News Karnataka Kannada
Tuesday, May 07 2024
ರಾಮನಗರ

ಜನರ ಆರೋಗ್ಯದ ಹಿತದೃಷ್ಟಿಯಿಂದ ಪಾದಯಾತ್ರೆಯನ್ನು ಮುಂದೂಡಲಾಗಿದೆ : ಸಿದ್ದರಾಮಯ್ಯ

Siddaramaih
Photo Credit :

ರಾಮನಗರ: “ನಮ್ಮ ಮೇಲೆ ಕೇಸ್ ಹಾಕುತ್ತಾರೆ ಅಥವಾ ಸರ್ಕಾರದ ಆದೇಶಗಳ ಭಯದಿಂದ ಮೇಕೆದಾಟು ಪಾದಯಾತ್ರೆಯನ್ನು ಮುಂದೂಡಿಕೆ ಮಾಡಿಲ್ಲ. ಜನರ ಆರೋಗ್ಯದ ಹಿತದೃಷ್ಟಿಯಿಂದ ಪಾದಯಾತ್ರೆಯನ್ನು ಮುಂದೂಡಲಾಗಿದೆ,” ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.

ಮೇಕೆದಾಟು ಪಾದಯಾತ್ರೆ ಮೊಟಕುಗೊಳಿಸುವ ಬಗ್ಗೆ ರಾಮನಗರ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, “ಬೆಂಗಳೂರಿನಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿದೆ‌. ಇನ್ನೆರೆಡು ದಿನದಲ್ಲಿ ನಾವು ಬೆಂಗಳೂರು ತಲುಪುತ್ತಿದ್ದೆವು, ಅಲ್ಲಿ ಲಕ್ಷಾಂತರ ಜನ ಸೇರುತ್ತಿದ್ದರು. ಜನರಿಗೆ ನಮ್ಮ ಮೇಲೆ ಯಾವುದೇ ಕೆಟ್ಟ ಅಭಿಪ್ರಾಯ ಮೂಡಬಾರದು ಎಂಬ ಉದ್ದೇಶದಿಂದ ತಾತ್ಕಾಲಿಕವಾಗಿ ಪಾದಯಾತ್ರೆಯನ್ನು ಇಲ್ಲಿಗೆ ಸ್ಥಗಿತಗೊಳಿಸುತ್ತಿದ್ದೇವೆ,” ಎಂದರು.

“ರಾಜ್ಯದಲ್ಲಿ ಕೊರೊನಾ ಸೋಂಕು ಕಡಿಮೆಯಾದ ಬಳಿಕ ರಾಮನಗರದಿಂದಲ್ಲೇ ಪಾದಯಾತ್ರೆ ಮುಂದುವರಿಸಲಾಗುವುದು. ಇಲ್ಲಿಯವರೆಗೆ ಪಾದಯಾತ್ರೆಯಲ್ಲಿ ಭಾಗವಹಿಸಲು ಉತ್ಸಾಹದಿಂದ ಬಂದಿದ್ದ ಕಾರ್ಯಕರ್ತರಲ್ಲಿ ಮನವಿ ಮಾಡಿದ ಸಿದ್ದರಾಮಯ್ಯ, ಯಾರೊಬ್ಬರೂ ಉತ್ಸಾಹ ಕಳೆದುಕೊಳ್ಳಬೇಡಿ. ಮುಂದೆ ಇಲ್ಲಿಂದಲ್ಲೇ ಪಾದಯಾತ್ರೆ ಶುರುಮಾಡಿ, ಬೆಂಗಳೂರಿನ ನ್ಯಾಷನಲ್ ಕಾಲೇಜು‌ ಮೈದಾನದಲ್ಲೇ ಅಂತ್ಯಗೊಳಿಸುತ್ತೇವೆ,” ಎಂದು ತಿಳಿಸಿದರು..

“ನಾವು ಪಾದಯಾತ್ರೆಯ ನಿರ್ಣಯ ಕೈಗೊಂಡ ವೇಳೆ ಕೋವಿಡ್ ಮೂರನೆ ಅಲೆ ಪ್ರಾರಂಭಗೊಂಡಿರಲಿಲ್ಲ. ಬೆಳಗಾವಿಯಲ್ಲಿ ಅಧಿವೇಶನ ನಡೆದ ಸಂದರ್ಭದಲ್ಲೇ ಯೋಜಿಸಿದ್ದೇವೆ. ನಮ್ಮ ನಿರ್ಣಯದಂತೆ ಜ.9ರಂದು ಸಂಗಮದಿಂದ ಪಾದಯಾತ್ರೆ ಆರಂಭವಾಗಿತ್ತು. ಅಲ್ಲಿಂದ ರಾಮನಗರದವರೆಗೂ ಪಾದಯಾತ್ರೆ ಯಶಸ್ವಿಯಾಗಿದೆ. ಇಂದಿನಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಪಾದಯಾತ್ರೆ ಸಾಗಬೇಕಿತ್ತು,” ಎಂದು ಮಾಹಿತಿ ನೀಡಿದರು.

“ಈಗ ಕೊರೊನಾ ಮೂರನೇ ಅಲೆ ವೇಗವಾಗಿ ಹರಡುತ್ತಿದೆ. ನಿನ್ನೆ ಒಂದೇ ದಿನ ಬೆಂಗಳೂರಿನಲ್ಲಿ ಸುಮಾರು 15 ಸಾವಿರಕ್ಕೂ‌ ಹೆಚ್ಚು ಜನರಿಗೆ ಸೋಂಕು ತಗುಲಿದೆ.‌ ನಮ್ಮದು ರಾಷ್ಟ್ರೀಯ ಪಕ್ಷ, ನಮಗೆ ನಮ್ಮದೇ ಆದ ಜವಾಬ್ದಾರಿ ಇದೆ. ಇದನ್ನು ನಿರ್ವಹಿಸುವುದು ನಮ್ಮ ಕರ್ತವ್ಯ,” ಎಂದು ಹೇಳಿದರು.

“ಸೋಂಕು ವೇಗವಾಗಿ ಹರಡಲು ಕಾಂಗ್ರೆಸ್ ಕಾರಣವಲ್ಲ, ಬಿಜೆಪಿಯವರೇ ಕಾರಣವೆಂದ ಮಾಜಿ ಸಿಎಂ ಸಿದ್ದರಾಮಯ್ಯ, ಮೂರನೇ ಅಲೆ ಪ್ರಾರಂಭವಾದ ಬಳಿಕವು ಸಿಎಂ ಯಾವ ಸಭೆ ಮಾಡುವುದನ್ನು ನಿಲ್ಲಿಸಲಿಲ್ಲ. ಜ.6ರಂದು ನೂತನ ವಿಧಾನ ಪರಿಷತ್ ಸದಸ್ಯರಿಗೆ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ನಡೆದಿದೆ,” ಎಂದು ಆರೋಪಿಸಿದರು.

ಜನರ ನಡುವೆ ಮೊಸಳೆ ಕಣ್ಣೀರು ಸುರಿಸುವ ಬಿಜೆಪಿಯವರು ತಮ್ಮ ಕಾರ್ಯಕ್ರಮಗಳನ್ನು ಬೇಕಾದಂತೆ ಮಾಡುತ್ತಿದ್ದಾರೆ. ಶಾಸಕ ಸುಭಾಷ್ ಗುತ್ತೇದಾರ್ ಪ್ರತಿಭಟನಾ ಮೆರವಣಿಗೆ ನಡೆಸಿದ್ದಾರೆ. ಹೊನ್ನಾಳಿ ಶಾಸಕ ರೇಣುಕಾಚಾರ್ಯ ದೊಡ್ಡ ಜಾತ್ರೆ ನಡೆಸಿದ್ದಾರೆ. ಕೇಂದ್ರ ಸಚಿವರು ಸಭೆ, ಜನಾಶೀರ್ವಾದ ಯಾತ್ರೆ ನಡೆಸಿದರು. ಗೃಹ ಸಚಿವ ಆರಗ ಜ್ಞಾನೇಂದ್ರ ಕ್ಷೇತ್ರದಲ್ಲಿ ಜಾತ್ರೆ ನಡೆದಿದೆ. ಮೂರನೇ ಅಲೆ ಇದ್ದರೂ, ಇವರ ಮೇಲೆ ಕ್ರಮ ಜರುಗಿಸಿಲ್ಲ. ನಮ್ಮ ಮೇಲೆ ಸುಳ್ಳು ಪ್ರಕರಣ ದಾಖಲಿಸಿದೆ ಎಂದು ಕಿಡಿಕಾರಿದರು.

ಬಿಜೆಪಿ ಸರಕಾರ ಸೋಂಕು ತಡೆಗಟ್ಟಲು ನಿಷ್ಪಕ್ಷಪಾತ ಕ್ರಮ ಕೈಗೊಂಡಿಲ್ಲ. ನಮ್ಮ ಪಾದಯಾತ್ರೆಯನ್ನು ಮೊಟಕುಗೊಳಿಸುವ ಉದ್ದೇಶದಿಂದ ದಿನಕ್ಕೊಂದು ಆದೇಶ ಹೊರಡಿಸುತ್ತಿದ್ದಾರೆ. ನನಗೊಂದು, ಡಿಕೆಶಿಗೆ ಒಂದು ನೋಟಿಸ್ ನೀಡಿದ್ದಾರೆ. ಇಂತಹ ನೋಟಿಸ್‌ಗೆ ಹೆದರುವುದಿಲ್ಲ. ಆದರೆ, ನಮಗೆ ಜನರ ಹಿತ ಮುಖ್ಯ ಎಂದರು.

ಇಡೀ ದೇಶದಲ್ಲಿ ಸ್ವಾಭಾವಿಕವಾಗಿ ಕೊರೊನಾ ಮೂರನೇ ಅಲೆ ಏರುತ್ತಿದೆ. ಜನರ ಆರೋಗ್ಯದ ಬಗ್ಗೆ ಕಾಳಜಿ ಇದ್ದು, ನಮ್ಮ ಪಾದಯಾತ್ರೆಯಿಂದ ಸೋಂಕು ಉಲ್ಬಣ ಆಗದಂತೆ ನೋಡಿಕೊಳ್ಳುವುದು ನಮ್ಮ ಕರ್ತವ್ಯ. ಎಂಪಿ ಡಿ.ಕೆ. ಸುರೇಶ್ ಸೇರಿದಂತೆ ಕನಕಪುರದ ಮುಖಂಡರು ಈವರೆಗೂ ಪಾದಯಾತ್ರೆಗೆ ಉತ್ತಮ ವ್ಯವಸ್ಥೆ ಮಾಡಿದ್ದರು. ಅವರಿಗೆ ಧನ್ಯವಾದ ಹೇಳುತ್ತಿದ್ದೇನೆ ಎಂದು ಸಿದ್ದರಾಮಯ್ಯ ತಿಳಿಸಿದರು.

ರಾಜ್ಯದ ಜನರ ಮನಸ್ಸಿನಲ್ಲಿ ನಮ್ಮ ಪಾದಯಾತ್ರೆ ಬಗ್ಗೆ ವ್ಯಾಪಕ ಸ್ವಾಗತ ಬಂದಿತ್ತು. ಮಹಿಳೆಯರು ಎಲ್ಲೆಡೆ ಆಶೀರ್ವಾದ ಮಾಡಿದ್ದರು. ತಿಂಡಿ, ತೀರ್ಥ, ಏಳನೀರು ನೀಡಿ ಹರಸಿದ್ದರು. ಇದು ಜನಪರ ಹೋರಾಟ ಎಂಬುದಕ್ಕೆ ಇಂತಹ ಸನ್ನಿವೇಶಗಳೇ ಸಾಕ್ಷಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು