Bengaluru 27°C
Ad

ರೇವ್‌ ಪಾರ್ಟಿ ಪ್ರಕರಣ: ಹೆಬ್ಬಗೋಡಿ ಪೊಲೀಸ್ ಠಾಣೆಯ ಎಎಸ್ಐ ಸೇರಿ ಮೂವರು ಅಮಾನತು

ಎಲೆಕ್ಟ್ರಾನಿಕ್‌ ಸಿಟಿಯ ಫಾರಂ ಹೌಸ್‌ನಲ್ಲಿ ನಡೆದಿದ್ದ ರೇವ್‌ ಪಾರ್ಟಿಗೆ ಸಂಬಂಧಪಟ್ಟಂತೆ ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿನ ಎಎಸ್ಐ ಸೇರಿ ಮೂವರನ್ನು ಅಮಾನತು ಮಾಡಿ ಆದೇಶಿಸಲಾಗಿದೆ. ಗ್ರಾಮಾಂತರ ಎಸ್‌ಪಿ ಮಲ್ಲಿಕಾರ್ಜುನ್ ಬಾಲದಂಡಿ ಅವರು ಮೂವರು ಸಿಬ್ಬಂದಿಯನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

ಬೆಂಗಳೂರು: ಎಲೆಕ್ಟ್ರಾನಿಕ್‌ ಸಿಟಿಯ ಫಾರಂ ಹೌಸ್‌ನಲ್ಲಿ ನಡೆದಿದ್ದ ರೇವ್‌ ಪಾರ್ಟಿಗೆ ಸಂಬಂಧಪಟ್ಟಂತೆ ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿನ ಎಎಸ್ಐ ಸೇರಿ ಮೂವರನ್ನು ಅಮಾನತು ಮಾಡಿ ಆದೇಶಿಸಲಾಗಿದೆ. ಗ್ರಾಮಾಂತರ ಎಸ್‌ಪಿ ಮಲ್ಲಿಕಾರ್ಜುನ್ ಬಾಲದಂಡಿ ಅವರು ಮೂವರು ಸಿಬ್ಬಂದಿಯನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

ರೇವ್ ಪಾರ್ಟಿ ಬಗ್ಗೆ ಮಾಹಿತಿ ಕಲೆ ಹಾಕಲು ವಿಫಲವಾಗಿರುವ ಆರೋಪದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ. ಇದೇ ವೇಳೆ ಡಿವೈಎಸ್ಪಿ ಹಾಗೂ ಇನ್ಸ್‌ಪೆಕ್ಟರ್‌ಗಳಿಗೂ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ್‌ ಬಾಲದಂಡಿ ಚಾರ್ಜ್ ಮೆಮೋ‌ ನೀಡಿದ್ದು, ಇಷ್ಟೆಲ್ಲ ಆಗುತ್ತಿದ್ದರೂ ನಿಮ್ಮ ಗಮನಕ್ಕೆ ಯಾಕೆ ಬಂದಿಲ್ಲ? ಇದಕ್ಕೆ ಕಾರಣ ನೀಡಿ ಎಂದು ವಿವರಣೆಯನ್ನು ಕೇಳಿದ್ದಾರೆ.

ಡಿವೈಎಸ್ಪಿ ಹಾಗೂ ಇನ್ಸ್‌ಪೆಕ್ಟರ್‌ ಅವರ ಉತ್ತರ ಆಧರಿಸಿ ಅವರ ಮೇಲೂ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ. ಠಾಣೆಯ ಎಸ್.ಬಿ. ಗಿರೀಶ್, ಎಎಸ್ಐ ನಾರಾಯಣ ಸ್ವಾಮಿ ಮತ್ತು ಬೀಟ್ ಕಾನ್ಸ್‌ಟೇಬಲ್ ದೇವರಾಜು ಅಮಾನತಾದವರು. ಸಿಸಿಬಿ ಪೊಲೀಸರಿಗೆ ಸಿಕ್ಕ ಮಾಹಿತಿ ಸ್ಥಳೀಯ ಪೊಲೀಸರಿಗೆ ಯಾಕೆ ಇರಲಿಲ್ಲ ಎಂದು ಪ್ರಶ್ನೆ ಮಾಡಲಾಗಿದ್ದು, ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲಾಗಿದೆ.

ಈಗಾಗಲೇ ಪಾರ್ಟಿ ಮಾಡಿದ ಐವರನ್ನು ಬಂಧಿಸಲಾಗಿದೆ. 73 ಮಂದಿ ಪುರುಷರಲ್ಲಿ 59 ಮಂದಿ ಬ್ಲಡ್ ರಿಪೋರ್ಟ್ ಪಾಸಿಟಿವ್ ಬಂದಿದ್ದರೆ, 30 ಮಂದಿ ಯುವತಿಯರ ಪೈಕಿ 27 ಮಂದಿಯ ಬ್ಲಡ್ ರಿಪೋರ್ಟ್ ಪಾಸಿಟಿವ್ ಬಂದಿದೆ. ಹೀಗಾಗಿ ಪಾರ್ಟಿಯಲ್ಲಿ ಸೇರಿದ್ದ ಬಹುತೇಕ ಮಂದಿ ಮಾದಕ ವಸ್ತು ಸೇವನೆ ಮಾಡಿದ್ದಾರೆ.

ವಾಸು ಎಂಬಾತನ ಬರ್ತ್‌ ಡೇ ಪಾರ್ಟಿಗಾಗಿ ಏರ್ಪಡಿಸಲಾಗಿದ್ದ ಈ ರೇವ್ ಪಾರ್ಟಿಯಲ್ಲಿ ದೊಡ್ಡ ಮಟ್ಟದ ಮಾದಕ ವಸ್ತು ಬಳಕೆ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದರು. ಈ ವೇಳೆ ದೊಡ್ಡ ಪ್ರಮಾಣದಲ್ಲಿ ಎಂಡಿಎಂಎ, ಕೊಕೇನ್, ಹೈಡ್ರೋ ಗಾಂಜಾ ಪತ್ತೆಯಾಗಿದ್ದವು.

ಈ ರೇವ್‌ ಪಾರ್ಟಿಯಲ್ಲಿ ತೆಲುಗು ನಟಿ ಹೇಮಾ ಭಾಗಿಯಾಗಿದ್ದು, ಪೊಲೀಸ್‌ ವಶದಲ್ಲಿದ್ದಾರೆ ಎಂದು ಸುದ್ದಿಯಾಗಿದ್ದಂತೆ ವಿಡಿಯೊವೊಂದನ್ನು ಮಾಡಿ ಸೋಷಿಯಲ್‌ ಮೀಡಿಯಾದಲ್ಲಿ ಅಪ್ಲೋಡ್‌ ಮಾಡಿದ್ದ ಹೇಮಾ, ನಾನು ಆ ರೇವ್‌ ಪಾರ್ಟಿಯಲ್ಲಿ ಭಾಗಿಯಾಗಲೇ ಇಲ್ಲ. ಹೈದರಾಬಾದ್‌ನ ಫಾರ್ಮ್‌ ಹೌಸ್‌ನಲ್ಲಿದ್ದೇನೆ ಎಂದು ವಿಡಿಯೊ ಸಂದೇಶವನ್ನು ಹರಿಬಿಟ್ಟಿದ್ದರು.

3 ಜನ ಡ್ರಗ್ ಪೆಡ್ಲರ್‌ಗಳು, ಆಯೋಜಕ ವಾಸು ಸೇರಿ ಐದು ಜನರನ್ನು ಅಂದೇ ಪೊಲೀಸರು ಬಂಧಿಸಿದ್ದರು. ಪಾರ್ಟಿಯಲ್ಲಿ ಡ್ರಗ್ ಪೆಡ್ಲರ್‌ಗಳೂ ಭಾಗಿಗಳಾಗಿದ್ದರು. ಇವರು ಯಥೇಚ್ಛವಾಗಿ ಮಾದಕ ವಸ್ತುಗಳನ್ನು ಪೂರೈಸುತ್ತಿದ್ದರು. ವಾಸು ಹುಟ್ಟಿದ ಹಬ್ಬಕ್ಕೆ ಪಾರ್ಟಿ ಆಯೋಜಿಸಿದ ಆರ್ಗನೈಸರ್ ಅರುಣ್, ಸಿದ್ಧಿಕಿ, ರಣಬೀರ್, ನಾಗಬಾಬುರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು. ಮಾದಕ ವಸ್ತು ಸಿಕ್ಕಿದಂತಹ ಐಷಾರಾಮಿ ಮರ್ಸಿಡಿಸ್‌ ಬೆಂಜ್‌, ರೇಂಜ್ ರೋವರ್, ಆಡಿ ಕಾರುಗಳನ್ನು ವಶಕ್ಕೆ ಪಡೆಯಲಾಗಿತ್ತು.

ಫಾರಂ ಹೌಸ್‌ನಲ್ಲಿ ಸದ್ಯ ಭಾರಿ ಪ್ರಮಾಣದಲ್ಲಿ ಎಂಡಿಎಂಎ, ಕ್ಯಾಪ್ಸೂಲ್, ಕೊಕೇನ್ ಇತ್ಯಾದಿ ಮಾದಕ ವಸ್ತುಗಳು ದೊರೆತಿದ್ದವು. 45 ಗ್ರಾಂನಷ್ಟು ಡ್ರಗ್ ವಶಕ್ಕೆ ಪಡೆಯಲಾಗಿತ್ತು. 1 ಗ್ರಾಂ ಕೊಕೇನ್‌ಗೆ 8ರಿಂದ 9 ಸಾವಿರ ರೂ. ದರವಿದೆ. ಇಂತಹ ಕೊಕೇನ್ ಭಾರಿ ಪ್ರಮಾಣದಲ್ಲಿ ಪಾರ್ಟಿಯಲ್ಲಿ ಪತ್ತೆಯಾಗಿದೆ. ಸದ್ಯ ಸಿಕ್ಕಿರುವ ಡ್ರಗ್ಸ್‌ನ ಮೌಲ್ಯ ಪರಿಶೀಲನೆಯನ್ನು ಸಿಸಿಬಿ ನಡೆಸುತ್ತಿದೆ.

 

Ad
Ad
Nk Channel Final 21 09 2023
Ad