News Karnataka Kannada
Sunday, April 28 2024
ಬೆಂಗಳೂರು

ಸರ್ವಾಧಿಕಾರಿ ಸ್ಪೀಕರ್ ಎಂದು ಸಾಬೀತುಪಡಿಸಿದ್ದೀರಿ: ಖಾದರ್‌ ಗೆ ಪತ್ರ ಬರೆದ ಸುನೀಲ್‌

You have proved to be dictatorial Speaker: Sunil writes to Khader
Photo Credit : News Kannada

ಬೆಂಗಳೂರು: ಬಿಜೆಪಿಯ 10 ಮಂದಿ ಶಾಸಕರನ್ನು ಸದನದಿಂದ ಅಮಾನತು ಮಾಡಿದ ಕ್ರಮದ ಬಗ್ಗೆ ಸ್ಪೀಕರ್‌ ಯು.ಟಿ.ಖಾದರ್‌ಗೆ ಕಾರ್ಕಳ ಶಾಸಕ ವಿ.ಸುನಿಲ್ ಕುಮಾರ್ ಪತ್ರ ಬರೆದಿದ್ದಾರೆ.

ಪತ್ರದಲ್ಲಿ ವಿಧಾನಸಭೆಯಲ್ಲಿ ಏಕಪಕ್ಷೀಯವಾಗಿ ಅಮಾನತು ಶಿಕ್ಷೆಕೊಟ್ಟದ್ದಕ್ಕಾಗಿ ಧನ್ಯವಾದ ಸಮರ್ಪಣೆ, ಮಾನ್ಯ ಸಭಾಧ್ಯಕ್ಷರೇ , ನಿಮ್ಮಿಂದ ನಾವು ಇಂಥದೊಂದು ನಡೆಯನ್ನು ನಿರೀಕ್ಷಿಸಿರಲಿಲ್ಲ. ಸಭಾಧ್ಯಕ್ಷ ಪೀಠದ ಮೇಲೆ ಕುಳಿತು ಎಲ್ಲರನ್ನೂ ಸಮಾನರೆಂದು ಪರಿಗಣಿಸಿ ಪ್ರಜಾಪ್ರಭುತ್ವದ ಮೌಲ್ಯವನ್ನು ಖಾದರ್ ಸಮರ್ಥವಾಗಿ ಎತ್ತಿ ಹಿಡಿಯಬಹುದೆಂಬ ನಮ್ಮ‌ ನಿರೀಕ್ಷೆಯಿತ್ತು. ಆದರೆ ಇಂದು ಉಸುಕಿನ ಸೌಧದಂತೆ ಕುಸಿದು ಹೋಗಿದೆ.

ರಾಜ್ಯದ ಪ್ರತಿಷ್ಠಿತ ಸ್ಪೀಕರ್ ಎಂದು ಮಾದರಿ ಹೆಜ್ಜೆ ಬಿಟ್ಟು ಹೋದ ದಿ. ವೈಕುಂಠ ಬಾಳಿಗರ ಜಿಲ್ಲೆಯಿಂದ ಬಂದ ನೀವು ಅವರದ್ದೇ ಮಾರ್ಗದಲ್ಲಿ ನಡೆಯಬಹುದೆಂದು ವೈಯಕ್ತಿಕವಾಗಿ ನಾನು ಭಾವಿಸಿದ್ದೆ. ಆದರೆ ನೀವು ನಮ್ಮೆಲ್ಲರ ನಂಬಿಕೆಯನ್ನು ಹುಸಿಗೊಳಿಸಿ ವಿಪಕ್ಷಗಳ ಧ್ವನಿಯನ್ನು ಹತ್ತಿಕ್ಕುವ ಪ್ರಯತ್ನ ಮಾಡಿದ್ದೀರಿ. ನನ್ನನ್ನು ಸೇರಿ ಹತ್ತು ಜನರನ್ನು ಅಮಾನತುಗೊಳಿಸುವ ಮೂಲಕ‌ ಕಾಂಗ್ರೆಸ್ ನಾಯಕರ ಎದೆಯಲ್ಲಿ ಅಂತಸ್ಥವಾದ ಹಿಟ್ಲರ್‌ನನ್ನು ವಿಧಾನಸಭೆಯ ಮೂಲಕ ಪ್ರದರ್ಶನಕ್ಕೆ ಇಟ್ಟಿದ್ದೀರಿ ಎನ್ನದೇ ಬೇರೆ ವಿಧಿ ಇಲ್ಲ.

ಮಾನ್ಯ ಖಾದರ್ ಅವರೇ, ನಾನು ಹಾಗೂ ನೀವು ಹೆಚ್ಚು ಕಡಿಮೆ ಒಂದೇ ವರ್ಷ ವಿಧಾನಸಭೆಯನ್ನು ಪ್ರವೇಶ ಮಾಡಿದ್ದೆವು. 2004ರಿಂದ ಇಲ್ಲಿಯವರೆಗೆ ನಾನು ಸದನದಲ್ಲಿ ಹೇಗೆ ನಡೆದುಕೊಂಡಿದ್ದೇನೆ ಎಂಬುದಕ್ಕೆ ನೀವು ಕೂಡ ಸಾಕ್ಷಿಯಾಗಿದ್ದೀರಿ. ಅನಾರೋಗ್ಯ ಹಾಗೂ ಅತಿ ತುರ್ತು ಸಂದರ್ಭ ಹೊರತುಪಡಿಸಿದರೆ ನಾನು ಸದನಕ್ಕೆ ಗೈರಾದ ದಿನಗಳೇ ಇಲ್ಲ. ವಿಧಾನಸಭೆಯ ಕಾರ್ಯ‌ ಕಲಾಪಗಳಲ್ಲಿ ಭಾಗಿಯಾಗುವುದು ಪ್ರತಿಯೊಬ್ಬ ಶಾಸಕನ ಕರ್ತವ್ಯ ಎಂದು ಭಾವಿಸಿ ಅದರಂತೆ ನಡೆದುಕೊಂಡವರು ನಾವು. ಆದರೆ ನಿಮ್ಮ ಪಕ್ಷದ ಅಜೆಂಡಾವನ್ನು‌ ಪೋಷಿಸುವುದಕ್ಕಾಗಿ ನಾವು ನಮ್ಮ ಶ್ರದ್ಧಾಕೇಂದ್ರ ಪ್ರವೇಶಿಸುವುದಕ್ಕೆ ನಿರ್ಬಂಧ ಹಾಕಿ‌ಬಿಟ್ಟಿರಲ್ಲ ! ಇದಕ್ಕಾಗಿ ನಿಮಗೊಂದು ದೀರ್ಘದಂಡ ಪ್ರಣಾಮ, ಅನಂತಾನಂಥ ಧನ್ಯವಾದ.

ಮಾನ್ಯ ಸಭಾಧ್ಯಕ್ಷರೇ, ಇಂದು ನೀವು ನಡೆದುಕೊಂಡ ರೀತಿ ಆ ಪೀಠಕ್ಕೆ ಒಪ್ಪುವಂತೆ ಇತ್ತೇ ? ಆತ್ಮವಂಚನೆ ಮಾಡಿಕೊಳ್ಳದೇ ಹೇಳಿ. ಮನುಷ್ಯ ಈ‌‌ ಪ್ರಪಂಚದಲ್ಲಿ ಯಾರಿಗೆ ಬೇಕಾದರೂ ವಂಚಿಸಬಹುದು, ಆದರೆ ತನ್ನನ್ನು ತಾನೇ ವಂಚಿಸಿಕೊಳ್ಳಲು ಸಾಧ್ಯವಿಲ್ಲ ತಾನೇ ? ಸರ್ಕಾರ ಅಧಿಕಾರಕ್ಕೆ ಬಂದ ಮೊದಲ ಬಜೆಟ್ ಅಧಿವೇಶನದಲ್ಲೇ ಶಾಸಕರನ್ನು ಅಮಾನತು ಮಾಡುವ‌ ಮೂಲಕ ವಿಧಾನಮಂಡಲದ ಇತಿಹಾಸದಲ್ಲೇ‌ ನೀವೊಬ್ಬ ಸರ್ವಾಧಿಕಾರಿ ಸ್ಪೀಕರ್ ಎಂದು ಸಾಬೀತುಪಡಿಸಿದ್ದೀರಿ. ಇನ್ನು ನಿಮ್ಮಿಂದ ನಾವೇನು‌ ನಿರೀಕ್ಷಿಸಲು ಸಾಧ್ಯ ? ಈ ಸರ್ಕಾರದ ಮೊದಲ ದಿನದ‌ ಅಧಿವೇಶನದಲ್ಲಿ ವಿಪಕ್ಷ ನಾಯಕರು ಧರಣಿ ನಡೆಸುತ್ತಿರುವಾಗಲೇ ಪ್ರಶ್ನೋತ್ತರ ಕಲಾಪ‌ ನಡೆಸಿದಾಗಲೇ ನೀವು ಪಕ್ಷಪಾತಿಯಾಗಿ ನಡೆದುಕೊಳ್ಳುವ ವಾಸನೆ ನಮಗೆಲ್ಲ ಬಡಿದಿತ್ತು. ಆದರೆ ನೀವು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಸೋನಿಯಾ ಗಾಂಧಿಯವರ ನೇತೃತ್ವದಲ್ಲಿ ನಡೆದ ಕಾಂಗ್ರೆಸ್ ಔತಣ ಕೂಟದಲ್ಲಿ ಭಾಗಿಯಾದ್ದೀರಿ. ಅಯೋಗ್ಯರಿಗೆ ರಾಜಾತಿಥ್ಯ ನೀಡಲು ಐಎಎಸ್ ಅಧಿಕಾರಿಗಳನ್ನು ನಿಯೋಜನೆ ಮಾಡಿದ ಸರ್ಕಾರದ ಕ್ರಮವನ್ನು ಪ್ರಶ್ನಿಸಿದ ನಮ್ಮ ಹೋರಾಟ ಹತ್ತಿಕ್ಕಿ ವಿಧಾನಸಭೆ ಕಲಾಪವನ್ನು ಕಾಂಗ್ರೆಸ್ ಕಲಾಪವನ್ನಾಗಿ ಪರಿವರ್ತಿಸಿದ್ದೀರಿ. ಇಂಥ ಸಂವಿಧಾನ ಬಾಹಿರ, ಕಲಾಪ‌ ನಿಯಮ ವಿರೋಧಿಯಾದ ನಿಮಗೆ ಅಭಿನಂದನೆ ಸಲ್ಲಿಸಲೇಬೇಕಲ್ಲವೇ?

ಖಾದರ್ ಅವರೇ ಸ್ಪೀಕರ್ ಸ್ಥಾನ ಆಳುವವರ ಆಸೆಗೆ ಗೋಣು ಆಡಿಸುವ ಅಡ್ಡೆಯಲ್ಲ. ಅದಕ್ಕೊಂದು ಘನ ಇತಿಹಾಸವಿದೆ. ಪರಂಪರೆ ಇದೆ.‌ ಇಂದು ನೀವು ತೋರಿದ ಸರ್ವಾಧಿಕಾರಿ ಧೋರಣೆ ನಿಮಗೆ ಕ್ಷಣಿಕ ಆನಂದ ನೀಡಿರಬಹುದು. ಪಕ್ಷದ ಹೈಕಮಾಂಡ್ ಮೆಚ್ಚುವಂತೆ ನಡೆದೆ ಎಂದು ಉಬ್ಬಿಸಬಹುದು. ಆದರೆ ನೆನಪಿಡಿ, ನೀವು ಕರ್ನಾಟಕದ ಉಜ್ವಲ ಸಂಸದೀಯ ಪರಂಪರೆಗೆ ಈ‌ ಮೂಲಕ ಕಳಂಕ ಅಂಟಿಸಿದ್ದೀರಿ. ನಮ್ಮನ್ನು ಅಮಾನತು ಮಾಡಿದ ಮಾತ್ರಕ್ಕೆ ನಮ್ಮ ಧ್ವನಿಯನ್ನು ಅಡಗಿಸಿಬಿಟ್ಟೆ ಎಂಬ ಭ್ರಮೆ ಬೇಡ. ಎಲ್ಲರಿಗೂ ಅವರವರ ಸರದಿ ಕಾಯುತ್ತಿರುತ್ತದೆ. ಆಷಾಡದ ಬಳಿಕ ಶ್ರಾವಣ ಬಂದೇ ಬರುತ್ತದೆ ಎಂದು ಪತ್ರ ಬರೆದಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು