Bengaluru 29°C
Ad

ಪೆನ್‌ಡ್ರೈವ್ ಪ್ರಕರಣದಲ್ಲಿ ಪಾರದರ್ಶಕ ತನಿಖೆ ನಡೆಯುತ್ತಿದೆ: ಸಚಿವ ಈಶ್ವರ್ ಖಂಡ್ರೆ

ಪೆನ್‌ಡ್ರೈವ್ ಪ್ರಕರಣದಲ್ಲಿ ಎಸ್‌ಐಟಿ ತನಿಖೆ ಮಾಡುತ್ತಿದೆ. ಯಾರು ತಪ್ಪಿತಸ್ಥರೋ ಅವರಿಗೆ ಶಿಕ್ಷೆ ಆಗಲಿದೆ. ಮಾಜಿ ಸಿಎಂ ಹೆಚ್‌ಡಿಕೆ ಸೇರಿದಂತೆ ಪ್ರತಿಪಕ್ಷಗಳು ತನಿಖೆಯ ಹಾದಿ ತಪ್ಪಿಸುತ್ತಿದ್ದಾರೆ.

ಬೆಂಗಳೂರು: ಪೆನ್‌ಡ್ರೈವ್ ಪ್ರಕರಣದಲ್ಲಿ ಎಸ್‌ಐಟಿ ತನಿಖೆ ಮಾಡುತ್ತಿದೆ. ಯಾರು ತಪ್ಪಿತಸ್ಥರೋ ಅವರಿಗೆ ಶಿಕ್ಷೆ ಆಗಲಿದೆ. ಮಾಜಿ ಸಿಎಂ ಹೆಚ್‌ಡಿಕೆ ಸೇರಿದಂತೆ ಪ್ರತಿಪಕ್ಷಗಳು ತನಿಖೆಯ ಹಾದಿ ತಪ್ಪಿಸುತ್ತಿದ್ದಾರೆ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಹೇಳಿದ್ದಾರೆ.

ಪ್ರಜ್ವಲ್ ಪೆನ್‌ಡ್ರೈವ್ ಪ್ರಕರಣದ ಕುರಿತು ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕಾನೂನು ಸುವ್ಯವಸ್ಥೆ ಕಾಪಾಡಲು ಸರ್ಕಾರ, ಗೃಹ ಸಚಿವರು ಹಗಲಿರುಳು ಶ್ರಮ ಪಡುತ್ತಿದ್ದಾರೆ. ಅಪರಾಧಿಗಳನ್ನು ಮಟ್ಟ ಹಾಕುವ ಕೆಲಸ ನಡೆಯುತ್ತಿದೆ. ಪಾರದರ್ಶಕ ತನಿಖೆ ನಡೆಯುತ್ತಿದೆ. ಇದರಲ್ಲಿ ಯಾರ ಯಾರ ಕೈವಾಡ ಇದೆ ಎಲ್ಲಾ ಹೊರಗೆ ಬರುತ್ತದೆ ಎಂದರು.

ಇದೊಂದು ಗಂಭೀರ ಪ್ರಕರಣ. ಕೇಂದ್ರ ಸರ್ಕಾರ ಸ್ವಯಂ ಪ್ರೇರಣೆಯಿಂದ ಡಿಪ್ಲೊಮೆಟಿಕ್ ಪಾಸ್‌ಪೋರ್ಟ್ ರದ್ದು ಮಾಡಬೇಕು. ಕೇಂದ್ರ ಸರ್ಕಾರ ಸರಿಯಾದ ಸಹಕಾರ ನೀಡಬೇಕು. ಬಿಜೆಪಿಗೆ ಅಷ್ಟೆಲ್ಲಾ ಬದ್ಧತೆ ಇದ್ದರೆ ಪ್ರಜ್ವಲ್‌ನನ್ನು ಕರೆದುಕೊಂಡು ಬಂದು ಒಪ್ಪಿಸಬೇಕಿತ್ತು. ಜನರ ಗಮನ ಸೆಳೆಯಲು ಪ್ರತ್ಯಾರೋಪಗಳನ್ನು ಮಾಡುತ್ತಿದೆ. ಕಾನೂನು ತನ್ನ ಕೆಲಸ ಮಾಡಲು ಎಲ್ಲರೂ ಅವಕಾಶ ನೀಡಬೇಕು. ಮುಖ್ಯ ಆರೋಪಿ ಇದರಲ್ಲಿ ಯಾರು? ಅವರಿಗೆ ಶಿಕ್ಷೆ ಆಗಬೇಕೋ ಬೇಡವೋ? ಯಾಕೆ ಬಿಜೆಪಿ-ಜೆಡಿಎಸ್‌ನವರು ಶಂಕೆ ಮಾಡುತ್ತಿದ್ದಾರೆ? ದೌರ್ಜನ್ಯ ಮಾಡಿದ್ದು, ಅತ್ಯಾಚಾರ ಮಾಡಿದ್ದು ಯಾರು ಎಂಬುದು ಮುಖ್ಯ ಎಂದು ಹರಿಹಾಯ್ದರು.

ಫೋನ್ ಟ್ಯಾಪಿಂಗ್ ಇವೆಲ್ಲ ಮಾಡೋರು ಬಿಜೆಪಿಯವರು. ಸಿ.ಡಿನೂ ಅವರೇ ಬಿಡುಗಡೆ ಮಾಡುತ್ತಾರೆ. ದೂರು ಅವರೇ ಕೊಡುತ್ತಾರೆ, ತನಿಖೆಯೂ ನಾವೇ ಮಾಡುತ್ತೇವೆ ಎನ್ನುತ್ತಾರೆ. ತೀರ್ಪು ಅವರೇ ಕೊಡುತ್ತಾರೆ. ಬಿಜೆಪಿಯವರಿಗೆ ಮಾನ-ಮರ್ಯಾದೆ ಇಲ್ಲ ಎಂದು ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ನಾಯಕರಿಗೆ ಹೇಳಿ ಪ್ರಜ್ವಲ್ ವಿದೇಶಕ್ಕೆ ಹೋಗಿದ್ದಾರೆ ಎಂಬ ಅಶೋಕ್ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಅಶೋಕ್ ಅವರ ಹೇಳಿಕೆಗೆ ತಲೆಬುಡ ಇದ್ಯಾ? ಯಾರಾದರೂ ಅದನ್ನು ನಂಬುತ್ತಾರಾ? ಪ್ರಕರಣ ದಾಖಲಿಸಿದ್ದು ಯಾರು, ನಮ್ಮ ಸರ್ಕಾರ. ಅವರಿಗೆ ಬೆಂಬಲ ಕೊಡುವ ಅವಶ್ಯಕತೆ ಏನಿದೆ? ಎಂದರು.

ಬಿಜೆಪಿಯವರಿಗೆ ಸುಳ್ಳು ಹೇಳುವುದೇ ಕೆಲಸ. ಸುಳ್ಳೇ ಅವರ ಮನೆ ದೇವರು. ಸುಳ್ಳನ್ನು ಸತ್ಯ ಎಂದು ಬಿಂಬಿಸಲು ಹೊರಟ್ಟಿದ್ದಾರೆ. ಇವರೇ ಕಳುಹಿಸಿಬಿಟ್ಟು ಬೇರೆಯವರ ಮೇಲೆ ಆರೋಪ ಮಾಡುತ್ತಿದ್ದಾರೆ. ಲೋಕಸಭೆಯಲ್ಲಿ ಇವರನ್ನು ಜನ ತಿರಸ್ಕರಿಸುತ್ತಾರೆ. ಮುಂದೆ ಸ್ಥಳೀಯ ಸಂಸ್ಥೆಯ ಚುನಾವಣೆಯಲ್ಲೂ ಜನ ಅವರಿಗೆ ಪಾಠ ಕಲಿಸುತ್ತಾರೆ ಎಂದರು.

Ad
Ad
Nk Channel Final 21 09 2023
Ad