ತು ವರ್ಷ ಪೂರೈಸಿದೆ. ಈಗಷ್ಟೇ ಈ ಭಾಗದ ಜನರಿಗೆ ಅದರ ಪ್ರಯೋಜನ ಸಿಗುತ್ತಿದೆ. ಆದರೆ, ಬೆಂಗಳೂರಿನ ಹಸಿರು ಪ್ರತಿಷ್ಠಾನ ಎಂಬ ಸಂಸ್ಥೆ ಹಾಗೂ ಕೆಲವರು 371(ಜೆ) ವಿರೋಧಿಸುತ್ತಿದ್ದಾರೆ. ಇದರ ಹಿಂದೆ ಪ್ರತ್ಯೇಕ ರಾಜ್ಯದ ಕುತಂತ್ರ ಇದೆ. ದೊಡ್ಡ ಶಕ್ತಿಗಳ ಕೈವಾಡ ಇದರ ಹಿಂದಿದೆ ಎಂದು ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.

371(ಜೆ) ಮುಂದುವರೆದರೆ ಕಲ್ಯಾಣ ಕರ್ನಾಟಕ ಭಾಗದವರು ಎಲ್ಲ ಹುದ್ದೆಗಳಲ್ಲಿ ಸೇರುತ್ತಾರೆ. 24 ಜಿಲ್ಲೆಗಳಿಗೆ ಅನ್ಯಾಯವಾಗುತ್ತಿದೆ ಎಂದು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಇದರ ಹಿಂದೆ ದೊಡ್ಡ ಶಕ್ತಿಗಳ ಕೈವಾಡ ಇದೆ. ಕಲ್ಯಾಣ ಕರ್ನಾಟಕಕ್ಕೆ 371(ಜೆ) ಕೊಟ್ಟಿದ್ದು ಭಿಕ್ಷೆಯಲ್ಲ. ಅದು ಸಂವಿಧಾನಬದ್ಧವಾದ ಹಕ್ಕು. 371(ಜೆ) ವಿರೋಧಿಸುವವರು ಸಂವಿಧಾನ ವಿರೋಧಿಸುವ ದೇಶದ್ರೋಹಿಗಳು ಒಂದೇ.

ಎಸ್ಸಿ/ಎಸ್ಟಿ ಮೀಸಲಾತಿ ಹೇಗೆ ಸಂವಿಧಾನಬದ್ಧವಾಗಿ ದೊರೆತಿದೆಯೋ ಅದೇ ರೀತಿ 371 ಕಲಂ ಕೂಡ. 371 ವಿರೋಧಿಸುತ್ತಿರುವವರ ವಿರುದ್ಧ ಈಗಾಗಲೇ ಕಲಬುರಗಿ, ಸಿಂಧನೂರಿನಲ್ಲಿ ದೊಡ್ಡ ಮಟ್ಟದ ಹೋರಾಟ ನಡೆಸಲಾಗಿದೆ. ಬೀದರ್‌ನಲ್ಲೂ ಬರುವ ದಿನಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಚಳವಳಿ ನಡೆಸಲಾಗುವುದು ಎಂದು ತಿಳಿಸಿದರು.

ರಾಜ್ಯ ಒಡೆಯುವ ಮಾತುಗಳನ್ನು ಆಡುತ್ತಿರುವ ವಿಚಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಗಂಭೀರವಾಗಿ ತೆಗೆದುಕೊಳ್ಳಬೇಕು. ಈ ಕುರಿತು ಈ ಭಾಗದ ಸಚಿವರು, ಸಂಸದರು, ಶಾಸಕರು, ಶಿಕ್ಷಣ ಸಂಸ್ಥೆಗಳವರು, ಸಾರ್ವಜನಿಕರು ದನಿ ಎತ್ತಬೇಕು ಎಂದು ಒತ್ತಾಯಿಸಿದರು.

371(ಜೆ) ಸಮರ್ಪಕ ಜಾರಿಗೆ ಪ್ರತ್ಯೇಕ ಸಚಿವಾಲಯ ಮಾಡಬೇಕು. ಕೃಪಾಂಕ ಕೊಡಬೇಕು. ಕಲಬುರಗಿಯಲ್ಲಿ ಟ್ರಿಬ್ಯೂನಲ್‌ ಸ್ಥಾಪಿಸಬೇಕು. ವಿವಿಧ ಹುದ್ದೆಗಳಿಗೆ ನೇಮಕಗೊಂಡವರಿಗೆ ತಕ್ಷಣವೇ ಕೆಲಸಕ್ಕೆ ಸೇರಿಸಿಕೊಳ್ಳಬೇಕು. ಬ್ಯಾಕ್‌ಲಾಗ್‌ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ಆಗ್ರಹಿಸಿದರು.

ಪ್ರಮುಖರಾದ ಬಿ.ಸಿ. ಗುಲಶೆಟ್ಟಿ, ಮಾಜಿದ್‌ ದಾಗಿ, ಅಸ್ಲಂ ಚೌಂಗೆ, ಚಂದ್ರಶೇಖರ ಪಾಟೀಲ ಹುಚಕನಳ್ಳಿ, ವಿನಯ್‌ ಮಾಳಗೆ, ಅನಂತ ರೆಡ್ಡಿ, ರೋಹನ್‌ ಕುಮಾರ್‌, ಬಕ್ಕಪ್ಪ ಗೊಂಡ ಹಾಜರಿದ್ದರು.

Ad
Ad
Nk Channel Final 21 09 2023
Ad