News Karnataka Kannada
Monday, May 06 2024
ರಾಮನಗರ

ಅಂತೂ-ಇಂತೂ ಮೊಳಗಿತು ಮೇಕೆದಾಟು ಪಾದಯಾತ್ರೆಯ ರಣಕಹಳೆ

Mekedatu
Photo Credit :

ರಾಮನಗರ: ಶುಭಕಾರ್ಯಕ್ಕೆ ನೂರೆಂಟು ವಿಘ್ನ ಎಂಬಂತೆ ಜನಪರ ಯೋಜನೆಗೆ ಜಾರಿ ಆಗ್ರಹಿಸಿ ನಡೆಯುತ್ತಿರುವ ಮೇಕೆದಾಟು ಪಾದಯಾತ್ರೆ ತಡೆಗೆ ಇತರೆ ಪಕ್ಷಗಳು ಹಾಗೂ ರಾಜ್ಯ ಸರ್ಕಾರ ನಡೆಸಿದ ಎಲ್ಲ ರೀತಿಯ ಅಡೆತಡೆಗಳ ನಡುವೆ ಸಾತನೂರಿನ ಸಂಗಮದಲ್ಲಿ ಭಾನುವಾರ ಚಾಲನೆ ದೊರಯಿತು.

ಆ ಮೂಲಕ ಜನಧ್ವನಿಯಾಗಿ ತಮ್ಮ ಹೋರಾಟ ಪರಂಪರೆ ಮುಂದುವರೆಯಲಿದೆ ಎಂಬ ಸಂದೇಶವನ್ನು ಕಾಂಗ್ರೆಸ್‌ ರವಾನಿಸಿತು.ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಬೆಳಗ್ಗೆ ಅರ್ಕಾವತಿ ಹಾಗೂ ಕಾವೇರಿ ನದಿ ಕೂಡುವ ಸಂಗಮದಲ್ಲಿ ಮಿಂದೆದ್ದು ಪೂಜೆ ಸಲ್ಲಿಸಿದರು.

ನಂತರ ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ ವಿವಿಧ ಮಠಾಧೀಶರು, ಕ್ರೈಸ್ತ ಹಾಗೂ ಮುಸಲ್ಮಾನ ಧರ್ಮಗುರುಗಳು ತೆಂಗು ಹಾಗೂ ತುಳಸಿ ಗಿಡಕ್ಕೆ ಕಾವೇರಿ ನೀರೆರೆಯುವ ಮೂಲಕ ಪಾದಯಾತ್ರೆಗೆ ಚಾಲನೆ ನೀಡಿದರು. ಮಹಿಳೆಯರು ಬಿಂದಿಗೆಯಲ್ಲಿ ಕಾವೇರಿ ನೀರು ತಂದು ಹಂಡೆಗೆ ತುಂಬಿದರು. ಈ ಹಂಡೆಗಳು ಬೆಂಗಳೂರು ತಲುಪಲಿವೆ.

ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ರಾಜ್ಯ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ಹಿರಿಯ ನಾಯಕರು, ಚಿತ್ರರಂಗದಿಂದ ನಟ ದುನಿಯಾ ವಿಜಯ್, ಸಾಧು ಕೋಕಿಲ ಸೇರಿದಂತೆ ಮತ್ತಿತರರು ನಗಾರಿ ಬಾರಿಸುವ ಮೂಲಕ ಪಾದಯಾತ್ರೆ ಉದ್ಘಾಟಿಸಿದರು.ಈ ಸಂದರ್ಭದಲ್ಲಿ ರಾಜ್ಯದ ವಿವಿಧ ಕಡೆಗಳಿಂದ ಬಂದ ಕಲಾ ತಂಡಗಳು ಪ್ರದರ್ಶನ ನೀಡುವ ಮೂಲಕ ಕಾರ್ಯಕ್ರಮಕ್ಕೆ ಕಳೆಕಟ್ಟಿದವು.

ಈ ವೇಳೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು, ‘ಇದೊಂದು ಐತಿಹಾಸಿಕ ಕಾರ್ಯಕ್ರಮ. ನಾನು ಆಗಾಗ್ಗೆ ಹೇಳುತ್ತಿರುತ್ತೇನೆ. ಹುಟ್ಟು ಆಕಸ್ಮಿಕ, ಸಾವು ಅನಿವಾರ್ಯ. ಜನನ ಉಚಿತ, ಮರಣ ಖಚಿತ. ಈ ಹುಟ್ಟು ಸಾವಿನ ಮಧ್ಯೆ ನಾವು ಏನು ಮಾಡುತ್ತೇವೆ ಎಂಬುದು ಮುಖ್ಯ. ಈ ಪಕ್ಷಾತೀತ ಹೋರಾಟಕ್ಕೆ ಕಾಂಗ್ರೆಸ್ ಪಕ್ಷ ನೇತೃತ್ವ ವಹಿಸಿದೆ. ನಮ್ಮ ನಾಯಕರಲ್ಲಿ ಈ ದೇಶಕ್ಕಾಗಿ ಹೋರಾಟ ರಕ್ತಗತವಾಗಿ ಬಂದಿದೆ. ಈ ದೇಶಕ್ಕೆ ಐಕ್ಯತೆ, ಶಾಂತಿಗಾಗಿ ಶ್ರಮಿಸಿದ್ದಾರೆ. ಗಾಂಧೀಜಿ ಅವರಿಂದ ಹಿಡಿದು ನೆಹರೂ, ಇಂದಿರಾಗಾಂಧಿ, ರಾಜೀವ್ ಗಾಂಧಿ, ರಾಹುಲ್ ಗಾಂಧಿ ಅವರವರೆಗೂ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದಾರೆ. ಈಗ ಸೋನಿಯಾ ಗಾಂಧಿ ಅವರು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ತ್ಯಾಗ ಬಲಿದಾನದ ದೊಡ್ಡ ಇತಿಹಾಸವಿದೆ. ಕಾಂಗ್ರೆಸ್ ಶಕ್ತಿ ಈ ದೇಶದ ಶಕ್ತಿ. ಕಾಂಗ್ರೆಸ್ ಇತಿಹಾಸ ದೇಶದ ಇತಿಹಾಸ. ನಾವಿಂದು ಅಧಿಕಾರಕ್ಕಾಗಿ ಹೋರಾಟ ಮಾಡುತ್ತಿಲ್ಲ. ಕರ್ನಾಟಕವನ್ನು ಅಭಿವೃದ್ಧಿಶೀಲ ರಾಜ್ಯವನ್ನಾಗಿ ಮಾಡಲು ಈ ಹೋರಾಟ. ಅನೇಕ ಪಕ್ಷದ ನಾಯಕರು ನಮ್ಮ ಹೋರಾಟಕ್ಕೆ ತೊಂದರೆ ಮಾಡಲು ಪ್ರಯತ್ನಿಸುತ್ತಿದ್ದಾರೆ. ಟೀಕೆ ಮಾಡುತ್ತಿದ್ದಾರೆ.

ಮುಖ್ಯಮಂತ್ರಿಗಳೇ ನೀವೂ ರೈತನ ಮಗ, ನಿಮ್ಮ ಪಕ್ಷ ಕೂಡ ಅನೇಕ ಹೋರಾಟ ಮಾಡಿದೆ. ಈ ಹೋರಾಟ ನಿಲ್ಲಿಸಲು ಜಿಲ್ಲಾಧಿಕಾರಿಗಳ ಮೂಲಕ ನಿಷೇಧಾಜ್ಞೆ ಹಾಕಿದ್ದೀರಲ್ಲಾ, ಪೊಲೀಸ್ ಅಧಿಕಾರಿಗಳ ಮೂಲಕ ಕೇಸ್ ದಾಖಲಿಸಲು ಹೇಳಿದ್ದೀರಲ್ಲಾ, ಬಂಧಿಸಬೇಕು ಎಂದಿದ್ದೀರಲ್ಲಾ, ಬನ್ನಿ ಈ ಮಠಾಧೀಶರು, ಮಲ್ಲಿಕಾರ್ಜುನ ಖರ್ಗೆ ಅವರು, ಸಿದ್ದರಾಮಯ್ಯ ಅವರು ಸೇರಿದಂತೆ ನೂರು ಶಾಸಕರನ್ನು ಬಂಧಿಸಿ. ಇಲ್ಲಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಕಾಂಗ್ರೆಸ್ ಧ್ವಜ, ನಮ್ಮ ಕನ್ನಡ ತಾಯಿ ಧ್ವಜ, ನಮ್ಮ ರೈತರ ಧ್ವಜ, ಮೇಕೆದಾಟು ಪಾದಯಾತ್ರೆ ಧ್ವಜ ಹಾರಾಡುತ್ತಿದೆ. ಇದನ್ನು ಮುಟ್ಟಲು ಸಾಧ್ಯವಿಲ್ಲ. ಈ ನಡಿಗೆ ನಮ್ಮ ಪಕ್ಷಕ್ಕಲ್ಲ, ನೀರಿಗಾಗಿ. ಬೆಂಗಳೂರು ಹಾಗೂ ಕಾವೇರಿ ಪಾತ್ರದ ಜನರಿಗಾಗಿ. ನೀವು ಬೇರೆಯವರಿಗೆ ಕರೆ ಮಾಡಿ ಈ ಹೋರಾಟದಲ್ಲಿ ಭಾಗವಹಿಸಬೇಡಿ ಎಂದು ಹೇಳಬಹುದು, ಆದರೆ ಬೀಸೋ ಗಾಳಿ, ಹರಿಯೋ ನೀರು, ಉದಯಿಸುವ ಸೂರ್ಯನನ್ನು ನಿಲ್ಲಿಸಲು ಸಾಧ್ಯವೇ? ಆ ಸೂರ್ಯನ ಮಕ್ಕಳು ಈ ವೇದಿಕೆ ಮೇಲೆ ಕೂತಿದ್ದಾರೆ.

ನಮ್ಮ ತಾಯಂದಿರು ಇಲ್ಲಿ ಕಳಸ ಹೊತ್ತು ಬಂದಿದ್ದಾರೆ. ಇದು ನಮ್ಮ ಧರ್ಮದ ಸಂಕೇತ. ನಮ್ಮ ಸಂಸ್ಕೃತಿ ಈ ದೇಶದ ಆಸ್ತಿ. ದೆಹಲಿ ಗಡಿಯಲ್ಲಿ ರೈತರು ಕಳೆದೊಂದು ವರ್ಷದಿಂದ ಬಲಿಷ್ಠ ಸರ್ಕಾರದ ವಿರುದ್ಧ ಹೋರಾಡಿ 800 ಜನ ಪ್ರಾಣತ್ಯಾಗ ಮಾಡಿ ಪ್ರಧಾನಮಂತ್ರಿಗಳೇ ತಲೆಬಾಗಿ ಕ್ಷಮಿಸಲು ಕೇಳುವಂತೆ ಮಾಡಿದ ನಮ್ಮ ತಂದೆ ತಾಯಂದಿರಿಗೂ ನನ್ನ ಸಾಷ್ಟಾಂಗ ನಮಸ್ಕಾರಗಳು.

ರಾಜ್ಯದಲ್ಲಿ 26 ಆಣೆಕಟ್ಟುಗಳಿವೆ. ಅದರಲ್ಲಿ ಒಂದನ್ನು ಮೈಸೂರು ಮಹಾರಾಜರು, ಐದನ್ನು ಬ್ರಿಟೀಷರು ಕಟ್ಟಿದರೆ, ಉಳಿದ 20 ಆಣೆಕಟ್ಟುಗಳನ್ನು ಕಟ್ಟಿದ್ದು ಕಾಂಗ್ರೆಸ್ ಸರ್ಕಾರ. ಇತಿಹಾಸ ತೆಗೆದು ನೋಡಿ. ಈ ಹೋರಾಟಕ್ಕೆ ಬೆಂಬಲ ನೀಡಿದ ಎಲ್ಲ ವರ್ಗದ ಜನರಿಗೆ ಅಭಿನಂದನೆಗಳು.

ಈ ದೇಶಕ್ಕೆ ಸ್ವಾತಂತ್ರ್ಯ ತಂದುಕೊಡಲು ಬ್ರಿಟೀಷರ ವಿರುದ್ಧ ಹೋರಾಟ ಮಾಡಿದಂತೆ, ಇಂದು ಬಿಜೆಪಿ ಹಾಗೂ ಜನತಾದಳದ ವಿರುದ್ಧ ಹೋರಾಟ ಮಾಡುತ್ತಿದ್ದೇವೆ. ನಿಮ್ಮ ಟೀಕೆ, ಅಡಚಣೆಗಳಿಗೆ ಸೊಪ್ಪು ಹಾಕುವವರು ಯಾರು? ಹೆದರುವವರು ಯಾರು? ನಾವು ಕಾನೂನಿಗೆ ಗೌರವ ಕೊಡುತ್ತೀವಿ. ಗೃಹ ಸಚಿವರೇ, ಎಸ್ಪಿಗಳೇ ಇಲ್ಲಿರುವವರ ಎಲ್ಲರ ವಿಳಾಸ ನೀಡುತ್ತೇನೆ ತಾಕತ್ತಿದ್ದರೆ ಪ್ರಕರಣ ದಾಖಲಿಸಿ. ನೀವು ವಿಧಿಸಿರುವ ನಿರ್ಬಂಧ, ಆದೇಶ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಕೊಟ್ಟ ಸಂವಿಧಾನಕ್ಕೆ ವಿರುದ್ಧವಾದುದು. ಇದಕ್ಕೆ ನಾವ್ಯಾರೂ ಹೆದರುವ ಮಕ್ಕಳಲ್ಲ. ಈ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ, ಕನ್ನಡದ ಮಕ್ಕಳು. ಎಲ್ಲರೂ ಕೋವಿಡ್ ನಿಯಮ ಗಮನದಲ್ಲಿಟ್ಟುಕೊಂಡು ಪಾದಯಾತ್ರೆ ಮಾಡಿ. ಮುಂದೆ ರಾಜ್ಯದುದ್ದಗಲಕ್ಕೆ ನಿಮ್ಮ ಜತೆ ಹೋರಾಟ ಮಾಡುತ್ತೇವೆ. ನಮ್ಮ ಈ ಹೋರಾಟಕ್ಕೆ ಎಲ್ಲ ವರ್ಗದ ಜನ, ರೈತ, ಕನ್ನಡಪರ ಸಂಘಟನೆ, ಚಿತ್ರರಂಗದವರು ಬೆಂಬಲ ನೀಡಿ ಇಲ್ಲಿಗೆ ಆಗಮಿಸಿದ್ದಾರೆ. ಅಂತರ ಕಾಯ್ದುಕೊಂಡು ಕೋವಿಡ್ ಮಾರ್ಗಸೂಚಿ ಅನುಸರಿಸುತ್ತಾ ಹೆಜ್ಜೆ ಹಾಕಬೇಕು. ಫೋಟೋ ತೆಗೆಸಿಕೊಳ್ಳಲು ಯಾರೂ ನಮ್ಮ ಬಳಿ ಬರಬೇಡಿ. ನಮ್ಮಿಂದ ಯಾರಿಗೂ ತೊಂದರೆಯಾಗುವುದು ಬೇಡ’ ಎಂದರು.

ಇದಕ್ಕೂ ಮುನ್ನ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ ಅವರು, ‘ಈ ಯೋಜನೆಯಿಂದ ಯಾರೊಬ್ಬರಿಗೂ ತೊಂದರೆ ಆಗುವುದಿಲ್ಲ. ಎರಡೂ ರಾಜ್ಯಗಳ ಜನರಿಗೆ ಈ ಯೋಜನೆ ನೆರವಾಗಲಿದೆ. ಹೀಗಾಗಿ ಈ ಯೋಜನೆಗೆ ಯಾವುದೇ ಅಡೆತಡೆ ಎದುರಾಗಬಾರದು’ ಎಂದು ಕರೆಕೊಟ್ಟರು.

ನಂತರ ಮಾತನಾಡಿದ ಸಿದ್ದರಾಮಯ್ಯ ಅವರು, ‘ಈ ಜನಪರ ಯೋಜನೆಗೆ ಇದು ನಮ್ಮ ಕೂಸು. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಯಾವ ರೀತಿ ಶ್ರಮಿಸಿದೆ. ಆಮೂಲಕ ಕಾಂಗ್ರೆಸ್ ರಾಜ್ಯದ ನೀರಿಗಾಗಿ ಹೇಗೆ ತನ್ನ ಬದ್ಧತೆ ಪ್ರದರ್ಶಿಸಿದೆ. 25 ಸಂಸದರನ್ನು ಇಟ್ಟುಕೊಂಡು ಪ್ರಧಾನಿಗಳ ಬಳಿ ಮಾತನಾಡಿ, ಪರಿಸರ ಇಲಾಖೆ ಅನುಮತಿ ಪಡೆಯಲು ಸಾಧ್ಯವಾಗದೇ ಸುಳ್ಳು ಆರೋಪ ಮಾಡುವ ಬಿಜೆಪಿಗೆ ಮಾನ ಮರ್ಯಾದೆ ಇಲ್ಲ ಎಂದು ವಿವರಿಸಿದರು.

ನಂತರ ಮಾತನಾಡಿದ ಮಾಜಿ ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್ ಅವರು ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ, ತಾವು ಜಲಸಂಪನ್ಮೂಲ ಸಚಿವರಾಗಿದ್ದ ಸಮಯದಲ್ಲಿ ಹೇಗೆ ಕಾನೂನು ಹೋರಾಟದ ಜತೆಜತೆಯಲ್ಲಿ ಮೇಕೆದಾಟು ಯೋಜನೆ ಜಾರಿಗೆ ಶ್ರಮಿಸಿತು ಎಂಬುದನ್ನು ವಿವರಿಸಿದರು. ಅಲ್ಲದೆ ಬಿಜೆಪಿ ಡಬಲ್ ಇಂಜಿನ್ ಸರ್ಕಾರ ಈ ವಿಚಾರದಲ್ಲಿ ಹೇಗೆ ನಿರ್ಲಕ್ಷ್ಯ ತೋರಿದೆ, ಈ ಹೋರಾಟ ತಡೆಯಲು ಹೇಗೆ ಮಾಧ್ಯಮಗಳಲ್ಲಿ ಅನಾಮಧೇಯ ಜಾಹಿರಾತು ನೀಡಿ ಜನರಿಗೆ ತಪ್ಪು ಸಂದೇಶ ರವಾನಿಸುತ್ತಿದೆ ಎಂದು ವಿವರಿಸಿದರು. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದು, ಈ ಸುಳ್ಳು ಪ್ರಚಾರಕ್ಕೆ ತಕ್ಕ ಉತ್ತರ ನೀಡುವುದಾಗಿ ಎಚ್ಚರಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12795
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು